ಗಜಲ್
ಡಾ.ಯ.ಮಾ.ಯಾಕೊಳ್ಳಿ

ಇನ್ನೂ ಆಡಲು ಮಾತು ಬಹಳವಿದ್ದವು ಗೊತ್ತಿಲ್ಲದೇ ಗೆಳತಿ
ನಡುಮಧ್ಯದಿ ಹೀಗೆ ಒಮ್ಮೆಯೆ ಎದ್ದು ಹೋಗುವುದೇ ಗೆಳತಿ
ರಾತ್ರಿಯಾಗುವ ಮೊದಲೇ ಉರಿವ ದೀಪವಾರುವ ಹಾಗೆ
ಮಾತು ಮನವನು ಮುರಿದು ನಡೆದು ಬಿಡುವುದೆ ಗೆಳತಿ
ಜೋಡಿ ತಂತಿಯ ಏಕದಾರಿಯಲೆಂತಹ ಹಿತದ ರಾಗಗಳು
ತಂತಿ ಹರಿದು ಇನ್ನೊಂದುತಂತಿ ಅನಾಥ ಮಾಡುವುದೆ ಗೆಳತಿ
ಹಾಸಿದ ಹೂವಿನ ಹಂದರ ಹರಡಿದ ಮಲ್ಲಿಗೆ ಕಾಲಿಡದೆ ಬಾಡಿದವು
ಕೂಡಿಕುಡಿಯಲೆಂದಿಟ್ಟ ಹಾಲೂ ಹಾಲಾಹಲ ಆಗಬಹುದೆ ಗೆಳತಿ
ಮನದ ಕೋಣೆಯ ತುಂಬಚಿತ್ತಾರ ಬಿಡಿಸಿದ ರಂಗೋಲಿ
ಆಡಾಡಿ ಹುಡುಗರು ತುಳಿದು ಕೆಡಿಸಿದರು ಸಹಿಸಬಹುದೇ ಗೆಳತಿ
ಜೊತೆಗೂಡಿ ಹೆಣೆದಿದ್ದ ಕನಸುಗಳು ಒಂಟಿಯಾಗಿ ಅಳುತಿವೆ
ಬಡವನ ಎದೆಗಾದ ಗಾಯ ಬೇಗ ಮಾಯಬಹುದೇ ಗೆಳತಿ
ಹೇಳಲೇನಿದೆ ಇಲ್ಲಿ, ಬರೆವ ಸಾಲೂ ನಿರ್ಜೀವದ ಹಳವಂಡ
ಎಂದೂ ಯಯಾ ಮುರಿದೇಳದಂತೆ ಪೆಟ್ಟನಿತ್ತು ಸಾಗುವುದೇ ಗೆಳತಿ
ಗಜಲ್ ಚೆನ್ನಾಗಿದೆ ಸರ್…