ಗಜಲ್ ೪(ಮಾತ್ರೆ೨೬)
ಪ್ರಭಾವತಿ ಎಸ್ ದೇಸಾಯಿ
ಮುಡಿಗೆ ದುಂಡು ಮಲ್ಲೆ ಮಾಲೆ ತರುವನೆಂಬ .ಭ್ರಮೆಯಲ್ಲಿರುವೆ
ಪ್ರತಿ ರಾತ್ರಿಯು ಮಧು ಮಂಚಕೆ ಬರುವನೆಂಬ ಭ್ರಮೆಯಲ್ಲಿರುವೆ
ಇರುಳಲಿ ಕಣ್ಣ ನಕ್ಷತ್ರಗಳು ಹಾದಿಗೆ ಬೆಳಕನು ಚೆಲ್ಲಿದವು
ಮಾಧವನಂತೆ ಕನಸಲಿ ಅಪ್ಪುವನೆಂಬ ಭ್ರಮೆಯಲ್ಲಿರುವೆ
ಇಳಿಹೊತ್ತು ಹೊನ್ನ ಕಿರಣ ನಲಿಯುತಿವೆ ಅಲೆಗಳಿಗೆ ಮುತ್ತಿಡುತಾ
ಬಿಕ್ಕುವ ಹಣತೆಗೆ ಜೀವ ತುಂಬುವನೆಂಬ ಭ್ರಮೆಯಲ್ಲಿರುವೆ
ಶ್ರಾವಣದ ಸೋನೆ ಹನಿಯು ಉಡಿಸಿತು ಹಸಿರು ಸೀರೆ ಧಾರಣಿಗೆ
ಬರಡು ಎದೆಗೆ ಒಲವ ಧಾರೆ ಹರಿಸುವನೆಂಬ ಭ್ರಮೆಯಲ್ಲಿರುವೆ
ಮನ್ಮಥನ ಆಗಮಕೆ ತರು ಲತೆಗಳು ಹೇಳುತಿವೆ ಸಂಗೀತ
ಎದೆ ತುಂಬಿ ಯುಗಳ ಗೀತೆ ಹಾಡುವನೆಂಬ ಭ್ರಮೆಯಲ್ಲಿರುವೆ
ಸುಮ ದಿಂದ ಸುಮಕೆ ಹಾರುವ ಪತಂಗ ಹೀರುತಿದೆ ಮಕರಂದ
ಹಾಲಿನಲಿ ಅಧರ ಜೇನು ಬೆರೆಸುವನೆಂಬ ಭ್ರಮೆಯಲ್ಲಿರುವೆ
ದೀಪಾವಳಿಯ ಸಾಲು ದೀಪಗಳ “ಪ್ರಭೆ” ಸರಿಸಿದೆ ನಿಶೆಯನು
ಮನದಲಿ ನಂದಾದೀಪ ಹಚ್ಚುವನೆಂಬ ಭ್ರಮೆಯಲ್ಲಿರುವೆ
ತೀವ್ರತರ ಭಾವನೆಗಳ ಗೊಂಚಲು ಈ ಗಜಲ್ ಮೇಡಂ