ಕಾವ್ಯ ಸಂಗಾತಿ
ಬೇಸಿಗೆಕಾಲ
ಗಿರೀಶ ಸೊಲ್ಲಾಪುರ
ಬೇಸಿಗೆ ಕಾಲ ಬಂದಾಯ್ತು
ಬಿಸಿಲಿನ ತಾಪ ಹೆಚ್ಚಾಯ್ತು
ಬೇಸಿಗೆಯಿಂದಲೇ ಕಾಯಿತು ಧರೆ
ಇಟ್ಟಂಗಾಯ್ತು ಮೈಮೇಲೆ ಬರೆ
ವಸಂತಕಾಲದಿ ಬೇಸಿಗೆ ಬರಲು
ಬದಲಾವಣೆಯನು ಎಲ್ಲೆಡೆ ತರಲು
ಎಲೆಗಳು ಉದುರಿ ಬೀಳುತಿವೆ
ಹಸಿರೆಲೆ ಮತ್ತೆ ಚಿಗುರುತಿವೆ
ಮಜ್ಜಿಗೆ ಪಾನಕ ಕುಡಿಯೋಣ
ದಾಹವ ನೀಗಿಸಿಕೊಳ್ಳೋಣ
ಮಡಕೆಯ ನೀರು ದೇಹಕೆ ಹಿತವು
ಬಿಸಿಯದು ಉತ್ತಮ ತಿಂದರೆ ಮಿತವು
ತಲೆ ಮೇಲೆ ಟೋಪಿಯ ಧರಿಸುವರು
ಛತ್ರಿಯ ಮೋಹಕೆ ಬೀಳುವರು
ಮಾವಿನ ಹಣ್ಣಿಗೆ ಸಿಕ್ಕಿತು ಸೂರು
ಬಜಾರು ತುಂಬಾ ವ್ಯಾಪಾರ ಜೋರು
ಸ್ನಾನಕೆ ಬೇಡ ಬಿಸಿ ನೀರು
ಕುಡಿಯಲೇಬೇಕು ಎಳನೀರು
ಮಸಾಲೆ ತಿಂಡಿ ಕಡಿಮೆ ತಿನ್ನು
ಹತ್ತಿಯ ಬಟ್ಟೆ ಹಾಕಿಕೊ ಇನ್ನು
ಬೇಸಿಗೆ ತರುವುದು ಶಾಲೆಗೆ ರಜಾ
ಈಜು ಬಲ್ಲವಗೆ ಸಿಗುವುದು ಮಜಾ
ಸಿಗುವವು ಐಸ್ ಕ್ರೀಮ್ ತರಹೇವಾರಿ
ಜಾಸ್ತಿ ತಿಂದರೆ ರೋಗಕೆ ದಾರಿ
ರಸ್ತೆಯ ಮೇಲೆ ಮರಿಚಿಕೆಯು
ಕಾರಣ ಬಿಸಿಲಿನ ಹಂಚಿಕೆಯು
ಹಕ್ಕಿಗೂ ನೀರನು ಕುಡಿಸೋಣ
ಹೆಚ್ಚಿಗೆ ಗಿಡಮರ ಬೆಳೆಯೋಣ