ಬಿನ್ನಹ

ಕಾವ್ಯ ಸಂಗಾತಿ

ಬಿನ್ನಹ

ಜಯಲಕ್ಷ್ಮಿ ಎಂ ಬಿ

ವರುಣ ದೇವನೆ ತೋರಿ ಕೃಪೆಯನು
ಧರಣಿ ದೇವಿಯ ತಣಿಸೆಯ
ಸೊರಗಿ ಹೋಗಿಹ ಜೀವ ಸಂಕುಲ
ಹರಸಿ ಒಲವನು ತೋರೆಯ

ಬಟ್ಟ ಬಯಲಲಿ ಹರಡಿ ಚೆಲ್ಲಿಹ
ನೆಟ್ಟ ಬೆಳೆಗಳು ಸೊರಗಿವೆ
ಗಟ್ಟಿ ಮನದಲಿ ಬೇಡಿ ನಿನ್ನಲಿ
ತೊಟ್ಟು ಹನಿಯನು ಬಯಸಿವೆ

ಮಳೆಯ ಜಾಡನು ಹಿಡಿದು ಹೋಗಲು
ಸುಳಿವು ಎಲ್ಲಿಯು ಕಾಣದು
ಬೆಳಕು ತೋರದು ಬಾಳ ಪಯಣದಿ
ನಲಿವು ಮನದಲಿ ಸುಳಿಯದು

ಬಿಸಿಯ ಗಾಳಿಯು ಚಲನೆ ಇಲ್ಲದೆ
ಬಿಸಿಲ ಬೇಗೆಯ ಹರಡಿದೆ
ಹಸಿದ ರೈತನ ಬೆವರ ಹನಿಯೊಳು
ಬಸಿದು ಹೋಗುತ ಕರಗಿದೆ

ಹೊತ್ತು ಮುಳುಗಿದೆ ಎತ್ತ ನೋಡಲು
ಮತ್ತೆ ಸುಳಿಯದು ಮೋಡವು
ಸುತ್ತ ನೋಟವ ಚೆಲ್ಲಿ ಹರಿಸಲು
ಗೊತ್ತು ಗುರಿಯದು ಇಲ್ಲವೊ


Leave a Reply

Back To Top