ಕಾವ್ಯ ಸಂಗಾತಿ
ಮತ್ತೆ ಈ ಬದುಕು
ರೇಷ್ಮಾ ಕಂದಕೂರ
ಮತ್ತೆ ಮತ್ತೆ ಸಿಗುತ್ತೇವೆ
ಸುತ್ತಲೆಲ್ಲ ಗುಂಡಗೆ
ಮತ್ತೆ ಮತ್ತೆ ಬದುಕುತ್ತೇವೆ
ಮತ್ತಲಿರುವ ಸವಾಲಿಗೆ.
ಗತ್ತು ಹೆತ್ತರು
ಸ್ವತ್ತು ತಗಾದೆ ತೆಗೆದರು
ಮತ್ತಿನಾರ್ಭಟ ಮುಗಿದಮೇಲೆ
ಮತ್ತೆ ಮತ್ತೆ ತಿಳಿಯುತ್ತೇವೆ.
ಹತ್ತಿಯ ಬದುಕು
ಹತ್ತಿಯಣ್ಣಂತೆ ಸವಿ
ಬತ್ತಿದರೆ ಕತ್ತಲು
ಹತ್ತಿಬಿಡಿ ಬಾಂಧವ್ಯ ಬೆಸೆದು.
ಕತ್ತಿಯ ವರೆಸೆಯು
ಕುತ್ತು ತರುವ ಬಗಬಗೆಯು
ಉಸಿರು ಬಸಿರಲು ಕೊಸರು
ಹರಿಸುತಿಹುದು ನೆತ್ತರು.
ಕ್ರಾಂತಿಯ ಕರಿಮಾಯೆ
ಭ್ರಾಂತಿಯ ಸಿರಿದರಿಸಿ
ಶಾಂತಿಯ ಕದಡುತ
ಮತಿಗೆಡೆಸಿ ಶ್ರಮವೆಲ್ಲ
ಪರಿಸ್ಥಿತಿ ನಿಭಾಯಿಸಲು ವಿಫಲ ಛಾಯೆ.
ಸ್ಥಿತಿ ಲಯವ ಬಲ್ಲ
ರಾಗ ದ್ವೇಷದಿ ಎಲ್ಲ
ಬೇಸರದಿ ಹಾಡದಿರಿ
ಅನುರಾಗದಿ ಸೇರಿಸಿ ಎಲ್ಲ.
ತಿರುಳ ಅರಿಯದೆ
ತದುಕುತ ಬಾಳಿ
ಒಮ್ಮೆ ಹುಡಿಯ ಹೊರುವೆ
ಮುದದಿ ನೋಡು ಸುಮ್ಮನೆ.
ಕುದಿಯುವುದ ಬಿಟ್ಟು
ನೆನೆಯುವುದ ನೆಟ್ಟು
ಬೆರೆಯುವುದ ಕಟ್ಟು
ಸರಿಯುವುದ ಸುಟ್ಟು.
ತರುಲತೆಯ ಆಲಂಗಿನದಿ
ತರಾವರಿಯ ಅರಿಯುತ
ತರಿತರಿಯಾಗಿ ಅವಲೋಕಿಸಿ
ತಾರೆಯಂತೆ ಮೆರೆಯುವೆ.
ಗೊಡ್ಡು ಮಾತಿಗೆ ಮಣೆ ಏಕೆ
ಸೆಡ್ಡು ಹೊಡೆದು ಬಿಡು ಭಿನ್ನಕೆ
ಖೆಡ್ಡಾ ತೋಡಿ ಬೀಳುವೆ ಜೋಕೆ
ದಡ್ಡ ತನದಿ ಹಾಳಾಗದಿರು ಮಂಕೆ.
ಮತ್ತೆ ಮತ್ತೆ ಸಿಗುತ್ತೇವೆ
ಬಿರುಕುಗಳು ತುಂಬಿಬಿಡಿ
ಮತ್ತೆ ಮತ್ತೆ ಬೆರೆಯುತ್ತೇವೆ
ನೆತ್ತಿಯ ಕುಕ್ಕುವುದಕೆ ವಿರಾಮ ನೀಡಿ.
ಸುಪ್ರಸಿದ್ಧ ಮೇಡಂ ಜಿ.