ಕಾವ್ಯ ಸಂಗಾತಿ
ಕವಿತೆ
ದೇವರಾಜ್ ಹುಣಸಿಕಟ್ಟಿ
ಆಜಾದಿಗಾಗಿ ಬೇಡುತ್ತಿದ್ದೆವೆ….
ಇಷ್ಟ ಅಂದ್ರ್ ಇಷ್ಟ
ನೆತ್ತರಿನ ಬೆವರ ಹನಿ
ಹನಿಸಿ ನನ್ನ ಕರುಳ ಬಳ್ಳಿಯಲಿ ಬೆಳದ ಬೆಳದಿಂಗಳಂತ
ಹಣ್ಣ ಮಾರಲು ನಿರಾಂತಕ್ಕ ನೆಲವ
ಎದೆಯ ಕಂಬನಿಯೊಡ್ಡಿ ಬೇಡುತ್ತಿದ್ದೆವೆ….
ನನ್ನ ಹೃದಯ ಮಿಡಿಯುತಿರುವಾಗ
ಅದರ ಒಡೆಯನಿಗೆ
ಕೃತಜ್ಞತೆ ಸಲ್ಲಿಸುವ ಪ್ರಾರ್ಥನೆಗಾಗಿ
ಇಷ್ಟ ಅಂದ್ರ್ ಇಷ್ಟ
ಹದ್ದು ಮೀರದ ತುಂಡು
ಸರಹದ್ದಿಗಾಗಿ ಬೇಡುತ್ತಿದ್ದೆವೆ …
ಆಕಾಶಕ್ಕೆ ಕೈ ಚಾಚಿ
ಮಾನಗೇಡಿಗಳ ಮುಂದೆ ಉಟ್ಟ ತುಂಡು ಬಟ್ಟೆಯನ್ನು ಬಿಚ್ಚದಿರುವಂತೆ…..
ಕುಂತಿಗೆಯ ಗಂಟಲಲ್ಲಿ ಸಿಕ್ಕಿ ಒದ್ದಾಡುತ್ತಿರುವ
ಇಷ್ಟ ಅಂದ್ರ್ ಇಷ್ಟ
ನಿರಮ್ಮಳ ನಿಟ್ಟುಸಿರಿಗಾಗಿ ಬೇಡುತ್ತಿದ್ದೆವೆ….!
ನಮ್ಮದೇ ರಟ್ಟೆಗಳ
ನೆಲ ಕಚ್ಚುವಂತೆ ಮುರಿದು
ಹಸಿ ರಕ್ತವನ್ನೆ ಬಸಿದು ದುಡಿಮೆಯಿಂದ
ಬಂದ ಹಿಡಿ ಅನ್ನ ಉಣ್ಣಲು ಇಷ್ಟ ಅಂದ್ರ್ ಇಷ್ಟ….
ಕುತ್ತಿಗೆ ಹಿಚುಕುವ ನರ ಹದ್ದುಗಳು
ಕಾಡದಂತಿರಲು ಕಾನೂನಿನ
ರಕ್ಷಣೆ ಬೇಡುತ್ತಿದ್ದೆವೆ….!