ಕಾವ್ಯ ಸಂಗಾತಿ
ಪ್ರೀತಿಯ ಪರದೆ ಸರಿದಾಗ
ಶಂಕರಾನಂದ ಹೆಬ್ಬಾಳ
ಪ್ರೀತಿಯ ಪರದೆ ಸರಿದಾಗ
ಎದೆಯಲ್ಲೊಂದು ದುಗುಡ
ಮತ್ತೊಮ್ಮೆ
ಮುಗಿಲು ಕಳಚಿಬಿದ್ದಂತೆ
ಭಾಸ,
ಕಣ್ಣೀರ ಹನಿ ಜಾರಿದ ನೆನಪು
ಪ್ರೀತಿಯ ಪರದೆ ಸರಿದಾಗ…
ಚಂದ್ರ ಮೋಡದಲ್ಲಿ ಅವಿತ
ಕಾರ್ಗತ್ತಲ ಕವಿದ ಗಾಡಾಂಧಕಾರ
ಕಹಿಯಾದ ಕಾಫಿ,
ಹೀರಲು ಮನಸ್ಸಿಲ್ಲ,
ಅವಳು ಎದುರಿಲ್ಲದ ಚಣ
ಪದೆ ಪದೆ ದುಃಖದ ಕಟ್ಟೆ
ಒಡೆದು ಹೋಗುತ್ತದೆ
ಪ್ರೀತಿಯ ಪರದೆ ಸರಿದಾಗ…
ಕಣ್ಣಮುಂದೆ ಮರಿಚೀಕೆ
ಮೈಗೆದರಿ ಕುಣಿದಂತೆ
ಕೆಂಭೂತಕ್ಕೆ ಪುಕ್ಕ ಬಂದಂತೆ
ಫಲಹೊತ್ತ ವೃಕ್ಷ ಮುರಿದಂತೆ
ಒಳಗೊಳಗೆ ನೋವು
ತುಂಬಿ ಬಂತು
ಪ್ರೀತಿಯ ಪರದೆ ಸರಿದಾಗ…
ಖಾಲಿಯಾದ ನಶೆಯ ಮಧುಶಿಶೆ
ಕೊನೆ ಹನಿ ಗಂಟಲಿನಲ್ಲಿ
ಇಳಿಯದೆ ಒದ್ದಾಡುತಿರುವೆ,
ನಾಣ್ಯ ನುಂಗಿದ ಮಗುವಂತೆ,
ಕಾರ್ಮೋಡ ಆವರಿಸಿ
ದಂಡು ಮುತ್ತಿದಂತೆ…
ಧುತ್ತೆಂದು ದುಃಖದ ಬಾಣಗಳು
ಎದುರಿಗೆ ಹಾರುತ್ತಿವೆ
ಪ್ರೀತಿಯ ಪರದೆ ಸರಿದಾಗ….