ಕಾವ್ಯ ಸಂಗಾತಿ
ನಶಿಸಿ ಬಿಡಲಿ
ದೇವರಾಜ್ ಹುಣಸಿಕಟ್ಟಿ.


ಅಳಿಯುವುದಾದರೆ
ಅಳಿದು ಬಿಡಲಿ……….
ನಮ್ಮ- ಅವರೊಳಗಿನ ಅಂತರ್ ದ್ವೇಷ
ಗಡಿಯಾಚೆಗಿನ ಬೇಲಿ-ಮುಳ್ಳುಗಳ
ಕಳೆಚಿ ಅರಳಿ ಬಿಡಲಿ ಹೂವು………!.
ಕಳೆದು ಬಿಡಲಿ ಹೃದಯದಾಳದ ನೋವು…….. !
ಅಳಿಯುವುದಾದರೆ
ಅಳಿದು ಬಿಡಲಿ……
ಗಡಿಗುಂಟ ಗುಂಡಿನ ಸದ್ದು…. !
ಅನಾಥವಾಗುವ ಭಯ
ಚಿಕ್ಕ ಕಂದಮ್ಮಗಳ ಕಂಗಳಿಂದ ಆತಂಕವೆಂಬ ಹದ್ದು…… !
ನಶಿಸುವುದಾದರೆ
ನಶಿಸಿ ಬಿಡಲಿ…….
ನನ್ನ – ನಿನ್ನಾತ್ಮದಲಿ ಪೋಷಿಸಿ ನೀರೆರೆದ
ಧರ್ಮದ ಅಂಧಾಭಿಮಾನ……!
ಅಳಿದು ಬಿಡಲಿ ಹೊಸಕಿ ಹಾಕುವ ಕಾರಿರುಳ ಸಂಚಿನ ಹೊಂಚಿನ ಮನ…… !
ಅಳಿಯುವ ಮುನ್ನ ಸಾಗಿಲಿ ಅರಳಿ
ಹೂವ್ ಗಳ ಸುಗಂಧ ಯಾನ…. !
ತುಂಬಿ ಬಿಡಲಿ
ಮೊಗ್ಗು ಮೊಗ್ಗಿನಲಿ ಕನಸಿನ ಸಿಹಿ ಮಕರಂದ ಜೇನ……!
ನಶಿಸುವುದಾದರೆ
ನಶಿಸಿಬಿಡಲಿ…………
ಜ್ಞಾತ ಮನದ ಮೂಲೆಯಲಿ
ಅಜ್ಞಾತವಾಗಿ ಅಡಗಿ
ಕುಳಿತಿರುವ ಜಾತಿ ಬೀಜದ ಕಿಡಿ……!
ಸಂಪ್ರದಾಯದ ಹೆಸರಲಿ ಬಿಡದೆ ಆವರಿಸಿರುವ ಮೈಲಿಗೆ-ಮಡಿ……!
ದಿನದ ಬೆಳಗು ಹೊತ್ತು ತರಲಿ
ಅಲ್ಲಾನ ಕೂಗಿನಲಿ ಸಾಮರಸ್ಯದ ಹೊಂಗಿರಣ…….
ಗುಡಿಗಂಟೆ ನಾದದಲ್ಲಿ ಹೊಮ್ಮಿ ಬರಲಿ ಭಾವೈಕ್ಯ ನಾದದ ಗಾನ………
ನಮ್ಮೊಳಗೂ ಅವನೇ ನಿಮ್ಮೊಳಗೂ ಅವನೇ…
ಬೆಳಗಿ ಬಿಡಲಿ ಕಾರ್ಗತ್ತಲ ತಾಣ….
ತುಂಬಿ ಹೃದಯ-ಹೃದಯದಲಿ
ಬಿತ್ತಿಬರಲಿ ಪ್ರೀತಿಯ ಭಾವಯಾನ…… !!