ನೀನು ಅಲ್ಲಿಲ್ಲ

ಕಾವ್ಯ ಸಂಗಾತಿ

ನೀನು ಅಲ್ಲಿಲ್ಲ

ಶಂಕರಾನಂದ ಹೆಬ್ಬಾಳ

ನಿನ್ನ ಕಣ್ಣಿನ ಬಾಣಗಳು
ಎದೆಯನ್ನು ಇರಿಯುತ್ತಿವೆ
ಟಿಂವ್ ಎನ್ನುವ ಲಾಟೀನು
ಆಲಿಂಗನದ ಸವಿಕ್ಷಣಗಳ
ನೆನಪಿಸುತ್ತಿದೆ….
ಆದರೆ
ಈಗ ನೀನು ಅಲ್ಲಿಲ್ಲ…!

ಪುಸ್ತಕದ ಹಾಳೆಯಲ್ಲಿ ನೀ
ಗೀಚಿದ ದಿಲ್ ರೇಖಾಚಿತ್ರ
ಮಾಸದೆ ಉಳಿದಿದೆ,
“ನಾನು ನಿನಗಾಗಿ
ನೀನು ನನಗಾಗಿ”
ಬರೆದ ಕವನ ಅಜರಾಮರ
ಎಲ್ಲವೂ ಹಾಗೆ ಇದೆ
ಆದರೆ,
ಈಗ ನೀನು ಅಲ್ಲಿಲ್ಲ….!

ಅರ್ಧ ಸೇದಿಬಿಟ್ಟ
ಕಿಂಗ್ ಸಿಗರೇಟ
ಆರಿದ ದೀಪದ ಕಡ್ಡಿ,
ಹೀರಿ ಬಿಟ್ಟ ಬೀಯರ ಗ್ಲಾಸ್,
ಪದೆ ಪದೆ ನಿನ್ನ ನೆನಪಿನಲೆಯಲ್ಲಿ
ನನ್ನ ಹೃದಯ ತೇಲಿಸುತ್ತಿದೆ
ಆದರೆ,
ಈಗ ನೀನು ಅಲ್ಲಿಲ್ಲ…!

ನಿನ್ನ ಹುಡುಕುವ ಇರಾದೆ
ನನಗೆ ಏಕೋ ಗೊತ್ತಿಲ್ಲ..?
ಸಿಗದ ಸ್ವಪ್ನಗಳ ದಾರಿಯಲಿ
ಒಲವ ಅರಸುವ ಮೂರ್ಖ
ನಾನಾಗಿದ್ದೇನೆ…
ಆದರೆ
ಈಗ ನೀನು ಅಲ್ಲಿಲ್ಲ…!

ಅಡ್ಡಾದಿಡ್ಡಿ ಬಿದ್ದ ಬರಿಹಾಳೆಯ
ತುಣುಕುಗಳು
ಅಲ್ಲೊಂದು ಕಪ್ಪುಬಿಳುಪಿನ
ನಿನ್ನ ಹಳೆಯ ಭಾವಚಿತ್ರ,
ನೀನು ಎಲ್ಲಿರುವೆ..?
ನನಗೆ ಗೊತ್ತಿಲ್ಲ…
ಹೃದಯದಿ ಅವಿತೆಯಲ್ಲ,
ಆದರೆ
ಹೊರಲೋಕದಲಿ
ನಿನ್ನ ಸುಳಿವೆಯಿಲ್ಲ
ಕಾರಣ ನೀನು ಅಲ್ಲಿಲ್ಲ…!


2 thoughts on “ನೀನು ಅಲ್ಲಿಲ್ಲ

Leave a Reply

Back To Top