ಹೊಟ್ಟೆ ಪಾಡು

ಕಾವ್ಯ ಸಂಗಾತಿ

ಹೊಟ್ಟೆ ಪಾಡು

ಪ್ರೊ.ರಾಜನಂದಾ ಘಾರ್ಗಿ

ಆಸೆಗಳು ನೂರು ಬಾಳಿನಲ್ಲಿ
ಜಗವನೇ ಗೆಲ್ಲುವ ಆಶಯದಲ್ಲಿ
ಹೆಗಲಿಗೇರಿದ ಮುದ್ದು ಸಂಸಾರ
ಸಾವಿರ ಕನಸುಗಳು ಕಣ್ಣಲ್ಲಿ

ಮಡದಿ ಮಮತೆಯ ಒಲುಮೆ
ಮಕ್ಕಳು ಸಂತಸದ ಚಿಲುಮೆ
ಜೀವನ ಸಂಭ್ರಮದ ರಹದಾರಿ
ಸ್ವರ್ಗಕ್ಕೆ ಕಿಚ್ಚು ಹಚ್ಚುವ ಭ್ರಮೆ

ನಡೆಯುತ್ತ ದಣಿದ ಕಾಲುಗಳು
ಹೊರೆ ಹೊತ್ತು ಬಾಗಿದ ಹೆಗಲುಗಳು
ಕಾಲಕ್ಕೆ ಸೋತ ಬಡ ದೇಹ
ವಿಶ್ರಾಂತಿ ಬಯಸಿದ ತನುಮನಗಳು

ಮರಿಹಕ್ಕಿಗಳ ರಕ್ಕೆ ಬೆಳೆದಾಗ
ಗೂಡು ಬಿಟ್ಟು ದೂರ ಹಾರಿದಾಗ
ಹೊಟ್ಟೆ ಪಾಡು ಕೈ ಹಿಡಿದಿತ್ತು
ಮನೆ ಮನ ಖಾಲಿಯಾದಾಗ


Leave a Reply

Back To Top