ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—49

ಯಕ್ಷಗಾನ-ನಾಟಕ ರಂಗಭೂಮಿಯಲ್ಲಿ.

ನನ್ನ ಕಾಲೇಜು ಅಧ್ಯಾಪಕರ ವೃತ್ತಿಯೊಡನೆ ನಾನು ಪ್ರೀತಿಯಿಂದ ಎದೆಗೆ ಹಚ್ಚಿಕೊಂಡ ಯಕ್ಷಗಾನ ಮತ್ತು ನಾಟಕ ರಂಗಭೂಮಿಯ ಹವ್ಯಾಸಗಳು ನನ್ನ ವ್ಯಕ್ತಿತ್ವದ ಇನ್ನೊಂದು ಮುಖದ ಬೆಳವಣಿಗೆಗೆ ಕಾರಣವಾದವು. ಈ ನಂಟಿನಿಂದಲೇ ಕಾಲೇಜು ಕ್ಯಾಂಪಸ್ಸಿನ ಆಚೆಯೂ ನನಗೊಂದು ಜನಪ್ರಿಯ ವಲಯ ಸೃಷ್ಟಿಯಾಯಿತು. ಹಾಗೆಂದು ನಾನು ಕ್ರಮಿಸಿದ ಯಕ್ಷಗಾನ ಮತ್ತು ರಂಗಭೂಮಿಯ ದಾರಿ ಕೇವಲ ಸುಗಂಧಯುಕ್ತ ಹೂವಿನ ಹಾಸಿಗೆಯಷ್ಟೇ ಆಗಿರಲಿಲ್ಲ. ಅಲ್ಲಿ ಶ್ಲಾಘನೆಯ ಪರಿಮಳದೊಡನೆ ವಿಮರ್ಶೆಯ ಟೀಕೆ ಟಿಪ್ಪಣಿಗಳ ಕಲ್ಲು ಮುಳ್ಳುಗಳನ್ನು ತುಳಿಯುವುದೂ ಅನಿವಾರ್ಯವೇ ಆಗಿತ್ತು….!

ಅಂಕೋಲೆಯ ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ನಮ್ಮ ಆಗೇರ ಜನಾಂಗದ ನೆಲೆಗಳಿವೆ. ಎಲ್ಲ ನೆಲೆಗಳಲ್ಲಿಯೂ ಸಾಂಪ್ರದಾಯಿಕ ಭಜನೆ ಉತ್ಸವ ಪ್ರತಿ ವರುಷವೂ ನಡೆಯುತ್ತದೆ. ಸಪ್ತಾಹದ ಕಾಲಾವಧಿ ನಡೆಯುವ ಭಜನಾ ಉತ್ಸವದ ಕೊನೆಯ ರಾತ್ರಿ ಜಾಗರಣೆಗಾಗಿ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಪದ್ಧತಿ ತೀರ ಹಿಂದಿನಿಂದಲೂ ರೂಢಿಯಲ್ಲಿದೆ. ಆರಂಭದ ಕೆಲವರ್ಷಗಳಲ್ಲಿ ಆಯಾ ಊರಿನ ಯುವಕರೂ, ವೃದ್ಧರೂ ಸೇರಿ ಬಲ್ಲವರಿಂದ ಮಾರ್ಗದರ್ಶನ ಪಡೆದು ಮೇಳ ಕಟ್ಟಿಕೊಂಡು ಕಲಿತು ಆಡುವ ಕ್ರಮವಿತ್ತು. ಕಾಲಕ್ರಮೇಣ ಯಕ್ಷಗಾನ ವೃತ್ತಿ ಮೇಳಗಳ, ಹವ್ಯಾಸಿ ತಂಡಗಳ ಪ್ರಭಾವದಿಂದ ಬೇರೆ ಬೇರೆ ಕಡೆಯಿಂದ ಅತಿಥಿ ಕಲಾವಿದರನ್ನು ಕರೆಸಿ ಆಟ ಆಡಿಸುವ ಕ್ರಮ ರೂಢಿಯಾಯಿತು. ಪ್ರತಿಯೊಂದು ಊರಿನಲ್ಲೂ ಆಟ ಉತ್ತಮವಾಗಬೇಕೆಂಬ ಆಕಾಂಕ್ಷೆ ಯಿಂದ ಪರಿಣಿತ ಕಲಾವಿದರನ್ನು ಕರೆಸಿಕೊಂಡು ಪ್ರದರ್ಶನ ಏರ್ಪಡಿಸುವ ಸ್ಪರ್ಧಾ ಮನೋಭಾವವೂ ಬೆಳೆಯತೊಡಗಿತು. ತಮ್ಮ ಊರಿನ ಪ್ರದರ್ಶನವೇ ಉತ್ತಮವಾಗಬೇಕೆಂಬ ಆಕಾಂಕ್ಷೆ ಯಿಂದ ಕಲಾವಿದರು ಬೇಡಿದ ಬೆಲೆಕೊಟ್ಟು ಕರೆಸಿಕೊಳ್ಳುವ ಪದ್ಧತಿಯು ಹೆಚ್ಚತೊಡಗಿತು.

ಸರಿಸುಮಾರು ಇದೇ ಕಾಲಾವಧಿಯಲ್ಲಿ ನಾನು (ಎಪ್ಪತ್ತು-ಎಂಭತ್ತರ ದಶಕದಲ್ಲಿ) ಹವ್ಯಾಸಿ ಯಕ್ಷ ಕಲಾವಿದನಾಗಿ ರಂಗ ಪ್ರವೇಶ ಮಾಡಿದೆ. ಕುಮಟಾ, ಅಂಕೋಲಾ, ಕಾರವಾರ ಇತ್ಯಾದಿ ತಾಲೂಕುಗಳ ಎಲ್ಲ ಹಳ್ಳಿಗಳಲ್ಲಿ ನಮ್ಮ ಆಗೇರ ಸಮುದಾಯದವರು ಆಟ ಆಡಿಸುವಾಗ ನನ್ನನ್ನು ತಪ್ಪದೇ ಆಹ್ವಾನಿಸುತ್ತಿದ್ದರು. ಕಥಾನಕದ ಮುಖ್ಯ ಪಾತ್ರವನ್ನೇ ನೀಡಿ ಪ್ರೋತ್ಸಾಹಿಸತೊಡಗಿದರು.

ವೃತ್ತಿಯಿಂದ ಅಧ್ಯಾಪಕನಾಗಿರುವ ನನಗೆ ಯಕ್ಷಗಾನ ಪ್ರದರ್ಶನದಲ್ಲಿ ರಾತ್ರಿ ಕಳೆದರೆ ಮರುದಿನ ನಿದ್ದೆ ವಿಶ್ರಾಂತಿಗಾಗಿ ರಜೆಯ ಅವಶ್ಯಕತೆಯಿತ್ತು. ರವಿವಾರದ ರಜೆಯ ಮುನ್ನಾ ದಿನದ ಶನಿವಾರ ರಾತ್ರಿಯಲ್ಲಿ ನಾನು ಪಾತ್ರಕ್ಕೆ ಒಪ್ಪಿಕೊಳ್ಳುತ್ತಿದ್ದೆ. ನನ್ನ ಸಮಾಜ ಬಾಂಧವರು ನನ್ನ ಮೇಲಿನ ಅಭಿಮಾನದಿಂದ ರಜೆಯ ಮುನ್ನಾ ದಿನಗಳನ್ನೇ ಆಯ್ದು ತಮ್ಮೂರಿನ ಆಟ ನಿಗದಿಪಡಿಸತೊಡಗಿದರು. ಅದು ಇನ್ನಿತರ ಹವ್ಯಾಸಿ ಕಲಾವಿದರಿಗೂ ತುಂಬಾ ಅನುಕೂಲವಾಗಿ ಇದು ಒಂದು ಸಂಪ್ರದಾಯವೇ ಎಂಬಂತೆ ಇಂದಿಗೂ ಮುಂದುವರೆದಿದೆ.

ಹೀಗೆ ಎರಡು ದಶಕಗಳಿಗೂ ಅಧಿಕ ಕಾಲ ನನ್ನ ಸ್ವಜಾತಿ ಬಾಂಧವರೂ, ಇತರ ಸಮಾಜದವರೂ ನನ್ನನ್ನು ತಮ್ಮೂರಿನ ಯಕ್ಷಗಾನ ಪ್ರದರ್ಶನಕ್ಕೆ ಅಭಿಮಾನದಿಂದ ಆಮಂತ್ರಿಸುತ್ತಲೇ ನಾನು ಒಬ್ಬ ಸಮರ್ಥ ಕಲಾವಿದನಾಗಿ ರೂಪುಗೊಳ್ಳುವಂತೆ ಪ್ರೇರಣೆ ನೀಡಿದರು.

ಈ ನಡುವೆ ನನಗೆ ಹಲವಾರು ಹಿರಿ-ಕಿರಿಯ ಹವ್ಯಾಸಿ ಮತ್ತು ಮೇಳದ ಕಲಾವಿದರ ಒಡನಾಟದ ಅವಕಾಶ ದೊರೆಯಿತು. ಯಕ್ಷಗಾನ ವೇಷಭೂಷಣ, ಮುಖ ವರ್ಣಿಕೆಗಳ ಔಚಿತ್ಯವನ್ನು ಅರಿತುಕೊಳ್ಳಲು, ಪಾತ್ರ ಪೋಷಣೆ, ಪ್ರಸಂಗದ ನಡೆ, ನೃತ್ಯ ವಿನ್ಯಾಸಗಳ ಸೂಕ್ಷö್ಮಗಳನ್ನು ತಿಳಿದುಕೊಳ್ಳಲು ವಿಫುಲ ಅವಕಾಶ ದೊರೆಯಿತು.

ಚಿಕ್ಕಂದಿನಲ್ಲಿ ನಮ್ಮ ತಂದೆ ಗಣಪು ಮಾಸ್ತರರು ಕಲಿಸಿಕೊಟ್ಟ ನೃತ್ಯ ಕ್ರಮದೊಂದಿಗೆ ನಾನು ನೋಡುತ್ತ ಕಲಿತ ನೃತ್ಯ ವಿನ್ಯಾಸಗಳನ್ನು ನನ್ನ ಪಾತ್ರ ಪೋಷಣೆಯಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದೆನಾದರೂ ಇತ್ತಿಚಿನ ನವನವೀನವಾದ ತಿಟ್ಟು ಮಟ್ಟುಗಳು ಪರಿಪೂರ್ಣವಾಗಿ ನನಗೆ ಅಭ್ಯಾಸವಾಗಿರಲಿಲ್ಲ. ಈ ಸನ್ನಿವೇಶದಲ್ಲಿ ನನಗೆ ಗುರುವಾಗಿ ದೊರೆತವರು ನನ್ನ ಪ್ರೀತಿಯ ಯಕ್ಷ ಗುರು ರಾಮದಾಸ ಬಂಢಾರಿ!

ಕುಮಟಾ ತಾಲೂಕಿನ ಮೂರೂರು ಎಂಬ ಗ್ರಾಮದ ತರುಣ ರಾಮದಾಸ ಬಂಢಾರಿ ಉತ್ತಮ ಯಕ್ಷ ನೃತ್ಯ ಪಟುವಾಗಿದ್ದರಲ್ಲದೆ, ಅದ್ವೀತಿಯೆನ್ನಿಸುವ ಮದ್ದಳೆ ವಾದಕರಾಗಿದ್ದರು. ಅವರ ಸಹೋದರಿ ಅಂಕೋಲೆಯ ಸರಕಾರಿ ಆಸ್ಪತ್ರೆಯಲ್ಲಿ “ನರ್ಸ್” ಆಗಿ ಸೇವೆ ಸಲ್ಲಿಸುತ್ತಿದ್ದರು. ಸಹೋದರಿಯೊಡನೆ ತಾಯಿ, ಪತ್ನಿ, ಪುಟ್ಟ ಮಗು ಮತ್ತು ಅಣ್ಣನ ಮಗ ರಮೇಶ ಎಂಬ ಹತ್ತು ವರ್ಷದ ಬಾಲಕನೊಡನೆ ಇಡಿಯ ಸಂಸಾರವೂ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿತ್ತು. ರಾಮದಾಸ ಬಂಢಾರಿ ಜೀವನದ ನಿರ್ವಹಣೆಗಾಗಿ ಯಕ್ಷಗಾನ ತರಬೇತಿ ನೀಡುವ, ಯಕ್ಷಗಾನ ಪ್ರದರ್ಶನದಲ್ಲಿ ಮದ್ದಳೆ ನುಡಿಸುವ ಕಾಯಕ ಮಾಡಿಕೊಂಡಿದ್ದ. ಅವರ ಅಣ್ಣನ ಮಗ ರಮೇಶ ಅಂದು ಅಂಕೋಲೆಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದ. ಚಿಕ್ಕಪ್ಪ ಆಸಕ್ತರಿಗೆ ಯಕ್ಷಗಾನ ನೃತ್ಯ ಕಲಿಸುವಾಗ ತಾನೂ ಆಸಕ್ತಿಯಿಂದ ನೃತ್ಯಾಭ್ಯಾಸ ಮಾಡುತ್ತಿದ್ದ. ಇದೇ ರಮೇಶನೆಂಬ ಬಾಲಕ ಮುಂದೆ ಯಕ್ಷರಂಗದ ಅಪ್ರತಿಮ ಹಾಸ್ಯಕಲಾವಿದನಾಗಿ ಬೆಳೆದನಲ್ಲದೇ ಅಮೃತೇಶ್ವರಿ, ಪೆರ್ಡೂರು, ಸಾಲಿಗ್ರಾಮ ಇತ್ಯಾದಿ ವೃತ್ತಿಮೇಳಗಳಲ್ಲಿ ಮುಖ್ಯ ವಿದೂಷಕನಾಗಿ ಸೇವೆ ಸಲ್ಲಿಸಿ, ಈಗಲೂ ಯಕ್ಷರಂಗದ ಅತ್ಯಂತ ಜನಪ್ರಿಯ ಹಾಸ್ಯ ಕಲಾವಿದನಾಗಿ ವಿಜೃಂಭಿಸುತ್ತಿದ್ದಾನೆ!

ರಾಮದಾಸ ಬಂಢಾರಿ ಅಂಕೋಲೆಯ ಆಸುಪಾಸಿನ ಹಳ್ಳಿಗಳಲ್ಲಿ ಯುವಕರ ತಂಡಕಟ್ಟಿ ತರಬೇತಿ ನೀಡಿ ಉತ್ತಮ ಕಲಾವಿದರನ್ನಾಗಿ ರೂಪುಗೊಳಿಸಿದ್ದಾನೆ. ನಾನು ಪಾತ್ರ ನಿರ್ವಹಿಸಿದ ಅನೇಕ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದ ಮದ್ದಳೆ ವಾದಕನಾಗಿ ಕೆಲಸ ಮಾಡಿದ ರಾಮದಾಸ ಬಂಢಾರಿ ಕ್ರಮೇಣ ನನ್ನ ಪ್ರೀತಿಯ ಅಭಿಮಾನಿಯಾದನಲ್ಲದೇ ನಾನು ‘ಮುಲ್ಲಾಬಾಡಾ’ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವಾಗ ದಿನವೂ ಮದ್ದಳೆಯೊಂದಿಗೆ ಮನೆಗೇ ಬಂದು ಯಕ್ಷನೃತ್ಯದ ವಿನೂತನ ವಿನ್ಯಾಸಗಳನ್ನು ನನಗೆ ಹೇಳಿಕೊಟ್ಟು ನನ್ನನ್ನು ತಿದ್ದಿ ಪರಿಷ್ಕರಿಸಿದ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸ್ವ ಇಚ್ಛೆಯಿಂದ ತಿಂಗಳುಗಳ ಕಾಲ ಮದ್ದಳೆಯೊಂದಿಗೆ ಮನೆಗೆ ಬಂದು ಯಕ್ಷಗಾನ ಕುಣಿತ ಕಲಿಸಿದ ರಾಮದಾಸ ಬಂಢಾರಿಯವರನ್ನು ನಾನು ಎಂದಿಗೂ ಮರೆಯಲಾಗದ, ಮರೆಯ ಬಾರದ ನನ್ನ ‘ಯಕ್ಷಗುರು’ ಎಂದೇ ನಾನು ಭಾವಿಸಿದ್ದೇನೆ.

ಅಂದು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಯಕ್ಷರಂಗದ ಉತ್ತುಂಗದಲ್ಲಿ ವಿಜೃಂಭಿಸುತ್ತಿದ್ದ ಕಾಲ. ಪ್ರತಿ ವರ್ಷದ ತಿರುಗಾಟದಲ್ಲಿಯೂ ವಿನೂತನ ನೃತ್ಯ ವಿನ್ಯಾಸವೊಂದನ್ನು ತಂದು ಜನಪ್ರಿಯಗೊಳಿಸುವುದು ಚಿಟ್ಟಾಣಿಯವರ ಕ್ರಮವೇ ಆಗಿತ್ತು….! ನನ್ನ ಗುರು ರಾಮದಾಸ ಬಂಢಾರಿ ಕೂಡ ಉತ್ತಮ ಕುಣಿತಗಾರನಾಗಿದ್ದು, ಚಿಟ್ಟಾಣಿಯವರ ಎಲ್ಲ ಬಗೆಯ ನೃತ್ಯಗಳನ್ನು ಲಯಬದ್ಧವಾಗಿ ಕುಣಿದು ತೋರಬಲ್ಲ ಸಮರ್ಥನಾಗಿದ್ದ. ಇದೇ ಕಾರಣದಿಂದ ಆತ ಚಿಟ್ಟಾಣಿಯವರಿಗೆ ಅತ್ಯಂತ ಪ್ರೀತಿ ಪಾತ್ರನೂ ಆಗಿದ್ದ. ಈ ಸ್ನೇಹದ ನಂಟು ವಿಸ್ತçತವಾಗುತ್ತಲೇ ನನಗೂ ಚಿಟ್ಟಾಣಿಯವರಿಗೂ ಸಹೋದರ ಭಾವದ ಅತ್ಯಂತ ಆಪ್ತವಾದ ಸ್ನೇಹ ಸಂಬಂಧಕ್ಕೆ ಕಾರಣವಾಯಿತೆಂಬುದು ನನ್ನ ಬದುಕಿನ ಬಹುದೊಡ್ಡ ಭಾಗ್ಯ!

ಹವ್ಯಾಸಿ ಕಲಾ ತಂಡಗಳ ತಿರುಗಾಟದ ಆರಂಭದ ದಿನಗಳಲ್ಲಿ ಹಿಮ್ಮೇಳದ ಭಾಗವತರಾಗಿ ದೊರೆತ ಗಜಾನನ ಮಾಸ್ಟರ್ ಕಲ್ಲಬ್ಬೆ, ಆರ್.ಬಿ.ನಾಯ್ಕ ಅಂಕೋಲಾ, ಸಿದ್ದಾಪುರ ಸತೀಶ ಹೆಗಡೆ ದಂಟಕಲ್, ಹಿಲ್ಲೂರಿನ ಹೆಗಡೆ ಭಾಗವತರು ಮುಂತಾದವರು ನನ್ನ ಪಾತ್ರ ಘೋಷಣೆಗೆ ಬೆನ್ನೆಲುಬಾಗಿ ನಿಂತು ನನ್ನನ್ನು ರಂಗದಲ್ಲಿ ಮೆರೆಯಿಸಿದ ಪರಿಣಾಮ ನಾನು ಬಹುಜನ ಪ್ರೀತಿಯ ಕಲಾವಿದನಾಗಿ ಬೆಳೆಯಲು ಕಾರಣವಾಯಿತು. ಜೊತೆಯಲ್ಲಿ ಸಹಕಲಾವಿದರಾಗಿ ದೊರೆತ ಗೋಕರ್ಣದ ಅನಂತ ಹಾವಗೋಡಿ, ಎಕ್ಟರ್ ಜೋಷಿ, ಶಿವಾನಂದ ಬಂಢಾರಿ, ಬೀರಣ್ಣ ಮಾಸ್ತರ ಅಡಿಗೋಣ, ವಿಠೋಬ ನಾಯಕ ವಂದಿಗೆ, ವಾಸುದೇವ ಶಾನಭಾಗ ಶಿರ್ಶಿ, ಪಾಲನಕರ ಮಾಸ್ತರ ಅಂಕೋಲಾ, ನಾರಾಯಣ ಗಾಂವಕರ ಪಡುವಣಿ, ಜಿ.ಎನ್. ಹೆಗಡೆ ಶಿರ್ಶಿ, ಮಾಧವ ಪಟಗಾರ ಕುಮಟಾ, ಗೋವಿಂದ ನಾಯ್ಕ ಕುಮಟಾ, ಧಾರೇಶ್ವರ ಮಾಸ್ತರರು ಮೊದಲಾದ ಹಿರಿಯರೆಲ್ಲ ಒಂದಲ್ಲ ಒಂದು ಬಗೆಯಿಂದ ನನ್ನನ್ನು ಪ್ರಭಾವಿಸದರಲ್ಲದೆ ನನ್ನ ಕಲಾವಿದ ವ್ಯಕ್ತಿತ್ವಕ್ಕೆ ಸಾಣಿ ಹಿಡಿದು ಬೆಳಗಿಸಿದವರು.

ನಿರಂತರ ನಾಲ್ಕು ದಶಕಗಳ ಕಾಲದ ನನ್ನ ಯಕ್ಷಗಾನ ರಂಗದ ಪಯಣದಲ್ಲಿ ಹಲವು ಏಳು ಬೀಳುಗಳಿವೆ. ಆದರೂ ಈ ಯಕ್ಷರಂಗದ ಸುಂದರ ಅನುಭವ ಮತ್ತು ಒಡನಾಟಗಳನ್ನು ನಾನು ಪ್ರೀತಿಯಿಂದ ನನ್ನ ಸ್ಮರಣೆಯ ಭಾಗವಾಗಿಯೇ ಉಳಿಸಿಕೊಂಡಿದ್ದೇನೆ. ನೆನಪಿಸಿ ಉಲ್ಲೇಖಿಸಲೇಬೇಕಾದ ಕೆಲವು ಅವಿಸ್ಮರಣೀಯ ಸನ್ನಿವೇಶಗಳನ್ನು ಮುಂದೆ ನಿರೂಪಿಸುವೆ…..


ರಾಮಕೃಷ್ಣ ಗುಂದಿ




ಕನ್ನಡದಖ್ಯಾತಕತೆಗಾರ. ಅವಾರಿ, ಕಡಲಬೆಳಕಿನದಾರಿಗುಂಟ, ಅತಿಕ್ರಾಂತ, ಸೀತೆದಂಡೆಹೂವೇ …ಈನಾಲ್ಕುಅವರಕಥಾಸಂಕಲನಗಳು. ಅವರಸಮಗ್ರಕಥಾಸಂಕಲನಸಹಈಚೆಗೆಪ್ರಕಟವಾಗಿದೆ.‌ಯಕ್ಷಗಾನಕಲಾವಿದ.‌ ಕನ್ನಡಉಪನ್ಯಾಸಕರಾಗಿಅಂಕೋಲಾದಜೆ.ಸಿ.ಕಾಲೇಜಿನಲ್ಲಿಸೇವೆಪ್ರಾರಂಭಿಸಿ, ಕಾರವಾರದದಿವೇಕರಕಾಲೇಜಿನಲ್ಲಿಪ್ರಾಂಶುಪಾಲರಾಗಿಕರ್ತವ್ಯನಿರ್ವಹಿಸಿನಿವೃತ್ತರಾಗಿದ್ದಾರೆ. ಯಕ್ಷಗಾನಅಕಾಡೆಮಿಸದಸ್ಯರಾಗಿಸೇವೆಸಲ್ಲಿಸಿದ್ದಾರೆ. ಮಗಅಮೆರಿಕಾದಲ್ಲಿಸಾಫ್ಟ್‌ವೇರ್ಎಂಜಿನಿಯರ್. ಅಗೇರಸಮುದಾಯದಿಂದಬಂದಗುಂದಿಅವರುಅದೇಜನಾಂಗದಬಗ್ಗೆಪಿಎಚ್ಡಿಪ್ರಬಂಧಮಂಡಿಸಿ, ಡಾಕ್ಟರೇಟ್ಸಹಪಡೆದಿದ್ದಾರೆ‌ . ದಲಿತಜನಾಂಗದಕಷ್ಟನಷ್ಟನೋವು, ಅವಮಾನ, ನಂತರಶಿಕ್ಷಣದಿಂದಸಿಕ್ಕಬೆಳಕುಬದುಕುಅವರಆತ್ಮಕಥನದಲ್ಲಿದೆ. ಮರಾಠಿದಲಿತಸಾಹಿತಿಗಳ,‌ಲೇಖಕರಒಳನೋಟ , ಕನ್ನಡನೆಲದದಲಿತಧ್ವನಿಯಲ್ಲೂಸಹಇದೆ.‌ ರಾಮಕೃಷ್ಣಗುಂದಿಅವರಬದುಕನ್ನುಅವರಆತ್ಮಕಥನದಮೂಲಕವೇಕಾಣಬೇಕು. ಅಂತಹನೋವಿನಹಾಗೂಬದುಕಿನ‌ ಚಲನೆಯಆತ್ಮಕಥನವನ್ನುಸಂಗಾತಿ ..ಓದುಗರಎದುರು, ‌ಕನ್ನಡಿಗರಎದುರುಇಡುತ್

5 thoughts on “

  1. ಗುರೂಜಿ, ನಿಮಗೆ ಯಕ್ಷಗಾನದ ಹುಚ್ಚು ಎಲ್ಲಿಯವರೆಗೆ ಬೆಳೆಸಿದೆ ಅಂದರೆ ನಿಮ್ಮ ಛಲ ನಿಮ್ಮ ಗುರಿ ನಿಮ್ಮನ್ನು ಎಲ್ಲರೂ ಗುರುತಿಸುವಂತೆ ಬೆಳೆಸಿದೆ ಇದಕ್ಕೆ ಕಾರಣ ನಿಮ್ಮಲ್ಲಿರುವ ಉದಾರ ಮನಸ್ಸಿನ ಭಾವನೆಗಳು…..
    ಮುಂದಿನ ಸಂಚಿಕೆ ಎದುರಾಗಿರುವೆ…

  2. ಸರ,
    ,ತಮ್ಮ ಯಕ್ಷರಂಗದ ಕಾಯಕವನ್ನು ಓದುವ ನೀರೀಕ್ಷೆಯಲ್ಲಿರುವ ನಮಗೆ ತುಂಬಾ ಸಂತೋಷವಾಗಿದೆ.

  3. ಸರ್,ತಮ್ಮ ಯಕ್ಷಗಾನ ಪ್ರೀತಿ ಮತ್ತು ಆರಂಭದ ಕಲಿಕೆ ಬಗ್ಗೆ ತಿಳಿದು ಖುಷಿಯಾಯಿತು.ರಮೇಶ್ ಭಂಡಾರಿ ಅಂಕೋಲಾದಲ್ಲಿ ಕಲಿತಿದ್ದರು ಅನ್ನುವುದು ಅಚ್ಚರಿಯ ಸಂಗತಿ.

  4. ಸರ್, ತಮ್ಮ ಪಾತ್ರ ನೋಡಿಲ್ಕ ಆದರೆ ಅದರಬಗ್ಗೆ ಮಾವನಿಂದ ಕೇಳಿದ್ದೇನೆ. ಉದಾರ ಮನಸ್ಸಿನ ತಮಗೆ ಉದಾರಿಗಳ ಸಹಕಾರ ಸಂತಸ. ಮುಂದಿನ ಅಂಕಣ ಓದಲು ಕಾಯುತಿರುವೆ.

Leave a Reply

Back To Top