ಅಂಕಣ ಸಂಗಾತಿ
ನೆನಪಿನದೋಣಿಯಲಿ–01
ರುಬ್ಬುವ ಕಲ್ಲು
ಕಾಲವೆಂಬ ಗಿರಿಯ ಏರುತ್ತಾ ಏರುತ್ತಾ ಹಿಂತಿರುಗಿ ನೋಡಿದಾಗ ಅದೆಷ್ಟೋ ಅಂದಿನ ಸಾಮಾನ್ಯ ಸಂಗತಿಗಳು ಇಂದು ವಿಶಿಷ್ಟವೆನಿಸ ತೊಡಗುತ್ತವೆ. ಕಾಡುವ ನೆನಪುಗಳಾಗಿ ಹಂಚಿಕೊಳ್ಳಲೇಬೇಕೆಂಬ ತಹತಹ ಮೂಡಿಸುತ್ತವೆ. ಅಂತಹ ನೆನಪುಗಳ ಮಾಲಿಕೆ ಈ ಅಂಕಣ. ಬನ್ನಿ ನೆನಪಿನ ದೋಣಿಯನ್ನೇರಿ ಗತ ವೆಂಬ ಸಾಗರದ ಪರ್ಯಟನೆ ಮಾಡಿ ಬರೋಣ.
ಕಷ್ಟಗಳ ಒರಳಿನಲ್ಲಿ ಅರಿದು ನುರಿತವಗೆ
ಸುಖವೆಂಬ ಭಕ್ಷ್ಯಗಳ ಸವಿ ಆಸ್ವಾದವಂತೆ
ಇತ್ತೀಚೆಗೆ ನಮ್ಮವರ ಹಳ್ಳಿಯಲ್ಲಿ ಪರಿಚಯದವರೊಬ್ಬರ ಮನೆಯ ಗೃಹಪ್ರವೇಶಕ್ಕೆ ಹೋದ ಸಂದರ್ಭ. ಹಳ್ಳಿಯ ಹೊಲದ ಮಧ್ಯೆ ಬಂಗಲೆಯಂತಹ ಎರಡಂತಸ್ತಿನ ದೊಡ್ಡಮನೆ. ಹೊಳೆವ ಅಮೃತಶಿಲೆಯ ನೆಲಹಾಸು ಎತ್ತರದ ದೀಪ ಗೊಂಚಲು. ಇಡೀ ಮನೆ ಸುತ್ತಿ ಬರಲು ಮುಕ್ಕಾಲು ಗಂಟೆಯಾಯಿತು ಪಟ್ಟಣದ ಯಾವುದೇ ವೈಭವೋಪೇತ ವಿಲ್ಲಾಗಳಿಗಿಂತ ಕಡಿಮೆ ಇರಲಿಲ್ಲ . ಅಡಿಗೆಮನೆ ಪೂರ್ತಾ ಹುಡುಕಿದರು ಒರಳುಕಲ್ಲು ಮಾತ್ರ ಕಾಣಿಸಲಿಲ್ಲ .ಕೇಳಿದರೆ ನನ್ನೇ ವಿಚಿತ್ರ ಪ್ರಾಣಿಯೆಂಬಂತೆ ದಿಟ್ಟಿಸಿ ಇಟಾಲಿಯನ್ ಕಿಚನ್ ನ ಮೂಲೆಯ ದೊಂದು ಕಪಾಟು ಬಾಗಿಲು ತೆಗೆದು ತೋರಿಸಿದರು . “ರುಬ್ಬಲು ಆಗುತ್ತಾ ಇಲ್ಲಿ” ನನ್ನ ಪ್ರಶ್ನೆಗೆ “ವಾಸ್ತುಗೋಸ್ಕರ ಇಡಿಸಿದ್ದು ಈಗೆಲ್ಲ ಯಾರು ರುಬ್ಬುತ್ತಾರೆ “ಎಂಬ ಉತ್ತರ. ಈ ಸಂಸ್ಕೃತಿ ಶಹರಗಳಿಂದ ಹಳ್ಳಿಗೂ ಇಳಿದು ಬಿಡ್ತಾ ಅನ್ನಿಸಿತು. ಒಂದಿಷ್ಟು ಬೇಜಾರೂ ಆಯಿತು.
ಹೌದು ಈಗ ಮಿಕ್ಸಿ ಗ್ರೈಂಡರ್ ಗಳು ಬಂದಮೇಲೆ ಒರಳಿನಲ್ಲಿ ರುಬ್ಬುವವರು ವಿರಳ. ಆದರೆ ಮೂವತ್ತೈದು ನಲವತ್ತು ವರ್ಷದ ಹಿಂದಿನ ಜನಜೀವನದಲ್ಲಿ ಇದು ಎಷ್ಟು ಅನಿವಾರ್ಯ ಹಾಸುಹೊಕ್ಕಾಗಿತ್ತಲ್ವಾ? ಬಾಡಿಗೆ ಮನೆ ನೋಡಲು ಹೋದರೆ ಮನೆಯೊಡತಿಯ ಪರೀಕ್ಷಣೆಗೆ ಒಳಪಡುತ್ತಿದ್ದುದೆ ಒರಳುಕಲ್ಲು ಮೊದಲು. ಇದೀಗ 5 ರಿಂದ 10 ರ ವಯೋಮಾನದವರಂತೂ ಇದನ್ನು ಚಿತ್ರದಲ್ಲಿ ಅಥವಾ ನಿಜದಲ್ಲಿ ನೋಡಿದರೂ ಉಪಯೋಗಿಸಿರುವುದನ್ನು ಅಂತೂ ನೋಡಿರುವುದು ಕಾಣೆ . ಸ್ವಿಚ್ ಒತ್ತಿದರೆ ಕೆಲಸವಾಗುವ, ರೆಡಿ ಟು ಯೂಸ್ ವಸ್ತುಗಳು ಸಿಗುವ ಈ ಕಾಲಮಾನದಲ್ಲಿ ಒರಳುಕಲ್ಲನ್ನು ಎಲ್ಲೋ ನನ್ನಂತಹ ಕೆಲವರು ಮಾತ್ರ ನೆನೆಸಿಕೊಳ್ಳುತ್ತೇವೇನೋ.
ಸಾಮಾನ್ಯವಾಗಿ ನೆಲದಲ್ಲಿ ಹೂಳಿದ ಅಥವಾ ಕೆಲವು ಬಾರಿ ಹಾಗೆ ಪ್ರತ್ಯೇಕವಾಗಿಯೂ ಇರುವ ಮಧ್ಯೆ ಹಳ್ಳವಿರುವಂತಹುದು ವರಳು/ಒರಳು. ಉರುಟಾಗಿ ಅಂಡಾಕಾರದ ಗೂಟವಿರುವ ಅಥವಾ ಇಲ್ಲದಿರುವ ಮತ್ತೊಂದು ಕಲ್ಲು ಗುಂಡುಕಲ್ಲು. ಒರಳಿನಲ್ಲಿ ಗುಂಡುಕಲ್ಲು ಆಡಿಸಿದಾಗ ಸಿಕ್ಕ ಪದಾರ್ಥಗಳು ನುರಿಯುತ್ತಿದ್ದವು. ಮತ್ತೆ ಕೆಲವು ಕಡೆ ಚಪ್ಪಟೆ ಕಲ್ಲಿನ ಮೇಲೆ ಉರುಟು ಕಲ್ಲನ್ನು ಅತ್ತಿತ್ತ ಆಡಿಸಿ ಅರಿಯುವ ಕ್ರಮವೂ ಉಂಟು
ಒರಳು ಕಲ್ಲನ್ನು ಮನೆಯ ಲಕ್ಷ್ಮಿ ಎಂದೂ ಸಹ ಭಾವಿಸುತ್ತಾರೆ . ಒರಳು ಕಲ್ಲು ಎಂದರೆ ಯಶೋದೆ ಕಟ್ಟಿಹಾಕಿದ ಮುದ್ದು ಕೃಷ್ಣನ ರೂಪವು ಕಣ್ಮುಂದೆ ಹಾಗೇ ತೇಲಿ ಬರುತ್ತದೆ ಅಲ್ಲವೇ? ಶಕಟಾಸುರನನ್ನು ಕೊಲ್ಲಲು ಕೃಷ್ಣ ಉಪಯೋಗಿಸಿದ ಆಯುಧವೂ ಇದೇ . ಹಿಂದಿನ ದಿನಗಳಲ್ಲಿ ಹೋಟೆಲಿನಲ್ಲಿ ತಿಂದು ಕೊಡಲು ದುಡ್ಡು ಇಲ್ಲದಿದ್ದರೆ ಹೀಗೆ ರುಬ್ಬುವ ಕೆಲಸಕ್ಕೆ ಹಚ್ಚುತ್ತಿದ್ದುದಂತೆ. ಈಗ ಏನು ಮಾಡುತ್ತಾರೋ ಅಲ್ಲೂ ಗ್ರೈಂಡರ್ ಗಳದ್ದೇ ರಾಜ್ಯಭಾರ . ಹಾಗೆಯೇ ಕೋಪ ಬಂದರೆ ತಲೆಯ ಮೇಲೆ ಎತ್ತಿ ಹಾಕಲು ಸಿಗುವ ಸುಲಭ ಸಾಧನವೂ ಇದೇ…….
ರುಬ್ಬುವುದು ಅಂದ್ರೆ ಏನೋ ಸುಮ್ಮನೆ ಅಲ್ಲ ಕಣ್ರೀ ಅದು. ಒಂದು ಕಲೆಯೇ. ಮೊದಲು ಒರಳಿನ ಮೇಲೆ ಗುಂಡು ಕಲ್ಲನ್ನಿಟ್ಟು ತೊಳೆದು ಪಕ್ಕಕ್ಕಿರಿಸಿ ಒರಳನ್ನೆಲ್ಲ ತೊಳೆದು ಆ ನೀರನ್ನೆಲ್ಲ ತೆಗೆದು ನಂತರ ರುಬ್ಬುವ ಕೆಲಸ ಆರಂಭ ಗುಂಡುಕಲ್ಲನ್ನು ಒರಳಿಗೆ ಹಾಕಿ ಬಲಗಡೆಗೆ ಬೇಕಾದ ಅಕ್ಕಿ ಬೇಳೆಯ ಪಾತ್ರೆಯನ್ನಿಟ್ಟು ಕೊಂಡು ಒಂದೊಂದೇ ಹಿಡಿ ಬಲಪಕ್ಕಕ್ಕೆ ಹಾಕಿಕೊಂಡು ಬಲಗೈಯಿಂದ ಅದನ್ನು ಒರಳಿನೊಳಗೆ ಸರಿಸಬೇಕು . ಎಡಗೈಯಿಂದ ರುಬ್ಬುಗುಂಡನ್ನು ಆಡಿಸುತ್ತಾ ಇರಬೇಕು . ಹಾಕಿದ ಪರಿಮಾಣ, ಒರಳಿನ ಅಳತೆಯ ಮೇಲೆ ಒಂದೋ ಎರಡೋ ಮೂರೋ ಒಬ್ಬೆಗಳು. ಅರ್ಧ ನುರಿದಿರುವುದು ಎಡಪಕ್ಕದಿಂದ ಮೇಲೆ ಬರುತ್ತಿರುತ್ತದೆ. ಮತ್ತೆ “ಮಧ್ಯೇ ಮಧ್ಯೇ ಆಚಮನೀಯಂ ಸಮರ್ಪಯಾಮಿ” ಅನ್ನುವ ಹಾಗೆ ನೀರನ್ನು ಪಕ್ಕದ ತಂಬಿಗೆಯಿಂದ ಅಂಗೈಗೆ ಸುರಿದುಕೊಂಡು ಚಿಮುಕಿಸುವುದು . .ನಡುನಡುವೆ ಗುಂಡನ್ನು ಎತ್ತಿ ಕೆಳಗಿರುವುದನ್ನು ಮೇಲೆ ತೆಗೆದುಕೊಂಡು ಮತ್ತೆ ಆಡಿಸಲು ಶುರು. ಹೀಗೆ ಪೂರ್ತಿ ನುಣ್ಣಗಾದ್ದನ್ನು ಪಾತ್ರೆಗೆ ತೆಗೆದಿಟ್ಟರೆ ಅಲ್ಲಿಗೆ ಬಂದು ಒಬ್ಬೆ ಮುಗಿದಂತೆ. ಚಟ್ನಿ ಆದರೆ ಗಟ್ಟಿಯಾದದ್ದನ್ನು ಬೇರೆ ತೆಗೆದಿಟ್ಟು ಒರಳು ತೊಳೆದ ನೀರನ್ನು ಬೇರೆ ಇಟ್ಟುಕೊಂಡು ಬೇಕಾದಾಗ ಬೆರೆಸುವುದು. ಕಡೆಯಲ್ಲಿ ಮತ್ತೆ ಒರಳು ತೊಳೆದು ಒರೆಸುವುದು . “ಒರಳಿನಲ್ಲಿ ನೀರಿದ್ದರೆ ಮನೆಯಲ್ಲಿ ಜಗಳ ಆಗತ್ತಂತೆ” ಅನ್ನುತ್ತಿದ್ದರು ಅಮ್ಮ . ಹಿರಿಯರು ನೀರು ನಿಂತು ಪಾಚಿಕಟ್ಟಬಾರದು ಆರೋಗ್ಯಕ್ಕೆ ಹಾನಿ ಎಂದು ಈ ರೀತಿಯ ನಂಬಿಕೆ ಮೂಡಿಸಿರಬೇಕು. ಹಾಗಾದ್ರೂ ಶ್ರದ್ಧೆಯಿಂದ ಒರೆಸಿಡಲಿ ಅಂತ ಏನಂತೀರಿ ?
ಇಷ್ಟೆಲ್ಲಾ ಮಾಡುವಾಗ ಬಲಗೈ ಬೆರಳು ಒರಳು ಮತ್ತು ಕಲ್ಲಿನ ಮಧ್ಯೆ ಸಿಕ್ಕಿ “ಬೆರಳಿನ ಚಟ್ನಿ” ಆಗದಂತೆ ಎಚ್ಚರವಹಿಸಬೇಕು, ರುಬ್ಬುಗುಂಡು ಎತ್ತಿಡುವಾಗ ಕೈಮೇಲೆ ಬೀಳಿಸಿಕೊಳ್ಳಬಾರದು, ಖಾರ ರುಬ್ಬುವಾಗ ಕಣ್ಣಿಗೆ ಎಗರದಂತೆ ಹುಷಾರಾಗಿರಬೇಕು . ಎಷ್ಟೆಲ್ಲಾ ಜಾಗ್ರತೆಗಳು! ಆದರೆ ಒರಳಿನಲ್ಲಿ ರುಬ್ಬಿದ ಚಟ್ನಿಯ ರುಚಿ, ಆ ತರಿ ತರಿಯ ಆಂಬೊಡೆ ನುಚ್ಚಿನುಂಡೆಗಳು, ತಾಜಾ ಮಸಾಲೆಗಳ ಹುಳಿ, ಕೂಟು,ಮೇಲೋಗರ , ಹುಳಿತೊವ್ವೆ ಮಜ್ಜಿಗೆ ಹುಳಿ ಗೊಜ್ಜುಗಳು ! ಖಂಡಿತಾ ಮಿಕ್ಸಿಯಲ್ಲಿ ರುಬ್ಬಿದಾಗ ಆ ರುಚಿ ಬರಲ್ಲ.
ಅರಿಯುವುದು, ರುಬ್ಬುವುದು, ಆಡಿಸುವುದು ಅದೆಷ್ಟು ನಾಮಧೇಯಗಳು. ಒಂದಿಡೀ ಅಪರಾಹ್ನದ ಹೊತ್ತು ತಿನ್ನುತ್ತಿದ್ದ ಆ ಕೆಲಸ ಅದೆಷ್ಟು ತಾಳ್ಮೆ ಬೇಡುತ್ತಿತ್ತು . ಆದರೆ ಈಗ ಮಾಯವಾಗಿರುವ ತಾಳ್ಮೆ ಮತ್ತು ಸಮಯ ಆ ಕಾಲದಲ್ಲಿ ಧಂಡಿಯಾಗಿತ್ತು. ಹಾಗಾಗಿ “ಕೈ ಕೆಸರಾದರೆ ಬಾಯಿ ಮೊಸರು” ಎಂಬಂತೆ ಶ್ರಮಕ್ಕೆ ತಯಾರಿರುತ್ತಿದ್ದರು ಆಗ .
ಇನ್ನು ಪುಡಿಗಳ ಕಟ್ಟುವ ಕಾಯಕ. ಆಗ ರುಬ್ಬುಗುಂಡಿಗೆ ಬಿಡುವು. ಒರಳಿಗೆ ಒನಕೆ ಹಾರೆಗಳ ಸಾಂಗತ್ಯ. ಸೇರುಗಟ್ಟಲೆ ಪುಡಿಗಳು ತಯಾರಾಗುತ್ತಿದ್ದವು. ಹಾರೆಗಳೂ ಹಾಗೇ 2 ಅಥವಾ 3 ಅಳತೆಯವು . ತೊವ್ಬೆ ಹಸಿ ಮಜ್ಜಿಗೆಗಳಿಗೆ ನೀರು ಹಾಕದೆ ಮಸಾಲೆಯನ್ನು ಹಾರೆಯಲ್ಲಿ ಕುಟ್ಟುತ್ತಿದ್ದುದು ವಾಡಿಕೆ . ಇನ್ನು ಮಾವು ಹುಣಸೆ ಕಾಲದಲ್ಲಿ ತೊಕ್ಕುಗಳನ್ನು ತಯಾರಿಸುತ್ತಿದ್ದುದು, ಒನಕೆಯಲ್ಲಿ ಹುಣಸೆಕಾಯಿ ಕುಟ್ಟಿ ರಸ ತಯಾರು ಮಾಡುತ್ತಿದ್ದುದು ಮನದ ಭಿತ್ತಿಯ ಮೇಲೆ ಹರಿದಾಡುವ ಚಿತ್ರಗಳು .ಹುಳಿಯವಲಕ್ಕಿಗೆ ಸಹ ಇದರಲ್ಲೇ ಪುಡಿಯಾಗುವ ಯೋಗ.
ಇಂತಿರ್ಪ ಒರಳಿಗೂ ನನಗೂ ಸಹಯೋಗ ಕೂಡಿ ಬಂದಿದ್ದು ನಾನು ಇದು ಐದನೆಯ ಕ್ಲಾಸಿನಲ್ಲಿದ್ದಾಗ. ದೊಡ್ಡಗಾತ್ರದ ಒಂದೂವರೆ ಅಡಿ ಇದ್ದ ಒರಳು ರುಬ್ಬುಗುಂಡು ತಂದಿದ್ದರು ಅಣ್ಣ. ಅಮ್ಮ ಸ್ವಲ್ಪ ವೀಕ್ ಇದ್ದರು ಆಗ .ನನ್ನ ಕೈಲಾಗಲ್ಲ ಅಂದರು. ನನಗೂ ಹುಮ್ಮಸ್ಸು ದೊಡ್ಡ ಡಾಲ್ಡಾ ಡಬ್ಬ ಹಾಕಿಕೊಂಡು ಅದರ ಮೇಲೆ ಕೂತು ರುಬ್ಬುವುದು. 1 ಕೈ ನೋಡೇ ಬಿಡುವಾ ಎಂದುಕೊಂಡು ಪ್ರಯತ್ನಿಸಿದರೆ ಶ್ರುತಿಗೊಂಡ ವೀಣೆ ವೈಣಿಕನ ಕೈಲಿ ಹದವರಿತು ನುಡಿಸಿಕೊಂಡ ಹಾಗೆ ನನಗೆ ಒಗ್ಗಿಯೇ ಬಿಟ್ಟಿತು. ತಂಗಿಯರಿಬ್ಬರೂ ಇನ್ನೂ ಚಿಕ್ಕವರು. ಪೋಸು ಕೊಟ್ಕೋತ ಕೊಟ್ಕೋತಾ ರುಬ್ಬುವ ಕೆಲಸಕ್ಕೆ ನನ್ನದೇ ಸಾರ್ವಭೌಮತ್ವ ಆಗಿಬಿಟ್ಟಿತು. ಇಷ್ಟು ದೊಡ್ಡ ಒರಳಲ್ಲಿ ರುಬ್ತಾಳಾ ಅನ್ನೋ ಅಚ್ಚರಿಯ ಉದ್ಗಾರಗಳು ಕೋಡು ಮೂಡಿಸಿ ಏನನ್ನೋ ಸಾಧಿಸುತ್ತಿದ್ದೇನೆಂಬ ಭಾವ ತರುತ್ತಿದ್ದುದು ಸುಳ್ಳಲ್ಲ. ಹಬ್ಬಹರಿದಿನಗಳಲ್ಲಂತೂ ಬಿಡುವಿಲ್ಲದ ಕೆಲಸ ಖುಷಿಯಾಗೇ ಮಾಡ್ತಿದ್ದೆ.
ಷ್……… ಒಂದು ರಹಸ್ಯ . ಇದುವರೆಗೂ ಯಾರಿಗೂ ಹೇಳಿಲ್ಲ. ಅಮ್ಮ ಮತ್ತು ನನ್ನ ಮಧ್ಯೆ ಮಾತ್ರ ಇತ್ತು. ಇವತ್ತು ಸ್ಫೋಟಗೊಳಿಸಿ ಬಿಡ್ತೀನಿ. ಏನಾದರಾಗಲಿ! ಇಡ್ಲಿ ದೋಸೆ ಆ ರೀತಿ ತುಂಬಾ ಹೊತ್ತು ರುಬ್ಬುವ ಕೆಲಸ ಇದ್ದಾಗ ನಾನು ಹಾಡು ಹೇಳಿಕೊಂಡೇ ಮಾಡೋದು ಅನ್ನೋದು ನನ್ನ ಕಂಡೀಶನ್. ಓತಪ್ರೋತವಾಗಿ ಬರುತ್ತಿದ್ದ ದೇವರನಾಮ ಭಾವಗೀತೆ ಸಿನಿಮಾ ಹಾಡುಗಳನ್ನೆಲ್ಲಾ ಹಾಡುತ್ತ ರುಬ್ಬುವ ಕೆಲಸ ಮಾಡುತ್ತಿದ್ದೆ .ಬೇರೆ ಸಮಯದಲ್ಲಿ ಕೇಳುಗರಿಲ್ಲದೆ ಸಾಕುಮಾಡು ಅನ್ನಿಸ್ಕೋತಾ ಇದ್ದೆನಲ್ಲಾ , ಪಾಪ ಈ ನನ್ನ ಫ್ರೆಂಡ್ ಮಾತ್ರ ಸುಮ್ನೆ ನನ್ನ ಕಛೇರಿ ಕೇಳ್ತಿತ್ತು . ಅದಕ್ಕೇನಾದರೂ ಕೋಪ ಬಂದರೆ ಅಂತೀರಾ ಏನು ಆಗ್ತಿರ್ಲಿಲ್ಲ ಹಿಟ್ಟು ಇನ್ನೂ ಬೇಗ ರೆಡಿ ಆಗಿಹೋಗ್ತಿತ್ತು . ಈ ಗಾದೇನೇ ಹೇಳುತ್ತಲ್ಲಾ
“ಕೊಟ್ಟಿದ್ದನ್ನು ಅಗೀತದೆ
ಸಿಟ್ಟು ಬಂದ್ರೆ ಉಗೀತದೆ
ಅಂದ ಹಾಗೆ. ರುಬ್ಬುವಾಗ ಸ್ವಲ್ಪ ನೀರು ಹೆಚ್ಚಾಯಿತೋ, ಮುಖ ಮೈ ಕೈ ಬಟ್ಟೆ ಮೇಲೆಲ್ಲಾ ಹಿಟ್ಟಿನ ಸಿಂಚನ . ನಾಳೆ ನಮ್ಮನೇಲಿ ಇಡ್ಲಿನೋ ದೋಸೇನೋ ತಿಂಡಿ ಅಂತ ಸುತ್ತಲ ಮನೆಯವರಿಗೆಲ್ಲ ಗೊತ್ತಾಗಿಬಿಟ್ತಿತ್ತು ನೋಡಿ. ನಾವೇನೂ ಹೇಳದಿದ್ರೂ …….
ಮಧ್ಯೆ ಕೆಲವೊಮ್ಮೆ ಅಮ್ಮ, ದೊಡ್ಡ ತಂಗಿ ಈ ಕೆಲಸಕ್ಕೆ ಮುಂದಾಗುತ್ತಿದ್ದರೂ ಚಿಕ್ಕತಂಗಿ ಮಾತ್ರ ಸಿಕ್ಕಿಹಾಕಿಕೊಳ್ಳಲೇ ಇಲ್ಲ. ಮುಂದೆ ಮಿಕ್ಸಿ ಬಂದರೂ ಉದ್ದಿನವಡೆ, ಅಂಬೋಡೆ ನುಚ್ಚಿನುಂಡೆಗಳಿಗೆ ಈ ನನ್ನ ನೆಚ್ಚಿನ ಗೆಳತಿ ಮತ್ತು ನನಗೇ ಡಿಮ್ಯಾಂಡು.
ಒರಳು ಮತ್ತು ಗುಂಡು ಉಪಯೋಗಿಸ್ತಾ ಉಪಯೋಗಿಸುತ್ತ ನುಣ್ಣಗೆ ಆದರೆ ಬೇಗ ನುರಿಯಲ್ಲ. ಆಗ ಅವುಗಳ ಮೈಮೇಲೆ ಚಕ್ಕೆಯಾಗುವಂತೆ ಹೊಡೆದು ತರಿತರಿ ಮಾಡಿದರೆ ಆಗ ಬೇಗ ನುರಿಯುತ್ತದೆ. ಈ ಚಕ್ಕೆ ಹೊಡೆಯುವ ಕ್ರಮಕ್ಕೆ ಕಲ್ಲು ಮುಳ್ಳು
ಹೊಡೆಸುವುದು ಅಂತಿದ್ರು. ಬೀದಿಮೇಲೆ ಸುತ್ತಿಗೆ ಹಾಗೂ ಚೂಪಾದ ಕಬ್ಬಿಣದ ಮೊಳೆ ಇಟ್ಟುಕೊಂಡು ಬಂದು ಈ ರೀತಿ ಮಾಡಿಕೊಡುತ್ತಿದ್ದರು. ನಮ್ಮದು ಮೊಬೈಲ್ (ಅಂದರೆ ಹೂಳಿರದ) ಒರಳು ಆದುದರಿಂದ ಒರಳು ಹಾಗೂ ಗುಂಡುಕಲ್ಲು ಎರಡಕ್ಕೂ ಕಲ್ಲುಮುಳ್ಳು ಹೊಡೆಸಿ ಸುಸ್ಥಿತಿಯಲ್ಲಿ ಇರುತ್ತಿತ್ತು ಅನಂತರ ಅದರಲ್ಲಿ ಸೊಪ್ಪುಸದೆ ಎಲ್ಲ ಹಾಕಿ ¾ ಸಾರಿ ರುಬ್ಬಿ ಕಲ್ಲು ಚೂರುಗಳು ಬರದ ಹಾಗೆ ಮಾಡುವ ಕೆಲಸ. (ಹೊಸ ಒರಳನ್ನು ಮೊದಲ ಬಾರಿ ಉಪಯೋಗಿಸುವಾಗಲೂ ಇದೇ ಅಭ್ಯಾಸ). ಹಾಗೆಯೇ ಗುಂಡುಕಲ್ಲಿಗೆ ಗೂಟ ಹೊಡೆಸಿ ಆಗಾಗ ಸರಿ ಮಾಡಿಸಬೇಕಾಗಿತ್ತು . ನಮ್ಮ ಮನೆಯ ಒರಳು ದೊಡ್ಡದು ಹಾಗೂ ಬೇಗ ನುರಿತಾ ಇದ್ದುದರಿಂದ ಅಕ್ಕಪಕ್ಕದವರು ಹೆಚ್ಚುಗಟ್ಟಲೆ ಅಥವಾ ನೆಂಟರು ಬಂದಾಗ ಬಂದದು ಇಲ್ಲಿ ರುಬ್ಬಿಕೊಳ್ತಿದ್ದರು. ಕೆಲವೊಮ್ಮೆ ಕೈಲಾಗದಿದ್ದವರು ಸುಜಿ ಒಂಚೂರು ರುಬ್ಬಿಕೊಡೆ ಅಂತ ನನ್ನ ಕೇಳ್ತಿದ್ರು. ಹಾಗೆ ರುಬ್ಬಿಕೊಟ್ಟು ಸಂಪಾದಿಸಿದ ಪುಣ್ಯವೂ ನನ್ನ ಅಕೌಂಟಿನಲ್ಲಿದೆ ಗೊತ್ತಾ ?
ಬೇರೆ ಸಮಯದಲ್ಲಿ ಒರಳು ರುಬ್ಬುವ ಗುಂಡಿಗೆ ಬೇಡಿಕೆ ಇರದಿದ್ದರೂ ಶುಭ ಸಮಾರಂಭಗಳ ದೇವರ ಸಮಾರಾಧನೆಯಲ್ಲಿ ನೆನೆಸಿಕೊಳ್ಳಲೇಬೇಕು ನೋಡಿ .ಶಾಸ್ತ್ರಗಳಲ್ಲಿ ಭತ್ತ ಕುಟ್ಟುವುದರಿಂದಲೇ ಮದುವೆ ಶಾಸ್ತ್ರಕ್ಕೆ ನಾಂದಿ. ಅರಿಶಿನದ ಕೊಂಬು ಕುಟ್ಟುವ ಶಾಸ್ತ್ರ ವೂ ಇರುತ್ತದೆ. ಇನ್ನು ನವಜಾತ ಶಿಶುಗಳನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ದಲ್ಲಿ ಕಲ್ಲುಗುಂಡಿನ ಅಗತ್ಯ ಹೇಳುವುದೇ ಬೇಡ . ಮಗು ಕಲ್ಲುಗುಂಡಿ ನಂತೆಯೇ ಗಟ್ಟಿಯಾಗಿರಲಿ ಎಂಬುದು ಈ ಶಾಸ್ತ್ರಗಳ ಉದ್ದೇಶ .
ಈಗ ಸಮಯದ ಹಿಂದಿನ ಓಟದಲ್ಲಿ ಹೆಚ್ಚು ಉಪಯೋಗಿಸದಿದ್ದರೂ ಸುಸ್ಥಿತಿಯಲ್ಲಿಟ್ಟುಕೊಂಡು ಕಾಪಾಡಿಕೊಳ್ತಾ ಬರ್ತಿದೀನಿ ಒಂದು ಮಾಟವಾದ ಒರಳು ಮತ್ತು ರುಬ್ಬುಗುಂಡನ್ನು. ಮುಂದೆಂದಾದರೂ ಪೂರ್ಣಪ್ರಮಾಣದಲ್ಲಿ ಉಪಯೋಗಿಸುವಷ್ಟು ಸಮಯ ಸಿಕ್ಕಾಗ ಮತ್ತೆ ನಮ್ಮಿಬ್ಬರ ಸಂವಾದ ಶುರುವಾಗತ್ತೆ. ಆಗ ಹಾಡು ಹೇಳಲ್ಲ… ನೋಡೋಣ ಎಷ್ಟು ಕವಿತೆ ಕತೆಗಳಿಗೆ ಸ್ಫೂರ್ತಿ ಕೊಡುತ್ತಾಳೋ ಅಂತ.
ಇದಮಿತ್ಥಮ್ ಎನ್ನಲಾಗದಿದ್ದರೂ ಕೆಲ ನಿರ್ಜೀವ ವಸ್ತುಗಳ ಜೊತೆಗೆ ನಮಗೆ ಎಷ್ಟು ಅನುಬಂಧ ಬೆಳೆದುಬಿಡುತ್ತದೆ ಅಲ್ವಾ? ಮುಂದೆ ನಮಗಂತೂ ಉಪಯೋಗಕ್ಕಿಲ್ಲ ಎಂದು ಅಣ್ಣಾ ಆ ಒರಳನ್ನು ಬೇರೆಯವರಿಗೆ ಕೊಟ್ಟು ಕಳಿಸಿದಾಗ ಮನೆಯ ಸದಸ್ಯರೊಬ್ಬರ ವಿಯೋಗವಾದ ಹಾಗೆನಿಸಿ ತುಂಬಾ ಸಂಕಟವಾಯಿತು. ನನದೆಷ್ಟೋ ಹಾಡುಗಳಿಗೆ ಕಿವಿಯಾಗುತ್ತ, ಮೌನವಾಗಿದ್ದು ನನ್ನ ಅಳಲುಗಳಿಗೆ ಮೂಕವಾಗಿ ಸ್ಪಂದಿಸುತ್ತಿದ್ದ, ನನ್ನ ಸ್ವಗತಗಳ ಏಕೈಕ ವೀಕ್ಷಕನಾಗಿದ್ದ ನನ್ನ ಆತ್ಮೀಯ ಗೆಳತಿಯ ಅಗಲಿಕೆಯ ಅನುಭವವಾಗಿತ್ತು.
ಅಲ್ಲಾ…. ದೈಹಿಕ ಶ್ರಮ ಬೇಡುವ ಈ ರುಬ್ಬುವ ಕುಟ್ಟುವ ಕೆಲಸದಲ್ಲಿ ಎಷ್ಟು ವ್ಯಾಯಾಮ ಇರ್ತಿತ್ತು ನೀವೇ ಯೋಚಿಸಿ. ಕೈಗಳಿಗೆ ಕಸರತ್ತು, ಬಗ್ಗಿ ರುಬ್ಬುವಾಗ ಬೊಜ್ಜಿಗೆ ಗೇಟ್ಪಾಸ್, ಜತೆಗೆ ಬಾಯಿಗೆ ರುಚಿಯಾದ ತಿನಿಸು. . ಹಾಗೆ ಸೊಂಟಕ್ಕೆ ಒಳ್ಳೆಯ ವ್ಯಾಯಾಮ ಸಿಗುತ್ತಿದ್ದುದರಿಂದ ಆಗಿನ ಕಾಲದಲ್ಲಿ ಪಿಸಿಒಡಿ ,ಇನ್ಫರ್ಟಿಲಿಟಿ ಸಮಸ್ಯೆಗಳೂ ಕಡಿಮೆ.ಇದನ್ನೆಲ್ಲ ಬಿಟ್ಟು ನಾವು ಜುಂಯ್ ಅಂತ ಬೇಗ ಕೆಲಸ ಮುಗಿಸೋದು. ಆಮೇಲೆ ಮೈ ಕರಗಿಸೋಕೆ ದುಡ್ಡು ತೆತ್ತು ಜಿಮ್ಮಿಗೆ ಹೋಗುವುದು .ಇದು ಸರಿಯಲ್ಲ ಅಂತ ಗೊತ್ತು…. ಆದರೆ ಏನು ಮಾಡೋದು ? ಕಾಲಾಯ ತಸ್ಮೈನಮಃ ಎನ್ನದೆ ವಿಧಿಯಿಲ್ಲ.
ಆಂ…….ಏನಂದ್ರಿ? ನಾಳೆಯಿಂದ ನೀವು ಒರಳುಕಲ್ಲಲ್ಲೇ ರುಬ್ಬೋದು (ರುಬ್ಬಿಸೋದು) ಅಂದ್ರಾ? ಒಳ್ಳೆದಾಗ್ಲಿ. ಶುಭಸ್ಯ ಶೀಘ್ರಂ . ನಳನಳಿಸುವ ಬಳ್ಳಿ ದೇಹಪ್ರಾಪ್ತಿರಸ್ತು.
ಸುಜಾತಾ ರವೀಶ್
ಪ್ರಕಟಣೆಗಾಗಿ ಧನ್ಯವಾದಗಳು
ಸುಜಾತಾ ರವೀಶ್