ಕಾವ್ಯ ಸಂಗಾತಿ
ನೀನಿರದ ದಿನ
ಲಕ್ಷ್ಮಿ ಕೆ.ಬಿ
ನೀನಿರದ ದಿನ
ಸೂರ್ಯ ಉದಯಿಸಲೇ ಇಲ್ಲ…..
ಮೋಡಗಳೆಲ್ಲ ಅಲ್ಲಲ್ಲೇ ನಿಂತು
ಒಮ್ಮೆಲೆ ಚೀರುತ್ತಾ
ಅಳಲಾರಂಭಿಸಿವೆ
ಬಾನಿಗೂ ಭಯ ವೆಂಬಂತೆ
ಗುಡುಗು-ಸಿಡಿಲು ಮಿಂಚು
ಹೆಚ್ಚಾದ ಹೃದಯಬಡಿತ
ಗೂಡೊಳಗಿನ ಹಕ್ಕಿ-ಮರಿಗಳಿಗೂ
ಚಳಿ ಶೀತ ಜ್ವರ
ಹಾರಲಾಗದ ಹಕ್ಕಿಗೆ ಗಂಟಲು ಬಿಗಿತ
ಕಾಮನಬಿಲ್ಲಿನ ಬಣ್ಣಗಳೂ
ಕಾರ್ಮುಗಿಲ ನೆರಳಲ್ಲಿ
ಕಳೆಗುಂದಿ ನಿಂತಿವೆ
ಹಸಿರೂ, ಭುವಿ
ಎಷ್ಟು ತಾನೇ ಸಹಿಸಿಯಾಳು
ಮುಗಿಲ ನೋವಾ ಎಷ್ಟು ನುಂಗಿಯಾಳು
ಹಗಲಿಗಿಂದು ರಾತ್ರಿಯ ನೆರಳು
ರವಿಗೆ ಹಗಲಲ್ಲೇ ನಿದ್ರೆಯ ಮಂಪರು
ರಾತ್ರಿ ಚಂದ್ರಮನಿಗೆ ಮತ್ತದೇ ಕತ್ತಲು
ಕತ್ತಲ ರಾಜ ಶಶಿಗೆ ಆಕಳಿಕೆ, ತೂಕಡಿಕೆ
ಬಾನಿಗೆಲ್ಲ ಬೆಳಕ ಚೆಲ್ಲಿ, ನಿದ್ರೆ ಇರದೆ
ನರಳಾಡುತ್ತಿದ್ದಾನೆ
ಬಾನ ತುಂಬಾ ಹೊರಳಾಡುತ್ತಿದ್ದಾನೆ….