ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ

Indian festival Diwali, Diya oil lamps lit on colorful rangoli. Hindu traditional. Happy Deepavali. Copy space for text.

ಕತ್ತಲಿನ ಬಗೆಗೆ ಸೋಜಿಗವೂ ಬೆಳಕಿನ ಬಗೆಗೆ ಬೆರಗು ಹುಟ್ಟಿಸುವ ಹಬ್ಬವೇ ದೀಪಾವಳಿ. ಮನುಷ್ಯ  ಮೊಟ್ಟಮೊದಲು ಬೆಳಕು ನೀಡಿದ ಸೂರ್ಯನ ಬಗ್ಗೆ ಪೂಜ್ಯ ಭಾವನೆ ಬೆಳೆಸಿಕೊಂಡ. ನಂತರ ಬೆಂಕಿ ಆವಿಷ್ಕಾರವಾದ ಮೇಲೆ ಬೆಳಕಿನ ಮೂಲವಾದ ಅದು ತನ್ನ ಅಗತ್ಯತೆಗಳನ್ನು ಪೂರೈಸಲು ಸಹಾಯಕವಾದಾಗ ಅದನ್ನು ದೈವತ್ವಕ್ಕೇರಿಸಿದ.  ಹೀಗೆ ಬೆಳಕು ಹಾಗೂ ಅದರ ವಿವಿಧ ಮೂಲಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿ ಪ್ರಮುಖ ಸ್ಥಾನವನ್ನು ನಿರ್ಮಿಸಿಕೊಂಡವು.  

ಪ್ರಾಚೀನ ಕಾಲದಿಂದಲೂ ಕತ್ತಲು ನಿಗೂಡತೆ ಅಜ್ಞಾನದ ಸಂಕೇತ .ಬೆಳಕು ಜ್ಞಾನದ ಪ್ರತಿನಿಧಿ. ಬೆಳಕಿನ ಬಲದಲ್ಲಿ ಅಜ್ಞಾನದ ಕತ್ತಲೆ ಹರಿದು ಅರಿವಿನ ವಿವೇಕ ಅರಳುತ್ತದೆ.  ಕತ್ತಲಿನ ಮಾರ್ಗದಲ್ಲಿ ಅರಿವಿನ ದಾರಿ ದೀಪ ಬೆಳಗಿ ಮನುಷ್ಯನಿಗೆ ಚೈತನ್ಯ ತುಂಬಿ ಮಾರ್ಗದರ್ಶಿಯಾಗುತ್ತದೆ. ಹಾಗಾಗಿಯೇ ಎಲ್ಲ ನಾಗರಿಕತೆ ಸಂಸ್ಕೃತಿಗಳಲ್ಲಿ ದೀಪಕ್ಕೆ ಜ್ಯೋತಿಗೆ ಅತ್ಯಂತ ಪ್ರಾಧಾನ್ಯತೆ.  

ಬ್ರಹ್ಮಾಂಡದಲ್ಲಿ ಅಂಧಕಾರ ಅಥವಾ ಕತ್ತಲೆಯೆಂಬುದೇ ವ್ಯಾಪಕ ಅಂದರೆ ಕತ್ತಲೆಯೇ ಒಂದು ರೀತಿಯ ನಿರಂತರತೆ .ಆದರೆ ಒಂದು ಸಣ್ಣ ಜ್ಯೋತಿಯು ಕತ್ತಲೆಯನ್ನು ಓಡಿಸುತ್ತದೆ. ತಮಸ್ಸು ಎಂದರೆ ಮನಸ್ಸಿಗೆ ನಯನಕ್ಕೆ ಆವರಿಸಿದ ಅಂಧತ್ವ . ಅಜ್ಞಾನ ಅಂದರೆ ಮನುಷ್ಯನ ಕುರುಡುತನವೇ.  ಹಾಗಾಗಿಯೇ ಬೆಳಕು ಕಣ್ಣಿಗೆ ಕವಿದ ಕತ್ತಲೆಯನ್ನು ದೂರ ಮಾಡುತ್ತದೆ ದೃಷ್ಟಿಗೋಚರವಾಗಿಸುತ್ತದೆ. ವಿಸ್ತೃತ ಪರಿಭಾಷೆಯಲ್ಲಿ ಮನದ ಅಜ್ಞಾನ ತಮವನು ನಿವಾರಿಸಿ ಜ್ಞಾನ ದರ್ಶನ ಮಾಡಿಸುತ್ತದೆ.

ಅಂಧಕಾರವೆಂದರೆ ಅದು ಕಪ್ಪು, ವಿಷ . ಬೆಳಕು ಪ್ರಕಾಶ, ಜೀವನದ ಸಂಕೇತ, ಅಮೃತತ್ವದ ದ್ಯೋತಕ . ಹೀಗಾಗಿಯೇ ಬೆಂಕಿ ಬೆಳಕು ಪ್ರಕಾಶ ಇವೆಲ್ಲವೂ ಚೈತನ್ಯದ ಸ್ವರೂಪ.  ಬೆಳಕನ್ನುಂಟು ಮಾಡುವುದು ಎಂದರೆ ದೀಪವನ್ನು ಹಚ್ಚುವುದು ಜ್ಞಾನಾರ್ಜನೆಯ ಸಂಕೇತವಾಗಿ ಶುಭದ ಸೂಚನೆಯಾಗಿ ನಂಬಿಕೆಯ, ಧಾರ್ಮಿಕತೆಯ ಅವಿಭಾಜ್ಯ ಅಂಗವಾಗಿದೆ.  

ಕಾರ್ತೀಕ ಮಾಸದಲ್ಲಿ ಬೇಗ ಕತ್ತಲು. ಚಳಿಯ ಕಾಲವಾದ್ದರಿಂದ ವಾತಾವರಣವು ಚಳಿ ಹೆಚ್ಚಾಗಿ ಮಂಕುತನ.  ಇಂತಹ ಸಮಯದಲ್ಲಿ ತಮ ನಿವಾರಕ ದೀಪ ಜ್ಯೋತಿಯನ್ನು ಬೆಳಗುವ ಮೂಲಕ ಮನೆ ಮನಗಳಲ್ಲಿ ಚೈತನ್ಯ ಲವಲವಿಕೆ ಪ್ರವಹಿಸುವ ಆಚರಣೆಯೇ ದೀಪಾವಳಿಯ ಸಂಭ್ರಮದ ಆದಿ.  ಹಿಂದೂ ಧರ್ಮದ ಅತ್ಯಂತ ಜನಪ್ರಿಯ, ಪ್ರತಿ ಮನೆಯಲ್ಲೂ ಆಚರಿಸುವ ಈ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ಅಗ್ನಿಗೆ ನೀಡಿದ ಮಹತ್ತ್ವಕ್ಕೆಉದಾಹರಣೆ. ಆದರೆ ಜಗತ್ತಿನ ವಿವಿಧ ಧರ್ಮಗಳಲ್ಲೂ ಬೆಂಕಿ ದೀಪ ಬೆಳಕುಗಳಿಗೆ ಧಾರ್ಮಿಕ ಪ್ರಾಧಾನ್ಯತೆ ಇದೆ ಎಂಬ ಅಂಶವೂ ಇಲ್ಲಿ ಗಮನಾರ್ಹ. 

 “ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ”

ಭಾರತೀಯ ಪರಂಪರೆಯಲ್ಲಿ ದೀಪವೆಂದರೆ ಶುಭ ಮಂಗಳ ಎಂಬ ಉದಾತ್ತ ಕಲ್ಪನೆ. 

ಶುಭಂ ಕರೋತಿ ಕಲ್ಯಾಣಂ ಆರೋಗ್ಯ

ಧನ ಸಂಪದಃ ಶತ್ರು ಬುದ್ದಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ 

ದೀಪ ಪ್ರಾಣದ ಸಂಕೇತ ಜ್ಞಾನದ ಸಂಕೇತ ಶುಭದ ಸಂಕೇತ ಅಭಿವೃದ್ಧಿಯ ಸಂಕೇತ. ದೀಪದ ಬೆಳಗುವಿಕೆಯಿಂದ ಶುಭವಾಗಲಿ ಮಂಗಳವಾಗಲಿ ಆರೋಗ್ಯ ಧನ ಸಂಪತ್ತು ವೃದ್ಧಿಯಾಗಲಿ.  ಮನದ ಶತ್ರುಗಳು ಅಂದರೆ ರಜೋತಾಮಸ ಗುಣಗಳು, ಅರಿಷಡ್ವರ್ಗಗಳು ನಾಶವಾಗಲಿ ಎಂಬ ಆಶಯ.  

ದೀಪದ ಮತ್ತೊಂದು ವಿಭಿನ್ನ ವಿಶಿಷ್ಟ ಸ್ವಭಾವ ಬೆಳಗುವುದು.  ತನ್ನನ್ನು ತಾನೇ ದಹಿಸಿಕೊಳ್ಳುವುದು . ಉರಿಯುತ್ತಲೇ ಕತ್ತಲನ್ನು ದಕ್ಕಿಸಿಕೊಂಡು ಅರಗಿಸಿಕೊಳ್ಳುವುದು .ಎಂತಹ ಗಾಢವಾದ ಕತ್ತಲೆಯನ್ನು ಸಣ್ಣ ದೀಪ ನಿವಾರಿಸುತ್ತದೆ ನುಂಗಿಬಿಡುತ್ತದೆ.  ಕತ್ತಲೆಗೆ ಹೇಗೆ ಆವರಿಸಿಕೊಳ್ಳುವ ಗುಣ ಇದೆಯೋ ಆ ಕೊನೆಯಿಲ್ಲದ ದಾಹ ಬೆಳಕಿಗೂ ಇದೆ. ಬೆಳಕಿನ ಮಹತ್ವ ತಿಳಿಯುವುದು ಕತ್ತಲೆಯಿದ್ದಾಗ. ಕತ್ತಲೆ ನೀಡುವ ಅವಕಾಶವೇ ಬೆಳಕಿನ ಪ್ರಜ್ವಲನೆ. ಅಜ್ಞಾನವಿದ್ದಾಗಲೇ ಜ್ಞಾನದ ಮಹತ್ವ.  ಜ್ಞಾನ ಗಳಿಕೆಗೆ ಮೂಲ ಅಜ್ಞಾನವೇ. ಅಂತೆಯೇ ಅಜ್ಞಾನಿಗಳಾದ ನಾವು ಜ್ಞಾನ ಪ್ರಾಪ್ತಿಗೊಳಿಸಿಕೊಳ್ಳಬೇಕೆಂಬ ಕ್ರಿಯೆಯೇ ಈ ದೀಪೋತ್ಸವ . 

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ 

ಇದು ಒಮ್ಮೆ ಮಾತ್ರ ಮಾಡಿ ಮುಗಿಯಿತೆಂದು ಕೊಳ್ಳುವ ಕ್ರಿಯೆ ಖಂಡಿತ ಅಲ್ಲ . ಕತ್ತಲು ಮತ್ತೆಮತ್ತೆ ಮುಸುಕುವಂತೆ ಅಜ್ಞಾನವು ಅಡರುತ್ತಲೇ ಇರುತ್ತದೆ . ಹಾಗಾಗಿ ದೀಪ ಬೆಳಗುವಿಕೆ ಪುನರಾವರ್ತನ ಕ್ರಿಯೆ.

ಅಗ್ನಿ ಬಲದ ದ್ಯೋತಕವಾದ ದೀಪ ಬೌದ್ಧಿಕ ಬಲ. ಇದಕ್ಕೆ ೭ಬಣ್ಣ ಹಾಗೂ ೭ ಜಿಹ್ವೆಗಳಿವೆ ಎನ್ನುತ್ತಾರೆ. ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಪಂಚೇಂದ್ರಿಯಗಳ ಜತೆ ಮನಸ್ಸು ಅಹಂಕಾರಗಳನ್ನು ಸಹ ಅಭಿವ್ಯಕ್ತಿಸುತ್ತದೆ .ದೀಪ  ಅನಂತ. ದೀಪದಿಂದ ದೀಪವನ್ನು ಬೆಳಗುತ್ತಾ ಹೋದಂತೆ ಅದು ಅಕ್ಷಯವಾಗಿ ಬಿಡುವುದಿಲ್ಲ. ಹಾಗೆಯೇ ಓದಿದಷ್ಟೇ ಜ್ಞಾನ ವಿಸ್ತರಿಸುತ್ತದೆ . 

ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಮನಸ್ಸಿನ ತಮಸ್ಸನ್ನು ದುಷ್ಟಬುದ್ಧಿ ರಾಕ್ಷಸಿ ಪ್ರವೃತ್ತಿ ಮೊದಲಾದ ತಮೋ ಗುಣಗಳನ್ನು ವಿನಾಶ ಮಾಡುವ ಜ್ಞಾನದ ದೀಪವನ್ನು ಮನೆಮನೆಗಳಲ್ಲಿ ಬೆಳಗೋಣ . ಈ ದೀಪ ಪ್ರಜ್ವಲನೆಯ ಸತ್ಕಾರ್ಯ ಕೆಲ ಘಳಿಗೆ, ಕೆಲದಿನ  ಅಥವಾ 1ತಿಂಗಳಿಗೆ ಸಿಮೀತ ಗೊಳಿಸದೆ ಆಜೀವ ಪರ್ಯಂತದ ವ್ರತವಾಗಿ ನೋಮಿಯಾಗಿ ನೇಮವಾಗಲಿ . 

ಕೆ ಎಸ್ ನರಸಿಂಹಸ್ವಾಮಿ ಅವರು ನುಡಿದಂತೆ ಬೆಳಕಿನಸ್ತಿತ್ವವನೆ 

ಅಣಕಿಸುವ ಕತ್ತಲೆಗೆ 

ತಕ್ಕ ಉತ್ತರವಿಲ್ಲಿ ಕೇಳಿ ಬರಲಿ 

ದೀಪಾವಳಿಯ ಜ್ಯೋತಿ 

ಅಭಯ ಹಸ್ತವನೆತ್ತಿ 

ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ 


One thought on “ತಮಸೋಮಾ ಜ್ಯೋತಿರ್ಗಮಯ

  1. ಪ್ರಕಟಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top