ಸಂಪಾದಕೀಯ
ಪ್ರೀತಿಯ ಸಂಗಾತಿ ಬಳಗವೇ ….
ಮತ್ತೊಂದು ರಾಜ್ಯೊತ್ಸವ ಬಂದಿದೆ. ಅದರ ಬೆನ್ನಿಗೆ ದೀಪಾವಳಿ ಹಬ್ಬ. ಕತ್ತಲನ್ನು ಅಳಿಸಿ, ಬೆಳಕನ್ನು ಆರಾಧಿಸುವ ಹಬ್ಬ. ಇಂತಹ ಸನ್ನಿವೇಶದಲ್ಲಿ ಅಕ್ಷರ ಲೋಕದ ನಾವು, ವಹಿಸಬೇಕಾದ ಜಾಗ್ರತೆ ಹಾಗೂ ಶಬ್ದಲಜ್ಜೆ ಬಗ್ಗೆ ಒಂದು ಕ್ಷಣ ಯೋಚಿಸೋಣ.
ಕರ್ನಾಟಕ ಏಕೀಕರಣ ಸಾಕಾರವಾಗಿ ಸಮಗ್ರ ಕರ್ನಾಟಕದಲ್ಲಿ ನಾವಿಂದು ಒಂದಾಗಿ ಬದುಕುತ್ತಿದ್ದೇವೆ. ಕನ್ನಡ ನಾಡು ನುಡಿ ಆಗ್ರಗಣ್ಯ ಸ್ಥಾನದಲ್ಲಿಟ್ಟು, ಅರಿವಿನ ದೀಪವನ್ನು ನಾವು ಹಚ್ಚುತ್ತಿದ್ದೇವೆ. ಕನ್ನಡದ ಪ್ರಜ್ಞೆ ಸಮಾನತೆಯನ್ನು ಸಾರಿದ ಪ್ರಜ್ಞೆ. ಇಂಗ್ಲೆಂಡನಲ್ಲಿ ಮ್ಯಾಗ್ನಕಾರ್ಟ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುವ ಮುನ್ನ ಸಂಸತ್ ಕಲ್ಪನೆಯನ್ನು ಅನುಭವ ಮಂಟಪದ ಮೂಲಕ ಬಸವಣ್ಣ ಹಾಗೂ ವಚನಕಾರರು ಪ್ರಜಾಪ್ರಭುತ್ವದ ಮಾದರಿಗೆ ನಮಗೆ ಕೊಟ್ಟಿದ್ದರು .ಅಂತಹ ಪವಿತ್ರ ನೆಲದವರು ಕನ್ನಡಿಗರು ಎಂಬುದು ನಮಗೆ ಅಭಿಮಾನ . ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತಮತಿಗಳ್ …,(ಕವಿರಾಜ ಮಾರ್ಗ) ಸಾಧುಗಳಿಗೆ ಸಾಧು ಸ್ವಾಭಾವದವರು, ಮಾಧುರ್ಯಂಗೆ ಮಾಧುರ್ಯಂ , ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ …
ಕಪ್ಪೆ ಅರಭಟ್ಟ ನೆಂಬ ಕನ್ನಡಿಗ ವೀರನ ಕುರಿತು (ಬದಾಮಿ ಶಾಸನದಲ್ಲಿ ವರ್ಣಿಸಲಾಗಿದೆ).
ಅಲ್ಲದೆ ಕಸವರ ಮೆಂಬುದು ನೆರೆ ಸೈಲಿಸಲಾರ್ಪೋಡೆ ಪರಧರ್ಮಮಂ, ಪರ ವಿಚಾರಮಂ ಎಂದು ಸಹ ಕವಿರಾಜಮಾರ್ಗದಲ್ಲಿ ಕೃತಿಕಾರ ಪ್ರತಿಪಾದಿಸುತ್ತಾನೆ. ಕನ್ನಡಿಗರ ಬಂಗಾರದಂತಹ ಗುಣ ಎಂದರೆ ಪರಧರ್ಮ ಮತ್ತು ಪರ ವಿಚಾರಗಳ ಬಗ್ಗೆ ಸಹಿಷ್ಣುತೆ ಹೊಂದಿದವರು ಎಂದು ಹೇಳಲಾಗಿದೆ. ಆದರೆ ಇವತ್ತಿನ ಕರ್ನಾಟಕದಲ್ಲಿ ಅಸಹನೆಯ ಬೀಜಗಳು ಮೊಳೆಯ ತೊಡಗಿವೆ. ಇದನ್ನು ನಾವು ಆರಂಭದಲ್ಲಿ ಚಿವುಟಿ ಹಾಕಬೇಕು. ಕನ್ನಡಿಗರ ಧರ್ಮ ಸಹಿಷ್ಣುತೆ,ಸಹಭಾಳ್ವೆ, ವಿಶ್ವಮಾನವತೆಯನ್ನು ಮರಳಿ ನೆನಪಿಸಬೇಕಿದೆ. ಇದೇ ಬರಹಗಾರರ, ಲೇಖಕರ/ಲೇಖಕಿಯರ ಕರ್ತವ್ಯ.
ಇನ್ನು ಬರೆಯುವಾಗ ಶಬ್ದಲಜ್ಜೆ ಬೇಕು. ಬದುಕು ಕ್ರಿಯೆ ಒಂದಾದಾಗ ಬರಹಕ್ಕೆ ಕಸುವು. ಇಷ್ಟು ನೆನಪಿಟ್ಟರೆ ಸಾಕು. ವಚನಕಾರರ ಬದುಕು, ಬರಹ , ಕ್ರಿಯೆ ಆಗಾಗ ಸ್ಮರಿಸಿಕೊಂಡರೆ ಅಕ್ಷರ ಲೋಕದಿಂದ ಚಳುವಳಿ ಸಾಧ್ಯ. ಚಳುವಳಿ ಯಾಕೆ ಬೇಕು? ಅಸಮಾನತೆ ಸಮಾಜ ಇರುವ ತನಕ ಚಳುವಳಿಗಳು ಬೇಕು. ಸಮಾನತೆ ಮತ್ತು ಲಿಂಗ ಸಮಾನತೆ, ಸಹನೀಯ ಬದುಕು ಇದ್ದರೆ , ಇದ್ದಲ್ಲಿ ಬರಹಗಾರರಿಗೆ ,ಪ್ರಾಜ್ಞರಿಗೆ ಏನು ಕೆಲಸ?
ಏಕೀಕರಣದ ಸಂದರ್ಭದಲ್ಲಿ, ಕರ್ನಾಟಕ , ಕನ್ನಡ ಭಾಷಿಕರ ನೆಲ ರೂಪಗೊಳ್ಳುವಾಗ ಏನೇನಾಯಿತು ಎಂಬ ಅರಿವು ಪ್ರತಿ ಬರಹಗಾರರಿಗೆ ಬೇಕು. ಇತಿಹಾಸ ಪ್ರಜ್ಞೆ ಅವಶ್ಯ ಬೇಕು. ಈ ಸಂದರ್ಭದಲ್ಲಿ ಸಂಗಾತಿ ಬಳಗ, ನಮ್ಮ ಲೇಖಕರಿಗೆ, ಓದುಗರಿಗೆ ಪುಟ್ಟದಾಗಿ ನಮ್ಮ ಸೌಹಾರ್ದ ಪರಂಪರೆಯನ್ನು ನೆನಪಿಸಿದೆ. ನಮ್ಮ ಎಲ್ಲಾ ಬಳಗಕ್ಕೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು..
ನಿಮ್ಮ ಸಂಗಾತಿ ವೆಬ್.
ಸಂಪಾದಕೀಯ ಬಳಗ.