ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸ್ವೀಕರಿಸುವೆಯಾ?

ಕವಿತೆ ಸ್ವೀಕರಿಸುವೆಯಾ? ಚಂದ್ರು ಪಿ ಹಾಸನ್ ಇಂದ್ರನ ಬನದಲ್ಲಿ ಅರಳಿದಓ ಅಂದದ ಚೆಂದದ ಹೂವೆಚಂದ್ರನ ಬರುವಿಕೆಗೆ ಕಾದಿರುವೆಯಾ? ಚಿಟ್ಟೆಗಳು ಒಟ್ಟೊಟ್ಟಾಗಿ ಒಮ್ಮೆಲೆಹಿಗ್ಗುತಲಿ ನುಗ್ಗುತಿರಲಿ ಬಗ್ಗದೆಮುಖ ಮರೆಮಾಚಿ ನಿಂತೆಯಾ? ಮುಂಜಾವ ಭಾಸ್ಕರನು ಬೆಳ್ಳಿರಥವೇರಿಚೆಲ್ಲಿಹನು ಅವನ ಹೊನ್ನ ಬೆಳಕನ್ನುಚೆಲುವ ತೋರದೆ ಹೋಗುವೆಯಾ? ರವಿ ರಶ್ಮಿಯನ್ನು ಸ್ವೀಕರಿಸದೆತಮವನ್ನೇ ತನ್ನಲ್ಲಿ ಆವರಿಸಿಕೊಂಡುಯಾರಿಗಾಗಿ ಅರಳುತ್ತಿರುವೆಯಾ? ನನಗಾಗಿ ನೀ ಕಾದಿದ್ದರೆ ಸಾಕುಬೇರೇನು ನಿನ್ನಿಂದ ಬೇಡೆನಗೆಪ್ರೀತಿಗಾಗಿ ಹುಡುಕಿದೆ ನೀಡುವೆಯಾ? ನೆಲೆಸುವೆ ಹೃದಯದಲ್ಲಿ ಸ್ವೀಕರಿಸುವೆಯಾ? ********************************

ಸ್ವೀಕರಿಸುವೆಯಾ? Read Post »

ಇತರೆ

ಆಕಾಶದೀಪದ ಪ್ರಾಧಾನ್ಯತೆ

ಲೇಖನ ಆಕಾಶದೀಪದ ಪ್ರಾಧಾನ್ಯತೆ ವೀಣಾ. ಎನ್. ರಾವ್. ದೀಪಾವಳಿ ಬಂತೆಂದರೆ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ವಿನೂತನವಾದ ಸಂತಸ. ಹಾಗೆಯೇ ದೀಪಾವಳಿಯ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ “ಆಕಾಶದೀಪ”ವನ್ನು ಮನೆಯ ಮುಂದೆ ತೂಗು ಹಾಕುತ್ತಾರೆ.  ಈ ‘ಆಕಾಶದೀಪ’ವು, “ಗೂಡುದೀಪ”,”ನಕ್ಷತ್ರದೀಪ”,ಎಂದು ಪರಿಚಿತವಾದರೆ, ಹಳ್ಳಿಗಳಲ್ಲಿ “ಯಮದೀಪ”,”ವ್ಯೋಮದೀಪ”  ಎಂದು ಕೂಡಾ ಕರೆಯುತ್ತಾರೆ.            ಬಿದಿರಿನ ಕಡ್ಡಿಗಳಿಂದ ಎಂಟು ಮೂಲೆಗಳಿರುವಂತೆ ಯಾವ ಆಕಾರಕ್ಕೆ ಬೇಕೊ ಆ ರೀತಿಯಾಗಿ ಕಟ್ಟಿ ಅದರ ಸುತ್ತಲೂ ಬಣ್ಣದ ಪೇಪರನ್ನು ಅಂಟಿಸಿ ಬಾಲಂಗೋಚಿಯನ್ನು ಇಳಿಬಿಟ್ಟು ಮನೆಯಲ್ಲೆ ತಯಾರಿಸುವ ಈ ‘ಆಕಾಶದೀಪ’ವು ಮನೆಯಂಗಳದಲ್ಲಿ ಕಾಣಸಿಗುತ್ತದೆ. ಸಾಂಪ್ರದಾಯಿಕವಾಗಿ ಬೆಳೆದು ಬಂದ ಈ ಆಕಾಶದೀಪ ಅದರ ಮೂಲ ರೂಪ ಆಧುನೀಕರಣತೆಯಿಂದ ಬದಲಾಗಿದೆ.              ಕೃಷಿಕರು ಸಂಧ್ಯಾಕಾಲದಲ್ಲಿ ಗದ್ದೆಗಳಿಗೆ ಹೋಗಿ ಅಲ್ಲಿ ರಂಗೋಲಿ ಹಾಕಿ ಕಾಡುಪುಷ್ಪದಿಂದ ಭೂಮಿಯನ್ನು ಪೂಜಿಸಿ ‘ನೆನೆಕೋಲು’ ಮಾಡಿ, ” ತನ್ನ ರಾಜ್ಯಕ್ಕೆ ತಾನು ಓಡೋಡಿ ಬಾ ಓ ಬಲೀಂದ್ರ ಕುಹೂ” ಎಂದು ಎಲ್ಲರೂ ಬೊಬ್ಬೆ  ಹಾಕಿ ದೀಪ ಹಚ್ಚುತ್ತಾರೆ. ಹಾಗೆಯೇ ಮನೆಗೆ ಬಂದು ಅಂಗಳದಲ್ಲಿ ಬಲೀಂದ್ರನ ಸ್ವಾಗತಕ್ಕಾಗಿ ನವಗ್ರಹ ಮಂತ್ರವನ್ನೋ, ಅಥವಾ “ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ “(ಗೊತ್ತಿರುವವರು ಈ ಮಂತ್ರ ಹೇಳುತ್ತಾರೆ) ಎಂದು ಹೇಳಿ ವ್ಯೋಮದೀಪವನ್ನು ಏರಿಸುತ್ತಾರೆ. ಪಾತಾಳಕ್ಕಿಳಿದ ಬಲೀಂದ್ರನು ಸಮುದ್ರ ಮಂಥನ ಮಾಡುವಾಗ ದೇವತೆಗಳಿಗೆ ಸಹಾಯ ಮಾಡಿದಕ್ಕಾಗಿ, ಅಲ್ಲದೆ ಬಲಿ ಚಿರಂಜೀವಿಯಾಗಿರುವುದರಿಂದ ಈ ಭೂಮಿಯ ಮೇಲೆ ಒಂದು ದಿನ ಭೂಮಿಯನ್ನಾಳುವ ಅವಕಾಶವನ್ನು ದೇವತೆಗಳ ಬಳಿ ಬೇಡಿದ್ದರಿಂದ ದೀಪಾವಳಿಯ ಅಮವಾಸೆಯಲ್ಲಿ ಬಲಿ ಚಕ್ರವರ್ತಿ ಮೇಲಕ್ಕೆ ಬಂದು ರಾಜ್ಯಾಡಳಿತ ಮಾಡುತ್ತಾನೆಂದು.           ಮತ್ತೊಂದೆಡೆ ಈ ‘ಯಮದೀಪ’ವು ಆಕಾಶತತ್ವ ಮತ್ತು ವಾಯುತತ್ವ ಆಗಿರೋದರಿಂದ ಮನೆಯಲ್ಲಿರುವವರೆಲ್ಲರಿಗೂ ಆಯುಷ್ಯ ವೃದ್ಧಿಸಲಿ ಎಂಬ ಆಶಯವೂ ಇದೆ.            ಒಟ್ಟಿನಲ್ಲಿ ಅದೇನೆ ಆದರೂ ಈ ‘ಆಕಾಶದೀಪ’ವನ್ನು ಇಡುವ ಸಂಪ್ರದಾಯ ಇಂದಿಗೂ ಹಳ್ಳಿಗಳಲ್ಲಿ ಮರೆಯಾಗದೆ  ಇರುವುದು ಈ ನೆಲದ ಸಂಸ್ಕೃತಿಯನ್ನು ಎತ್ತಿ ತೋರಿಸುತಿದೆ.

ಆಕಾಶದೀಪದ ಪ್ರಾಧಾನ್ಯತೆ Read Post »

ಇತರೆ

ಕಾದಂಬರಿ ಕುರಿತು ಮರಳಿ ಮಣ್ಣಿಗೆ ಡಾ.ಶಿವರಾಮ ಕಾರಂತ ಮರಳಿ ಮಣ್ಣಿಗೆ  ಲೇಖಕರು :ಡಾ. ಕೆ‌. ಶಿವರಾಮ ಕಾರಂತ ನಾನು ಶಿವರಾಮ ಕಾರಂತರ ಎಲ್ಲಾ ಕಾದಂಬರಿಗಳನ್ನು ಓದಿಲ್ಲವಾದರೂ ಕೆಲವೊಂದನ್ನು ಓದಿದ್ದೇನೆ.  ಅದರಲ್ಲಿ ನನಗಿಷ್ಟವಾದ ಕಾದಂಬರಿ ” ಮರಳಿ ಮಣ್ಣಿಗೆ”    ಈ ಕೃತಿಯನ್ನು ಓದುವಾಗ ಓದಿ ಮುಗಿಸುವ ತನಕ ಪುಸ್ತಕ ಮುಚ್ಚಿಡಲು ಆಗದಷ್ಟು ಆಸಕ್ತಿ ನಮ್ಮನ್ನು ಓದಿಸಿ ಕೊಂಡು ಹೋಗುತ್ತದೆ. ಇಡೀ ಕಥೆಯೆ ನಮ್ಮ ಕಣ್ಮುಂದೆ ಹಾದು ಹೋಗುವ ಅನುಭವವಾಗುತ್ತದೆ. ಇದಕ್ಕೆ ಕಾರಣ ಅಲ್ಲಿನ ಘಟನೆಗಳು, ಮಾತುಕತೆಗಳು ಹಾಗು ಪಾತ್ರಗಳು ವಾಸ್ತವಿಕ ನೆಲೆಯಲ್ಲೇ ನಡೆಯುವಂತೆ ಭಾಸವಾಗುತ್ತವೆ. ಇಲ್ಲಿನ ಪಾತ್ರಗಳೆಲ್ಲಾ ಗಟ್ಟಿತನದಿಂದ ಕೂಡಿರುವ ಕಾರಣ ನಮ್ಮ ಮನಸ್ಸಿನಲ್ಲಿ ನೆಲೆಸುತ್ತವೆ. ಇಲ್ಲಿನ ಸ್ತ್ರೀ ಪಾತ್ರಗಳು ಅಂದರೆ ಮುಖ್ಯವಾಗಿ ಸರಸೋತಿ, ಪಾರೋತಿ ಹಾಗೂ ನಾಗವೇಣಿ ಪಾತ್ರಗಳು ತಮ್ಮ ಬದುಕಿನ ಇತಿಮಿತಿಯಲ್ಲೇ ಕಷ್ಟಗಳೊಂದಿಗೆ ಹೋರಾಟದ ಬದುಕನ್ನು ನಿಭಾಯಿಸಿದ ರೀತಿಯಿಂದಾಗಿ ಈಗಿನ ಆಧುನಿಕ ಹೆಣ್ಣಿಗಿಂತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ. ಸ್ತ್ರೀ ಪಾತ್ರಗಳ ಮಾನಸಿಕ ತುಮುಲಗಳು ಅಂದಿನ ಕಾಲಘಟ್ಟದ ಎಲ್ಲ ಹೆಣ್ಣುಮಕ್ಕಳ ಸ್ಥಾನಮಾನದ ಕೈಗನ್ನಡಿಯಾಗಿದೆ. ಪಾರೋತಿ ಶೋಷಿತ  ಬದುಕನ್ನು  ತಲೆತಗ್ಗಿಸಿ ಸ್ವೀಕರಿಸಿದರೆ, ಸರಸೋತಿಯು ತನ್ನ ದುರಂತ ಬದುಕನ್ನು ಅಣ್ಣನ ಸಂಸಾರಕ್ಕೆ ಅರ್ಪಿಸಿ ಕೊಂಡರೂ ನಿರ್ಲಕ್ಷಿಸಲ್ಪಟ್ಟಾಗ ದೌರ್ಜನ್ಯದ ವಿರುದ್ಧ ಸಿಡಿದೇಳುವ ಮೂಲಕ ತನ್ನ ಅಸ್ಥಿತ್ವದ ಛಾಪನ್ನು ಎಲ್ಲರ ಮೇಲೂ ಒತ್ತಿದರೆ, ನಾಗವೇಣಿ ಗಂಡನ ದೌರ್ಜನ್ಯವನ್ನು ತನ್ನ ಇತಿಮಿತಿಯಲ್ಲಿ ತಿರಸ್ಕರಿಸಿ ಮಗನಿಗಾಗಿ ತಾನೆಂದೂ ಕಂಡರಿಯದ ಕಡುಬಡತನದ ಬದುಕನ್ನ ಅನುಭವಿಸುವ ಮೂಲಕ ಸ್ವಾಭಿಮಾನಿ ಹೆಣ್ಣಾಗಿ ನೆನಪಲ್ಲುಳಿಯುತ್ತಾಳೆ ನಾಗವೇಣಿಯು ಅಜ್ಜಿ ಸರಸೋತಿ ವ್ಯಕ್ತಿತ್ವದ ಮುಂದಿನ ಮುಂದುವರಿಕೆಯಾಗಿದೆ ಎನ್ನಲಡ್ಡಿಯಿಲ್ಲ. ರಾಮ ಐತಾಳ ಲಚ್ಚ, ರಾಮ ಈ ಮೂರು ಪಾತ್ರಗಳಲ್ಲಿ ಮೊದಲೆರಡು ಪಾತ್ರಗಳು ಸ್ತ್ರೀ ಶೋಷಣೆಯ ವಿಭಿನ್ನ ಮುಖಗಳಾಗಿ ಕಂಡು ಬಂದರೆ,ರಾಮನ ಪಾತ್ರವು ಹೆಂಗರುಳಿನದ್ದಾಗಿದೆ. ಇಡೀ ಕಾದಂಬರಿಯೇ ವಾಸ್ತವದ ನೆಲೆಯಲ್ಲಿ ಸಾಗುತ್ತ ಮುನ್ನೆಡೆಯುವುದರಿಂದ ಓದುಗರ ಮನದಾಳಕ್ಕಿಳಿದು ಸ್ಥಾಪಿತವಾಗಿ ಬಿಡುವುದು. ಕಾರಂತರ ಬರವಣಿಗೆಯ ವೈಶಿಷ್ಟ್ಯತೆಯಿರುವುದೇ ಇಲ್ಲಿ. ಈ ಕೃತಿಯಲ್ಲಿ ಮೂರು ತಲೆಮಾರಿನ ಕಥೆಯ ಚಿತ್ರಣವಿದ್ದರೂ ಎಲ್ಲಾ ಪಾತ್ರಗಳು  ಜೀವಂತಿಕೆಯಿಂದ ಕಣ್ಮುಂದೆ ನಿಲ್ಲುತ್ತವೆ. ಕಲ್ಪನಾ ವಿಲಾಸ ಪ್ರಸಂಗಗಳಿಲ್ಲದೆ ನೈಜತೆಗೆ ಹತ್ತಿರವಾಗಿ ನಾವು ನೋಡಿದ ಒಂದು ಸತ್ಯಕಥೆಯಂತೆ ನಿಲ್ಲುತ್ತದೆ. ಇಲ್ಲಿ ಕಡಲೂ ಸಹ ಜೀವನದ ಒಂದು ಪಾತ್ರವಾಗಿ ಜನಪದರ ಬೇರಾಗಿದೆ.  ಒಟ್ಟಾರೆ “ಮರಳಿ ಮಣ್ಣಿಗೆ”ಕಾದಂಬರಿಯು ಈ ಮಣ್ಣಿನ ಸೊಗಡುಳ್ಳ ಅಸದೃಶವಾಗಿದ್ದು ಶಿವರಾಮ ಕಾರಂತರ ಅನನ್ಯ ಕೃತಿಯಾಗಿದೆ. *****************************

Read Post »

ಕಾವ್ಯಯಾನ

ದೀಪಗಳ ಸಾಲು

ಕವಿತೆ ದೀಪಗಳ ಸಾಲು ಸುವಿಧಾ ಹಡಿನಬಾಳ ಹಚ್ಚೋಣ ಸುತ್ತೆಲ್ಲಾ ದೀಪಗಳ ಸಾಲುಹೊದೆಸೋಣ ಎಲ್ಲರಿಗೂ ಪ್ರೀತಿಯ ಶಾಲು ಬೆಳಕಿಂದೆ ಜಗವು ಬೆಳಗುತಿಹುದುಅನ್ಯಾಯ ಹಿಂಸೆಯಲಿ ದಹಿಸುತಿಹುದುಜ್ಞಾನದ ಬೆಳಕಿನಲಿ ತೆರೆಯಲಿಕಣ್ಣುವಾಸಿಯಾಗಲಿ ಮನದ ಕಲ್ಮಶದ ಹುಣ್ಣು ಜಗವ ಹಿಂಡುತಿಹ ‌ಅನಾರೋಗ್ಯ ದೂರಾಗಲಿಎಲ್ಲರೂ ತಿಂದುಂಡು ನೆಮ್ಮದಿಯಾಗಿರಲಿ ನೆಲಕಚ್ಚಿದ ಆರ್ಥಿಕತೆ ಮತ್ತೆ ಚೈತನ್ಯಗೊಳ್ಳಲಿದುಡಿಯುವ ಕೈಗಳಿಗೆ ಕೆಲಸವು ಲಭಿಸಲಿ ದಿನವೂ ಮೊರೆವ ಬಾಂಬು ಗುಂಡುಗಳ ಸದ್ದಡಗಲಿಆತಂಕವಾದಿಗಳ ಹೃದಯದ ಕತ್ತಲೆ ಕಳೆಯಲಿ ಬದುಕೆಂಬ ಅನಿಶ್ಚಿತ ಪಯಣದಲಿಸಕಲರ ಸಹಕಾರ ಋಣಭಾರವಿದೆಏಕೆ ವ್ಯಾಜ್ಯ, ಕಲಹ ಜೀವನದಲಿಪಯಣ ಸಾಗಲಿ ಹೊಂದಾಣಿಕೆ ಸಮರಸದಲಿ ಒಂದು ಸುದೀರ್ಘ ಸಂಕಟವಕಳೆದು ಬಂದಿದೆ ದೀಪಾವಳಿಮನೆ ಮನೆಯಲಿ ನೆಲೆಗೊಳ್ಳಲಿಶಾಂತಿ ಸಂಭ್ರಮದ ರಂಗವಲ್ಲಿ *********************************

ದೀಪಗಳ ಸಾಲು Read Post »

ಕಾವ್ಯಯಾನ

ದಿವ್ಯ ಅನಿಕೇತನ

ಕವಿತೆ ದಿವ್ಯ ಅನಿಕೇತನ ನೂತನ ದೇಹ ಆತ್ಮಗಳು ಮಾತಾಡಿಕೊಂಡವುನನ್ನೊಳಗೆ ನೀನೊನಿನ್ನೊಳಗೆ ನಾನೊ? ಯಾರೊಳಗೆ ಯಾರಿದ್ದರೇನುಇದ್ದೂ ಇರದಂತೆ ಇರುವವರೆಷ್ಟಿಲ್ಲ !ರೇಷಿಮೆಯ ಸಣ್ಣ ಅಂಚಿನ ಪತ್ತಲನಿಟ್ಟುಸಿರ ಬಿಡುವುದ ಕಾಣದಂತೆ ನಾವೀರ್ವರು ಒಂದಾದ ಕ್ಷಣಕ್ಕೆಹುಣ್ಣಿಮೆಯೇ ಸಾಕ್ಷಿಛಾಯೆ ಕನವರಿಸುತ್ತಾಳೆನೂರ್ಕಾಲದ ಬಾಳಿಗೆ ಹೊರನೋಟಕ್ಕೆ ಒಂದಾದರೆಒಳ ಹರಿವಿಗೆ ಒಂದು ನಾನು ನೀನೆಂಬಗಡಿಯಿರದ ಗೂಡಿನಲಿಜೇನು ಸವಿ ಹೀರಲುದೇಹದೊಲುಮೆಯಲಿಆತ್ಮಜ್ಯೋತಿ ಬೆಳಗಬೇಕು ಸದಾ ಆತ್ಮ ಬಿರಿದು ಕಣಕಣದಲಿ ಬೆಳೆದುಮಿಲನವ ಮೀರಿ ನಿಂತುಈಗ ಸರ್ವವ್ಯಾಪಿಬೇಧವಿರದ, ಬಂಧವೂ ಇರದದಿವ್ಯ ಅನಿಕೇತನ **************************

ದಿವ್ಯ ಅನಿಕೇತನ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಕವಿತೆಯ ಹೊಳಹುಗಾಣುತ್ತದೆ ಹೇಮಲತಾ ವಸ್ತ್ರದ. ಪರಿಚಯ: ಎಂಎ, ಎಂಇಡಿ, ಪಿಜಿ ಡಿಪ್ಲೋಮಾ ಇನ್ ಇಂಗ್ಲಿಷ್. ವಿಜಯಪುರ ಗ್ರಾಮೀಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಊರು: ಸಿಂದಗಿ.  ಜಿಲ್ಲೆ: ವಿಜಯಪುರ. ಕೃತಿಗಳು: ಅವ್ವನಿಗೊಂದು ಪತ್ರ (ಕವನಸಂಕಲನ). ಪೃಥ್ವಿಯೊಡಲು(ಕಥಾಸಂಕಲನ)(ಅಚ್ಚಿನಲ್ಲಿದೆ). ಗಜಲ್ ಸಂಕಲನಅಚ್ಚಿನಲ್ಲಿದೆ. ಅಕ್ಕನಾಗಮ್ಮ (ನಾಟಕ)(ಅಚ್ಚಿನಲ್ಲಿ) ಶೈಕ್ಷಣಿಕ, ಸಾಹಿತ್ಯಕ ಲೇಖನಗಳು. ಮಕ್ಕಳ ಕಥೆಗಳು, ಕವನಗಳು. ಕ್ರೀಯಾಸಂಶೋದನೆ (ಬಾಲಕಾರ್ಮಿಕಪದ್ಧತಿ). ಗುಲ್ಬರ್ಗಾ ವಿಶ್ವವಿದ್ಯಾಲಯ ದ ಎಂಎ ಮೂರನೇ ಸೆಮ್ (ಆಧುನಿಕ ಕಾವ್ಯ ಸಂಗ್ರಹ-೨೦೧೨) ಗೆ ಕನ್ನಡಗಜಲ್ಗಳು, ಕವನಗಳು ಪಠ್ಯವಾಗಿವೆ.  ಪ್ರಜಾವಾಣಿ, ಮಯೂರ, ವಿಜಯಕರ್ನಾಟಕ ಇತ್ಯಾದಿ ಪತ್ರಿಕೆಗಳಲ್ಲಿ ಕವನ, ಗಜಲುಗಳು ಮತ್ತು ಲೇಖನಗಳು ಪ್ರಕಟವಾಗಿವೆ. ಚಂದನ ದೂರದರ್ಶನದ  ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.‌ ಅಕ್ಕಮಹಾದೇವಿ ವಿ.ವಿ, ಗುಲ್ಬರ್ಗ ವಿ.ವಿ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಇತ್ಯಾದಿಗಳಲ್ಲಿ ಉಪನ್ಯಾಸ. ವಿಜಯಪುರ ಆಕಾಶವಾಣಿಯಲ್ಲಿ ಚಿಂತನಗಳ ಪ್ರಸಾರ. ಕಥೆ, ಕವನಗಳ ಪ್ರಸಾರವಾಗಿವೆ. ಸಂದ ಗೌರವಗಳು : ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ (2018). ಹಾಗೂ ಶಿಕ್ಷಣ ಕ್ಷೇತ್ರದ ‘ಗುರುಶ್ರೇಷ್ಠ ‘ ಪುರಸ್ಕಾರ.(2017) ಸಂದರ್ಶನ: ಧಮಿನಿಸಲ್ಪಟ್ಟ ಎಲ್ಲದಕ್ಕೂ ದನಿಯಾಗುವ ಹಂಬಲ ನನ್ನ ಕವಿತೆಗೆ ನೀವು ಕವಿತೆಗಳನ್ನು ಯಾಕೆ ಬರೆಯುವಿರಿ?  ಬರೆದಾದ ಮೇಲಿನ ನನ್ನ ತುಡಿತ ಕಡಿಮೆಯಗುವುದಕ್ಕೆ.  ಸಿಗುವ ತೃಪ್ತಿ, ಸಮಾಧಾನಕ್ಕೆ,. ಕಿಂಚಿತ್ ಆದರೂ ಸಮಾಜದ ಋಣ ತೀರಿಸಬಹುದು(ಭ್ರಮೆ) ಎಂಬುದಕ್ಕೆ. ಮುಖ್ಯವಾಗಿ ದಮನಿಸಲ್ಪಟ್ಟ ಎಲ್ಲದಕ್ಕೂsss ದನಿಯಾಗುವ ಹಂಬಲಕ್ಕೆ ಬರೆಯುತ್ತೇನೆ. ಕವಿತೆ ಹುಟ್ಟುವ ಕ್ಷಣ ಯಾವುದು?  ಇಂಥಹದ್ದೆ  ಕ್ಷಣ ಎನ್ನಲಾಗದು. ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಹೊಳಹುಗಾಣುತ್ತದೆ. ನಿಮ್ಮ ಕವಿತೆಗಳಲ್ಲಿ ‌ಪದೇ ಪದೇ ಕಾಡುವ ವಿಷಯ ಯಾವುದು? ಕವಿತೆಗಳ ವಸ್ತು ಯಾವುದು? ಬದುಕಿನ ಎಲ್ಲ ಮೂರ್ತ ಮತ್ತು ಅಮೂರ್ತಗಳು. ಸ್ವಲ್ಪ ಹೆಚ್ಚು ಅನ್ನುವಂತಿರುವುದು ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿ. ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆ, ನೋವಿಗೆ ತುತ್ತಾದ ಜೀವಗಳ ಕಣ್ಣೋಟ ತುಂಬ ಕಾಡುತ್ತವೆ. ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯಾ? ಇಣುಕಿದೆ. ಬಾಲ್ಯ ಮತ್ತು ಹರೆಯದ ಪ್ರಭಾವವೇ ಅಂತಹದ್ದು. ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಕವಿಯಾಗಿ ಹೇಗೆ ಪ್ರತಿಕ್ರಿಯಿಸುವಿರಿ? ಸ್ವಾರ್ಥ, ದುರಾಸೆ ಮತ್ತು ನಿರ್ಲಜ್ಯ ರಾಜಕಾರಣವಿಂದು ವಿಜ್ರಂಭಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆ ಯಾವತ್ತಿಗೂ ಅಪಾಯಕಾರಿಯೇ. ಇದರಿಂದ ದೋಷಗಳು ಕಾಣಿಸದೇ ಹೋಗುತ್ತವೆ. ರಾಷ್ಟ್ರದ ಬೆಳವಣಿಗೆಗಾಗಿ ಮೌಲ್ಯಯುತ ದೂರಾಲೋಚನೆಗಳಿರುವ ಯೋಜನೆಗಳು ಮತ್ತು ಪ್ರಾಮಾಣಿಕ ಪ್ರಯತ್ನದ ಕೊರತೆ ಕಾಣುತ್ತಿದೆ. ಬರಿ ಕಲ್ಯಾಣ ಯೋಜನೆಗಳಿಂದ ಬಲಿಷ್ಠ ರಾಷ್ಟ್ರ ಕಟ್ಟಲಾಗದು. ಪ್ರಸ್ತುತ ರಾಜಕೀಯ ವ್ಯವಸ್ಥೆಯೆ ಅಪಮೌಲ್ಯಗೊಂಡಿದೆ. ದೇವರು ಧರ್ಮದ ಬಗ್ಗೆ ನಿಮ್ಮ ನಿಲುವೇನು?  ಶರಣ ಧರ್ಮ ನನ್ನದು. ಜಾತಿಯಲ್ಲಿ ನಂಬಿಕೆಯಿಲ್ಲ. ಮೂರ್ತ ಕಲ್ಪನೆಗಳಲ್ಲ ನನ್ನ ದೇವರು. ಮಾನವೀಯತೆಯ ಸಾಕಾರವನ್ನು ದೇವರೆನ್ನಬಹುದೇನೊ. ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ? ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಪರವಾಗಿಲ್ಲ ಅನಿಸುವಂತಿದೆ ಅಷ್ಟೆ. ತಾರತಮ್ಯದ ಕಸ ತೆಗೆಯಬೇಕಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಕರಗಿದೆ. ಸಾಹಿತ್ಯದ ರಾಜಕೀಯದ ಬಗ್ಗೆ ನಿಮಗೆ ಏನನಿಸುತ್ತದೆ? ರಾಜಕಾರಣದಲ್ಲಿ ಸಾಹಿತ್ಯ ಇರಬೇಕೆ ವಿನಾ ಸಾಹಿತ್ಯದಲ್ಲಿ ರಾಜಕಾರಣವಿರಬಾರದು. ಸಾಹಿತಿ ಮಾತ್ರ ಮುನ್ನೆಲೆಗೆ ಬರುತ್ತಾನೆ. ಸಾಹಿತ್ಯ ದಿವಾಳಿಯಾಗುತ್ತದೆ. ಇಂದು ಸಾಹಿತ್ಯ ವಲಯದ ರಾಜಕಾರಣದ ಕುರಿತು ವಿಷಾದವಿದೆ. ದೇಶದ ಚಲನೆಯ ಬಗ್ಗೆ ನಿಮಗೇ‌ನನಿಸುತ್ತಿದೆ?   ನಿಜಕ್ಕೂ ದೇಶದ ಚಲನೆ ಹಿಮ್ಮುಖವಾಗಿದೆ ಎನಿಸುತ್ತಿದೆ. ಬಂಡವಾಳಶಾಹಿ ಗಹಗಹಿಸುತ್ತಿದೆ. ಅಸಹಿಷ್ಣುತೆ ಎಲ್ಲ ವಲಯಗಳಲ್ಲಿ ಹೆಚ್ಚಾಗಿದೆ. ಇಂಥ ಮನಸ್ಥಿತಿ ದೇಶಕ್ಕೆ ಮಾರಕ. ಸಾಮಾನ್ಯರ ಬದುಕು ಅಸಹನೀಯವಾಗಿದೆ. ವ್ಯವಸ್ಥೆ ಹದಗೆಟ್ಟಿದೆ.ಅಶನ ವಸನಕ್ಕೂ ಪರದಾಡುವಂತಾಗಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?  ಮನಸ್ಸುಗಳನ್ನು ಕಟ್ಟುವ ಕೃತಿ ರಚಿಸಬೇಕು ಎಂಬ ಕನಸಿದೆ. ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ನಿಮ್ಮ ಇಷ್ಟದ ಕವಿಗಳಾರು?  ಕನ್ನಡದಲ್ಲಿ  ಕವಿಯಾಗಿ ಜಿ ಎಸ್ ಎಸ್, ನಿಸಾರ್ ಅಹಮ್ಮದ ಅವರು ಇಷ್ಟ. ಸಾಹಿತಿಯಾಗಿ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ತ್ರಿವೇಣಿ, ಕೊಡಗಿನ ಗೌರಮ್ಮ ಇಷ್ಟ. ಶರ್ಲಾಕ್ ಹೋಮ್, ಟಾಲ್ಸ್ಟಾಯ್,  ಕೀಟ್ಸ್ ಇಷ್ಟ. ರವೀಂದ್ರನಾಥ ಟ್ಯಾಗೋರ, ಗಾಲಿಬ್, ರೂಮಿ, ಕಮಲಾದಾಸ ಅವರ ಸಾಹಿತ್ಯ ಹೆಚ್ಚು ಆಕರ್ಷಿಸುತ್ತದೆ. ನೀವು ಓದಿದ ಪುಸ್ತಕಗಳಾವವು? ಅಮೇರಿಕಾದ ಕಪ್ಪುಗುಲಾಮ ಫ್ರೆಡೆರಿಕ್ ಡಗ್ಲಾಸ್ ನ ಆತ್ಮಕಥೆ ಕಪ್ಪುಕುಲುಮೆ, ಅಮೃತ ನೆನಪುಗಳು ಮತ್ತು ಸಿಂಗಾರೆವ್ವ ಮತ್ತು ಅರಮನೆ ಇನ್ನೊಮ್ಮೆ ಓದಿದೆ. ನಿಮಗೆ ಇಷ್ಟದ ಕೆಲಸ ಯಾವುದು?  ಕಲಿಸುವುದು ಮತ್ತು ಕೃಷಿಯಲ್ಲಿ ತೊಡಗುವುದು. ನಿಮ್ಮ ಇಷ್ಟದ ಸ್ಥಳಯಾವುದು ?   ಸಮುದ್ರ ಮತ್ತು ಹೊಲದಲ್ಲಿರುವ ಪುಟ್ಟಮನೆ. ನಿಮ್ಮ ಇಷ್ಟದ ಸಿಮಿಮಾ ಯಾವುದು?  ಬೆಟ್ಟದ ಜೀವ, ಕರಾಟೆ ಕಿಡ್ ಮರೆಯಲಾಗದ ಘಟನೆಯಾವುದು ? ಅವ್ವ ಮತ್ತು ಪತಿಯ ಸಾವು. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

You cannot copy content of this page

Scroll to Top