ನೆನಪಾಗುತ್ತಾರೆ

ಕವಿತೆ

ನೆನಪಾಗುತ್ತಾರೆ

ಡಾ.ಯ.ಮಾ.ಯಾಕೊಳ್ಳಿ

grayscale photo of man and woman holding their hands

ನೆನಪಾಗುತ್ತಾರೆ
ಈ ಇವರು
ಬಿಸಿಲು ತಾವುಂಡು ಬೆಳದಿಂಗಳ
ಬೆಳೆಯ ಬೆಳೆದವರು
ಕತ್ತಲೆಯ ಗಾಡಾಂಧಕಾರದೊಳಗೆಯು
ಬೆಳಕು ಪಂಜನು ಹಿಡಿದು
ಬೆಳಗ ಹಂಚಿದವರು

ಕರುಣೆ ಪ್ರೀತಿ‌ ಮಾತ್ರ
ಇಲ್ಲಿ ಬದುಕ ಉಳಿಸಬಹುದು
ಎಂದು‌ ಬಲವಾಗಿ ನಂಬಿ
ಅದರ ಬೀಜವನೆ ಬಿತ್ತಿದವರು
ಅಂಗುಲಿಮಾಲನ ಕ್ರೂರ ಎದೆಯೊಳಗು
ಪ್ರೀತಿ ಅರಳಿಸಬಹುದೆಂದು
ತಿಳಿದವರು

ವಸ್ತ್ರ ವಡವೆ ಅಧಿಕಾರ ಅಂತಸ್ತು
ಎಲ್ಲವನು ಧಿಕ್ಕರಿಸಿ
ಮನುಷ್ಯತ್ವಕ್ಕಿಂತ‌ ಮಿಗಿಲಾದುದಿಲ್ಲ
ವೆಂದವರು ನುಡಿಯ
ಹದನ ಕಿಂತ ನಡೆಯ ಬೆಳಕ
ಹರಡಿದವರು

ನಮ್ಮ ನಡುವೆ ಎಲ್ಕವೂ
ನಿಂತಂತೆನಿಸಿರುವಾಗ
ಮುಚ್ಚಿದ ಬೀಗವ ತಗೆಯವ
ಕೊಂಡಿಯಂತಿವರು
ಮತ್ತೆ‌ ಮತ್ತೆ ನೆನಪಾಗುತ್ತಾರೆ

ಬಂಧಗಳನು ಒಗ್ಗೂಡಿಸುವ
ಮಂತ್ರದಂಡದಂತೆ!
ಮರೆಯದೆ ಹೋಗಬೇಕಿದೆ
ಅಲ್ಲಿಗೆ
ರಾಜ್ಯ ಬಿಟ್ಟವರ,
ತುಂಡು‌ಬಟ್ಟೆ ತೊಟ್ಟವರ
ಎಲ್ಲ ನಮ್ಮವನೆಂದವರ
ಅಕ್ಷರದ ಬಲವಿಡಿದು
ಸಮಾನತೆಯ
ಹೊತ್ತಗೆಯನಿತ್ತವರ

ಬಳಿಗೆ…
ಮತ್ತೆ‌ಮತ್ತೆ ನೆನಪಾಗುವ
ಅವರದೆ ಆಸರೆಗೆ

***************************

ಡಾ.ವೈ.ಎಂ.ಯಾಕೊಳ್ಳಿ

Leave a Reply

Back To Top