ಕವಿತೆ
ಹಸಿವು
ಗಂಗಾಧರ ಬಿ ಎಲ್ ನಿಟ್ಟೂರ್
ಹಸಿದು ಬಸವಳಿದವರಿಗೆ
ಪ್ರಾಣ ಹೋಗುವ ಸಂಕಟ
ಉಳ್ಳವರಿಗೆ ಬರೀ ಚೆಲ್ಲಾಟ
ಅನ್ನ ಚೆಲ್ಲುವ ಮಂದಿಗೆ ಅರ್ಥವಾದೀತೆ ಹಸಿದ ಕರುಳಿನ ಆಕ್ರಂದನ
ಎದೆಯೊಳಗೆ ನಡುಕ
ಕರುಳು ಹಿಂಡುವ ಕಥನ
ಜಗದಿ ಹಸಿವಿನ ಮರಣ ಮೃದಂಗ
ಪ್ರಕೃತಿಗೆ ಕಣ್ಣಿಲ್ಲ ಕರುಣೆಯೂ ಇಲ್ಲ
ಗಂಜಿಗೂ ಗತಿ ಇಲ್ಲದೆ ಸಾಯುವ ಕಂದಮ್ಮಗಳ ಸಂಖ್ಯೆ
ನಿತ್ಯ 20 ಸಾವಿರಕೂ ಅಧಿಕ
ಹಿಡಿ ಅನ್ನ ಬೊಗಸೆ ನೀರಿಗೂ ತತ್ವಾರ
ಅಪೌಷ್ಟಿಕತೆ – ಸಾಂಕ್ರಾಮಿಕಗಳ ಪ್ರಹಾರ
ಎಂಥಾ ವಿಚಿತ್ರ ಬದುಕಿದು ದೇವಾ
ಬಡತನ ಮುಕ್ತ ದೇಶದ ಪುಕಾರು
ತುತ್ತು ಬಾಯಿಗಿಡುವ ಭರಾಟೆಯೂ ಜೋರು
ತಿಂದು ತೇಗಿ ರಸ್ತೆಗಿಳಿವ ಸುದ್ದಿ ಶೂರರ
ಗಡಿಪಾರು ಆದಾಗ ಲಭ್ಯ ನಿಜ ಸೂರು
********************************