ಕವಿತೆ
ನಡುವೆ ಸುಳಿಯುವ ಆತ್ಮ!
ನಡುವೆ ಸುಳಿಯುವ ಆತ್ಮ
ಗಂಡೂ ಅಲ್ಲ ಹೆಣ್ಣೂ ಅಲ್ಲ!
ಜೇಡರ ದಾಸಿಮಯ್ಯ ನೆನಪಾದ…
ಗೋಡೆಯಲ್ಲಿದ್ದ ಗೌಳಿಹಲ್ಲಿ ಲೊಚಲೊಚ ಲೊಚ್ಚ
ಲೊಚಗುಟ್ಟಿತು
ಪಚಪಚ ಪಚ್ಚ ಕಾಯಿ ಕಡೆಯುತ್ತಿದ್ದ ಬೋಳಜ್ಜಿ
ಥತ್! ಅಪಶಕುನ! ಎಂದಳು.
ಹೊಟ್ಟೆಗಂಟಿಕೊಂಡ ಬಿಳಿ ಮೊಟ್ಟೆಯನ್ನು ಹೊತ್ತ
ಹೆಣ್ಣು ಜೇಡವು
ಗೋಡೆಯ ಮೇಲಿಂದ
ವರಹಾವತಾರ ಕ್ಯಾಲೆಂಡರಿನ ಭೂಮಂಡಲದ
ಮರೆಗೆ ಸರಿಯಿತು!
ದಾಸಿಮಯ್ಯನ ಈ ವಚನ ಕಂಠಪಾಠ ಅವನಿಗೆ!
ಪ್ರತಿ ಭಾಷಣದಲ್ಲೂ ಸ್ತ್ರೀ… ಸ್ತ್ರೀ… ಎಂದು ಸಂವೇದನೆಯ
ಇಸ್ತ್ರೀ ಸೀರೆಸೀರೆಗಳಿಗೆ ಜೋರಲ್ಲೇ ಎಳೆಯುತ್ತಿರುತ್ತಾನೆ
ವೇದಿಕೆಯಲ್ಲಿ!
ಮನೆಯಲ್ಲಿ ‘ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!’
ಇಸ್ತ್ರಿಯೇ ಇಲ್ಲದ ಹರಕು ಸೀರೆಯಲ್ಲಿ
ಬಾಯಿ ಮುಚ್ಚಿಕೊಂಡೇ ಹೆಂಡತಿ
ಯೋಜನಗಂಧಿಯರ ಮೀನು ಹೂವು ಮೂರಿಗಂಧ ಬೆರೆತು
ಬೆಂತರಾದ
ಅವನ ಶರ್ಟ್ ಪ್ಯಾಂಟು ಬನಿಯನ್ನು ನಿಕ್ಕರನ್ನು
ಅವನೇ ಎಂಬಂತೆ
ಬಟ್ಟೆಯೊಗೆಯುವ ಕಲ್ಲಿಗೆ ರಪರಪನೆ ಬಡಿದು
ಕೈ ಕಾಲುಗಳಲ್ಲಿ ಹಿಡಿದು
ಕರುಳನ್ನು ಹಿಂಡಿ ಹಿಪ್ಪೆ ಮಾಡಿ
ನೇಲೆಹಗ್ಗದಲ್ಲಿ ಸುಡುಸುಡುವ ಸೂರ್ಯನಡಿಯಲ್ಲಿ
ಒಣಗಲು ಹಾಕಿ
ಉರಿಯುತ್ತ ಬೆವರಲ್ಲಿ ಮೀಯುತ್ತಾಳೆ
ತಾನೇ ಒಣಗಿ!
ಸ್ತ್ರೀಪರ ಭಾಷಣಗಾರನ ಹೆಂಡತಿ ಇವಳು! ಲಕ್ಕಿ!
ಎಂದು ಬೆಟ್ಟು ತೋರಿದಾಗ
ನಡು ಸಂತೆಯಲ್ಲೇ ಬತ್ತಲಾದವಳಂತೆ
ಓಡಿ ಬರುತ್ತಾಳೆ ಅವಳು! ಅವಲಕ್ಕಿ ಕಟ್ಟನ್ನು ಎದೆಗೊತ್ತಿಕೊಂಡೇ!
ಕಡ್ಡಿಗಳು ಮುರಿದು
ಬೆನ್ನುಮೂಳೆ ಬಾಗಿ ಸುಕ್ಕು ತೊಗಲು ಬಟ್ಟೆ ಹರಿದು ಅವನು
ಮುಲ್ಲೆಗೆ ಬಿಸಾಕಿರುವ ಕೊಡೆಯ ಪಳೆಯುಳಿಕೆಯಂತಹ ಅಮ್ಮ
ಗಂಡನಿಗೆ ತೆರೆದುಕೊಳ್ಳದೆ
ಗಾಳಿಯಲ್ಲಿ ಆಕಾಶಕ್ಕೆ ತಿರುವುಮುರುವಾಗಿ
ಗರಿಬಿಚ್ಚಿ ಹಾರಿದ ‘ಸಿರಿ’ ಭೂತದ ಕ್ಷಣಗಳನ್ನು
ಮೆಲುಕು ಹಾಕುತ್ತ ತನ್ನ
ಸೊಸೆಯು ಕರಿಮಣಿ ಹರಿದು ಹಿಡಿಸೂಡಿಗೆ ಕಟ್ಟುವ
ಗಳಿಗೆಗಾಗಿ ಮೈಯೆಲ್ಲ ಕಣ್ಣಾಗಿ ಕುಳಿತಿದ್ದಾಳೆ!
ಗಂಡು ಪ್ರಾಣಿಯ ತಲೆತುದಿ ಕಂಡರೆ ಸಾಕು…
ಈ ಹಳೇಕೊಡೆಯು ನಾಗರಹಾವಾಗಿ ಸುಯುಂಪಿ
ಭುಸುಗುಟ್ಟುತ್ತದೆ ಮಲಗಿದಲ್ಲೇ ಹೆಡೆ ಅರಳಿಸಿ!
ಕೈಗೆ ಮೈಕ ಸಿಕ್ಕಿದರೆ ಸಾಕು ಅದಕ್ಕೇ
ಹೆಬ್ಬಾವಿನಂತೆ ಸುತ್ತಿಕೊಂಡು ಸ್ತ್ರೀಯರನ್ನೇ ನುಂಗುವಂತೆ ನೋಡುತ್ತ
ಎಂಜಲು ಮಾತುಗಳನ್ನು ಕಕ್ಕುವ ಈ ಮಾರಾಯ
ಕರಿಮಣಿ ಎಂಬ ಉರುಳು ಕಟ್ಟಿ
ತವರಿನ ಹಟ್ಟಿಯನ್ನು ಬಿಟ್ಟು ಬರಲಾರೆ ಎಂದು
ಕಣ್ಣೀರಿಡುತ್ತಿದ್ದ ಎಳೆ ಪ್ರಾಯದ ಕನ್ನೆಯನ್ನು ಹೆಂಡತಿಯೆಂದು
ಎಳೆದುಕೊಂಡೇ ಬಂದು… ಅವಳು
ನಿತ್ಯದಂತೆ ಅಳದಿದ್ದರೆ… ಸಂಶಯದಲ್ಲೇ ಅಳೆದು ಅಳೆದು
ಅವಳು ಹೆತ್ತ ಹೆಣ್ಣು ಕೂಸಲ್ಲಿ ಯಾರ್ಯಾರದ್ದೋ
ಕಣ್ಣು ಮೂಗನ್ನು ಹುಡುಕುತ್ತಾನೆ!
ಭಾಷಣ ಕೇಳಿ…
ಅಬ್ಬಾ… ಹೆಣ್ಣುಹೃದಯವೇ! ಅಂದುಕೊಂಡು
ಅವನಲ್ಲಿ ನೀನು ಅಣ್ಣನೋ ತಮ್ಮನೋ ಗೆಳೆಯನೋ
ಅಂದುಕೊಂಡು…ಸೆಕ್ಸ್ ಒಂದನ್ನು ಬಿಟ್ಟು
ಹೆಣ್ಣುದೇಹದ ಮುಟ್ಟು ಮಾಸಿಕ ಬಸಿರು ಬಾಣಂತನ
ಮಲಮೂತ್ರ ನೆತ್ತರು ಸತ್ತರು… ಲಂಗು ಪುಸ್ಕು
ಕಷ್ಟ ಸುಖ ಮಾತಾಡಿ ನೋಡಂತೆ ಹಗಲು!
ಆ ಅವನಿಗೆ ಮೈಲಿಗೆಯಾಗಿಬಿಡುತ್ತದೆ
ಒಂದು ಕೆಜಿ ಹುಣಸೆಹುಳಿ ಕಿವುಚಿದ ಮುಖದಲ್ಲೇ
ಆಕಾಶದಿಂದ ದೇವರ ಮೂಗಿಂದಲೇ
ಉದುರಿದ ದೇವಪಾರಿಜಾತದಂತೆ
ಮೈಗೆ ಅತ್ತರು ಬಳಿದುಕೊಳ್ಳುತ್ತಾನೆ
ಮನಸ್ಸು ಕೊಳೆತು ನುಸಿ ಹಾರುತ್ತಿರುತ್ತದೆ!
ಆ ರಾತ್ರಿಯೇ ತೀರ್ಥದಲ್ಲಿ ಮಿಂದು
ನಿನಗೆ ಸೆಕ್ಸ್ ಮೆಸ್ಸೇಜ್ ಕಳುಹಿಸಿ
ಹಾಸಿಗೆಗೆ ಬರುತ್ತೀಯ? ಅನ್ನುತ್ತಾನೆ…
ನೀನು ಥೂ! ಅನ್ನುತ್ತೀಯ… ಅವನ ಮುಖಕ್ಕೇ
ಉಗುಳುವ ಧೈರ್ಯ ಸಾಲದೆ!
ನಿನ್ನ ಉಗುಳು ನಿನ್ನ ಮುಖಕ್ಕೇ ಬೀಳುವ ಭಯದಲ್ಲಿ!
ಅವನ ಬಾರ್ ಗೆಳೆಯರು ಬರೋಬ್ಬರಿ ನಗುವಲ್ಲಿ
ತೇಲಿ ಮುಳುಗಿ ಕೊಚ್ಚಿಕೊಂಡು ಹೋಗುತ್ತಿರುತ್ತಾರೆ
ಅದುವರೆಗೂ ಅವರು ನೋಡಿಯೇ ಇರದ
ನಿನ್ನ ಅಂಗಾಂಗಗಳ ವರ್ಣನೆಯಲ್ಲೇ
ನಿನಗೆ ಆಕಾರ ಕೊಡುತ್ತ…ಬಟ್ಟೆ ತೊಡಿಸಿ ಒಂದೊಂದ್ಶಾಗಿ ಬಿಚ್ಚುತ್ತ…ತಥ್!
ಹಗುರವಾಗಲು ಅವಳಲ್ಲಿ ಹೇಳಿಯೇಬಿಟ್ಟಿಯಾ?
ಎಲ್ಲ ಹೇಳಿಬಿಟ್ಟೆಯಾ? ಸರಿ, ಅನುಭವಿಸು ಇನ್ನು!
ಕಿವಿಗಳಿಗೆರಡು ಹೂ ಸಿಕ್ಕಿಸಿಕೊಂಡ ಆ ಮಡಿಬೆಕ್ಕು
ಮಿಡಿನಾಗಿಣಿಯಂತೆ
“ಮಿಡಿ ಧರಿಸಿಕೊಂಡವರು ಮಡಿವಂತರಲ್ಲ…ಇಡಿ
ಧರಿಸಲಿಕ್ಕೇನು ಧಾಡಿ? ಅವನನ್ನು ಬುಟ್ಟಿಗೆ ಹಾಕಿಕೊಳ್ಳಲು
ನೋಡಿ ಸೋತು… ಅಪಪ್ರಚಾರ ಮಾಡುತ್ತಿದ್ದಾಳೆ ಈ ಹಡಬೆ!”
ಎಂದು ಗೋಡೆಗೋಡೆಗಳಿಗೂ ಇಲ್ಲದ್ದನ್ನು ಉಸುರಿ
ಬಿಲ ಸೇರಿ ಭುಸುಗುಡುತ್ತಿರುತ್ತಾಳೆ…
ಥೇಟ್ ಧಾರವಾಹಿಯ ನೀಲಿ ರೆಪ್ಪೆಯ
ಮೀಡಿಯಾಳ ಹಾಗೆ!
ಒಳಗೊಳಗೇ ಸಂಚು ಮಾಡುವ ಗುಳ್ಳೆನರಿಯಂತೆ
ಮುಖ ತೋರಿಸದೆ ಓಡಾಡುತ್ತಾಳೆ!
ಪ್ಚ್ ಪ್ಚ್!
ತನ್ನ ಬಲೆಯಲ್ಲಿ
ತಾನೇ ಸಿಕ್ಕಿಹಾಕಿಕೊಂಡ ಜೇಡನಂತೆ…
ತನ್ನ ಮಾನಕ್ಕೆ ತಾನೇ ಬಟ್ಟೆ ಹೆಣೆಯುತ್ತ ಹೆಣೆಯುತ್ತ
ನೆತ್ತರ ಕೊನೆಯ ಬಿಂದು ಕಾಲಿಯಾಗುವವರೆಗೂ
ದೇಹವನ್ನು ಮಡಿಬಲೆಗೇ ಸುತ್ತಿಕೊಳ್ಳುತ್ತ ಸುತ್ತಿಕೊಳ್ಳುತ್ತ
ಅವಳು ಈಗ ಈಗ ಸತ್ತಳು! ಮುಚ್ಚಿದ ಬಾಗಿಲೊಳಗೆ
ಸೀರೆ ಸೆರಗಿನ ಅಂಚಿಗೆ ಬೆಂಕಿ ಭಗ್ಗೆಂದು ಹಿಡಿದು
ಕೆಂಪು ಕೆಂಪು ಗೆಣಸಿನಂತೆ ಭಗಭಗ ಮೈ ಬೇಯುವಾಗಲೂ
ಕಿಟಕಿಯಿಂದ… “ ಸೀರೆ ಕಿತ್ತು ಬಿಸಾಡು! “ಎಂದು ಅರಚುವ ಗಂಡಸರ
ಮುಂದೆ
ಸೀರೆ ಕಳಚಿ ಎಸೆದು ಬತ್ತಲಾಗಿ ಜೀವ ಉಳಿಸಿಕೊಳ್ಳಲು ನಾಚಿ! ಛೆ!
ಆತ್ಮಕ್ಕಂಟಿಕೊಂಡ ಹೆಣ್ಣುಮೈಯನ್ನು ಕಳಚಿ ಎಸೆಯಲಾಗದ ಸಂಕಟಕ್ಕೆ
ಸುಟ್ಟು ಬೂದಿಯಾಗಿಬಿಟ್ಟಳು!
ಗಂಡುಸಂತೆಯಲ್ಲಿ ಬಣ್ಣಬಣ್ಣದ ಶೀಲ ತುಂಬಿಕೊಂಡ
ಉರುಟು ಚೌಕ ಆಯತ ತ್ರಿಕೋನ… ಆಕಾರ ಆಕಾರಗಳ ಹೆಣ್ಜುಕುಪ್ಪಿ
ಬಾಟಲಿಗಳು ಮಾನದಲ್ಲೇ ಹರಾಜಾಗುತ್ತಿರುತ್ತವೆ
ಮಾನ ಕಳಕೊಂಡು ಬೇಲಿಯ ಅಂಚಲ್ಲೇ ಒಡೆದು
ಖಾಲಿ ಬಿದ್ದಿರುತ್ತವೆ!
ಅಡುಗೆ ಮನೆಯಲ್ಲಿ ಬೋಳಜ್ಜಿ
ನಿರಾಕಾರದ ಹಿಟ್ಟನ್ನು ನಾದಿ ನಾದಿ
ಆಕಾರದ ರೊಟ್ಟಿ ಕಾಯಿಸುತ್ತ
ಹಿಟ್ಟಿನ ಮುದ್ದೆಯಂತೆ ಒಲೆ ಮುಂದೆ
ಕಾಯುತ್ತಿರುತ್ತಾಳೆ ಅಜ್ಜನನ್ನು!
ಅಜ್ಜ ನೆಟ್ಟ ಆಲದಮರದ ಬೇರಿಗೆ
ಒಂದು ಹೂವಿಟ್ಟು ಅರಶಿನ ಕುಂಕುಮ ಬಳಿದು
ಊದುಬತ್ತಿಕಡ್ಡಿ ಹಚ್ಚಿ ದಿನಾ ನೂರ ಎಂಟು ಸುತ್ತು ಹಾಕದಿದ್ದರೆ
ಮದುವೆಯಾಗುವುದಿಲ್ಲ ಮಕ್ಕಳಾಗುವುದಿಲ್ಲ
ಬಂಜೆಗೊಡ್ಡಾಗುತ್ತಿ ಎಂದು ಸಹ್ಸ್ರನಾಮಾರ್ಚನೆ ಮಾಡುಮಾಡುತ್ತಲೇ
ಸತಿ ಹೋದ ಆ ಅಜ್ಜಿಯ ನೆನಪಲ್ಲೇ ಉದ್ದಲಂಗದ ಮಗಳು
ಜೀವಮಾನವಿಡೀ ಮರಕ್ಕೆ ಸುತ್ತು ಹೊಡೆಯುತ್ತಲೇ ಇರುತ್ತಾಳೆ
ಕುಪ್ಪಸದ ಬೆನ್ನು ಹೊಕ್ಕಳು ಹೊಟ್ಟೆಯ ಚರ್ಮ
ಸುಕ್ಕಾಗಿ
ಮೊಲೆಗಳು ಜೋತುಬೀಳುವವರೆಗೂ
ಮೆದುಳನ್ನೇ ಕೊಂಬಚೇಳು ಕಚ್ಚಿಹಿಡಿದಾಗ
ದೇವರಕಿಂಡಿಗೆ ಹಣೆ ಚಚ್ಚಿಕೊಳ್ಳುತ್ತಾಳೆ
ಆಗ…
ಜೇಡರ ದಾಸಿಮಯ್ಯ ಹೇಳಿದ
ಗಂಡೂ ಅಲ್ಲದ ಹೆಣ್ಣೂ ಅಲ್ಲದ ಆತ್ಮವನ್ನು
ದೇವರು ಹುಡುಕಲು ಹೊರಡಬೇಕೆಂದುಕೊಳ್ಳುತ್ತಾನೆ
ಶರ್ಟ್ ತೊಡಲೇ ಸೀರೆ ಉಡಲೇ!
ಎಂದು ಕನ್ನಡಿಯ ಮುಂದೆ ಬತ್ತಲೆ ನಿಂತು
ತಲೆ ಕೆರೆದುಕೊಳ್ಳುತ್ತ!
**********************************
ಕಾತ್ಯಾಯಿನಿ ಕುಂಜಿಬೆಟ್ಟು