ಪ್ರಬಂಧ
ಹೊರಗೋಡೆ
ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ.
ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು ನಂಬಲು ಅವರುಗಳು ಕಟ್ಟಿ, ಬಿಟ್ಟು ಹೋಗಿರುವ ಗೋಡೆಗಳೇ ಸಾಕ್ಷಿ. ಅಂತೆಯೇ ಶತಮಾನಗಳೇ ಕಳೆದರೂ ಇನ್ನೂ ಸುಸ್ಥಿತಿಯಲ್ಲಿರುವಂಥಹ ಗೋಡೆಗಳಿಗೆ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನೇ ಬಳಸಿಕೊಂಡು, ಸಾವಿರಾರು ವರ್ಷಗಳಷ್ಟು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಿರುವುದು ಮಾತ್ರ ಒಟ್ಟೊಟ್ಟಿಗೇ ಭೂಮಿಯ ಗುಣ ಹಾಗೂ ನಮ್ಮ ಪೂರ್ವಜರ ಬುದ್ಧಿವಂತಿಕೆಯನ್ನು ಅನಾವರಣಗೊಳಿಸುತ್ತದೆ.
ತಮ್ಮ ವೈಯಕ್ತಿಕ ಜೀವನವನ್ನು ಅನ್ಯರಿಗೆ ಕಾಣಿಸುವ ಅಗತ್ಯವಿಲ್ಲದಾಗ ಸುರಕ್ಷತೆಯ ಹಾಗೂ ಸಂರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಿಂಧೂ ನಾಗರೀಕತೆಯ ಕಾಲದಲ್ಲಿಯೇ ಗೋಡೆಗಳನ್ನು ಕಟ್ಟಿರುವ ಸಾಕ್ಷಿ ಇಂದಿಗೂ ಹರಪ್ಪಾ ಹಾಗೂ ಮೊಹಾಂಜದಾರೋ ರೂಪದಲ್ಲಿ ನಮ್ಮ ಕಣ್ಣ ಮುಂದಿದೆ ಎನ್ನುವುದು, ಮಾನವರಿಗೆ ಗೋಡೆಗಳ ಅಗತ್ಯ ಹಾಗೂ ಅವರುಗಳು ಅನಾದಿಕಾಲದಿಂದಲೂ ಗೋಡೆಗಳಿಗೆ ನೀಡುತ್ತಿದ್ದ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಅರಿಯಲು ಸಹಕಾರಿಯಾಗಿದೆ. ಅಂತೆಯೇ ಕೋಟೆಯ ಗೋಡೆಗಳೂ ಸಹ ಸಾವಿರಾರು ವರ್ಷಗಳೇ ಕಳೆದರೂ, ಕೆಲವು ಅವಶೇಷ ಸ್ಥಿತಿ ತಲುಪಿ ಇಂದಿಗೂ ನೋಡಬಹುದಾದ ಗೋಡೆಗಳು ಎಂಥಹವರಲ್ಲೂ ಭೂಮಿಯ ಮೇಲೆ ಬಾಳಿ, ಆಳಿದ ನಂತರ ಅಳಿದ ಪ್ರತಿಯೊಂದು ಪರಂಪರೆಯನ್ನು ನಮ್ಮ ಕಣ್ಮುಂದೆ ತರುವ ಒಂದು ಅದ್ಭುತವೇ ಸರಿ. ಈಜಿಪ್ಟಿನ ಪೂರ್ವಜರು ನಿರ್ಮಿಸಿರುವ ಪಿರಾಮಿಡ್ಡುಗಳೂ, ಚೈನಾ ಗೋಡೆಗಳೂ ಸಹ ಇದನ್ನು ಸಾಕ್ಷೀಕರಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ಯಾವುದೋ ಕಾಲದಲ್ಲಿ ಕಟ್ಟಿದ ಗೋಡೆಯನ್ನು ಇಂದಿಗೂ ಹೊಡೆದುಹಾಕುವುದೋ ಅಥವಾ ಇನ್ನಷ್ಟು ಬೆಳೆಸುವುದೋ ಸಾಧ್ಯವಾಗದೇ ಯಥಾಸ್ಥಿತಿ ಕಾಪಾಡಿಕೊಂಡು, ಇಂದು ದೇಶ ದೇಶಗಳ ನಡುವೆ ಸ್ವಾಭಿಮಾನ ಹಾಗೂ ಪ್ರತಿಷ್ಠೆಯ ಪ್ರತೀಕವಾಗಿಯೂ ಉಳಿದುಕೊಂಡು ಬಂದಿರುವ ಅನೇಕ ಉದಾಹರಣೆಗಳು ಸಹಾ ಇಲ್ಲದೆ ಇಲ್ಲ. ವೈರಿಗಳು ಗಡಿ ನುಸುಳದಂತೆ ಹಾಗೂ ಒಂದು ದೇಶದಲ್ಲಿ ನಡೆಯುವ ವಿಷಯಗಳನ್ನು ಗುಟ್ಟಾಗಿಡುವ ಉದ್ದೇಶದಿಂದ ಯಾವ ದೇಶವೇ ಗೋಡೆಯನ್ನು ಕಟ್ಟಿದರೂ, ಉಭಯ ದೇಶಗಳಿಗೂ ಗೋಡೆಯಾಚಿನ ಪ್ರದೇಶ “ಹೊರಗೋಡೆ” ಆಗಿರುತ್ತದೆ.
ಇಂದಿಗೂ ನೋಡಲು ಲಭ್ಯವಿದ್ದು, ಗೋಡೆಗಳೇ ಹೇಳುವ ಕಥೆಯನ್ನು ತಿಳಿಯುತ್ತಲೇ, ಪ್ರಸ್ತುತ ನಾಗರೀಕರು ಗೋಡೆಯನ್ನು ಕಟ್ಟುವ ಹಾಗೂ ನಿರ್ವಹಿಸುವ ಅದರಲ್ಲಿಯೂ ಹೊರಗೋಡೆಯ ಬಗ್ಗೆ ತಿಳಿಯಬೇಕಾಗುತ್ತದೆ. ಬಹುತೇಕ ಹೊರ ಪ್ರಪಂಚದಿಂದ ನಮ್ಮನ್ನು ಬೇರ್ಪಡಿಸುವ ಗೋಡೆಗಳು ಕೆಲವರಿಗೆ ಸ್ವಂತದ್ದಾದರೆ ಹಲವರಿಗೆ ಬಾಡಿಗೆ ಅಥವಾ ಭೋಗ್ಯದವು. ಗೋಡೆಗಳನ್ನು ಕೂಡಿಸಿ, ಕೋಣೆಗಳನ್ನು ಬೇರ್ಪಡಿಸಿದ ಮನೆಗೆ ಸೇರಿಕೊಂಡು ಬಾಗಿಲು ಹಾಕಿದರೆ ಗೋಡೆಯಾಚೆ ನಡೆಯಬಹುದಾದ, ನಡೆದುಹೋದ ಹಾಗೂ ನಡೆಯುತ್ತಿರುವ ಎಷ್ಟೋ ವಿಷಯಗಳು ತಮ್ಮ ಗಣನೆಗೆ ಬರುವುದಾಗಲೀ ಅಥವಾ ತಮ್ಮ ಕಲ್ಪನೆಗೆ ಎಟುಕುವುದಾಗಲೀ ಸಾಧ್ಯವೇ ಇರುವುದಿಲ್ಲ.
ಒಬ್ಬ ಕಳ್ಳನು ಕದ್ದ ವಸ್ತುಗಳನ್ನು ತಂದು ಒಂದು ಬಂಗಲೆಯ ಹಿಂಭಾಗದಲ್ಲಿ ಶೇಖರಿಸಿಟ್ಟು, ಗೋಡೆಗೆ ಒಲೆ ನಿರ್ಮಿಸಿ, ಅಡುಗೆ ಮಾಡಿಕೊಂಡು ದಿನ ಕಳೆಯುತ್ತಿದ್ದ ಘಟನೆಯು ಒಂದೊಮ್ಮೆ ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯ ನಾಗರಿಕರ ನಿದ್ದೆ ಕೆಡುವಂತೆ ಮಾಡಿತ್ತು. ಆ ಮಟ್ಟಿಗೆ ನಮ್ಮದೇ ಮನೆಯ ಹೊರಗೋಡೆಯಲ್ಲಿ ನಡೆಯುವ ಹಲವಾರು ವಿಷಯಗಳು ನಮ್ಮ ಗಮನಕ್ಕೆ ಬಂದೇ ಇರುವುದಿಲ್ಲ ಎನ್ನುವುದು ವಿಪರ್ಯಾಸ.
ಮೊದಲೆಲ್ಲಾ ನಮ್ಮ ಹೊರ
ಗೋಡೆಯಲ್ಲಿ ನಡೆಯುವ ಹಲವಾರು ಘಟನೆಗಳು ಬೇರೆಯವರಿಗೆ ಕಾಣಬಹುದಿತ್ತಾಗಲೀ, ನಮಗೆ ತಿಳಿಯಬೇಕಿದ್ದರೆ, ಸ್ವತಃ ನಾವು ಹೊರ ಬಂದು ನೋಡಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನವು ನಮ್ಮದೇ ಗೋಡೆಯಾಚೆ ನಡೆಯುವ ವಿದ್ಯಮಾನಗಳ ಮಾಹಿತಿಯನ್ನು ಮನೆಯೊಳಗೆ ಕುಳಿತು ಯಾರಾದರೂ ಗೋಡೆ ಹತ್ತಿ ಮಹಡಿ ತಲುಪುವುದನ್ನೂ ತಿಳಿದುಕೊಳ್ಳುವಷ್ಟು ಬೆಳೆದಿದೆ.
ಮನೆಯ ಹೊರಗೋಡೆಗೆ ವಿಶೇಷವಾದ ಹೆಸರಿರುವುದಿಲ್ಲವಾಗಿ, ಕಟ್ಟಿಗೆ ಒಟ್ಟಿದ್ದರೆ ಕಟ್ಟಿಗೆಗೋಡೆ, ಹಿತ್ತಲಿಗೆ ತೆರೆದುಕೊಂಡಿದ್ದರೆ ಹಿತ್ತಲಗೋಡೆ, ಬೀದಿಕಡೆಗಿದ್ದರೆ ಬೀದಿಗೋಡೆ, ಅಡಿಗೆಮನೆಯ ಹೊರಗೋಡೆ ಹೀಗೆ ಕರೆಯುವುದು ಸಾಮಾನ್ಯ. ಕಾಂಪೌಂಡಿನ ಹೊರ ಗೋಡೆಯಾದರಂತೂ ನಾವೇ ಕಟ್ಟಿಸಿದ ಗೋಡೆಯನ್ನೇ ಅಕ್ಕಪಕ್ಕದವರ ಮನೆಯವರ ಹೆಸರಿನೊಂದಿಗೆ ಗುರುತಿಸುತ್ತೇವೆ. “ಮಾಚಿ ಮನೆ ಕಂಪೌಂಡಿನ ಒಳಗೆ ಇಲಿ ಸತ್ತುಹೋಗಿದೆ” ಅನ್ನುವುದು. ಅಥವಾ “ಮಂಜು ಮನೆ ಕಂಪೌಂಡಿನಲ್ಲಿ ಮಲ್ಲಿಗೆ ಹೂ ಬಿಟ್ಟಿದೆ” ಎಂದು ಆ ಬದಿ ಯಾರಿದ್ದರೆ ಅವರದೇ ಹೆಸರಿನೊಂದಿಗೆ ಕಂಪೌಂಡಿನ ಹೊರಗೋಡೆಗೆ ನಾಮಕರಣವಾಗುತ್ತದೆ.
ಅಥವಾ ಪಕ್ಕದ ಮನೆಯವರು ಹಣ ಖರ್ಚು ಮಾಡಿ ಕಂಪೌಂಡ್ ಕಟ್ಟಿಸಿದ್ದರೂ ನಮ್ಮನ್ನು ಕುರಿತು “ರೀ ನಿಮ್ಮ ಕಂಪೌಂಡ್ ಒಳಗೆ ನಮ್ಮ ಬಟ್ಟೆ ಬಿದ್ದಿದೆ” ಅನ್ನುವುದೋ ಅಥವಾ “ಪೋಸ್ಟ್ ಮಾಸ್ಟರ್ ಲೆಟರನ್ನ ನಿಮ್ಮ ಕಂಪೌಂಡ್ ಕಡೆ ಹಾಕಿದ್ದಾನೆ” ಎಂದು ಅವರು ಕಟ್ಟಿಸಿದ ಕಂಪೌಂಡಿಗೆ ನಮ್ಮನ್ನು ಒಡೆಯರನ್ನಾಗಿಸುತ್ತಾರೆ. ಹೀಗೆ ಹೊರಗೋಡೆಯು ಒಬ್ಬರಿಂದ ಖರ್ಚುಮಾಡಿಸಿ ಮತ್ತೊಬ್ಬರಿಗೆ ರಕ್ಷಣೆ ಹಾಗೂ ಒಡೆತನವನ್ನು ನೀಡುತ್ತದೆ. ಇದು ಹೊರಗೋಡೆಗಲ್ಲದೆ ಭೂಮಿ ಮೇಲಿನ ಯಾವುದೇ ಮಾನವ ರಚನೆಗೆ ಸಾಧ್ಯವಿರಲಾರದು ಎನ್ನುವುದು ಇಲ್ಲಿ ಪ್ರಸ್ತುತ.
ಸಾಮಾನ್ಯವಾಗಿ ಮನೆ ಕಟ್ಟುವವರು, ತಮ್ಮ ಮನೆಯನ್ನು ಎಲ್ಲರಿಗಿಂತಲೂ ವಿಶೇಷ ಹಾಗೂ ಪ್ರತ್ಯೇಕವಾಗಿ ಕಾಣಿಸುವ ದಿಸೆಯಲ್ಲಿ ಬೀದಿಗೆ ಕಾಣುವ ಹೊರಗೋಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಗರದಲ್ಲಿಯ ಸ್ಥಿತಿವಂತರ ಮನೆಯ ಹೊರಗೋಡೆಗಳು ಮನೆಯಿಂದ ಮನೆಗೆ ಸಾಧ್ಯವಾದಷ್ಟು ವಿಭಿನ್ನ ಅಭಿರುಚಿಯಿಂದ ಕೂಡಿದ್ದು, ತಮ್ಮ ವಿಚಾರಧಾರೆಗೆ ತಕ್ಕಂತೆ ವಿನ್ಯಾಸಗೊಳಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇತ್ತೀಚೆಗೆ ನಗರೇತರ ಪ್ರದೇಶಗಳಲ್ಲಿಯೂ ಹೊರಗೋಡೆಗಳನ್ನು ಅಂದಗಾಣಿಸುವ ಹವ್ಯಾಸ ಬೆಳೆಯುತ್ತಿದೆ. ಹೊರಗೋಡೆಗೆ ಹೆಚ್ಚಿನ ಆಸಕ್ತಿ ತೋರುವ ಮಾಲೀಕರು ತಮ್ಮದೇ ಮನೆಯ ಅಕ್ಕಪಕ್ಕದ ಗೋಡೆಗಳನ್ನು ಚೂರುಪಾರು ಅಲಂಕರಿಸಿದರೆ, ಹಿಂದಿನ ಗೋಡೆಯದಂತೂ ಗೌಣಗಣನೆ ಅಂತೆಯೇ ಅದನ್ನು ಅಂದಗೊಳಿಸುವ ಅಗತ್ಯವೂ ಇರುವುದಿಲ್ಲ. ವಿನ್ಯಾಸಕಾರರ ವಿಶೇಷತೆ ಹಾಗೂ ನಿರಂತರ ಆವಿಷ್ಕಾರದೊಂದಿಗೆ ಅರಳುವ ಮನೆಯ ಮುಂದಿನ ಹೊರಗೋಡೆ ವಿನ್ಯಾಸವನ್ನು ನೋಡಿಯೇ ರಸ್ತೆಯಲ್ಲಿ ಓಡಾಡುವ ಜನರು, ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಹಾಗೂ ಅಭಿರುಚಿಯನ್ನು ಅಳಿಯಬಹುದಾಗಿದೆ. ಇಂತಿರುವ ಹೊರಗೋಡೆಯ ಪುರಾಣವು ಇಲ್ಲಿಗೇ ಮುಗಿಯುವುದಿಲ್ಲ.
ಸಾಮಾನ್ಯವಾಗಿ ಸರಕಾರೀ ಕಟ್ಟಡಗಳು, ಸಮುದಾಯ ಭವನಗಳು, ಸರಕಾರಿ ಸಿಬ್ಬಂದಿ ಕ್ವಾರ್ಟರ್ಸಿನ ಗೋಡೆಗಳಲ್ಲಿ ಮೊದಲೇ ಕಳಪೆ ಕಾಮಗಾರಿಯಿಂದ ಹಲವೆಡೆ ಹೊರಗೋಡೆಗಳಲ್ಲಿ ಬಿರುಕು ಉಂಟಾಗಿದ್ದರೆ, ಅದೇ ಗೋಡೆಯಲ್ಲಿ ಜೇಡರಬಲೆ ಜಾಳುಜಾಳಾಗಿ ನೇತಾಡುವುದನ್ನು ಕಾಣಬಹುದು. ಆಲ, ಗಸಗಸೆ, ಔದಂಬರ, ಅರಳಿ, ಕ್ಯಾಕ್ಟಸ್ ಹಾಗೂ ಮುಂತಾದ ಗಿಡಗಳು ಹುಟ್ಟಿ ಮರವಾಗುವ ಹಂತ ತಲುಪಿದ್ದರೂ ಅದನ್ನು ಕಿತ್ತೆಸೆಯುವ ಗೋಜಿಗೇ ಹೋಗದೇ ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂಬಂತೆ ವರ್ತಿಸಿ, ಸಾರ್ವಜನಿಕರ ಹಣವನ್ನು ಪೋಲು ಮಾಡುವುದರಲ್ಲಿ ಹಲವರ ಉದಾಸೀನ ಭಾವನೆ ಎದ್ದು ಕಾಣುತ್ತದೆ.
ನೌಕರರು ಬಿಟ್ಟಿಯಾಗಿರಲು ಕಟ್ಟಿದ ಕಟ್ಟಡವೆಂದು ಸರ್ಕಾರವೂ, ತಾವು ಕೇವಲ ತಂಗುವವರು ಮಾತ್ರವಾದ್ದರಿಂದ ನಿರ್ವಹಣೆಯ ಉಸ್ತುವಾರಿಯನ್ನು ಸರ್ಕಾರವೇ ನೋಡಿಕೊಳ್ಳಲಿ ಎನ್ನುವ ಧೋರಣೆ ತೋರುವ ನಿವಾಸಿಗಳು, ಹೀಗೆ ಹಲವರ ತಾಕಲಾಟದಲ್ಲಿ ಹೊರ ಗೋಡೆಯಿಂದ ಹಾಳಾಗಳಾರಂಭಿಸಿ ಪೂರ್ತಿ ಕಟ್ಟಡವೇ ಪಾಳು ಬೀಳುವ ಹಂತದಲ್ಲಿರುವ ಅಸಂಖ್ಯಾತ ಕಟ್ಟಡಗಳನ್ನು ನಾವು ನಮ್ಮ ಅಕ್ಕಪಕ್ಕದಲ್ಲಿಯೇ ಕಾಣಬಹುದು. ಸರ್ಕಾರಿ ಕಟ್ಟಡಗಳಲ್ಲಿ ತಾನಾಗಿಯೇ ಗೂಡುಕಟ್ಟಿ ನೆಲೆ ನಿಂತು ಸಂತಾನಾಭಿವೃದ್ಧಿ ಮಾಡಿಕೊಳ್ಳುವ ಹಲವು ಹಕ್ಕಿಗಳು, ಈಗೀಗ ಮಾಲೀಕರು ತಮ್ಮ ಮನೆಯ ಹೊರಗೋಡೆಯಲ್ಲಿ ಹಕ್ಕಿಗಳಿಗಾಗಿಯೇ ನಿರ್ಮಿಸಿರುವ ಗೂಡುಗಳಲ್ಲಿ ಸೇರಿಕೊಂಡು ಚಿಲಿಪಿಲಿಗುಟ್ಟುತ್ತಿವೆ.
*******************************
ಶಾಂತಿವಾಸು