ಯಾರು ಹೊಣೆ ?

ಕಥೆ

ಯಾರು ಹೊಣೆ ?

ಎಂ.ಆರ್.ಅನಸೂಯ

Pin on Vivian

ಅಮ್ಮಾ ,ಅಮ್ಮಾ’ ಎಂದು ಚಂದ್ರಮ್ಮ ಬಾಗಿಲು ತಟ್ಟುತ್ತಾ ಕೂಗಿದಂತಾಯಿತು . ಟಿ.ವಿ ನೋಡುತ್ತ ಕೂತಿದ್ದ ಸುಮಿತ್ರ  ಗಡಿಯಾರದ ಕಡೆ ನೋಡಿದಳು. ಆಗಲೇ ರಾತ್ರಿ ಒಂಭತ್ತು 

ಗಂಟೆಯಾಗಿತ್ತು. ಈಗ್ಯಾಕೆ ಬಂದಳಪ್ಪಾ ಎಂದುಕೊಳ್ಳುತ್ತಾ ಸುಮಿತ್ರ ಬಾಗಿಲು ತೆಗೆದು “ಏನು ಚಂದ್ರಮ್ಮ ಇಷ್ಟೊತ್ನಲ್ಲಿ ಯಾಕೆ  ಬಂದೆ’ ಎಂದು ಬಾಗಿಲತ್ರನೇ ನಿಂತು ಕೇಳಿದಳು. “ಅಮ್ಮಾ, ನಡಿರಮ್ಮ ಒಳಗೆ ಸ್ವಲ್ಪ ಮಾತಾಡ್ಬೇಕು”ಎನ್ನುತ್ತ   ಚಂದ್ರಮ್ಮ ಒಳಗೆ ಬಂದು ಕುಳಿತಳು. ಸುಮಿತ್ರ ಸೋಫದ ಮೇಲೆ ಕುಳಿತು”ಏನ್ಸಮಾಚಾರ ಚಂದ್ರಮ್ಮ” ಎಂದರು “ನೋಡ್ರಮ್ಮ ನಮ್ಮ ಹುಡುಗಿ ಗೀತ ಎಂಥ ಹಲ್ಕಾ ಕೆಲಸ  ಮಾಡ್ಕಂಡು ಕುಂತವಳೆ. ಮೂರೂ ಬಿಟ್ಟವಳು ” ಎಂದು ಅಳಲು ಶುರು ಮಾಡಿದಾಗ “ಅದೇನು ಸರ್ಯಾಗಿ ಹೇಳು

ಚಂದ್ರಮ್ಮ” “ಏನೇಳನ್ರಮ್ಮ ನಂ ಹುಡುಗಿ ಗೀತ ಬಸ್ರಾಗಿ ಕುಂತವಳೆ.  ಸರೀಕರೆದ್ರುಗೆ ತಲೆಯೆತ್ಕಂಡು ಓಡಾಡ್ದಂಗೆ ಮಾಡ್ಬಿಟ್ಲು. ಎಲ್ಲನ ಹೋಗಿ ಸತ್ರೆ ಸಾಕು ಅನ್ಸು ಬಿಟ್ಟೈತೆ ಏನ್ಮಾಡದೊ ಒಂದು ಗೊತ್ತಾಗಕಿಲ್ಲ”ಎಂದು ಅಳುತ್ತಿದ್ದಳು ಆಗ ಸುಮಿತ್ರಾ “ನಿನ್ನದೇ ತಪ್ಪುಬೆಂಗಳೂರಿಗೆ  ನೀನ್ಯಾಕೆ ಕಳಿಸ್ದೆ .ಇಲ್ಲೇ ಮನೆ ಕೆಲಸ ಸಿಕ್ತಿರಲಿಲ್ವೆ.ಯಾರಾದ್ರೂನು  ವಯಸ್ಸಿಗೆ ಬಂದಿರ ಹುಡುಗಿನ ಬೇರೆ ಊರಿಗೆ ಕಳಿಸ್ತಾರ ಈಗ ಅತ್ರೆ ಏನು ಬಂತು”ಎಂದು ಒರಟಾಗಿ ಹೇಳಿದಳು.  “ಇಲ್ಲೆ ಇರಂಗಿದ್ರೆ ನಾನ್ಯಾಕ್ರಮ್ಮ ಬೆಂಗಳೂರಿಗೆ ಕಳಿಸ್ತಿದ್ದೆ”

 “ಇಲ್ಲಿರಕಾಗ್ದೆ ಇರೋ ಅಂಥಾದ್ದು ಏನಾಗಿತ್ತು” “ಏನು ಹೇಳನ್ರಮ್ಮ.ನನ್ನ ಹಣೆಬರಾನೇ  ಸರ್ಯಾಗಿಲ್ಲ. ನನ್ನ ಗಂಡ ಕುಡ್ದೂ ಕುಡ್ದೂ ಸತ್ತ. ಆ ನನ್ನ ಎರಡ್ನೆ ಮಗಾನು  ಅವರಪ್ಪನಂಗೆ ಕುಡಿಯ ಚಟಕ್ಕೆ ಬಿದ್ದು ಹಾಳಾದ.ದಿನಾ

ಕುಡ್ಕಂಡು ಬಂದು ಆ ಹುಡುಗೀನ ಬಾಯಿಗೆ ಬಂದಂಗೆ ಬೈದು ಹೊಡಿಯಕ್ಕೆ ಹೋಗ್ತಿದ್ದ. ಈ ಹುಡುಗಿ ಹೆದರ್ಕಂಡು ಪಕ್ಕದ ಮನೆಗೆ ಓಡೋಗದು. ದಿನಾ ಈ ರಗಳೆ ನೋಡಕ್ಕೆ ಆಗ್ತಿರಲಿಲ್ಲ. ಬೆಂಗ್ಳೂರನಗಿರ ನನ್ನ ಎರಡ್ನೆ ಮಗಳು ಮನೆ

ಕೆಲ್ಸ ಒಂದು ನೋಡಿದೀನಿ ಕಳ್ಸು ಅಂದ್ಲು. ಅದಕ್ಕೆ ಕಳಿಸ್ದೆ

ಕಣ್ರಮ್ಮ.ಇನ್ನೇನು ಮಾಡ್ಲಿ ನೀವೇ ಹೇಳ್ರಮ್ಮ” ಎಂದಾಗ

ಸುಮಿತ್ರಾಳಲ್ಲೂ ಉತ್ತರವಿರಲಿಲ್ಲ. ನಮ್ಮ ಘನ ಸರ್ಕಾರ

ಘೋಷಿಸಿರುವ ಭೇಟಿ ಬಚಾವೋ ಯೋಜನೆ ನೆನಪಿಗೆ

ಬಂತು. ಅ‌ಸಹಾಯಕಳಾದ ಚಂದ್ರಮ್ಮನಿಗೆ ಬೇರೆ ದಾರಿ

ಇರಲಿಲ್ಲ ಅನಿಸಿತು. ಆಗ ಸುಮಿತ್ರಾಳು ಸಹಾ ಮೌನಕ್ಕೆ

ಶರಣಾದಳು.ಸ್ವಲ್ಪ ಹೊತ್ತಿನ ನಂತರ ಚಂದ್ರಮ್ಮ ಮೆಲ್ಲಗೆ

“ನನ್ನ ದೊಡ್ಮಗಳು ಡಾಕ್ಟರತ್ರ ಕರ್ಕೊಂಡು ಹೋಗ್ತವಳೆ.

ಒಂದೆರಡು ಸಾವ್ರ ಕೊಡ್ರಮ್ಮ. ನನ್ನ ಮಾನ ಮರ್ಯಾದೆ ಹೋಗುತ್ತೆ. ಈಗ್ಲೆ ಕರ್ಕೊಂಡು ಹೋಗ್ಬೇಕು” ಎಂದು ಹೇಳಿ ಅತ್ತಳು.ಸುಮಿತ್ರ ದುಡ್ಡು ಕೊಟ್ಟ ತಕ್ಷಣವೇ “ಬರ್ತಿನಮ್ಮ

ನಿಮ್ಮ ಉಪಕಾರ ಮರೆಯಂಗಿಲ್ಲ” ಎನ್ನುತ್ತಾ ಹೊರಟಳು

ಚಂದ್ರಮ್ಮ ಸುಮಿತ್ರಾಳ ಮನೆಕೆಲಸಕ್ಕೆ ಸೇರಿ ಹದಿನೈದು

ವರ್ಷಗಳ ಮೇಲಾಗಿತ್ತು.ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ

ಮಾಡುತ್ತಿದ್ದ ಚಂದ್ರಮ್ಮ ಸುಮಿತ್ರನ ಮನಸ್ಸನ್ನುಗೆದ್ದಿದ್ದಳು

ಯಾವ ಕೆಲಸವನ್ನು ಹೇಳಿದರೂ ಇಲ್ಲ ಎನ್ನದೆ ಮಾಡುವ

ಚಂದ್ರಮ್ಮನ ಮಾತು ಕಡಿಮೆ.ಸುಮಿತ್ರಳು ಸಹ ಅವಳೆಲ್ಲ

ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಳು. ಇವರ ಆಪ್ತತೆಯನ್ನು

ಕಂಡ ಸುಮಿತ್ರನ ಮಗಳು “ನಿನ್ನ ಆಪ್ತ ಸಖಿ ಹೇಗಿದ್ದಾಳೆ”

ಎಂದು ತಮಾಷೆ ಮಾಡುತ್ತಾಳೆ. ಇಂತಹ ಚಂದ್ರಮ್ಮನಿಗೆ

ಐದು ಜನ ಮಕ್ಕಳಿದ್ದರು. ಮೂರುಹೆಣ್ಣು ಎರಡು ಗಂಡು.

ಗಂಡ ಕುಡಿತದ ಚಟಕ್ಕೆ ಬಿದ್ದು ಆರೋಗ್ಯ ಕೆಡಿಸಿಕೊಂಡು

ತೀರಿಕೊಂಡಿದ್ದ. ಹಿರಿಮಗ ಮದುವೆ ಆದ ಮೇಲೆ ಬೇರೆ

ಮನೆ ಮಾಡಿದ್ದ. ದೊಡ್ಡ ಮಗಳನ್ನು ತಮ್ಮನಿಗೆ ಕೊಟ್ಟು

ಮದುವೆ ಮಾಡಿದ್ದಳು. ಬಸ್ ಅಪಘಾತವೊಂದರಲ್ಲಿ

ತಮ್ಮ ಸತ್ತ ಮೇಲೆ ಮಗಳು ಪುಟ್ಟ ಹೆಣ್ಣುಮಗುವನ್ನು

ಕರೆದುಕೊಂಡು ತವರು ಮನೆ ಸೇರಿದ್ದಳು. ಕೂಲಿ ಮಾಡಿ

ದುಡಿದು ತರುತ್ತಿದ್ದರಿಂದ ಯಾರಿಗೂ ಭಾರವಾಗಿರಲಿಲ್ಲ.

ಚಂದ್ರಮ್ಮನ ಎರಡನೆ ಮಗನೂ ಸಹಾ ಅವರಪ್ಪನಂತೆ

ಕುಡಿತಕ್ಕೆ ದಾಸನಾಗಿದ್ದ. ಅವನು ದುಡಿದದ್ದೆಲ್ಲ ಅವನ

ಕುಡಿತಕ್ಕೇ ಸರಿ ಹೋಗುತ್ತಿತ್ತು. ಎರಡನೆ ಮಗಳು ಮತ್ತು ಅವಳ ಗಂಡ ಇಬ್ಬರೂ ಬೆಂಗಳೂರು ಸೇರಿದ್ದರು. ಇನ್ನು ಮೂರನೆ ಮಗಳು ಗೀತ ಹತ್ತನೆ ತರಗತಿಯ ತನಕ ಓದಿ

ಫೇಲಾಗಿ ಶಾಲೆ ಬಿಟ್ಟಿದ್ದಳು. ಚಂದ್ರಮ್ಮಮೂರು ಮನೆಗಳ ಮನೆ ಕೆಲಸ ಮಾಡಿದರೆ, ಗೀತ ಎಲ್ಲೂ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು ಅಡುಗೆ ಮಾಡ್ಕೊಂಡು ಅಕ್ಕನ ಮಗಳನ್ನ  ನೋಡಿಕೊಂಡಿದ್ದಳು.ಒಟ್ಟಾರೆ ಮನೆಯ ಹೆಣ್ಣುಮಕ್ಕಳೇ ಸಂಸಾರದ ಆಧಾರದ ಸ್ತಂಭವಾಗಿದ್ದರು. ಚಂದ್ರಮ್ಮನಿಗೆ ಹುಷಾರಿಲ್ಲದಾಗ ಮನೆ ಕೆಲಸ ಮಾಡಿ ಕೊಡುತ್ತಿದ್ದ ಗೀತ ಲಕ್ಷಣವಾಗಿದ್ದಳು.ಕುಡುಕನಾಗಿದ್ದ ಎರಡನೆ ಅಣ್ಣನ ಕಾಟ ತಡೆಯಲಾಗದೆ ಗೀತ ಬೆಂಗಳೂರಿನಲ್ಲಿದ್ದ ಅಕ್ಕನ ಮನೆಗೆ  ಬಂದು ಅವಳ ಮನೆ ಹತ್ತಿರವೇ ಇದ್ದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಯಲ್ಲಿದ್ದ ಮಗುವನ್ನು ನೋಡಿ ಕೊಳ್ಳ ಬೇಕಾಗಿತ್ತು. ಮನೆಯಲ್ಲಿದ್ದಂಥ ಮಗುವಿನ ಅಜ್ಜಿಗೆ ಸಹಾಯಕಿಯಾಗಿ ಇರಬೇಕಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಹೋದರೆ ಸಂಜೆ ಎಂಟು ಗಂಟೆಗೆ ವಾಪಸಾಗುತ್ತಿದ್ದಳು ಊಟ ತಿಂಡಿ ಎಲ್ಲಾ ಅಲ್ಲೇ ಆಗುತ್ತಿದ್ದರಿಂದ ಅಕ್ಕನಿಗೂ ಸಹ ಭಾರವಾಗಿರಲಿಲ್ಲ. ಕೈಗೆ ನಾಲ್ಕು ಸಾವಿರ ಸಿಗುತ್ತಿತ್ತು. ಪ್ರತಿ ಭಾನುವಾರ ರಜೆ ಸಿಗುತ್ತಿತ್ತು. ಮನೆಯಲ್ಲಿನ ಇತರ ಕೆಲಸಗಳನ್ನು ಬೇರೆಯವರು ಮಾಡಿ ಕೊಡುತ್ತಿದ್ದರಿಂದ ಮಗು ನೋಡಿಕೊಳ್ಳುವ ಕೆಲಸ ಅಷ್ಟೇ. ಇಷ್ಟೇ ಆಗಿದ್ದರೆ ಚಂದ್ರಮ್ಮ ಇಷ್ಟೊತ್ನಲ್ಲಿ ಸುಮಿತ್ರನ ಮನೆಗೆ  ಬಂದು ಹೀಗೆ ಗೋಳಾಡುವ ಪ್ರಮೇಯವೇ ಇರುತ್ತಿರಲಿಲ್ಲ.ಗೀತಳ ಅಕ್ಕ ಗಾರ್ಮೆಂಟ್ ಕೆಲ್ಸಕ್ಕೆ ಹೋದ್ರೆ ಅವಳ ಗಂಡ ಹೋಟೆಲ್ ಕೆಲ್ಸಕ್ಕೆ ಹೋಗುತ್ತಿದ್ದ. ಅವನ ಜೊತೆ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು ಅವನೊಡನೆ ಗೀತಳ ಸ್ನೇಹವು ಬೆಳೆದು ಅವರಿಬ್ಬರೂ  ಪ್ರೇಮಿಗಳಾಗುವ ಹಂತಕ್ಕೆ ಬಂದಿತ್ತು.ಅವಳ ಅಕ್ಕನಿಗೆ  ನಾವಿಬ್ಬರೂ ಮದುವೆಯಾಗುತ್ತೇವೆ ಎಂದು ಹೇಳಿದ್ದಳು  ಅವಳ ಅಕ್ಕ ಸ್ವಲ್ಪ ಸಲಿಗೆ ಬಿಟ್ಟಿದ್ದೇ ಈಗ ತಪ್ಪಾಗಿತ್ತು. ಪ್ರತಿ ಭಾನುವಾರ ಅವನ ಜತೆ ಸಿನಿಮಾ ಹೋಟೆಲ್ ಗೆ ಹೋಗಿ ಬರುತ್ತಿದ್ದಳು. ಅವಳ ಅಕ್ಕನ ಕಣ್ಣಿಗೆ ಗೀತಳ ಹೊಟ್ಟೆಯು ಸ್ವಲ್ಪ ದಪ್ಪಗಾದಂತೆ ಎನಿಸಿ ಅನುಮಾನದಿಂದ ಕೇಳಿದಾಗ ಗೀತ ನಿಜವನ್ನು ಬಾಯ್ಬಿಟ್ಟಳು.”ಏನೇ ಇದೆಲ್ಲಾ ಮದ್ವೆಗೆ

ಮುಂಚೆನೆ” ಎಂದು ಕೇಳಿದರೆ “ನಾವಿಬ್ರು, ದೇವಸ್ಥಾನದಗೆ  ಮದ್ವೆ ಆಗಿದೀವಿ.”ಎಂದು ಹೇಳಿ ತೆಗೆದಿಟ್ಟಿದ್ದ ಕರಿಮಣಿ ಸರವನ್ನು ಹಾಕಿಕೊಂಡಳು.ಇದನ್ನು ಕೇಳಿದ ಅವಳಕ್ಕನ ಗಂಡ ಸಿಟ್ಟಾಗಿ “ನೀನು ಇಲ್ಲಿರಬೇಡ ಮೊದ್ಲು ಊರಿಗೆ ಹೊರಡು” ಎಂದು ಕೂಗಾಡಿದನು ಮಾರನೆ ದಿನವೇ ಅವಳ ಅಕ್ಕ ಗೀತ ಕೆಲಸ ಮಾಡುತ್ತಿದ್ದ ಮನೆಗೆ ಅವಳ  ಜೊತೆಗೆ ಹೋಗಿ ಅವರಲ್ಲೇ ಬಿಟ್ಟಿದ್ದ ಸಂಬಳದ ದುಡ್ಡು ಸುಮಾರು ನಲ್ವತ್ತು ಸಾವಿರದಷ್ಟಿದ್ದ ದುಡ್ಡು ಕೇಳಿ ತರಲು  ಹೋದಾಗ ಗೊತ್ತಾಯ್ತು ಆಗಲೇ ಐದು ಸಾವಿರವನ್ನು ಗೀತ  ಖರ್ಚು ಮಾಡಿದ್ದಳು. ಸ್ವಲ್ಪ ದಿನ ಊರಿಗೆ ಹೋಗಿ ಬರ್ತಳೆ. ನಮ್ಮಮ್ಮಂಗೆ ಹುಷಾರಿಲ್ಲ ಎಂದು ಮನೆಕೆಲಸದ ಯಜಮಾನಿಗೆ ಸುಳ್ಳು ಹೇಳಿ ಇಬ್ರು ಬಂದರು. ಗಂಡನ ಮಾತಿನಂತೆ ಅವಳ ಅಕ್ಕನೂ ಗೀತನ ಜತೆಗೆ ಊರಿಗೆ ಬಂದಿದ್ದಳು. ಚಂದ್ರಮ್ಮನಿಗೆ ಇರೋ ವಿಷ್ಯಾನೆಲ್ಲಾ ತಿಳಿಸಿ ಗಾರ್ಮೆಂಟ್ನವರು ರಜಾ ಕೊಡಲ್ಲ ಎಂದು ಹೇಳಿ ಹೊರಟೆ

ಬಿಟ್ಟಿದ್ದಳು. ಬೆಳಿಗ್ಗೆ ಮನೆ ಕೆಲ್ಸಕ್ಕೆ ಬಂದ ಚಂದ್ರಮ್ಮ ಏನೂ ಮಾತಾಡದೆ ಮೌನವಾಗಿದ್ದಳು. ಸುಮಿತ್ರಾ ಟೀ ಕೊಟ್ಟು ಕೇಳಿದ್ರು”ಏನಂದ್ರು ಡಾಕ್ಟರ್”.

ಅಬಾಷನ್ ಮಾಡಕ್ಕಾಗಲ್ಲವಂತೆ. ಆಗ್ಲೆ ನಾಕ್ ತಿಂಗಳು ತುಂಬೈತಂತೆ “ಎಂದಳು ಸೋತು ಸುಣ್ಣವಾದ ಧ್ವನಿಯಲ್ಲಿ  ನಾಲ್ಕು ತಿಂಗಳಾದ್ರೂ ನಿಮಗೆ ಅಷ್ಟೂ ಗೊತ್ತಾಗಲಿಲ್ವೆ ” ಸ್ವಲ್ಪ ಒರಟಾಗೇ ಕೇಳಿದಳು ಸುಮಿತ್ರ.”ಆಗೆಲ್ಲ ಎನೇನೊ ಹೇಳ್ಕಂಡು ಅವ್ರ ಅಕ್ಕನ್ನ ಏಮಾರಿಸಿ ಬಿಟ್ಟವಳೆ.ಮೂರೂ ಬಿಟ್ಟವಳು ಅವರಕ್ಕನಿಗೆ ಗೊತ್ತಾಗಿರದೆ ಈಗ. ಗೊತ್ತಾದ ತಕ್ಷಣವೇ ಇಲ್ಲಿಗೆ ಕರ್ಕೊಂಡು ಬಂದವಳೆ” ಅದರ ಬಗ್ಗೆ ಮಾತಾಡಕ್ಕೆ ಅವಳಿಗೆ ಇಷ್ಟವಿಲ್ಲವೆಂದರಿತ ಸುಮಿತ್ರಾನೂ ಸುಮ್ಮನಾದಳು. ಹೋಗುವಾಗ “ಒಂದು ವಾರ ಕೆಲ್ಸಕ್ಕೆ ಬರಲ್ಲಮ್ಮ.ನನ್ನ ದೊಡ್ಡ ಮಗಳ್ನ ಕಳಿಸ್ತಿನಿ”ಎಂದು ಹೇಳಿ ಹೋದಳು. ಮಧ್ಯಾಹ್ನ ಒಂದು ಗಂಟೆಗೆ ಚಂದ್ರಮ್ಮನು ಅವಳ ಎರಡನೆ ಮಗಳು ಬಂದರು.ಅವಳ ಮಗಳು

ತಾನು ತಂದಿದ್ದ ಲಗೇಜ್ ಬ್ಯಾಗಿನಿಂದ ಒಂದು ಕೆಂಪು

ಪ್ಲಾಸ್ಟಿಕ್ ಕವರ್ ತೆಗೆದು ಅವರಮ್ಮನ ಕೈಗೆ ಕೊಟ್ಟಳು ಚಂದ್ರಮ್ಮಅದನ್ನು ಸುಮಿತ್ರಾ ಕಡೆ ಕೊಡುತ್ತಾ” ಇದ್ರಗೆ ಮುವತ್ತು ಸಾವಿರ ಐತ್ರಮ್ಮ.ನಾನು ಕೇಳಗಂಟ ಇದು

ನಿಮ್ಮತ್ರನೇ ಇರಲಿ.ನನ್ ಮಗನ ಕಣ್ಣೀಗೇನಾರ ಬಿದ್ರೆ ಎಗರಿಸಬಿಡ್ತನೆ”ಎಂದಳು. ಆಗ ಸುಮಿತ್ರಾ “ಬೇಡಬೇಡ

ಚಂದ್ರಮ್ಮ .ಬ್ಯಾಂಕ್ನಲ್ಲಿಡು”ಎಂದಾಗ ಅವಳ ಮಗಳು

“ನಮ್ಮಮ್ಮನ ಹೆಸರಿನಗ ಐತಂತ ಅವ್ನಿಗೆ ಗೊತ್ತಾದರೆ

ನಮ್ಮಮ್ಮನ ಪ್ರಾಣ ಹಿಂಡಿ ತಗಂಡು ಬಿಡ್ತನೆ. ಅದಕ್ಕೆ ಒಂದು ಹದಿನೈದು ದಿನ ಕಳೆದ ಮೇಲೆ ಗೀತನ ಅಕೌಂಟ್ ಗೆ ಹಾಕ್ಕಂತಳೆ ಅಲ್ಲಿತನಕ ನಿಮ್ಮತ್ರನೆ ಇರಲಿ” ಎಂದಾಗ

ಸುಮಿತ್ರಾ ದುಡ್ಡನ್ನು ಎಣಿಸಿ ಕೊಂಡು “ಹದಿನೈದು ದಿನ ಆದ ಮೇಲೆ ತಗೊಂಡು ಹೋಗಿ ಬ್ಯಾಂಕಲ್ಲಿ ಇಡಬೇಕು”

ಎಂದು ತಾಕೀತು ಮಾಡಿದರು.ನಂತರ ನೆನ್ನೆ ರಾತ್ರಿ ತಾನೆ

ತಗೊಂಡಿದ್ದ ಎರಡು ಸಾವಿರ ವಾಪಸ್ ಕೊಟ್ಟರು.ಒಂದು

ವಾರ ಕಳೆದ ಮೇಲೆ ಚಂದ್ರಮ್ಮ ಬಂದಳು. ನೋಡಿದರೆ ಅದೇ ಚಿಂತೆಯಲ್ಲಿ ಸೊರಗಿದಾಳೆ ಎನಿಸಿತು. ಕೆಲಸವೆಲ್ಲ ಮುಗಿಸಿದ ಮೇಲೆ ಸುಮಿತ್ರಾ”ಏನು ಆ ಹುಡುಗನ್ನ ಸುಮ್ನೆ ಬಿಟ್ಬಿಟ್ರಾ”ಎಂದು ಕೇಳಿದಳು.”ಅದೆಂಗರಮ್ಮ ಸುಮ್ತಿರಕಾಗುತ್ತೆ. ತಂಗಿ ಗಂಡ,ಚಂದ್ರಮ್ಮನ ಮಗಮತ್ತು ಅಳಿಯ ಎಲ್ಲ ಹೋಗಿ ಜೋರು ಮಾಡಿದರಂತೆ.”ಆಗ ನಾವಿಬ್ರೂ ಒಪ್ಪಿನೇ ಮದ್ವೆ ಆಗಿರೋದು.ದೇವಸ್ಥಾನದಲ್ಲಿ ಮದ್ವೆ ಮಾಡ್ಕಂಡಿದೀವಿ.ಈಗಲೇ ಮನೆ ಮಾಡಕ್ಕೆ ನನ್ನತ್ರ ದುಡ್ಡಿಲ್ಲ. ವರ್ಷ ಕಳೆದ್ಮೇಲೆ ನಾನೇ ಬಂದು ಕರ್ಕೊಂಡು ಹೋಗ್ತೀನಿ. ಈಗ ನನ್ನ ಹತ್ರ ಇರೋದು ಹತ್ತು ಸಾವಿರ ಅಷ್ಟೆ”ಎಂದು ಹೇಳಿ ದುಡ್ಡು ಕೊಟ್ಟು ಕಳಿಸಿದ್ದ. ನಮ್ಮ

ಹುಡುಗಿ ಹಳ್ಳಕ್ಕೆ ಬಿದ್ದೈತೆ.ಇಂಥ ಪರಿಸ್ಥಿತಿಯಾಗೆ ಇನ್ನೇನು ಮಾಡಾದು ಅಂತ ಬಾಯ್ಮುಚ್ಚಿಕೊಂಡು ಬಂದವ್ರೆ.ಅವಳ ಹಣೆಬರನ ನಾವು ತಿದ್ದಕ್ಕಾಗುತ್ತೇನು. ಮಾಡಿದ್ದುಣ್ಣೋ ಮಹರಾಯ. ಉಪ್ಪುತಿಂದ ಮ್ಯಾಲೆ ನೀರು ಕುಡಿಬೇಕು ಚಂದ್ರಮ್ಮನ ತಂಗಿ ಗಂಡ ಬಂದು ಚಂದ್ರಮ್ಮನ ಎರಡ್ನೆ ಮಗನಿಗೆ “ಆ ಹುಡುಗಿ ಸುದ್ದಿಗೆ ಹೋಗ್ಬೇಡಪ್ಪ ಹುಷಾರ್ ಪ್ರಾಣಗೀಣ ಕಳ್ಕೊಂಡ್ರೆ ಏನ್ಮಾಡಾದು.ಆಗಬಾರದಾಗಿತ್ತು ಆಗೋಗೈತೆ. ಅವಳ ಹಣೆಬರ ಇದ್ದಂಗಾಗುತ್ತೆ. ನಮ್ಮ ಕೈ ಮೀರೈತೆ”ಅಂತ ಹೇಳಿ ಹೋದ. ನಮ್ಮ ಅಕ್ಕಪಕ್ಕದ ಮನೆ ಜನಗಳಿಗೆಲ್ಲ ಗೊತ್ತಾಗಿ ಬಿಟ್ಟೈತೆ. ಆಡ್ಕಂಡು ನಗೋವ್ರ ಮುಂದೆನೇ ಎಡವಿ ಬಿದ್ದಂಗಾಯ್ತು. ಜನಕ್ಕೆ ಆಡ್ಕಳ್ಳ ಕತೆ ಆಗೋಯ್ತು ನಮ್ಮನೆ ಬದುಕು.ನೆಂಟರೆಲ್ಲ ಆಡಿಕ್ಯಂಡು ನಗ್ತಾವರೆ.ನಮ್ಮತ್ರಯಾರೂ ಮಾತಾಡಲ್ಲ.ಎಲ್ಲಾದ್ರು ತಲೆ ಮರೆಸ್ಕಂಡು ಹೋಗಿ ನೇಣಾಕ್ಕಂಡು ಸಾಯಂಗಾಗೈತೆ ನಾನ್ ತಲೆಎತ್ಕಂಡ್  ಒಡಾಡಕ್ಕಾಗದಂಗೆ ಮಾಡ್ಬಿಟ್ಟಳು” ಅಳುತ್ತಾ ಕಣ್ಣೀರು ಹಾಕಿದಳು.ಮತ್ತೆ ಮತ್ತೆ ಅದೇ ವಿಶ್ಯಾ ಕೆದಕಿ ಕೇಳುತ್ತಾ ಬೇಜಾರು ಮಾಡೋದು ಬೇಡವೆಂದು  ಸುಮಿತ್ರಾ ಏನೂ ಕೇಳಲಿಕ್ಕೆ ಹೋಗಲಿಲ್ಲ. ಒಂದಿಪ್ಪತ್ತು

ದಿನಗಳಾಗಿರಬಹುದು. ಒಂದು ದಿನ “ನಮ್ಮ ದೊಡ್ಮಗಳು  ನೆನ್ನೆ ಡಾಕ್ಟ್ರತ್ರಕ್ಕೆ ಗೀತನ್ನ  ಕರ್ಕೊಂಡು ಹೋಗಿದ್ದಳು. ಅವಳಿಗೆ ರಕ್ತ ಕಡಿಮೆ ಐತಂತ ಹೇಳವ್ರೆ”ಎಂದಳು. ಈಗ ಮಗಳ ಬಗ್ಗೆ ಸಿಟ್ಟಿಗಿಂತ ಮರುಕವೇ ಎದ್ದು ಕಾಣುತ್ತಿತ್ತು. ಎಷ್ಟೇ ಆಗಲಿ ಹೆತ್ತ ತಾಯಿ ಅಲ್ವೆ ! ಆ ಕ್ಷಣ ಚಂದ್ರಮ್ಮನ್ನ  ನೋಡಿದ ಸುಮಿತ್ರಳಿಗೆ ಅಯ್ಯೋ ಅನಿಸಿತು.ಆ ಕ್ಷಣದಲ್ಲಿ ಸುಮಿತ್ರಳಿಗೆ  ಟಿ.ವಿ.ನಲ್ಲಿ ನೋಡಿ ಕೇಳಿದ ಮರ್ಯಾದಾ ಹತ್ಯೆಗಳು ನೆನಪಿಗೆ ಬಂತು. ಚಂದ್ರಮ್ಮನ ತಾಯ್ತನವೇ ಗೆದ್ದಿತ್ತು.ತಂದೆತಾಯಿಗಳು ಹೆತ್ತ ಮಕ್ಕಳನ್ನೇ ಕೊಲ್ಲುವಷ್ಟು  ಕಟುಕರಾಗಲು ಹೇಗೆ ಸಾದ್ಯ ? ಮಕ್ಕಳ ಪ್ರೇಮ ಪ್ರಕರಣ  ತಮ್ಮ ಕೈ ಮೀರಿ ಬೆಳೆದಾಗ ಅದಕ್ಕೆ ಬೇರೆ ರೀತಿಯಲ್ಲಿಯೇ ಪರಿಹಾರಗಳನ್ನು ಹುಡುಕಬೇಕು. ಅದನ್ನು ಬಿಟ್ಟು ತಮ್ಮ ಹೆತ್ತ ಮಕ್ಕಳನ್ನೆ ಕೊಲ್ಲುವ ಮಟ್ಟಕ್ಕಿಳಿಯಬಾರದು.ಏನೂ ಮಾಡಲಾಗದಿದ್ದರೆ ಕಡೆ ಪಕ್ಷ ಸುಮ್ಮನೆ ಇದ್ದು ಬಿಡಬೇಕು ಚಂದ್ರಮ್ಮನ ಅಸಹಾಯಕ ಪರಿಸ್ಥಿತಿಗೆ ಯಾವ ರೀತಿಯ ಸಮಾಧಾನ  ಹೇಳಬೇಕೆಂದು ಸುಮಿತ್ರಳಿಗೆ ತೋಚಲಿಲ್ಲ. ಚಂದ್ರಮ್ಮನ ಸಂಸಾರ ನೆರೆಹೊರೆಯವರ ನಗು ಪಾಟ್ಲಿಗೆ  ಗುರಿಯಾಗಿ ಅವಳ ನೆಮ್ಮದಿಯನ್ನು ಕೆಡಿಸಿತ್ತು. ಅದೂ ಸಾಲದೆಂಬಂತೆ ಡಾಕ್ಟರ್ ಗೀತಳಿಗೆ ರಕ್ತದ ಕೊರತೆಯಿದೆ

ಹೆರಿಗೆ ಕಷ್ಟವಾಗಬಹುದೆಂದು ಹೇಳಿದ್ದರಿಂದ ಮತ್ತಷ್ಟು

ಕಂಗಾಲಾಗಿದ್ದಳು. ಸುಮಿತ್ರಳು ಸಹಾ ತಾವು ಮನೆಯಲ್ಲಿ ಮಾಡಿದ ವಿಶೇಷ ತಿಂಡಿ ತಿನಿಸುಗಳನ್ನು ಗೀತಳಿಗೋಸ್ಕರ ಕಳಿಸುವಳು. ಆ ದಿನ ಚಂದ್ರಮ್ಮ “ಅಮ್ಮ ಗೀತನ್ನ ಇವತ್ತು  ಆಸ್ಪತ್ರೆಗೆ ಸೇರಿಸ್ತೀನಿ ಡಾಕ್ಟೃಡೇಟ್ ಕೊಟ್ಟವ್ರೆ.ಇನ್ನೊಂದು ತಿಂಗಳು ಕೆಲ್ಸಕ್ಕೆ ಬರಲ್ಲ. ಎಲ್ಲನೂ ಒಳ್ಳೇದಾಗಲಿ ಅಂತ ದೇವ್ರ ಪೂಜೆ ಮಾಡ್ಬೇಕಾದ್ರೆ ಕೇಳ್ಕಳ್ರಮ್ಮ”ಎಂದು ಹೇಳಿ ಹೊರಟಳು. ದೇವರು ನಾನು ಕೇಳಿದ್ದಕ್ಕಲ್ಲ ಅಸ್ತು ಎಂದು

ಬಿಡುವನೇನೋ ಎಂಬಂತೆ ಅವಳು ಹೇಳುತ್ತಿದ್ದ ರೀತಿಯ ನೋಡಿ ಸುಮಿತ್ರಾಳಿಗೆ ನಗು ಬಂತು.ಮಾರನೆ ದಿನ ಬೆಳಿಗ್ಗೆ

ಎಂಟು ಗಂಟೆಗೆ ಬಂದು “ರಾತ್ರಿ ಎರಡು ಗಂಟೆಗೆಲ್ಲ ಹೆರಿಗೆ

ಆಯ್ತು .ಗಂಡ್ ಮಗ ಕಣ್ರಮ್ಮ. ಏನೋ ಆ ದೇವ್ರ ದಯೆ

ಎಲ್ಲಾ ಸರಾಗವಾಗಿ ಆಯ್ತರಮ್ಮ” ಎಂದು ಖುಷಿಯಾಗಿ ಹೇಳಿದಳು. ಅದೇ ಹೆಣ್ಣು ಹುಟ್ಟಿದ್ರೆ ಚಂದ್ರಮ್ಮ ಈ ರೀತಿ ಇಷ್ಟೊಂದು ಖುಷಿ ಪಡುತ್ತಿದ್ದಳಾ ಎಂದು ಸುಮಿತ್ರಳಿಗೆ ಅನಿಸಿತು.ಸುಮಿತ್ರ ಸಹಾ”ಏನೊ ಒಳ್ಳೇದಾಯ್ತಲ್ಲ ಬಿಡು”  ಎಂದು ಹೇಳಿ ಅವಳ ಕೈಗೆ ಇರಲಿ ಇಟ್ಕೋ ಅಂತ ಒಂದು ಸಾವಿರ ಕೊಟ್ಟಳು. ಕೈ ಮುಗಿದು “ಆ ದೇವ್ರು ನಿಮ್ಮಮನೆ ತಣ್ಣಗೆ ಇಟ್ಟಿರಲಿ” ಎಂದು ಹೇಳಿ ಚಂದ್ರಮ್ಮ ಹೊರಟಾಗ ಒಂದು ರೀತಿಯ ನಿರಾಳ ಭಾವದ ಜೊತೆಗೆ  ಗೀತ ಮತ್ತು ಅವಳ ಮಗುವಿನ ಭವಿಷ್ಯವನ್ನು ನೆನೆದ ಸುಮಿತ್ರಾಳಿಗೆ ಏನೋ ಒಂದು ರೀತಿಯ ಖೇದವಾಯಿತು. ಗೀತಾಳ ಈ ಸ್ಥಿತಿಗೆ ಅವಳ ಅಣ್ಣನ ಕಿರುಕುಳ ಕಾರಣವೇ? ಪ್ರಾಯಕ್ಕೆ ಬಂದ ಮಗಳನ್ನು ಬೇರೆ ಊರಿಗೆ ಕಳಿಸಿದ ಅಸಹಾಯಕ ತಾಯಿ ಚಂದ್ರಮ್ಮನೆ ? ಪ್ರಾಯದ ಕಾಮನೆಗೆ ಬಲಿಯಾದ  ಸ್ವತಃ ಗೀತಳೇ ಕಾರಣವೇ? ಯಾರು ಹೊಣೆ ಎನಿಸಿತು.

 

2 thoughts on “ಯಾರು ಹೊಣೆ ?

Leave a Reply

Back To Top