ಅನುವಾದಿತ ಕವಿತೆ
ದ್ರೌಪದಿ ಶಸ್ತ್ರಧಾರಿಯಾಗು
ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು, ತಮ್ಮ ಮಿತ್ರ ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು.
ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ.
ನೂತನ ದೋಶೆಟ್ಟಿ
ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲ
ನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲ
ನೀನೇ ನಿನ್ನ ಹುರಿದುಂಬಿಸಿಕೊ
ಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆ
ಎಲ್ಲ ತಲೆಗಳೂ ಬಿಕರಿಯಾಗುತ್ತವೆ
ಕೇಳು ದ್ರೌಪದಿ , ಶಸ್ತ್ರಧಾರಿಯಾಗು
ಈಗ ಗೋವಿಂದ ಬರುವುದಿಲ್ಲ
ಚದುರಿ ಚಿಂದಿಯಾಗಿರುವ ಈ ಸುದ್ದಿ ಪತ್ರಿಕೆಗಳಿಂದ.
ಇನ್ನೂ ಎಷ್ಟು ಕಾಲ ನಿರುಕಿಸುವಿ?
ಈ ದುಶ್ಯಾಸನರ ದರ್ಬಾರಿನಲ್ಲಿ
ಎಂಥ ರಕ್ಷಣೆಯ ಅಹವಾಲು?
ಈ ದುಶ್ಯಾಸನ ಕಡು ದುಷ್ಟ
ಕಡು ಲಜ್ಜಾಹೀನನೂ
ಅವನಿಂದ ನಿನ್ನ ಶ್ರೀರಕ್ಷೆಯೇ?
ಕೇಳು ದ್ರೌಪದಿ , ಶಸ್ತ್ರಧಾರಿಯಾಗು
ಈಗ ಗೋವಿಂದ ಬರುವುದಿಲ್ಲ
ನಿನ್ನೆಯ ತನಕ ಕುರುಡಾಗಿದ್ದ ರಾಜ
ಈಗ ಮೂಗನೂ, ಕಿವುಡನೂ
ಪ್ರಜೆಗಳ ತುಟಿಯನ್ನು ಹೊಲಿದಿದ್ದಾನೆ
ಜೊತೆಗೆ ಕಿವಿಯ ಮೇಲೆ ಬಿಗಿ ಪಹರೆ
ನಿನ್ನ ಈ ಕಣ್ಣೀರು
ಯಾರನ್ನು ತಾನೆ ಕರಗಿಸಬಲ್ಲುದು ?
ಕೇಳು ದ್ರೌಪದಿ , ಶಸ್ತ್ರಧಾರಿಯಾಗು
ಈಗ ಗೋವಿಂದ ಬರುವುದಿಲ್ಲ.
*************************