ಕವಿತೆ
ಹಚ್ಚಿಕೊಂಡರೆ
ನಿರ್ಮಲಾ ಶೆಟ್ಟರ
ಸಾಕಿನ್ನು ಹೊರಡು
ಎನ್ನುವುದೆ ತಡ ಹೊರಡಲಾಗದು
ಸರಿ ಇದ್ದುಬಿಡು
ಎಂದೊಡನೆ ಉಳಿಯಲಾಗದು
ನಡೆಯುವ ಮುನ್ನ ನಿನ್ನೊಳಗಿನ
ನನ್ನ ತೊರೆದು ನಡೆ ಎಂದೆನಲು
ಅದೆಷ್ಟು ಬಾರಿ ಅಂದುಕೊಂಡಿಲ್ಲ
ತೊರೆಯಲಾಗದು ನನ್ನ
ಒಳಗಿನ ನಿನ್ನ
ಹೀಗೆ ಒಂದೊಮ್ಮೆ ಹಚ್ಚಿಕೊಂಡರೆ
ರೆಕ್ಕೆ ಮೂಡಿ ನಿಂತ ಹಕ್ಕಿ
ಮುನ್ನುಡಿ ತೀಡಿದ ಮೊದಲ ಪುಟ
ತಾಯೊಡಲು ಸೀಳಿ ಬಂದ ಮೊಳಕೆ ಸಸಿ
ಕಂಡಿಕೆ ಪೋಣಿಸಿಕೊಂಡ ಮಗ್ಗ
ಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ
ನಡೆಯುವದು ಸರಳಾತೀ ಸರಳ
ಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿ
ಚಿಗುರು ಆವರಿಸಿಕೊಂಡಂತೆ ಮಳೆಗೆ
ಅಳಿದುಳಿದವು ತಮ್ಮಿರುವಿನ ಗುರುತಿನಲಿ
ಭೂಮಿ ಬಸಿರ ಧಿಕ್ಕರಿಸಿದರೆ
ಅತ್ತಂತೆ ಭಾನು ಮೋಡ ಸುರಿಸಿ
ಮತ್ತೆ ಕನಸಿಗಾಗಿ ಕತ್ತಲೆ ಹಗಲ
ಬಚ್ಚಿಟ್ಟಂತೆ ದಿನ ದಿನವೂ
ಹಚ್ಚಿಕೊಂಡೆನೆಂದು ನೆಚ್ಚಿ
ಕೊಳದ ನೋವು
ಬಾಳ ಯಂತ್ರಕೆ ಕೀಲೆಣ್ಣೆ ಕೊನೆತನಕ
ರೆಕ್ಕೆಗಳೀಗ ಹಾರಲು ಹವಣಿಸಿವೆ
ಆಗಸದ ಹೊಸ ಹಾದಿಗೆ
ಅಣಿಗೊಂಡ ವಿದಾಯಕೊಂದು ನಗು ಸೇರಲಿ
ನೀರಸವಾಗದಿರಲಿ
ನಿನ್ನ ಹಾದಿ ಮತ್ತೆ ನನ್ನದೂ
********************************
ಧನ್ಯವಾದಗಳು ಸರ್
ನಿರ್ಮಲಾ ಶೆಟ್ಟರ್ ಮೇಡಂ ಅವರ ಕವಿತೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಓದಿದಂತೆಲ್ಲ ಕವಿತೆ ಓದುಗನ ಎದೆ ಆಳಕ್ಕೆ ಇಳಿದು ಬಿಡುತ್ತದೆ
ತಾಯಿ ಒಡಲು ಸೀಳಿ ಬಂದ ಮೊಳಕೆ ಒಡೆದ ಸಸಿ
ಕಂಡಿಕೆ ಪೋಣಿಸಿ ಕೊಂಡು ಬಂದ ಮಗ್ಗದಂತೆ
ಈ ಎರಡೂ ಉಪಮೆಗಳು ಸಾಕು
ಕವಿತೆಯ ಸಶಕ್ತತತೆಗೆ
ಕವಯಿತ್ರಿ ಯವರಿಗೆ ಸಂಪಾದಕರಿಗೆ ಅಭಿನಂದನೆಗಳು
ಎ ಎಸ್. ಮಕಾನದಾರ
ಭಾನು ಮೋಡಸುರಿಸಿ
ಮತ್ತೆ ಕನಸಿಗಾಗಿ
ಕತ್ತಲ ಹಗಲು ಬಚ್ಚಿಟ್ಟಂತೆ.
ಚೆಂದದ ಸಾಲಿಗೆ ಶರಣಾದೆ.
ಶುಭಕೋರುವೆ