ಕವಿತೆ
ಸಾಧ್ಯವಾದರೆ ಕಲಿ
ಪ್ರತಿಮಾ ಕೋಮಾರ ಈರಾಪುರ
ಹೌದು ನಾನು ಬರೀ ಇರುವೆ
ನನ್ನಾಕಾರ,ಗಾತ್ರ,ಬಣ್ಣ
ನೋಡಿ
ನನ್ನೆಳೆಯದಿರು ಮನವೆ
ನನ್ನ ಹೊಸಕದಿರು
ಸಾಧ್ಯವಾದರೆ ಕಲಿ
ನನ್ನ ಸಂಘ ಜೀವನ
ತುಸುವಾದರೂ
ಹಂಚಿ ತಿನ್ನುವ ಉದಾರತೆ
ನೀ ಕೊಡುವ ಪ್ರತೀ
ತುತ್ತಿಗೂ ನಾನು ಋಣಿ
ನಿನ್ನ ಮನೆ ಮೂಲೆಯೇ
ಎನ್ನ ಸಾಮ್ರಾಜ್ಯ
ನೀ ತೋರುವ ಹನಿ ಪ್ರೀತಿಗೆ
ದುಪ್ಪುಟ್ಟು ಸೇರಿಸಿ
ಕೊಡುವೆ ಪ್ರೀತಿ
ಸಾಧ್ಯವಾದರೆ ಕಲಿ
ಉಂಡ ಮನೆಗೆ ದ್ರೋಹ ಬಗೆಯದ
ನನ್ನ ಪ್ರಾಮಾಣಿಕತೆ
ನೀ ಬತ್ತಿಯಿಟ್ಟು ತೈಲವೆರೆದು
ಉರಿಸುವ ಹಣತೆ ನಾನು
ನಾ ಕತ್ತಲೆಯಲ್ಲುಳಿದರೂ
ನೀಡುವೆ ನಿನಗೆ ಬರೀ
ಬೆಳಕು
ಸಾಧ್ಯವಾದರೆ ಕಲಿ
ಬೆಳಕ ನೀಡಿದವರ
ಬದುಕ ಬೆಳಕಾಗಿಸಲು
ಇಲ್ಲ ಆರಿಸುವ
ವಿಶ್ವಾಸ ದ್ರೋಹವಾದರೂ
ಮಾಡದಿರು
ಹಣ್ಣು ಹೇಗಿದ್ದರೂ
ಬರೀ ಸವಿಯನ್ನಷ್ಟೇ
ಕುಕ್ಕಿ ಹೀರಿ
ಖುಷಿಪಡುವುದು ಹಕ್ಕಿ
ಸಾಧ್ಯವಾದರೆ ಕಲಿ
ಒಂದು ಕೆಟ್ಟದ್ದನ್ನೇ
ಕೆದಕಿ
ಕೂಗಿ ಹೇಳುವ ಬದಲು
ಸಾವಿರ ಒಳ್ಳೆಯದ
ಕಂಡು ಕಲಿತು
ಖುಷಿಪಡುವ ಉದಾತ್ತತೆ
**************************
Wow