ಕವಿತೆ
ಎರಡು ಮೊಲೆ ಕರುಳ ಸೆಲೆ
ವಿಶಾಲಾ ಆರಾಧ್ಯ
ಮನುಜ ಕುಲವ ಕತ್ತಲಿಂದ ಬೆಳಕಿಗಿತ್ತ
ತೊಡೆಯ ಸೆಲೆಯ ಮಾಯೀ ಕಣಾ
ನವಮಾಸ ಏನೆಂದು ಬಲ್ಲೆಯಾ?
ಒಂದೊಂದು ಮಾಸದಲ್ಲೂ
ಒಂದೊಂದು ವೇದನೆಯ
ಗ್ರಹಚಾರವ ಮೀರಿ
ಕೆಸರ ಮುದ್ದೆಗೆ ರೂಹಿತ್ತು
ಗುಟುಕಿತ್ತ ಕರುಳ ಹೊಕ್ಕುಳು !
ಮಾ-ನವರಂಧ್ರದ ನಿನ್ನ
ಧರೆಗಿಳಿಸಿ ಬಸವಳಿದರೂ
ದಣಿವರಿಯದ ಧರಣಿ ಕಣಾ ಹೆಣ್ಣು!!
ಪುಣ್ಯ ಕೋಟಿ ಕಾಮಧೇನು
ಬೀದಿಗಿಳಿದ ಹೋರಿ
ಬಸವನಿಗೆ ಸಮವೇನು?
ಹೋಲಿಕೆಯೇ ಗೇಲಿ ಮಾತು
ಒಂದೇ ಕ್ಷಣ ಬಿತ್ತುವ
ನಿನ್ನ ಗತ್ತಿಗೆಷ್ಟು ಸೊಕ್ಕು?
ಒಂದು ಬಸಿರಲುಸಿರು
ತುಂಬಿ ಕೊಡುವಳೆಲ್ಲರಿಗೂ ಮಿಕ್ಕು!
ಒಂದೇ ಕ್ಷಣ ಉರಿದಾರುವ
ಗಂಡೇ ಕೇಳು ದಂಡ
ಧರಣಿಯೋ ಬೂದಿಯೊಳಡಗಿದ
ಮೌನ ಕೆಂಡ ಹಸಿ ಮಾಂಸ
ಮುಕ್ಕುವುದು
ಸುಲಭ ನಿನ್ನ ದಂಡಕೆ !
ಹಲವು ಕೂಸಿಗೊಬ್ಬಳೇ
ಹಾಲನ್ನೀವ ಹೆಣ್ಣಂತೆ
ಎರಡು ಮೊಲೆಯಿವೆಯೇ ಗಂಡಿಗೆ?
*****************************
ಓಹ್ , ಕವಿತೆ!! ಕವಿತೆ ಎಂಬುದು ಭೂಮಿತಾಯಿ.ಕವಿತೆ ಎಂಬುಂದು ತಾಯಿ, ಹೆಣ್ಣು, ಸಹನೆ, ಕ್ಷಮೆ …..ಉಸಿರು, ಬೆಳಕು….