ಕವಿತೆ
ಅವ್ವ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಅವ್ವ
ಮೂವತ್ತು ಮಳೆಗಾಲ
ಮತ್ತಷ್ಟೇ ಬೇಸಿಗೆ ಬಿಸಿಲು
ಕೆಲವೊಮ್ಮೆ ಬೆಂಕಿಯುಗುಳು
ಎಲ್ಲ ಸವೆಸಿದ್ದಾಯ್ತು ನೀ ಇಲ್ಲದೆ!
ಅಂದು –
ನಿನ್ನ ಹೂತು ಬಂದ
ಆ ಮಣ್ಣ ಅಗುಳ ಕಣ ಕಣ
ಜೊತೆಗೆ ಒಡೆದ ಮಡಕೆಯ ಚೂರು ಪಾರು
ಇನ್ನೂ ಬಿಟ್ಟಿಲ್ಲ ನನ್ನ
ಮೆದುಳಲ್ಲವಿತು ಕಸಿಯಾಗಿ
ಸೂಸುವುದು
ಅರಳಿ ದಿನಕ್ಕೊಂದು ಹೊಸ ಹೂವಾಗಿ…
ಹೂಸ ಹೊಸ ಕಂಪು!
ಮತ್ತು ಕತ್ತು ಹಿಸುಕುವ ನೆನಪು…
ಒಂದು ದಿಕ್ಕಿಗೆ ಕಾಚು ಕಡ್ಡಿಪುಡಿ
ಇನ್ನೊಂದೆಡೆ ಮರೆಮಾಚಿದ ರೋಗರುಜಿನ
ಮತ್ತು ನಿತ್ಯ ನಂಜಾದ
ದಾಯಾದಿ ಅವಿಭಕ್ತ
ಕುಟುಂಬ!
ಕೊನೆಗೆ ಹೆಣಗೆಲಸದ ಹೆಣಗು –
ಈ ನಾಲ್ಕು ಶೂಲಗಳು ನಾಲ್ಕು ದಿಕ್ಕಿನ
ಹೆಗಲಾಗಿ ಹೊತ್ತು ಹೋದದ್ದು
ಇಂದಿಗೂ ನನ್ನ ಗುಂಡಿಗೆಯ ದದ್ದು!
ಕ್ರಮೇಣ
ಅಪ್ಪನ ಪಯಣ
ಜೊತೆಜೊತೆಗೆ
ಒಡಹುಟ್ಟಿದವರೂ ಕೂಡ ಚಿತೆಗೆ
ಸರದಿಯೋಪಾದಿ…
ನನ್ನ ಶೇಷವಾಗುಳಿಸಿ
ಬಹುಶಃ ನಿನ್ನ ಪ್ರತಿನಿಧಿಸಿ!
ಈಗ
ಎಲ್ಲಿ ಶೋಧಿಸಲಿ
ಈ ಅನಂತ ಬ್ರಹ್ಮಾಂಡದಲಿ
ನಿನ್ನ ಮರುಹುಟ್ಟು
ಎಂಬ ಹುಚ್ಚು ಕನಸು ಹೊತ್ತು
ಯಾವ ಜೀವ
ಯಾವ ಜಂತು
ಆಕಾರದಲಿ ನಿನ್ನ ಆ ಅಂದಿನ ದಿರಿಸು
ಅಥವ
ನಮ್ಮ ಮೀರಿ ಬೆಳೆದ
ವಿಶ್ವರೂಪದ
ಪ್ರತಿಮೆಯ ಹೊಸ ಜೀವಿಗಳಲಿ…
ಎಲ್ಲಿ ಸಂಶೋಧಿಸಲಿ –
ನೀನೀಗ ತಳೆದ
ನಿನ್ನ ಆ ಹೊಸ ಆಕೃತಿ
ಒಮ್ಮೆಯಾದರೂ ನನ್ನ
ಮರಣದ ಮುನ್ನ…?
***********************************
ಅಧ್ಭುತವಾಗಿದೆ. ಅಭಿನಂದನೆಗಳು
ಅನುಭವಗಳ ಮೂಟೆಯೊಳಗೆ ಕೂತಂತಾಯ್ತು
Thumba channGide
ರಮೇಶ್, ನಿಖಿತ, ಗೋವಿಂದ ಶೆಟ್ಟಿ ಮತ್ತು ಲಕ್ಷ್ಮೀಶ್ ರವರಿಗೆಲ್ಲ ನನ್ನ ಅನಂತ ಧನ್ಯವಾದಗಳು.
ಕಳಕೊಂಡವರ ಹೊಸಹುಟ್ಟಿನ ಹುಡುಕಾಟ ಕವಿತೆ ಕಾಡುತ್ತದೆ ಸರ್….