ಕಂಸ…!

ಕವಿತೆ

ಕಂಸ…!

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಪ್ರಸ್ತಾವನೆ: ಒಬ್ಬ ದುರಾತ್ಮನ ಕ್ರೂರ ಮನಸ್ಸಿಗೆ ಅತ್ಯಂತ ಹೇಯವಾಗಿ ಬಲಿಯಾದ ಆ ಎಳೆಯ ಕಂದಮ್ಮನ ಆತ್ಮಕ್ಕೆ ಶಾಂತಿ ಕೋರಿ…ಈ ಕವನ ನನ್ನ ನಮನ!

ಹಸುಳೆ
ಯೊಂದು ಅಸುನೀಗಿದೆ
ಒಂದು ಪೊದೆಯೊಳಗೆ
ಅನಾಥ
ಬೆತ್ತಲೆ –
ಬೀಭತ್ಸ ಕೊಲೆಗೆ…!
ಒಂದೇ ಒಂದು ದಿನವೋ
ಒಂದು ವಾರವೋ
ವಯಸು ಎಷ್ಟಾದರೇನು ಪಾತಕಕ್ಕೆ!

ಅಚಾನಕ್ಕಾಗಿ ತಾನೆ ಅಂಬೆಗಾಲಿನಲಿ
ನಡೆದಿರಬಹುದೇ ಪೊದೆಯೆಡೆಗೆ
ಆ ಹಸುಳೆ?
ಅಥವಾ…?
ಪೊದೆಯೇನು ಬಯಲೇನು
ಏನಾದರೇನು ಅಸುರರೋಷಕ್ಕೆ!

ಬಹುಶಃ
ವಿಷದ ಹಾವೂ ಕೂಡ ಮರುಗಿ
ಮುಟ್ಟದೆ
ಭುಸುಗುಡದೆ
ಹರಿದು ಹೋಗಿರಬಹುದು ಸುಮ್ಮನೆ
ನಿಶಬ್ದ!

ಆದರೀತ ಹಾಗಿರಲಿಲ್ಲ…
ಕುದಿವ ಎಣ್ಣೆಯ ಕೊಪ್ಪರಿಗೆಯಿಂದಲೇ ನೇರ
ಎದ್ದು ಬಂದಿದ್ದವನು!
ಆ ಆಯುಧವೋ –
ಒಂದೇ ಒಂದು ತುಕ್ಕಾದ
ಪುಟ್ಟ ಸ್ಕ್ರೂಡ್ರೈವರ್ –
ಅದೂ ಕೂಡ ಹೆಚ್ಚು
ಎನಿಸುವಂಥ ಹಸುಗೂಸು!
ಒಂದೇ ಎರಡೇ…ನೂರು ಬಾರಿ
ನೂರಾರು ಬಾರಿ
ಚುಚ್ಚಿ ಚುಚ್ಚಿ ಮೆರೆದಿದ್ದಾನೆ
ಹೊಸದೊಂದು ಪ್ರಯೋಗ…!

Child Abuse. The picture above is sketched by me. I… | by Dua Azeem | Medium

ಎಂಥ ಪ್ರಾಚೀನ
ಲಿಪಿಯೋ ಏನೋ
ಇನ್ನೂ ಅಳಿಸಲಾಗದ
ಹೆಣ್ಣ ಹಣೆಬರೆಹ!

ಅಳಲೂ ಆಗದ
ಆಗತಾನೆ ಕಣ್ಣು ತೆರೆದ ಹಸುಳೆ
ಆ ಹೆಣ್ಣು!
ಹೇಗೆಲ್ಲ ಕೂಗಿ ಕೂಗಿ ಚೀರಿರಬಹುದು
ತನಗೆ ಆಗಿನ್ನೂ ಅರಿವಿರದ
ಆ ಹೊಚ್ಚ ಹೊಸ ನೋವಿಗೆ
ಆ ಭಯಾನಕ ಬಾಣ ಬತ್ತಳಿಕೆ…
ಗಳಿಗೆ!

***********************

5 thoughts on “ಕಂಸ…!

  1. ಸುಜಾತಾ ಲಕ್ಮನೆಯವರಿಗೆ ಧನ್ಯವಾದಗಳು.

Leave a Reply

Back To Top