ಅಂಕಣ ಬರಹ

ಸೀಗಲ್

ಸೀಗಲ್
ಮೂಲ : ಆಂಟನ್ ಚೆಕಾಫ್ ಕನ್ನಡಕ್ಕೆ : ಹೇಮಾ ಪಟ್ಟಣಶೆಟ್ಟಿ
ಪ್ರ : ಅನನ್ಯ ಪ್ರಕಾಶನ
ಪ್ರ.ವರ್ಷ :೨೦೦೭
ಬೆಲೆ :ರೂ.೭೦
ಪುಟಗಳು : ೧೦೮

ಎರಡು ತಲೆಮಾರುಗಳ ನಡುವಣ ಸಂಘರ್ಷವೇ ಈ ನಾಟಕದ ಮುಖ್ಯ ಕಥಾ ವಸ್ತು. ಇಬ್ಬರು ನಟಿಯರು ಮತ್ತು ಇಬ್ಬರು ಲೇಖಕರುಗಳ ನಡುವಣ ಸಂಬಂಧದ ಸ್ವರೂಪದ ಶೋಧನೆಯೇ ಇಲ್ಲಿನ ಮುಖ್ಯ ಕಾಳಜಿಯಾಗಿದೆ.

ಹಿರಿಯ ನಟಿ ಅರ್ಕಾದಿನಾ ಮತ್ತು ಹಿರಿಯ ಲೇಖಕ ತ್ರಿಗೊರಿನ್ ಆಗಲೇ ಸಮಾಜದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡವರು. ಯುವಕ ತ್ರೆಪ್ಲೆಫ್ ಮತ್ತು ಎಳೆಯ ಯುವತಿ ನೀನಾ ಇನ್ನೂ ಅನನುಭವಿಗಳು. ಹಿರಿಯ ಜೋಡಿಗೆ ನಗರದ ಹಿನ್ನೆಲೆಯಿದ್ದರೆ ಕಿರಿಯ ಜೋಡಿಯ ಸ್ವಭಾವದಲ್ಲಿ ಗ್ರಾಮೀಣ ಸೊಗಡಿದೆ. ತ್ರೆಪ್ಲೆಫ್ ಪ್ರಸಿದ್ಧ ಲೇಖಕನಾಗಲು ಮತ್ತು ನೀನಾ ಪ್ರಸಿದ್ಧ ನಟಿಯಾಗಲು ಬಯಸುತ್ತಾರೆ. ಆದರೆ ತ್ರೆಫ್ಲೆಫ್ ನೀನಾಳನ್ನು ಪ್ರೀತಿಸಿದರೆ ನೀನಾ ತ್ರಿಗೊರಿನ್ ಬಗ್ಗೆ ಮೆಚ್ಚುಗೆಯಿಟ್ಟುಕೊಂಡಿದ್ದಾಳೆ. ತ್ರಿಗೊರಿನ್‌ಗೆ ನೀನಾ ಬೇಕು. ಆದರೆ ಅರ್ಕಾದಿನಾಗೆ ತ್ರಿಗೊರಿನ್ ಬೇಕು. ಹಾಗೆಂದು ಇದು ಸಾಮಾನ್ಯ ತ್ರಿಕೋನ ಪ್ರೇಮದ ಕಥೆಯಲ್ಲ. ಇದರ ಜತೆಗೆ ಮಾಶಾ ಮತ್ತು ಮೆದ್ವೆದೆಂಕೋ ಎಂಬ ಇನ್ನೊಂದು ಜೋಡಿಯ ಕಥೆಯೂ ಇಲ್ಲಿ ಹೆಣೆದುಕೊಳ್ಳುತ್ತದೆ.

ಇಡೀ ನಾಟಕದಲ್ಲಿ ಪ್ರತಿಯೊಬ್ಬರೂ ಪ್ರೀತಿಯೆಂಬ ಮಧುರ ಸಂಬಂಧದ ಬೆನ್ನು ಹತ್ತಿದರೂ ವಾಸ್ತವದ ಬದುಕಿನಲ್ಲಿ ತಮ್ಮ ಆಸೆಗಳ ವೈಫಲ್ಯದಿಂದಾಗಿ ಹತಾಶರಾಗುತ್ತಾರೆ. ಮಾಶಾ ಮಾತ್ರ ವಾಸ್ತವವನ್ನು ಅರ್ಥ ಮಾಡಿಕೊಂಡು ಮೆದ್ವೆದೆಂಕೋನನ್ನು, ತಾನು ಆತನನ್ನು ಪ್ರೀತಿಸದೇ ಇದ್ದರೂ ಮದುವೆಯಾಗುತ್ತಾಳೆ. ಮನುಷ್ಯ ಸ್ವಭಾವ ಮತ್ತು ಮನುಷ್ಯ ಸಂಬಂಧಗಳ ವಿವಿಧ ವಾಸ್ತವಿಕ ಮುಖಗಳನ್ನು ನೈಜವಾಗಿ ಕಟ್ಟಿಕೊಡುವ ‘ಸೀಗಲ್ ‘ ನಲ್ಲಿ ಎಲ್ಲರೂ ಆ ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಬಯಸುತ್ತಾರೆ. ಆದರೆ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಸೀಗಲ್ ನಂತೆ ಬೇಟೆಯಾಡಲ್ಪಡುತ್ತಾರೆ. ಹೀಗೆ ಶೀರ್ಷಿಕೆಯೇ ರೂಪಕವಾಗುವ ವಿಶಿಷ್ಟ ನಾಟಕ ‘ಸೀಗಲ್’

ಹಾಗೆಂದು ಸೀಗಲ್ ಕೇವಲ ಪ್ರೀತಿಯ ಕುರಿತಾದ ನಾಟಕವಲ್ಲ. ನಾಟಕಕ್ಕೆ ಇನ್ನೊಂದು ಆಯಾಮವಿದೆ. ಅದು ಸೃಜನಶೀಲತೆಯ ಕುರಿತಾದದ್ದು. ನಾಟಕದ ಆರಂಭದಲ್ಲಿ ಕಾಣುವ ತ್ರೆಪ್ಲೆಫ್ ರಚಿಸಿದ ನಾಟಕದ ಮೂಲಕ ಇದು ಕಾಣಿಸಿಕೊಳ್ಳುತ್ತದೆ. ಅವನು ಮಹತ್ವಾಕಾಂಕ್ಷಿ. ತನ್ನ ನಾಟಕ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತದೆ ಎಂಬ ಕನಸನ್ನು ಕಟ್ಟಿಕೊಂಡವನು. ಆದರೆ ಅವನು ಲೇವಡಿಗೊಳಗಾಗುತ್ತಾನೆ ಮತ್ತು ಹತಾಶನಾಗುತ್ತಾನೆ. ತ್ರಿಗೊರಿನ್ ಈ ಎಲ್ಲ ಹಂತಗಳನ್ನು ದಾಟಿದವನಾಗಿದ್ದಾನೆ. ಒಟ್ಟಿನಲ್ಲಿ ಸೃಷ್ಟಿಕ್ರಿಯೆಯಲ್ಲಿ ಉಂಟಾಗುವ ನೋವು, ಯಾತನೆಗಳಿಗೆ ನಾಟಕ ಸಾಕ್ಷಿಯಾಗುತ್ತದೆ. ಚೆಕಾಫ್‌ನ ಮೂಲಕೃತಿಯ ಸಾರ್ವಕಾಲಿಕ ಪ್ರಸ್ತುತತೆ ಈ ಅನುವಾದವನ್ನು ಸಾರ್ಥಕವಾಗಿಸಿದೆ. ನಾಟಕವನ್ನು ವೇದಿಕೆಯ ಮೇಲೆ ನೋಡಿ ಆನಂದಿಸುವಷ್ಟೇ ಸರಾಗವಾಗಿ ಹೇಮಾ ಪಟ್ಟಣಶೆಟ್ಟಿಯವರ ಅನುವಾದವೂ ಖುಷಿಯಿಂದ ಓದಿಸಿಕೊಂಡು ಹೋಗುವ ಸುಂದರ ಶೈಲಿಯಲ್ಲಿದೆ. ಹೆಚ್.ಎಸ್. ಉಮೇಶ್ ಅವರ ವಿದ್ವತ್ಪೂರ್ಣ ಮುನ್ನುಡಿಯಲ್ಲಿ ನಾಟಕದ ಅನುವಾದ ಹೇಗಿರಬೇಕೆಂಬುದರ ಬಗ್ಗೆ ಅನೇಕ ವಿಚಾರಗಳ ಚರ್ಚೆಯಿದೆ.

************************************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top