ಕವಿತೆ
ನನ್ನಪ್ಪ
ಕಾವ್ಯ ಎಸ್.
ಹಂಗಿಲ್ಲದ ಅಪ್ಪನ ಗುಡಿಸಲಿನ ಅರಮನೆಯಲ್ಲಿ
ನನ್ನಪ್ಪ ಮಲಗಿ ಏದುಸಿರು ಬಿಡುತ್ತಿದ್ದ
ಮಂಚವಿಂದು ಒಂಟಿಕಾಲ ಕೊಕ್ಕರೆಯಾಗಿದೆ
ಅಪ್ಪನ ಉಸಿರಂತೆ ಇಂದು ಸೊಳ್ಳೆಗಳು ಸುಯ್ಗುಡುತ್ತಿವೆ
ಮೂಗಿಗೆ ಆಗಾಗ್ಗೆ ಬಡಿಯುತ್ತಿದ್ದ ಮೋಟು ಬೀಡಿಯ
ಘಾಟು ಹೊಗೆಯ ರೂಪ ಕಳಚಿ, ಹೊಸಬಟ್ಟೆ ಧರಿಸಿ
ಊರು ಸುತ್ತಲು ಹೋಗಿದೆ.
ಚರ್ಮ ಸವೆದು ಸವಕಳಿಯಾಗಿ, ಜಗತ್ತಿಗೆ ಅನ್ನನೀಡುವ
ನಾಡ ಬೆನ್ನೆಲುಬಿನ, ಅಸ್ಥಿಪಂಜರದ ಸಾಹುಕಾರ ನನ್ನಪ್ಪ.
ಕೆನ್ನೀರ ಹನಿಗಳನ್ನು ಬೆವರಾಗಿಸಿ ಬಸಿದು
ಜಳಕ ಮಾಡಿ ನುಣುಪಾಗಿ ನರಳುತ್ತಿದ್ದ ನನ್ನಪ್ಪ.
ಹೊಟ್ಟೆಯಲ್ಲಿ ಗಾಳಿಚೀಲ ಹೊಕ್ಕಿಸಿ ವಿಚಾರ -ಪ್ರಚಾರಗಳ
ಬಾಗಿಲು ಕಿಟಕಿಗಳ ಕದ ಮುಚ್ಚಿ ಬಿಟ್ಟಿದ್ದ ನನ್ನಪ್ಪ.
ತನ್ನ ಜಿಡ್ಡಿಲ್ಲದ ರಕ್ತದಿಂದ ಗುಳ್ಳೆನರಿಗಳನ್ನು ಕೊಬ್ಬಿಸಿ
ಮಲಗಿಸಿ, ಹರಕು -ಮುರುಕಿನ ಧೋತರ ಪೇಟವಾಗಿಸಿ
ಜೈ ಜವಾನ್, ಜೈ ಕಿಸಾನ್ ನಂತೆ ಮಿಂದೇಳುತ್ತಿದ್ದ ನನ್ನಪ್ಪ.
ತಾಳ್ಮೆ -ಶಾಂತಿಗಳ ಸಸಿ ಬಿತ್ತಿ ಹೊತ್ತಿದ್ದ ಭಾವ ಮೂರ್ತಿ ನನ್ನಪ್ಪ
ಅದೆಷ್ಟು ತಾಳ್ಮೆ ಅಪ್ಪನಿಗೆ..?ಜಿಗಣೆಗಳು
ಉಸಿರಾಡುತ್ತಿದ್ದದ್ದು ಅಪ್ಪನಿಂದ,ಅಪ್ಪನ ಮುದ್ದಿನ ರಕ್ತ ಬೀಜಾಸುರಗಳು
ಅಸಲಿಯೆಂದರೆ ಈಗೀಗ ಅವುಗಳಿಗೂ ಅಪ್ಪನ
ಬತ್ತಿದ ದೇಹದ ಮೇಲೆ ವೈರಾಗ್ಯದ ಮುನಿಸು
ಎತ್ತುಗಳಂತೆ ನೇಗಿಲು ಹೊರುವ ಅಪ್ಪನಿಗೆ
ಕಪಟ, ಕುಟಿಲ ಕುಯುಕ್ತಿಯ ತೇರು -ಬೇರಿನ
ಅರ್ಬುತ ರೋಗಗಳ ಅರಿವಿಲ್ಲ
ತನ್ನ ಛಲ -ಬಲದ ಬೇರು ಬತ್ತಿದ್ದರು ನಗುತ್ತಿದ್ದ,
ಅಮಾವಾಸ್ಯೆಯ ಹೂವಂತೆ
ಸಾಲವೆಂಬುದು ಅವನ ಜೇಬಿನಲ್ಲಿರುವ ತೂತುಗಳ
ಹಾಹಾಕಾರದ ಹಾಲಿನ ಸಮಾಧಿಯ
ಮೇಲೆ ತೂಗುತ್ತಿರುವ ನೇಣುಗತ್ತಿ
ದಿನ ಅಂಗಳದಲ್ಲಿ ಬಣಗುಡುತ್ತಿದ್ದ ನನ್ನಪ್ಪ
ಇಂದು ಯಾವ ದಾರಿ ಹಿಡಿದ್ದಿದ್ದಾನೋ?
ತನ್ನ ಶ್ರಮದ ಭಾರದ ಫಲಗಳ ಹೊರಲಾರದೇ
ಯಾವ ತಾಯಿ ನೆಟ್ಟ ಮರದ ರೆಂಬೆಗೆ
ತನ್ನ ನೊಗದ ಕೊರಳ ಕೊಟ್ಟಿದ್ದಾನೋ?
ನನ್ನಪ್ಪನಂತೆ ಅದೆಷ್ಟೋ ಅಪ್ಪಂದಿರ
ಕರುಳ ರೋದನಕ್ಕೆ ಬಲಿಯಾಗಿದ್ದಾನೋ..?
ಶೃಂಗರಿಸುತ್ತಿದ್ದ ಭೂತಾಯಿಯನ್ನೇ ಎಲ್ಲಿ
ಹೊದ್ದು ನೆಮ್ಮದಿಯ ನಿದ್ದೆಯ ಕನಸು ಅರಸಿ
ಅಂಗಾತ ಮಲಗಿರುವನೋ ತಿಳಿದಿಲ್ಲ
ಆದರೆ ಅಪ್ಪ ಹೆಮ್ಮೆಯ ಬೀಜ ಬಿತ್ತಿದ್ದಾನೆ
ಅದೀಗ ಮೊಳಕೆಯೊಡೆದು ನೆರಳಿನ ಅರಳಿ ಮರವಾಗಿದೆ
ನಾನು ರೈತ ಪುತ್ರಿ, ಅನ್ನದಾತನ ಹೆಮ್ಮೆಯ ಜೀವ ಪುತ್ರಿ.
*******************************************
Best one !
Thank u
ಚೆಂದದ ಕವಿತೆ….