ಖುಷಿ ನಮ್ಮಲ್ಲೇ!!!

ಲೇಖನ

ಖುಷಿ ನಮ್ಮಲ್ಲೇ!!!

ಮಾಲಾ ಅಕ್ಕಿಶೆಟ್ಟಿ 

ನಾ ಮೆಚ್ಚಿದ ನಾಟಕ

Is street food in India hygienic? - Quora

ಕೈಯಲ್ಲಿ10 ರ ನೋಟು ಹಿಡಿದುಕೊಂಡು ಬಡ ಹುಡುಗ ರೋಡ್ ಮೇಲೆ ಇರುವ ಭಜಿ ಅಂಗಡಿಗೆ ಬಂದಿದ್ದ. ಆಸೆ ಕಂಗಳಿಂದ ಮೂರು ತರಹದ ಭಜಿ, ‌ಅಂದರೆ ‌ಕಾಂದಾ, ‌ಮಿರ್ಚಿ ‌ಮತ್ತು ‌ಮೈಸೂರ ‌ಭಜಿಯನ್ನು ‌‌ಒಂದೇ ‌ಸಮನೇ ನೋಡಿದ. ‌ಆ ‌ಅಂಗಡಿಯಲ್ಲಿ 4 ‌ಭಜಿಗಳ ‌ಪ್ಲೇಟ್ಗೆ 20 ‌ರೂಪಾಯಿ.ಒಂದು ಭಜಿಯನ್ನು ಕೊಡುವ ಸೌಲಭ್ಯವಿರುವದರಿಂದ 5ರೂಪಾಯಿಗೆ ‌ಯಾವುದಾದರು ‌ಭಜಿ ‌ತಿನ್ನಬಹುದು.ಆತ ‌ಡಿಸೈಡ್ ‌ಮಾಡಿ 5 ರೂ ‌ಕೊಟ್ಟು ‌ಮಿರ್ಚಿ ‌ಭಜಿಯನ್ನು ಸವಿದ.ಬಸಿಯಾಕಾರದಲ್ಲಿ ಕಣ್ಣು ತೆರೆದು, ಬಾವಿಯಂಥ ಬಾಯಲ್ಲಿ ಹಾಕಿ ಸುತ್ತಲೂ ನೋಡುತ್ತಾ ‌‌ಭಜಿಯನ್ನು ‌ಆತ್ಮೀಯತೆಯಿಂದ ಅನುಭವಿಸಿದ. ಹೊರಗೆ ‌ಧೋ ‌ಧೋ ಅನ್ನುವ ಎಡಬಿಡದ ಮಳೆ, ಅಲ್ಲಲ್ಲಿ ಛತ್ರಿಗಳ ಸಹಾಯದಿಂದ ಜನರ ಓಡಾಟ,‌ ‌ಜೋರ ‌ಮಳೆಯಲ್ಲಿ,ರೋಡ ‌ಖಾಲಿಯಾದ್ದರಿಂದ, ‌ಬುರ್ ಬುರ್ ಎಂದು ಹೋಗುವ ವಾಹನಗಳು ಮಳೆಗೆ ಕಳೆ ತಂದಿದ್ದವು.ಆ ಚಿಕ್ಕ ಅಂಗಡಿಯಲ್ಲಿ ಎಲ್ಲರೂ ಜಮಾಯಿಸಿ ಮಳೆ ನಿಂತರಾಯ್ತು,‌‌ ಹೊರಗೆ ಕಾಲಿಡುವಾ ಅನ್ನುವ ಸಾಂದರ್ಭಿಕ ನಿರ್ಣಯ. ಇನ್ನೂ 5 ‌ರೂಪಾಯಿ ಉಳಿದಿತ್ತಲ್ಲ, ‌ಅದರಿಂದ ಮೈಸೂರು ‌ಭಜಿ ತೆಗೆದುಕೊಂಡು ಬೇಕಾದಷ್ಟು ಸಾಸ್ ‌ಮೆತ್ತಿಸಿ,‌ ಮತ್ತೆ ಆನಂದದಿಂದ ಸವಿದ.ಇವನೊಂದಿಗೆ ಬಂದ ಇನ್ನುಳಿದ ಎರಡು ಹುಡುಗರೂ ‌ಥೇಟ್ ‌ಇವನಂಗೆ ‌ಸಂತೋಷ. ಅಬ್ಬಾ!!! ‌‌5 ರೂನಲ್ಲಿ ಒಂದು ‌ಭಜಿ ಕೊಡುವ ಆನಂದ ಯಾವ ಫೈವ್ ‌ಸ್ಟಾರ್ ಹೋಟೆಲ್ ನಲ್ಲಿ ಸಿಗುತ್ತೆ?  

              

          ರೋಡಿನಲ್ಲಿಯ ಗೂಡಂಗಡಿಗಳಲ್ಲಿ ಆಹಾರ ಸರಿಯಿರಲ್ಲ,‌low quality ಎಣ್ಣೆ, ಕಾಳು, ಹಿಟ್ಟು ಬಳಸಿರುತ್ತಾರೆ, ಸ್ವಚ್ಛತೆ ಕಡಿಮೆ, ಆರೋಗ್ಯಕ್ಕೆ ಹಾನಿ ಎನ್ನುವುದೇನೋ ಸರಿ. ಆದರೆ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿಯ ಎಣ್ಣೆ, ಕಾಳು, ಹಿಟ್ಟು ಸ್ವಚ್ಛತೆಯನ್ನು ಸಾಮಾನ್ಯನು ‌ಪರೀಕ್ಷಿಸಲಾಗುತ್ತಾ? ಹೊರಗಡೆ ಲಕಲಕ ಹೊಳೆದು ಒಳಗೆ ರೋಡ್ ಅಂಗಡಿಗಿಂತ  ‌ಕೀಳಿದ್ದರೆ ವ್ಯತ್ಯಾಸವೇನು? 5 ರೂ ನಲ್ಲಿ ಸಿಗುವ ಇಂಥದ್ದೇ ‌ಭಜಿ, ದೊಡ್ಡ ಹೋಟೆಲ್ ನಲ್ಲಿ ‌ಸುಮಾರು ‌20 ರೂಪಾಯಿ‌ಯಾದರೂ ಇರುತ್ತೆ. ಲೋ ಕ್ವಾಲಿಟಿ ಎಂದು ಬಡ ಹುಡುಗ ನಿಂತರೆ, ಎಂದು ‌ಆತ ಒಂದು ‌ಭಜಿ ‌ತಿಂದಾನು? ರೋಡ್ ನಲ್ಲಿ ತಿಂದ ಎಲ್ಲರ ಆರೋಗ್ಯ ಹಾಳಾಗುವುದರೆ, ಹೋಟೆಲ್ನಲ್ಲಿ ತಿಂದವರಿಗೆ ರೋಗವೇ ಬರಲ್ಲವೇ? ಅಥವಾ ದೊಡ್ಡ ಹೋಟೆಲ್ ನಲ್ಲಿ ತಿಂದವರ ಆರೋಗ್ಯ ಎಂದೂ ಕೊಡುವುದಿಲ್ಲವೇ? ಒಟ್ಟಾಗಿ ಹೇಳುವ ತಾತ್ಪರ್ಯ ಅವರವರ ಇಮ್ಯೂನಿಟಿ ಪವರ್ ಮೇಲೆ ಆರೋಗ್ಯ ನಿಂತಿದೆ. 

        ಬಡವನೊಬ್ಬ ಒಳ್ಳೆ ಹೋಟೆಲ್ ನಲ್ಲೇ ತಿನ್ನಬೇಕೆಂದರೆ ಎಷ್ಟು ಜನ್ಮ ಆತ ಕಾಯಬೇಕು? ಯಾರಿಗ್ಗೊತ್ತು? ರೋಡ್ ನಲ್ಲಿಯ ‌ಅಂಗಡಿಗಳಿಂದ ಎಟ್ಲೀಸ್ಟ್ ಈ ‌ಈ ತಿನಿಸುಗಳು ಹೀಗೆಯೇ ಇರುತ್ತವಪ್ಪಾ  ಎನ್ನುವ ಕಲ್ಪನೆಯಾದರೂ ಬಡವರಿಗೆ ಬಂದೀತು. ಇಲ್ಲಾದರೆ ರುಚಿ ಕೂಡ ‌ಬರೀ ಕಲ್ಪನೆಯಲ್ಲಿ ಅನುಭವಿಸಬೇಕಾಗಬಹುದು.ದೊಡ್ಡ ಹೋಟೆಲ್ ನಲ್ಲಿ ಇಬ್ಬರ ನಾಷ್ಟಾ ಸುಮಾರು 600 ರೂಪಾಯಿ.‌ಇದು ಬಡವನ ‌ತಿಂಗಳ ‌ಸಂಬಳವೂ ಹೌದು. 

      ಈ ‌ದೊಡ್ಡ ಹೋಟೆಲ್ ನಲ್ಲಿ ಇದನ್ನು ತಿಂದೇ, ಇಷ್ಟು ಬಿಲ್ ‌ಬಂತು, ‌ಆದ್ರೂ ಎಂಜಾಯ್ ಮಾಡಿದೆ ಎನ್ನುವ, ಅದೇ ಒಂದು ಸಿನಿಮಾ ಸಾಮಾನ್ಯ ಥೇಟರ್ನಲ್ಲಿ ನೋಡಲು ಸಿಕ್ಕಾಗೂ ಆ ದೊಡ್ಡ ಥಿಯೇಟರ್ನಲ್ಲಿ ನೋಡಿದೆ, ಫಸ್ಟ್ ಡೇ, ಫಸ್ಟ್ ಶೋ ಎಂದು ಒಂದು ಟಿಕೆಟ್ಗೆ ಇಷ್ಟು ದುಡ್ಡಿತ್ತು ಗೊತ್ತಾ? ಆದ್ರೂ ಸಂತೋಷ ಆತು ಅಂತ ಹೇಳುವ ಮನುಜರು ಇದ್ದಾರೆ. ಇರಲಿ, ಅವರಿಗೆ ಇರುವ ಆದಾಯದ ಮೇಲೆ ಅವರು ಆಯಾ ಹೋಟೆಲ್ ಹಾಗೂ ಥಿಯೇಟರ್ಗಳಿಗೆ ಹೋಗುತ್ತಾರೆ ಎನ್ನೋಣ. ಆದರೆ ತಾವು ಮಾಡಿದ್ದೇ ಶ್ರೇಷ್ಠ, ಬೇರೆಯವರದು ಕನಿಷ್ಠ ಅಂದರೆ ಹೇಗೆ? ಎಷ್ಟೋ ಶ್ರೀಮಂತರ ಮನೆಯಲ್ಲಿ ಲಕ್ಷ್ಮಿ ಕಾಲುಮುರಿದುಕೊಂಡು ಬಿದ್ದಿದ್ದರೂ ದುಂದು ವೆಚ್ಚ ಮಾಡಿಲ್ಲ. ದೊಡ್ಡ ಹೋಟೆಲ್ ಅಥವಾ ಥೇಟರ್ ಗಳ ವಿರೋಧ ಇಲ್ಲಿ ಇಲ್ಲ. ಆದರೆ ಅಂಥದ್ದೇ ವಾತಾವರಣ ಸಾಮಾನ್ಯ ಸ್ಥಿತಿಯಲ್ಲಿ ಬಡವರಿಗೆ ಸಿಕ್ಕಾಗ ಅದನ್ನು ಶ್ಲಾಘೀಸೋಣ ಎನ್ನುವ ಕಳಕಳಿ.ಅದು ಅವರ ದುಡ್ಡು, ಹೇಗಾದರೂ ಖರ್ಚು ಮಾಡಿಕೊಳ್ಳಲಿ    

        

             ಸಾಮಾನ್ಯರಿಗೆ ಸಾಮಾನ್ಯವಾದ ವಸ್ತುಗಳು ಈ ಜಗತ್ತಿನಲ್ಲಿ ಸಿಗುತ್ತಿರುವುದರಿಂದಲೇ ಅವರಿಗೂ ಎಲ್ಲದರ ರುಚಿ ಗೊತ್ತಾಗಿದೆ. ಬಡವರಿಂದಲೇ ನಡೆಸಲ್ಪಡುವ ಅಂಗಡಿಗಳು ಬಡವರ ಜೀವಾಳ. ಬಡ ಅಂಗಡಿ ಮಾಲೀಕನಿಗೆ ಹೆಚ್ಚಿನ ಆದಾಯದ ಚಿಂತೆಯಿಲ್ಲ. ತನ್ನಂತೆ ಜನ ಅಂದು ಇದ್ದದ್ದರಲ್ಲೇ ತುಸು ಲಾಭ ಗಳಿಸುವ ಆಸೆ. ಇದರಿಂದ ತನಗೂ ಲಾಭ ಜೊತೆಗೆ ತನ್ನಂಥವನಿಗೆ ಹೊಟ್ಟೆ ತುಂಬಿಸಿದೆ ಅನ್ನುವ ಧನ್ಯತಾ ಭಾವ. ಇಷ್ಟಿಷ್ಟರಲ್ಲೇ ಇಷ್ಟಿಷ್ಟದ ಖುಷಿಯನ್ನು ಹುಡುಕುವ ತವಕ. ಸಂತೃಪ್ತಿ ಜೀವನದ ಸೆಲೆ. ಇವುಗಳನ್ನು ಸ್ವೀಕರಿಸಿ ದೋಷಗಳನ್ನು ಬಹಿರಂಗಪಡಿಸದೇ ಆನಂದಿಸುವ ಘಳಿಗೆ. ಬಹುಶಃ ಇದಕ್ಕೇನೆ ವಿಶಾಲ ಮನೋಭಾವ ಅಂತ ಕರೀಬಹುದು.

*************************************

Leave a Reply

Back To Top