ಕವಿತೆ
ಸಾಮಗಾನ
ಪವಿತ್ರ. ಎಂ
ಕವಲೊಡೆದ ಗಳಿಗೆ
ಧನಿ ಕಳೆದು ದಾರಿ ಕಾಣದಾಗಿ
ಕಾಯುತಿದೆ ಸಹಯಾತ್ರಿಗಾಗಿ
ಸಹನೆ ಕೈಜಾರಿ ಜರಿಯುವ ಜಗದ
ಜಂಜಡಕಂಜಿ ಕಮರಿ
ಬಿರಿಯುವ ಕಮಲ ಮಡುವಲೇ ಮುದುಡಿ.
ಬಾನಾಡಿ ಹಾಡುತಲಿತ್ತು
ಬಾನಸವಿಸ್ತಾರದ ನಾದ ಗುನುಗಿ
ಗಳಗಳನೆ ಸುರಿವ ಮಳೆ
ಅಶ್ರುವದ ಮರೆಮಾಚಿ ತೋಯ್ದು
ದಿಟದ ಗಟ್ಟಿತನವ ಪಣಕಿಟ್ಟು ಕುಹಕವಾಡಿ
ಗಹಗಹಿಸಿ ನಕ್ಕವರ ನೆಲಕುರುಳಿಸಿ.
ಮೊಳೆತ ಜೀವ ಜಾತು ಮರೆತಿಹ
ಸಾಮರಸ್ಯಕೆಳೆಸಲೆಂದೇ
ಜೀವ ನಿಯಮವನೆಂದು ಮೀರಿಪೆ
ಅಣಕಿಸಲು ಅಡಿಯಿಟ್ಟ ಕರೋನ
ಅಹಮಿಕೆಯ ಅಜ್ಙಾನದಂಧಕಾರ
ಅರಗಿನರಮನೆ ಬರಿಯ ಭ್ರಮೆ.
ಭಾನ ಸ್ಪರುಷದ ಸುಖವ
ತರುತೀಡ್ವ ಗಾಳಿಗಂಧ
ಅವಳೊದ್ದ ಪಚ್ಚಹಸಿರ ಸಖವ
ಉಲಿದು ನಲಿವ ಆ ಗಾನದಿಂಚರಕೆ
ಕಿವಿಯಾಗಿ,ಕಣ್ಣಾಗಿ ಅವರಲ್ಲೊಂದಾಗಿ
ಸಾಮಗಾನದ ಚೆಲುವಾಗು ಬಾ.
***********************************
ಇಷ್ಟವಾಗುವ ಸಾಲುಗಳು..ಅಹಮಿಕೆಯ ಅಜ್ಞಾನ ಅಂಧಕಾರ ಅರಗಿರಮನೆಯ ಬರಿಯ ಭ್ರಮೆ