ಲೇಖನ
ಮಹಾತ್ಮಾಗಾಂಧೀಜಿಯವರ
ಚಿಂತನೆಗಳ ಪ್ರಸ್ತುತತೆ :
“ಹಸಿದ ಹೊಟ್ಟೆಯವನಿಗೆ ಯಾವ ಉಪದೇಶವೂ ಮುಖ್ಯವಲ್ಲ” ಪಾಪವನ್ನು ದ್ವೇಷಿಸಿ ಪಾಪಿಯನ್ನಲ್ಲ” ಇವು ನಮ್ಮ ನೆಚ್ಚಿನ ಬಾಪೂಜಿಯವರ ನುಡಿಮುತ್ತುಗಳು.”ಅಯ್ಯಾ ನೀನೇನು ದೇವರಲ್ಲ, ಆದರೆ ದೇವರನ್ನು ಬಲವಾಗಿ ನಂಬಿದವನು, ದಂತವಿಲ್ಲದಿದ್ದರೂ ಬದುಕಿದ್ದ ಕಾಲದಲ್ಲೇ ದಂತಕಥೆಯಾದವನು” ಇವು ಮಹಾತ್ಮಾ ಗಾಂಧೀಜಿಯವರ ಕುರಿತು ಕವಿ ಸಿ.ಪಿ.ಕೆ.ತಮ್ಮ ವಂದನೆ ಕವಿತೆಯಲ್ಲಿ ಮನೋಜ್ಞವಾಗಿ ಮೂಡಿಸಿದ ಸಾಲುಗಳು.
ಮೋಹನದಾಸ ಕರಮಚಂದ ಗಾಂಧಿ ಎಂಬ ಬಾಲಕ ಯಾರಿಗೂ ನಿಲುಕದ ಅತಿಮಾನವನೇನೂ ಆಗಿರಲಿಲ್ಲ. ಎಲ್ಲರಂತೆಯೇ ಹುಟ್ಟಿ ಬೆಳೆದ ಒಬ್ಬ ಸಾಮಾನ್ಯ ಮಗು. ಅವರ ಬಾಲ್ಯ ಕೂಡ ಎಲ್ಲ ಮಕ್ಕಳ ಬಾಲ್ಯದಂತೆಯೇ ಇತ್ತು.ಗುಜರಾತಿನ ಕಾಥೇವಾಡ ಪ್ರಾಂತ್ಯದ ಪೋರ್ ಬಂದರ್ ನಲ್ಲಿ ೧೮೬೯ ರ ಅಕ್ಟೋಬರ್ ೨ ರಂದು ಸಹೃದಯ ಕರಮಚಂದ ಗಾಂಧಿ ಹಾಗೂ ದೈವ ಭಕ್ತೆ ಪುತಲೀಬಾಯಿಯವರಿಗೆ ಭಾವೀ ದಂತಕಥೆಯಾದ ಮೋಹನದಾಸನ ಜನನವಾಯಿತು. ಮೋಹನದಾಸರನ್ನು ಬಾಲ್ಯದಲ್ಲಿ ಮನೆಯವರು ಪ್ರೀತಿಯಿಂದ ಮೋನಿಯಾ ಎಂದು ಕರೆಯುತ್ತಿದ್ದರಂತೆ .ಮೋನಿಯಾ ಕೂಡ ಎಲ್ಲರಂತೆ ತಂಟೆ ಮಾಡುತ್ತಿದ್ದನಂತೆ, ಹಠವಾದಿಯಾಗಿದ್ದನಂತೆ ಸುಳ್ಳು ಹೇಳಿದ್ದ, ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ.ಒಮ್ಮೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಧೂಮಪಾನ ಮಾಡಿದ್ದನಂತೆ , ಮಾಂಸ ಸೇವಿಸಿದ್ದನಂತೆ. ಆದರೆ ಮಾಡಿದ ತಪ್ಪುಗಳಿಗೆ ಪಶ್ಚಾತಾಪ ಪಟ್ಟು ಶ್ರವಣಕುಮಾರ, ಸತ್ಯ ಹರಿಶ್ಚಂದ್ರರ ಕಥೆಗಳಿಂದ ಪ್ರಭಾವಿತರಾಗಿ ತನ್ನ ಬದುಕನ್ನೇ ಬದಲಿಸಿಕೊಂಡು ಮಹಾನ್ ಚೇತನವಾಗಿ ಹೊಮ್ಮಿ ದಂತಕಥೆಯಾದ.
ಗಾಂಧೀಜಿ ಚಿಂತನೆಗಳ ಬಗ್ಗೆ ಅವಲೋಕಿಸಿದಾಗ , ಗಾಂಧೀಜಿ ಜೀವನವೇ ಅವರ ಚಿಂತನೆ, ಅವರ ಚಿಂತನೆಯೇ ಅವರ ಜೀವನ.ಅವುಗಳಲ್ಲಿ ವ್ಯತ್ಯಾಸವಿಲ್ಲ..ಗಾಂಧೀಜಿಯವರು ಸತ್ಯ ಅಹಿಂಸೆ ಹಾಗೂ ಸೇವೆಯಲ್ಲಿ ಅಪಾರ ಶೃದ್ಧೆ ಇಟ್ಟಿದ್ದರು.ಸತ್ಯವೇ ಅವರ ಉಸಿರಾಗಿತ್ತು.ಅಹಿಂಸೆ ಹಾಗೂ ಸತ್ಯದ ನಡೆಯಿಂದ ಗಾಂಧೀಜಿ ಬದುಕಿ ತೋರಿಸಿದ್ದರು.ಅವುಗಳಿಂದಲೇ ಬ್ರಿಟಿಷರನ್ನು ಮಣಿಸಿ ಸ್ವಾತಂತ್ರ್ಯ ನೀಡುವಂತೆ ಮಾಡಿದ್ದರು.ಪಾರದರ್ಶಕತೆ ಗಾಂಧೀಜಿಯವರ ಬಹುಮುಖ್ಯಗುಣ.ಈ ವಿಶಿಷ್ಟ ಗುಣದಿಂದಲೇ ಜನಮನಗೆದ್ದ ನಾಯಕರಾದರು.ಗಾಂಧೀಜಿಯವರು ಮೂಲ ಶಿಕ್ಷಣಕ್ಕೆ ಹಚ್ಚಿನ ಒತ್ತು ನೀಡಿದ್ದರು.ಶೀಲವಿಲ್ಲದ ಶಿಕ್ಷಣ ತಪ್ಪು ಎಂದು ಭಾವಿಸಿದ್ದಅಂಗನೈತಿಕತೆಯ ನೆಲೆಗಟ್ಟಿಲ್ಲದ ಶಿಕ್ಷಣ ವಿನಾಶಕ್ಕೆ ಹಾದಿ ಎಂಬುದು ಗಾಂಧೀಜಿಯವರ ತತ್ವವಾಗಿತ್ತು.
ಸರಳತೆ: ಸರಳತೆ ಗಾಂಧೀಜಿ ಜೀವನದ ಅವಿಭಾಜ್ಯ ಅಂಗವಾಗಿತ್ತು.ತೊಡುವ ಬಟ್ಟೆ, ಆಹಾರ ಪದ್ಧತಿ ಎಲ್ಲವೂ ಸರಳವಾಗಿದ್ದವು.” Simplicity is the Essence of Universality” ಎಂಬುದು ಅವರ ತತ್ವವಾಗಿತ್ತು.ಸಮಾಜ ಸೇವೆಯಲ್ಲಿ ನಿರತನಾದ ವ್ಯಕ್ತಿ ಸರಳತೆ ಹಾಗೂ ಸ್ವಾವಲಂನೆಯನ್ನು ಅನುಸರಿಸಬೇಕೆಂದು ನಂಬಿದ್ದರು ಗಾಂಧೀಜಿ.ದಕ್ಷಿಣ ಆಫ್ರಿಕೆಯಿಂದ ಹಿಂದಿರುಗಿದ ಭಾರತಕ್ಕೆ ಮರಳಿ ನಮಗೆ ಸ್ವಾತಂತ್ರ್ಯ ತಂದುಕೊಡುವ ಹೊತ್ತಿಗೆ ಅವರ ಉಡುಗೆ ಒಂದು ತುಂಡಿನ ಮುಂಡ(ಲುಂಗಿ) ಕೈ ಯಲ್ಲೊಂದು ಕೋಲು ಇದಕ್ಕಿಂತ ಸರಳವಾಗಿರಲು ಒಬ್ಬ ಮನುಷ್ಯನಿಗೆ ಸಾಧ್ಯವೆ?ಸರಳತೆ ಹಾಗೂ ಸ್ವವಲಂಬನೆಗೆ ಕಲಶವಿಟ್ಟಂತೆ ತಾವೇ ಸ್ವತಃ ಬಡಗಿ, ಕ್ಷೌರಿಕ, ಚಮ್ಮಾರ, ನೇಕಾರ, ಸೇವಕ, ಬಾಣಸಿಗರಾದರು.ಈ ಮೂಲಕ ನೈತಿಕತೆಯಿಂದ ಕೂಡಿದ ಯಾವ ಕೆಲಸವೂ ಮೇಲಲ್ಲ , ಕೀಳಲ್ಲ ಎಂದು ತೋರಿಸಿದರು . “ಇರುವ ಕೆಲಸವ ಮಾಡು ಕಿರಿದೆನದೆ ಮಾಡು” ಎಂಬ ಶರಣವಾಣಿಗನುಸಾರವಾಗಿ ಗಾಂಧೀಜಿ ಬದುಕಿದರು.
ದುಬಾರಿಯಾದ ಆಡಂಬರದ ಜೀವನ ನಡೆಸಿ ದುಂದುವೆಚ್ಚ ಮಾಡುವ ಇಂದಿನ ಜನಾಂಗಕ್ಕೆ ಗಾಂಧೀಜಿ ಹೆಚ್ಚು ಪ್ರಸ್ತುತ.ಇಂದು ಕೊರೊನಾದಂತಹ ಮಹಾಪಿಡುಗಿನ ಈ ಸಂದರ್ಭದಲ್ಲಿ ಗಾಂಧಿಜೀಯವರ ಸರಳಜೀವನ, ಸ್ವಾವಲಂಬನೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ಸರಳ ಮದುವೆ, ಸರಳಸಭೆಸಮಾರಂಭಗಳು, ಸರಳ ಆಹಾರ, ಸರಳ ಜೀವನದ ಪಾಲನೆಯ ಅವಶ್ಯಕತೆ ಗಾಂಧಿ ಕಾಲಕ್ಕಿಂತ ಈಗ ಅನಿವಾರ್ಯ ಹಾಗೂ ಅವಶ್ಯಕ.ಅವರ ಸರಳತೆ ಹಾಗೂ ಸ್ವಾವಲಂಬನೆ ಸಾರ್ವತ್ರಿಕತೆ ಹಾಗೂ ಸರ್ವೋದಯದ ಮೂಲ ತತ್ವವಾಗಿದೆ.ಎಲ್ಲವನ್ನು ಯಂತ್ರ ಅಥವಾ ಕೆಲಸದಾಳುಗಳ ಮೂಲಕ ಮಾಡಿ ಶ್ರಮಕಡಿಮೆಮಾಡಿಕೊಂಡು ಆಲಸಿಗಳಾಗುತ್ತಿರುವ ಇಂದಿನ ಜನಾಂಗಕ್ಕೆ ಗಂಧಿ ವಿಚಾರಗಳು ಹೆಚ್ಚು ಪ್ರಸ್ತುತ.
ಧರ್ಮ ಸಹಿಷ್ಣುತೆ : ಧರ್ಮ ಸಹಿಷ್ಣುತೆ ಯು ಬಾಪೂಜಿ ಜೀವನದ ಅವಿಭಾಜ್ಯ ಅಂಗ.ಅವರೇ ತಮ್ಮ ಕಥೆಯಲ್ಲಿ ಹೇಳಿರುವಂತೆ “ನನಗೆ ಸ್ಕೂಲಿನಲ್ಲಿ ಯಾವ ಧರ್ಮಿಕ ಶಿಕ್ಷಣವೂ ದೊರೆಯಲಿಲ್ಲ, ಸುತ್ತಲಿನ ವಾತಾವರಣದಿಂದಲೇ ನಾನು ಅಷ್ಟು ಇಷ್ಟು ಧರ್ಮ ಭಾವನೆ ಹೊಂದಿದ್ದೆ.ನನ್ನ ಪ್ರಕಾರ ಧರ್ಮ ಎಂದರೆ, ಆತ್ಮ ಸಾಕ್ಷಾತ್ಕಾರ, ಆತ್ಮಜ್ಞಾನ.” ಗಾಂಧೀಜಿ ಎಲ್ಲ ಧರ್ಮವನ್ನು ಪ್ರೀತಿಸಲು , ಗೌರವಿಸಲು ಅವರ ಬಾಲ್ಯದ ಪರಿಸರವೂ ಕಾರಣವಾಗಿತ್ತು.ಅವರ ದೆಕರಮಚಂದರಿಗೆ ಎಲ್ಲ ಧರ್ಮದ ಮಿತ್ರರೂ ಇದ್ದರಂತೆ. ಭಗವದ್ಗೀತೆ, ಬುದ್ಧಚರಿತೆ, ಬೈಬಲ್, ಪೈಗಂಬರ್ ಚರಿತ್ರೆಮೊದಲಾದ ಧರ್ಮಗ್ರಂಥಗಳ ಆಳವಾದ ಅಧ್ಯಯನದಿಂದ ಎಲ್ಲ ಧರ್ಮಗಳ ಮೂಲತತ್ವಗಳೂ ಒಂದೇ ಎಂದು ತಿಳಿದು ಧರ್ಮಸಹಿಷ್ಣುವಾದರು.
ಜಾತಿ ,ಮತ, ಧರ್ಮ ಕುಲ ವೆಂದು ಹೊಡೆದಾಡಿಕೊಳ್ಳುವ , ಮನುಷ್ಯ ಮನುಷ್ಯರನ್ನು ಶತ್ರುಗಳಂತೆ ಕಾಣುವ ಈ ಅಣ್ವಸ್ತ್ರ ಯುಗದಲ್ಲಿ ರಾಮ,ರಹೀಮ, ಏಸಶಿಕ್ಷಣದ್ಧ ಎಲ್ಲರೂ ಒಂದೇ ಎನ್ನುವ ಸರ್ವ ಧರ್ಮ ಸಹಿಷ್ಣುತಾ ಭಾವವು ಏಕತೆಯನ್ನು ಬೆಳೆಸಬಲ್ಲುದು. ಇಂದು ಎಷ್ಟೋ ಧರ್ಮಸಂಘರ್ಷಗಳನ್ನು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ.ಅದನ್ನೆಲ್ಲ ಮರೆತು ಬದುಕುವ ಕಾಲವನ್ನು ಕೊರೊನಾ ತಂದಿದೆ. ಎಲ್ಲರೂ ಒಂದೇ ಎಂಬ ಭಾವ ಹಿಂದಿಗಿಂತ ಇಂದು ಪ್ರಸ್ತುತ.
ಸಮಗ್ರ ಶಿಕ್ಷಣ : ಗಾಂಧಿಜೀಯವರು ಸಮಗ್ರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಪ್ರಕಾರ ಶಿಕ್ಷಣವೆಂದರೆ ಮಗುವನ್ನು ಮಾನವನನ್ನಾಗಿಸುವ ಸರ್ವತ್ರ ಸಾಧನ.ದೇಹ ಮೆದುಳು ಚೈತನ್ಯ ಎಲ್ಲವನ್ನು ರೂಪಿಸುವುದೇ ಆಗಿದೆ.ಸಮಾಜದ ಸಪ್ತ ಮಹಾಪಾತಕಗಳಲ್ಲಿ ಒಂದಾದ ” ಶೀಲವಿಲ್ಲದ ಶಿಕ್ಷಣ ” ದಿಂದ ಸಮಾಜದ ಪತನವಾಗುತ್ತದೆ. ಎಂದು ನಂಬಿದ್ದರು ಗಾಂಧಿ.ಸಮಗ್ರತೆ, ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿ ಇಲ್ಲದ ಮಕ್ಕಳು ಉಪ್ಪಿಲ್ಲದ ಆಹಾರದಂತೆ. ಇಂದು ನಾವುಕಾಣುವುದು ಇಂಥ ಉಪ್ಪಿನ ಕೊರತೆಯಿರುವ ವಿದ್ಯಾರ್ಥಿಗಳನ್ನು.ಗಾಂಧೀಜಿಯವರು ಕಸುಬು ಆಧಾರಿತ ಕರಕುಶಲ ಕಲೆಯ ಕಲಿಕೆಗೆ ಹೆಚ್ಚು ಒತ್ತನೀಡಿದ್ದರು ಅವುಗಳಲ್ಲಿ ತೋಟಗಾರಿಕೆ, ನೇಕಾರಿಕೆ, ಕೃಷಿ ಮರದ ಕೆಲಸ ಮಡಕೆ ಮಾಡುವಂತಹ ಸ್ವಾವಲಂಬನೆಯ ಕೆಲಸಗಳು ಸೇರಿದ್ದವು . ಇದರಿಂದ ಶಾರೀರಿಕ ಶಿಕ್ಷಣ ಸ್ವಾಭಾವಿಕವಾಗಿಯೇ ಸಿಗುತ್ತಿತ್ತು ಅಲ್ಲದೇ ಸ್ವಾವಲಂಬನೆಯನ್ನೂ ಸಾಧಿಸಿದಂತಾಗುತ್ತಿತ್ತು. ಸಾಕಷ್ಟು ದೂರ ದರ್ಶಿತ್ವವುಳ್ಳ ಗಾಂಧೀಜಿ ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಹೊಂದಿದ್ದರು.೭ ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೂ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿತ್ತು.ಇದರಿಂದ ಬಾಲ ಕಾರ್ಮಿಕ ಪದ್ದತಿ ಸ್ವಾಭಾವಿಕವಾಗಿಯೇ ಕಡಿಮೆಯಾಗುವುದೆಂಬ ಧೋರಣೆ ಇತ್ತು. ಅಲ್ಲದೇ ಇಂದು ನಾವು ನೀಡುವ ಶಿಕ್ಷಣ ನೈತಿಕತೆಯ ಅಡಿಪಾಯದ ಮೇಲೆ ಸಚ್ಚಾರಿತ್ರ್ಯವನ್ನು ಬೆಳೆಸಿದಾಗ ಮಾತ್ರ ಗಾಂಧೀಜಿಯವರ ಸಮಗ್ರ ಶಿಕ್ಷಣದ ಕನಸು ನನಸಾದೀತು.
ನೈರ್ಮಲ್ಯ: ಗಾಂಧೀಜಿಯವರು ಆಂತರಿಕ ಹಾಗೂ ಬಾಹ್ಯ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು.ದಕ್ಷಿಣ ಆಫ್ರಿಕಾದಲ್ಲಿರುವಾಗ ಅಲ್ಲಿನ ಭಾರತೀಯರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ್ದರು ನಂತರ ಭಾರತದಲ್ಲಿ ಕೊಳೆಗೇರಿಗಳನ್ನು ತಾವೇ ಸ್ವತಃ ಸ್ವಚ್ಛ ಗೊಳಿಸಿದರು.ಆದರೆ ಬಾಪೂಜಿ ಹಾಕಿಕೊಟ್ಟ ನೈರ್ಮಲ್ಯೀಕರಣದ ಕನಸು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕಾದರೆ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಆರೋಗ್ಯದ ಬಗ್ಗೆ ಕಾಳಜಿ ಬರಬೇಕು.ಎಲ್ಲೆಂದರಲ್ಲಿ ಉಗುಳುವ, ಪರಿಪಾಠ ನಿಲ್ಲಬೇಕು.ಪ್ಲಾಸ್ಟಿಕ್ ನ್ನು ಎಸೆಯುವ, ತೇಲಿಬಿಡುವ, ಸುಡುವ ಪ್ರಕ್ರಿಯೆ ನಿಲ್ಲಬೇಕು.ಇಂದಿನ ಸ್ವಚ್ಛ ಭಾರತ್ ಮಿಷನ್ ನ ಉದ್ದೇಶಗಳಾದ ಬಯಲು ಶೌಚ ನಿರ್ಮೂಲನೆ, ಸಾರ್ವಜನಿಕರಲ್ಲಿ ನೈರ್ಮಲ್ಯಕ್ಕಾಗಿ ಮಾನಸಿಕ ಬದಲಾವಣೆ ಕೊಳೆಗೇರಿಗಳ ಸಂಪೂರ್ಣ ನಿರ್ಮೂಲನೆ, ಸಾಮಾಜಿಕ ಸ್ವಾಸ್ತ್ಯದ ಕುರಿತು ಜನಜಾಗೃತಿ ಇವೆಲ್ಲ ಗಾಂಧೀಜಿ ಅಂದು ಹಾಕಿಕೊಟ್ಟ ಅಡಿಪಾಯಗಳು. ಅದನ್ನು ನೆಲೆಗೊಳಿಸಬೇಕಾದ ಜವಾಬ್ಧಾರಿ ನಮ್ಮ ಮೇಲಿದೆ.
ನೈರ್ಮಲ್ಯದ ವಿಷಯದಲ್ಲಿ ಕೊರೊನಾ ನಮಗೆ ಪಾಠವನ್ನು ಕಲಿಸುತ್ತಿದೆ .ಗಾಂಧೀಜಿಯವರ ನೈರ್ಮಲ್ಯೀಕರಣ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ.ವೈಯ್ಯಕ್ತಿಕ ಸ್ವಚ್ಛತೆಯ ಜೊತೆಗೆ ಸಾಮಾಜಿಕ ಸ್ವಚ್ಛತೆಯ ಕಲ್ಪನೆ ಈಗ ಜನರಲ್ಲಿ ಮೂಡಬೇಕಾದ ಅವಶ್ಯಕತೆಯಿದೆ.
ಹೀಗೆ ಗಾಂಧೀಜಿಯವರು ನುಡಿದಂತೆ ನಡೆದರು, ನಡೆಯಲ್ಲಿಯೇ ನುಡಿಯನ್ನು ಪ್ರತ್ಯಕ್ಷವಾಗಿ ತೋರಿಸಿದರು. ಅವರ ಚಿಂತನೆಗಳು , ಅಹಿಂಸೆ , ಸತ್ಯಗಳು, ಸಹಕಾರ ಮನೋಧರ್ಮ, ಸರಳತೆ, ಧರ್ಮಸಹಿಷ್ಣುತೆ, ಸ್ವಚ್ಛತೆ ,ಸ್ವಾವಲಂಬನೆ ಮೂಲಶಿಕ್ಷಣ ಇವೆಲ್ಲ ಈಗ ಹೆಚ್ಚು ಪ್ರಸ್ತುತವಾಗಿವೆ.ಕೊರೊನಾದಂತಹ ಈ ಸಾಂಕ್ರಾಮಿಕ ಪಿಡುಗಿನ ಈ ಕಠಿಣ ಪರಿಸ್ಥಿತಿಯಲ್ಲಿ ಗಾಂಧೀಜಿಯವರ ಒಂದೊಂದು ಚಿಂತನೆಯೂ ಅತ್ಯಮೂಲ್ಯವಾಗಿವೆ.ಅವರ ಚಿಂತನೆಗಳು ಎಂದಿಗೂ ಪ್ರಸ್ತುತ.
*****************************
.
ಶುಭಲಕ್ಷ್ಮಿ ಆರ್ ನಾಯಕ
ಚೆನ್ನಾಗಿದೆ ಮೇಡಮ್
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com