ಅನುವಾದ ಸಂಗಾತಿ
ಉದ್ಯಾನಗೀತ
ತೆಲುಗು ಮೂಲ :ವೇಲ್ಪುಲ ನಾರಾಯಣ
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್



ಭಾರವಾಗಿ ಸುರಿದ ಹಿಮರಾಶಿಯ
ಮುತ್ತುಗಳಾಗಿಸಿ ರೂಪಾಂತರಿಸಿ,
ಮೃದು ಕಿರಣಗಳ ಸೂರ್ಯೋದಯವ
ಮಿನುಗುತ್ತಲೇ ಸ್ವಾಗತಿಸುತಿದೆ.
ನಡೆಗೆ ಬಂದವರ ಮಾತುಕತೆಯಲ್ಲಿ
ಸಭ್ಯತೆಯ ಲಹರಿ ಕೇಳುತ್ತಿದೆ,
ಸಂತಸದ ನಗುವಿನ ಪರವಶದಿ
ನಾದಗಳೆಲ್ಲವೂ ಸಂಗೀತವಾಗುತ್ತಿದೆ.
ದಣಿವಿನಲಿ ಮೌನವಾಗಿ ಕುಳಿತರೆ
ಚದುರಿದ ಮನಕೆ ಆಸರೆಯಾಗಿ,
ಬಾಳ ಪಯಣದ ಯುದ್ಧಗಳ ಮಧ್ಯೆ
ಶಕ್ತಿಯ ತುಂಬುವ ಶಾಂತಿ ಸರೋವರವಿದು.
ಎಲೆಗಳು ಉದುರಿದ ಮರಗಳಲಿ
ನವಚೈತನ್ಯದ ಚಲನೆಯಿದೆ,
ಚಿಗುರೊಡೆಯುವ ಕೊಂಬೆಗಳ ನಡುವೆ
ಭವಿಷ್ಯದ ಕೋಗಿಲೆಯ ಕುಹೂಗಾನವಿದೆ.
ಸುಂಟರಗಾಳಿಯ ಸವಾಲಿಗೂ
ಬಗ್ಗದ ಬೆನ್ನಲಬಿನ ಧೈರ್ಯವಿದು,
ಬಿದ್ದವರ ಎದೆಯಲಿ ಮತ್ತೆ ಏಳುವ
ಪ್ರೇರಣೆಯ ದೀಪವಿದು.
ಅನ್ಯಾಯದ ಅಂಧಕಾರವ ಸೀಳುವ
ಆಶೆಗಳ ಅಗ್ನಿಜ್ವಾಲೆಯಾಗಿ,
ಬಂಧನದ ಬೇಡಿಗಳನು ಮುರಿದು
ಬೀಸುವ ಸ್ವಾತಂತ್ರ್ಯದ ಗಾಳಿಯಾಗಿದೆ.
ಕಣ್ಣೀರಿನ ಕಾಲುವೆಯ ಕಲ್ಲೋಲದಿ
ಹೊಸ ಕ್ರಾಂತಿಯ ಕಿಡಿ ಎಬ್ಬಿಸಿ,
ದೌರ್ಜನ್ಯದ ಅರಣ್ಯವ ಸುಡುವ
ವಿಪ್ಲವದ ವಸಂತವಾಗಲಿ.
ಬದುಕಿನ ಓಟದ ಒರಟು ಹಾದಿಯಲಿ
ಪ್ರಕೃತಿಯ ಮಡಿಲ ಅರಳಿದ ಹೂವಾಗಿ,
ಪ್ರತಿ ಮುಂಜಾವಿನ ಹೊಸ ಉತ್ಸಾಹದ
ಉಸಿರಾಗಲಿ ಈ ‘ಉದ್ಯಾನಗೀತ’.
ತೆಲುಗು ಮೂಲ :ವೇಲ್ಪುಲ ನಾರಾಯಣ
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್



