ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದಾನೊಂದು ಕಾಲದಲ್ಲಿ.., ಒಂದು ಊರಲ್ಲಿ.., ಬಹಳ ಹಿಂದೆ, ದೂರದ ಒಂದು ಹಳ್ಳಿಯಲ್ಲಿ.., ಹಿಂದೆ ಕಾಲದಲ್ಲಿ ಒಬ್ಬ ರಾಜನಿದ್ದನಂತೆ.., ನಮ್ಮ ಅಜ್ಜ-ಅಜ್ಜಿ ಹೇಳ್ತಿದ್ದ ಕಥೆಯಿದು.., ಪುರಾತನ ಕಾಲದಲ್ಲಿ.., ತ್ರೇತಾಯುಗದಲ್ಲಿ.., ದ್ವಾಪರ ಯುಗದಲ್ಲಿ.., ಈ ಕಲಿಯುಗದ ಆರಂಭದಲ್ಲಿ.., ವೇದ ಪುರಾಣಗಳಲ್ಲಿ ಹೇಳಿದಂತೆ.., ಮಹರ್ಷಿಗಳು ವರ್ಣಿಸಿರುವಂತೆ.., ನಮ್ಮ ಜನಪದ ಅಥವಾ ಪೌರಾಣಿಕ ಕಥೆಗಳು ಆರಂಭಗೊಳ್ಳುವುದೇ ಹೀಗೆ! ಕೇಳುಗಳ [ಶ್ರೋತೃಗಳ] ಗಮನ ಸೆಳೆಯಲು ಕಾಲ ಮತ್ತು ಸ್ಥಳವನ್ನು ಅಸ್ಷಷ್ಟವಾಗಿಟ್ಟು ಕಲ್ಪನೆಗೆ ಅವಕಾಶ ಕೊಡುವಂತೆ; ಪುರಾತನ ಕಾಲದಲ್ಲಿ ಧರ್ಮವೇ ರಾಜ್ಯದ ಆಧಾರವಾಗಿದ್ದ ಯುಗದಲ್ಲಿ, ಒಂದು ಸಮೃದ್ಧ ರಾಜ್ಯವನ್ನು ಆಳುತ್ತಿದ್ದ ಧರ್ಮನಿಷ್ಠ ರಾಜನೊಬ್ಬನಿದ್ದನು.., ಆ ರಾಜನಿಗೆ ಎಲ್ಲವೂ ಇತ್ತು ಆದರೆ.., ಆದರೆ.., ಒಂದು ಚಿಂತೆ ಮಾತ್ರ ಅವನನ್ನು ಬಿಡದೆ ದಹಿಸುತ್ತಿತ್ತು.., ಎನ್ನುತ್ತಿರುವಾಗಲೇ ಇಡೀ ಕಥಾನಕವನ್ನು ನೀವು ಊಹಿಸಿಬಿಡುತ್ತೀರಿ.., ಚಿತ್ರದ ಮೊದಲರ್ಧವನ್ನು ನೋಡುತ್ತಿರುವಾಗಲೇ ನೀವು ಕ್ಲೈಮ್ಯಾಕ್ಸ್ ಅನ್ನು ಹೇಳಿಬಿಡುವಂತೆ.., ಕಥೆಗಳು ಆಗಲ್ಲ ಇಲ್ಲಿನ ಅನಿರೀಕ್ಷಿತ ತಿರುವುಗಳು ಓದುಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿಬಿಡುತ್ತವೆ.
 *_ಹಿನ್ನಲೆ:_*
ಜೈನಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಇದರ ಹುಟ್ಟಿನ ಹಿನ್ನಲೆ ಕಿ.ಪೂ.ಆರನೇ ಶತಮಾನಕ್ಕೆ ಸೇರಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಜೈನ ಪರಂಪರೆಯ ಪ್ರಕಾರ ಈ ಧರ್ಮವು ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿದ್ದು ಇಪ್ಪತ್ನಾಲ್ಕು ತೀರ್ಥಂತಕರರ ಮೂಲಕ ಬೆಳೆದುಬಂದಿದ್ದು, ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಜೈನಧರ್ಮಕ್ಕೆ ಸಂಘಟಿತ ರೂಪುನೀಡಿ ಪ್ರಚಾರ ಮತ್ತು ಪ್ರಸಾರ ಮಾಡಿದನೆಂದು ತಿಳಿಯಲಾಗಿದೆ. ವೈದಿಕ ಕಾಲಘಟ್ಟದಲ್ಲಿ ಯಜ್ಷ-ಯಾಗಗಳ ಅಧಿಕ್ಯ, ಪಶುಬಲಿ, ಬ್ರಾಹ್ಮಣರ ಪ್ರಾಬಲ್ಯ ಹಾಗೂ ವರ್ಣವ್ಯವಸ್ಥೆಯ ಕಾಠಿಣ್ಯತೆ ಸಮಾಜದಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಇವುಗಳಿಗೆ ಪ್ರತಿರೋಧದ ಹಿನ್ನಲೆಯಲ್ಲಿ ಬೌದ್ಧ ಮತ್ತು ಜೈನಧರ್ಮಗಳು ಉದಯವಾದವು ಎನ್ನಬಹುದು.
ಜೈನಧರ್ಮವು ಸರಳ ಆಚರಣೆ, ನೀತಿಪಾಠಗಳ ಮೂಲಕ ಜೀವನ ಮತ್ತು ಆತ್ಮಶುದ್ಧಿಗೆ ಮಹತ್ವ ನೀಡಿತು. ಸಾಮಾಜಿಕವಾಗಿ ನಗರೀಕರಣ, ವ್ಯಾಪಾರ ಮತ್ತು ವೈಶ್ಯವರ್ಗದ ವೃದ್ಧಿಯೂ ಜೈನಧರ್ಮದ ಬೆಳವಣಿಗೆಗೆ ಕಾರಣವಾಯಿತು. ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಹಾಗೂ ತ್ರಿರತ್ನಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ಯ್ರ  ಜೈನಧರ್ಮದ ಮೂಲ ತತ್ತ್ವಗಳಾಗಿವೆ. ಬೌದ್ಧ ಮತ್ತು ಜೈನಧರ್ಮಗಳೆರೆಡು ಶ್ರಮಣ ಪರಂಪರೆಯಿಂದ ಉದ್ಭಭವಿಸಿದ್ದು, ತಪಸ್ಸು, ಸಂಯಮ ಮತ್ತು ವೈರಾಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವು. ಜೈನಧರ್ಮಕ್ಕೆ ಮಗಧ ಪ್ರದೇಶದ ರಾಜಾಶ್ರಯ ಮತ್ತು ವ್ಯಾಪಾರಿಗಳ ಬೆಂಬಲದಿಂದ ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹರಡಿತೆನ್ನಬಹುದು.
ಈ ರೀತಿಯಾಗಿ ವೈದಿಕ ಧರ್ಮದ ಜಟಿಲ ಆಚರಣೆಗಳಿಗೆ ವಿರುದ್ಧವಾಗಿ ಮಾನವೀಯತೆ, ಅಹಿಂಸೆ ಮತ್ತು ಆತ್ಮಸಾಧನೆಯನ್ನು ಕೇಂದ್ರವಾಗಿಟ್ಟುಕೊಂಡ ಒಂದು ಧರ್ಮವಾಗಿ ಬೆಳೆದು ಬಂದಿತು.
ಕೊಲ್ಲದ ಧರ್ಮಕ್ಕೆ ಜಿನಾಗಮವೇ ತೌರುಮನೆಯಾಗಿದೆ:
ಕ್ಷಮೆಯೇ ಧರ್ಮ, ಧರ್ಮಕ್ಕೆ ದಯವೇ ಮೂಲ, ದಯವೇ ಅಹಿಂಸೆ, ಅಹಿಂಸೆಯೇ ಶಾಂತಿ, ಶಾಂತಿಯೇ ಸುಖ, ಸುಖದ ಅನುಭವವೇ ಜ್ಞಾನ, ಜ್ಞಾನಿಯೇ ಆತ್ಮ. ಆದುದರಿಂದ ಆತ್ಮನಿರೀಕ್ಷಣೆಗೆ ಮೊದಲು ಕ್ಷಮಾಗುಣವನ್ನು ಹೊಂದಬೇಕು. ಅಧ್ಯಾತ್ಮರಸಾನುಭವಿಯಾಗಲು ಕ್ಷಮಾಗುಣಧಾರಿಯೇ ಆಗಬೇಕು. ಕ್ಷಮಾ ವೀರಸ್ಯ ಭೂಷಣಂ! *ರತ್ನಾಕರ ಕವಿ ಹೇಳಿರುವಂತೆ* : ಕ್ಷಮೆ ಮಾಳ್ಪಂತೆ ವಿರೋಧಮೇಂ ಕೊಡುವುದೇ ಸಂತೋಷಮಂ? ಜೀವನದಲ್ಲಿ ಸಂತೋಷವನ್ನು ಕಾಣಲು ಕ್ಷಮೆಯನ್ನು ತಾಳಬೇಕು ಎಂಬಿತ್ಯಾದಿ ಜೈನಧರ್ಮದ ಉದಾತ್ತ ತ್ತ್ವ ಧ್ಯೇಯಗಳನ್ನು ಪಾಲಿಸಿದರೆ ಪತಿತ ಪಾವನನಾಗಬಲ್ಲ, ಜೀವ ಜೀವನ್ಮುಕ್ತನಾಗಬಲ್ಲ, ನರ ನಾರಾಯಣನಾಗಬಲ್ಲ, ಬುದ್ಧನು ಸಿದ್ಧನು ಸಿದ್ಧನಾಗಬಲ್ಲ ಎಂಬ ವಿಚಾರಗಳಿಗೆ ಮಾರುಹೋಗಿ ಜನ ತಲೆಬಾಗಿ ಜೈನಧರ್ಮವನ್ನು ಶಿರೋಧಾರಣೆ ಮಾಡಿ ಅನುಸರಿಸಲಾರಂಭಿಸಿದರು.
ಕರ್ನಾಟಕದಿ ಶ್ರವಣಬೆಳಗೊಳ, ಪುಲಿಗೆರೆ, ಕೊಪ್ಪಳ, ಬ್ರಹ್ಮಪುರಿ, ಬಳ್ಳಿಗಾವೆ, ತಾಲಗುಂದ, ಬನವಾಸಿ, ಐಹೊಳೆ, ಹುಂಚ, ಕಾರ್ಕಳ, ಮೂಡಬಿದ್ರೆ, ಗೇರುಸೊಪ್ಪೆ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ವಿದ್ಯಾಕೇಂದ್ರಗಳಿದ್ದವು. ಕನ್ನಡದ ಆದಿಗ್ರಂಥ ಕವಿರಾಜಮಾರ್ಗಕಾರ, ಆದಿಕವಿ ಪಂಪ, ಪೊನ್ನ, ರನ್ನ, ಜನ್ನ, ಚಾವುಂಡರಾಯ, ಅಗ್ಗಳ, ಸಾಳ್ವ, ನಯಸೇನ, ನೇಮಿಚಂದ್ರ, ರತ್ನಾಕರ, ಆಂಡಯ್ಯ ಪ್ರಮುಖ ಕವಿಗಳು ಹಾಗೂ ಸಮಂತಭದ್ರರು, ಭಟ್ಟಾಕಲಂಕರು, ಪೂಜ್ಯಪಾದರು, ಸಿಂಹನಂದಿಗಳೇ ಮುಂತಾದ ಪ್ರಮುಖ ಆಚರ‍್ಯರುಗಳು ಬರೆದಿರುವ ಮಹಾಕಾವ್ಯಗಳು, ಪುರಾಣಗಳು, ಸಿದ್ಧಾಂತಗಳು ಅಷ್ಟಿಷ್ಟಲ್ಲ, ಹೀಗೆ ಕನ್ನಡ ಸರಸ್ವತಿಯನ್ನು ಜೈನರು ಅನೇಕ ಗ್ರಂಥಗಳಿಂದ ಅಲಂಕರಿಸಿದ್ದಾರೆ. ಧರ್ಮ ಪ್ರಸಾರದೊಂದಿಗೆ ಸಾಹಿತ್ಯ ಸೇವೆ ಗೈದವರಲ್ಲಿ ಜೈನಮಹಿಳೆಯರು ದಾನಚಿಂತಾಮಣಿಗಳೆನಿಸಿದ್ದಾರೆ. ಸಂಗೀತ, ನೃತ್ಯ ಪ್ರವೀಣರೆನಿಸಿ, ವೀರ ರಮಣಿಗಳೆನಿಸಿ, ಸ್ತ್ರೀ ಸಮುದಾಯಕ್ಕೆ ಆದರ್ಶಪ್ರಾಯರಾದ ಅತ್ತಿಮಬ್ಬೆ, ಮಲ್ಲಿಕಬ್ಬೆ, ಜಕ್ಕೆಯಬ್ಬೆ, ರಾಣೀ ಶಾಂತಲಾದೇವಿ ಮುಂತಾದವರು ಜೈನ ನಾರೀರತ್ನಗಳಾಗಿದ್ದಾರೆ..
ಜೈನರೇ ಕನ್ನಡ ಭಾಷೆಯ ಆದಿಕವಿಗಳು, ಎಲ್ಲ ಪ್ರಾಚೀನ ಉತ್ತಮ ಕೃತಿಗಳು ಜೈನಕವಿಗಳದ್ದೆ ಆಗಿವೆ. ಕನ್ನಡ ಭಾಷೆಯ ಸೌಂಧರ‍್ಯವೂ, ಕಾಂತಿಯೂ ಹೆಚ್ಚಲು ಜೈನಕವಿಗಳೇ  ಕಾರಣ. ಪಂಪ, ರನ್ನ, ಪೊನ್ನರು ಕವಿಗಳಲ್ಲಿ ರತ್ನತ್ರಯರೇ ಆಗಿರುವರು. ಹದಿನಾಲ್ಕನೇ ಶತಮಾನದವರಗೆ ಕನ್ನಡ ಭಾಷೆಯ ಸಹಾಯಕ ಗ್ರಂಥಗಳಾದ ಛಂದಸ್ಸು, ಅಲಂಕಾರ, ವ್ಯಾಕರಣ, ಕೋಶ ಮೊದಲಾದ ಗ್ರಂಥಗಳು ಜೈನರಿಂದಲೇ ರಚಿತವಾದವು ಎಂದು ದಿ. ಆರ್. ನರಸಿಂಹಾಚರ‍್ಯರು ತಮ್ಮ ಕರ್ಣಾಟಕ ಕವಿಚರಿತೆಯಲ್ಲಿ ಬರೆದಿರುವರು; ಇದು ಜೈನರು ಕನ್ನಡ ಭಾಷೆಗೆ ನೀಡಿದ ಮಹತ್ತರ ಕೊಡುಗೆಯನ್ನು ಎತ್ತಿಹಿಡಿಯುತ್ತದೆ.
ಕನ್ನಡ ಜೈನ ನೋಂಪಿ[ವ್ರತ]ಕಥೆಗಳು:
ಜೈನಧರ್ಮದಲ್ಲಿ ಪರಿಪಾಲಿಸಲ್ಪಡುವ ನೋಂಪಿ[ವ್ರತ-ಉಪವಾಸ]ಗಳು ಮತ್ತು ಅವುಗಳಿಂದ ವ್ಯಕ್ತಿಗೆ ದೊರಕುವ ಆತ್ಮಶುದ್ಧಿ. ಸಂಯಮ ಹಾಗೂ ಕರ್ಮಕ್ಷಯದ ಫಲಗಳನ್ನು ವಿವರಿಸುವ ಧಾರ್ಮಿಕ-ನೈತಿಕ ಕಥಾನಕಗಳಾಗಿವೆ. ಈ ಕಥೆಗಳು ಜೈನಧರ್ಮದ ತಾತ್ವಿಕ ಅಂಶಗಳನ್ನು ಸರಳ ಕಥನರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಬಹುದು. ವಿಷಯ, ಪಾತ್ರ ಮತ್ತು ಉದ್ದೆಶಗಳ ಆಧಾರದ ಮೇಲೆ ನೋಂಪಿ ಕಥೆಗಳನ್ನು ಕೆಳಕಂಡ ವಿಧಗಳಲ್ಲಿ ವಿಂಗಡಿಸಬಹುದು:
೧. ಪಾತ್ರಾಧಾರಿತ ವಿಂಗಡಣೆ: ಸ್ತ್ರೀ, ಪುರುಷ, ರಾಜ, ಯೋಧ, ವ್ಯಾಪಾರಿ, ಮಕ್ಕಳು ಮುಂತಾದ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡ ಕಥೆಗಳು, ಇವುಗಳಲ್ಲಿ ಗೃಹಸ್ಥ ಜೀವನ ಮತ್ತು ಧರ್ಮಾಚರಣೆ ಪ್ರಮುಖವಾಗಿರುತ್ತದೆ.
೨. ವಿಷಯಾಧಾರಿತ ವಿಂಗಡಣೆ: ಪಾಪದಿಂದ ಪಶ್ಚಾತ್ತಾಪಕ್ಕೆ ಹೋಗುವ, ದುಃಖದಿಂದ ಧರ್ಮದತ್ತ ಸಾಗುವ, ವೈರಾಗ್ಯ ಮತ್ತು ತ್ಯಾಗದ ಕಥೆಗಳು ಈ ವಿಭಾಗಕ್ಕೆ ಸೇರುತ್ತವೆ.
೩. ಫಲಾಪೇಕ್ಷಾಧಾರಿತ ವಿಂಗಡಣೆ: ಐಹಿಕ ಫಲ[ಸಂತಾನ, ಆರೋಗ್ಯ, ಸಂಪತ್ತು] ಪಡೆಯುವ ಉದ್ದೇಶದ ಮತ್ತು ಆತ್ಮಶುದ್ಧಿ-ಮೋಕ್ಷದಂತಹ ಅಧ್ಯಾತ್ಮಿಕ ಫಲವನ್ನು ಗುರಿಯಾಗಿಟ್ಟುಕೊಂಡ ಕಥೆಗಳು.
 *೪. ಧರ್ಮತತ್ತ್ವಾಧಾರಿತ* *ವಿಂಗಡಣೆ:* ಅಹಿಂಸೆ, ಅಸ್ತೇಯ, ಬ್ರಹ್ಮರ‍್ಯೆ, ಅಪರಿಗ್ರಹ, ಕ್ಷಮೆ ಮುಂತಾದ ಜೈನತತ್ತ್ವಗಳನ್ನು ಬೋಧಿಸುವ ಕಥೆಗಳು.
೫ *. ಸಾಹಿತ್ಯಿಕ ಸ್ವರೂಪದ ಆಧಾರಿತ* ವಿಂಗಡಣೆ: ಸರಳ ಜನಪದ ಶೈಲಿ, ಉಪದೇಶಾತ್ಮಕ, ಪುರಾಣಾಧಾರಿತ ಹಾಗೂ ರೂಪಕಾತ್ಮಕ ನೋಂಪಿಕಥೆಗಳು.
೬. *ಗುರಿ ವಾಚಕರ ಆಧಾರಿತ* ವಿಂಗಡಣೆ: ಮಕ್ಕಳಿಗಾಗಿ, ಗೃಹಸ್ಥರಿಗಾಗಿ ಮತ್ತು ಸಾಧು-ಸಾಧ್ವಿಗಳಿಗೆ ಉದ್ದೇಶಿಸಿದ ಕಥೆಗಳು.
ಈ ರೀತಿ ಜೈನನೋಂಪಿ ಕಥೆಗಳು ಧಾರ್ಮಿಕ ಆಚರಣೆಗೂ ಜೊತೆಗೆ ನೈತಿಕ ಜೀವನದ ಮಾರ್ಗದರ್ಶನ ನೀಡುವ ಕಾರಣದಿಂದ ವಿವಿಧ ವಿಧಗಳಲ್ಲಿ ವಿಂಗಡಿಸಬಹುದಾದ ಸಮೃದ್ಧ ಸಾಹಿತ್ಯ ಪರಂಪರೆಯಾಗಿದೆ ಎಂದು ಹೇಳಬಹುದು.
ಕನ್ನಡ ಜೈನಸಾಹಿತ್ಯದಲ್ಲಿ ನೋಂಪಿಕಥೆಗಳು ತೀರ್ಥಂಕಕರರ ಜೀವನ, ಶ್ರಾವಕ-ಶ್ರಾವಿಕೆಯರ ತಪಸ್ಸು, ರಾಜರು ಮತ್ತು ಸಾಮಾನ್ಯ ಜನರು ನೋಂಪಿ ಪಾಲನೆಯ ಮೂಲಕ ಸತ್ಸಂಸ್ಕಾರಗಳಿಸಿದ ಘಟನೆಗಳನ್ನು ಒಳಗೊಂಡಿರುತ್ತವೆ. ವಿಶೇಷವಾಗಿ ಪರ್ಯುಷಣ [ಜೈನಧರ್ಮದ ಅತ್ಯಂತ ಪವಿತ್ರ ಹಾಗೂ ಮಹತ್ವದ ಧಾರ್ಮಿಕ ಆಚರಣೆಯಾಗಿದ್ದು, ಶ್ವೇತಾಂಬರರಲ್ಲಿ ಎಂಟುದಿನ, ದಿಗಂಬರರಲ್ಲಿ ಹತ್ತು ದಿನಗಳ ಕಾಲ – ಉಪವಾಸ, ಏಕಾಸನ, ನಿಯಮಿತ ಆಹಾರ ಆತ್ಮಪರಿಶೀಲನೆಯೊಂದಿಗೆ ಆತ್ಮಶುದ್ಧಿ, ಪಾಪಕ್ಷಮೆ ಯಾಚನೆ, ಸ್ವಯಂ ಸಂಯಮ ಸಾಧಿಸುವುದಾಗಿದೆ], ವರ್ಷೀತಪ [ಜೈನಧರ್ಮದ ಅತ್ಯಂತ ಕಠಿಣ ತಪಸ್ಸುಗಳಲ್ಲಿ ಒಂದಾಗಿದ್ದು, ಸುಮಾರು ಹದಿಮೂರು ತಿಂಗಳು, ಹದಿಮೂರು ದಿನಗಳ ಕಾಲ – ಒಂದು ದಿನ ಉಪವಾಸ ಅದರ ಮುಂದಿನ ದಿನ ಏಕಾಸನಗೈಯುತ್ತ ಕರ್ಮಕ್ಷಯ, ಇಂದ್ರಿಯ ನಿಗ್ರಹ ಹಾಗೂ ಆತ್ಮೋದ್ಧಾರ ಹೊದುವುದು ಮುಖ್ಯ ಉದ್ದೇಶವಾಗಿದೆ], ಏಕಾಸನ [ದಿನಕ್ಕ ಒಂದೇ ಸಮಯ, ಒಂದೇ ಸ್ಥಳದಿ ಆಸನ ಬದಲಿಸದೆ ಮಿತಆಹಾರ ಸೇವಿಸುವುದರೊಂದಿಗೆ ಮನಸ್ಸಿನ ಓಟಕ್ಕೆ ಅಥವಾ ಆಸೆಗೆ ಕಡಿವಾಣ ಹಾಕುವುದು, ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ], ಉಪವಾಸ[ಆಹಾರ ತ್ಯಾಗ: ಏಕೋಪವಾಸ– ಒಂದುದಿನ, ಅಠ್ಠಮ– ಮೂರುದಿನ, ಮಾಸಾಕ್ಷಣ ಮೂವತ್ತು ದಿನ ಬರೀ ನೀರು ಕುಡಿಯುತ್ತಾ.., ಅದೂ ಇಲ್ಲದೇ ನಡೆಸುವ ವ್ರತಾಚರಣೆಯಾಗಿದ್ದು, ದೇಹಕ್ಕಿಂತ ಆತ್ಮಕ್ಕೆ ಮಹತ್ತು ನೀಡುವುದು, ಕರ್ಮಬಂಧನ ಕಡಿಮೆಮಾಡಿಕೊಳ್ಳುವುದು ಇದರ ಮುಖ್ಯ ಉದ್ದೆಶವಾಗಿದೆ] ಈ  ಮೊದಲಾದ ನೋಂಪಿಗಳ ಕಥನಗಳು ಹೆಚ್ಚಾಗಿ ಕಂಡುಬರುತ್ತವೆ.
ವೈದಿಕ – ಜೈನ ಪ್ರತಿರೋಧ:
ಬಿಡಲಾರದ ನೋಂಪಿ[ವ್ರತ]ಗಳು– ಅಹಿಂಸಾತತ್ತ್ವಪರಿಪಾಲನೆಯಿಂದಲೇ ಮಾನವರಿಗೆ ಮುಕ್ತಿ:
ಸೋಮಶರ್ಮಭಟ್ಟ ವೈದಿಕ ಕರ್ಮಗಳನ್ನು ತಪ್ಪದೆ ಆಚರಿಸುತ್ತಿದ್ದ ನಿಷ್ಠಧಾರ್ಮಿಕ ವ್ಯಕ್ತಿ. ಅವನಿಗೆ ಸದ್ಗುಣಸಂಪನ್ನೆಯಾದ ನಾಗಶ್ರೀ ಎಂಬ ಮಗಳಿದ್ದಳು. ಹೀಗೆ ಒಮ್ಮೆ ಆ ಊರಿಗೆ ಸರ‍್ಯಮಿತ್ರಾಚರ‍್ಯರೆಂಬ ಜೈನಮುನಿಗಳು ಬಂದು ಪ್ರತಿದಿನ ಪ್ರವಚನಗಳನ್ನು ನೀಡಿ ಅನೇಕ ಬಗೆಯ ಧರ್ಮೋಪದೇಶಗಳನ್ನು ನೀಡುತ್ತಿದ್ದರು. ಆ ಪ್ರವಚನಗಳನ್ನು ಕೇಳಿದ ನಾಗಶ್ರೀ ಪ್ರಭಾವಿತಳಾಗಿ ಗುರುಗಳಲ್ಲಿ ತನಗೂ ವ್ರತಗಳನ್ನು ನೀಡುವಂತೆ ಕೇಳಿಕೊಂಡಳು; ಚತುರೆ-ಬುದ್ಧಿವಂತೆಯಾದ ನಾಗಶ್ರೀ ವ್ರತಗಳನ್ನು ಪಾಲಿಸಬಲ್ಲಳು ಎಂದೆಣಿಸಿದ ಗುರುಗಳು– ಅಹಿಂಸೆ, ಸತ್ಯ, ಅಸ್ತೇಯ [ಕಳ್ಳತನ ಮಾಡದಿರುವುದು], ಬ್ರಹ್ಮರ‍್ಯ ಮತ್ತು ಅಪರಿಗ್ರಹ [ದುರಾಸೆಯನ್ನು ಮಾಡದಿರುವುದು] ವ್ರತಗಳನಿತ್ತರು. ಭಕ್ತಿ-ಭಾವದಿಂದ ಸ್ವೀಕರಿಸಿದ ನಾಗಶ್ರೀ ಮನೆಗೆ ಬಂದಳು. ವಿಷಯ ತಿಳಿದ ಸೋಮಶರ್ಮಭಟ್ಟ ಮಗಳೇ, ನಾವು ಬ್ರಾಹ್ಮಣರು, ಜಗತ್ತಿನಲ್ಲಿ ಶ್ರೇಷ್ಠರಾದವರು, ನಾವು ಜೈನರ ವ್ರತಗಳನ್ನು ಪರಿಗ್ರಹಿಸಬಾರದು, ವ್ರತಗಳನ್ನು ಮರಳಿಸುವಂತೆ ತಂದೆಯು ಸೂಚಿಸಲು, ನೀವೂ ನನ್ನ ಜೊತೆಬನ್ನಿ ಎಂದು ಮುನಿಗಳ ಬಳಿಗೆ ಕರೆದೊಯ್ಯುವಾಗ ದಾರಿ ಮಧ್ಯೆ ನಡೆದ ಘಟನಾವಳಿಗಳೂ ಕಥೆಗೆ ಮುಖ್ಯತಿರುವನ್ನು ನೀಡುತ್ತವೆ.
ಅವು ಇಂತಿವೆ: ಬಂಧಿತ ಕೊಲೆಪಾತಕ–ಅಹಿಂಸಾ ವ್ರತ, ಬಂಧಿತ ಸುಳ್ಳುಗಾರ-ಜನರನ್ನು ವಂಚಿಸುವವ- ಸತ್ಯವ್ರತ, ಬಂಧಿತ ಕಳ್ಳ– ಅಸ್ತೇಯ ವ್ರತ, ಬಂಧಿತ ಮೋವಾಳಿ ಹೆಂಗಸು ಮತ್ತು ನಾಗಸೂರ ವರ್ತಕನ ಮಗ– ವ್ಯಭಿಚಾರ-ಪರಪುರುಷನ ಸ್ನೇಹ ತಪ್ಪು- ಬ್ರಹ್ಮಚರ‍್ಯೆ ವ್ರತ, ಬಂಧಿತ ದುರಾಸೆಯ ವ್ಯಕ್ತಿ– ಅಪರಿಗ್ರಹ ವ್ರತ, ಕೊನೆಗೆ ತಂದೆಯು ಮಗಳ ಎಲ್ಲ ವ್ರತಗಳನ್ನು ಆಚರಿಸಲು ಒಪ್ಪಿದ. ಮಗಳು ಮುನಿಗಳ ಬಳಿಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದಳು; ಆಗ ಮುನಿಗಳು ಬ್ರಾಹ್ಮಣ ಧರ್ಮವಾದರೇನು? ಸೂಕ್ಷ್ಮವಾಗಿ ಅವಲೋಕಿಸಿದರೆ ಸತ್ಯಧರ್ಮವೇ ಧರ್ಮ! ಅಂತಹ ಧರ್ಮ ಆತ್ಮನಿಷ್ಟವಾದದ್ದು, ಧರ್ಮವನ್ನು ಜಾತಿಯಿಂದ ಪರಿಗಣಿಸಿದಾಗ ವ್ಯಕ್ತಿನಿಷ್ಟವಾಗಿ ರಾಗಾದ್ವೇಷಾದಿಗಳು ಉದ್ಭವಿಸುವುವು, ಈ ಪಂಚಾಣುವ್ರತಗಳು ಯಾವ ಧರ್ಮಕ್ಕೆ ತಾನೇ ವಿರೋಧ? ಜಗತ್ತಿನ ಸಕಲ ಜನರೂ ಅನುಸರಿಸಲು ಯೋಗ್ಯವಾದವುಗಳು; ಜಿನಪೂಜೆಗೆ ಅಡ್ಡಿಮಾಡಿದವರು ತಿರುಕರಾಗಿ ಅನ್ನಅನ್ನ ಎಂದು ಬಾಯಿ ಬಿಡಬೇಕಾಗುವುದು, ಜಿನಧರ್ಮವನ್ನು ದೂಷಿಸುವವರು ಕುಷ್ಠರೋಗಕ್ಕೆ ತುತ್ತಾಗುವರು, ಅನ್ನದಾನಕ್ಕೆ ಅಡ್ಡಿಮಾಡಿದವರು ಹಸಿವಿನಿಂದ ಕಂಗಾಲಾಗುವರು; ಬಡವನ ಸುಖ, ಹೇಡಿಯ ಕೋಪ, ಮುಗಿಲ ನೆಳಲು, ಪ್ರಿಯರ ಮುನಿಸು, ಮಹಾಮೂರ್ಖರ ತಪಸ್ಸು ಇವಾವೂ ಸ್ಥಿರವಲ್ಲ; ಶ್ರೀಶೇಣನು ದಾನಮಾಡಿದ ಮಹಾಪುಣ್ಯದಿಂದಲೇ ಮುಂದೆ ಶಾಂತಿನಾಥ ತೀರ್ಥಂಕರ ನಾಗಲಿಲ್ಲವೇ? ಆಹಾರ, ಅಭಯ, ಔಷಧಿ ಮತ್ತು ಶಾಸ್ತ್ರದಾನಗಳು ಗೃಹಸ್ಥರಿಗೆ ಅನಂತ ಸಿರಿಯ ವ್ಯವಸಾಯದಲ್ಲಿ ಬಿತ್ತಬೇಕಾದ ಗಟ್ಟಿ ಬೀಜಗಳಾಗಿವೆ ಎಂದು ಅನೇಕ ವಿಧದಿಂದ ಬೋಧಿಸಿದರು.
ಪೂರ್ವಭವದ ಸ್ಮರಣೆ – ಜನ್ಮಾಂತರಗಳ ಕಥೆ:
ಭಗವಾನ್ ಮಹಾವೀರ ತೀರ್ಥಂಕರರ ವಿಹಾರ ಮಗಧ ದೇಶದಲ್ಲಿ ನಡದಿತ್ತು, ರಾಜಗೃಹ ಅದರ ರಾಜಧಾನಿಯಾಗಿದ್ದು, ಶ್ರೇಣುಕನೆಂಬ ಮಹಾರಜ ರಾಜ್ಯಭಾರ ಮಾಡುತ್ತಿದ್ದನು. ಅದೇ ನಗರದಲ್ಲಿ ನಾಗದತ್ತನೆಂಬ ಧನಿಕ ಆತನ ಹೆಂಡತಿ ಭವದತ್ತೆ ದಂಪತಿಗಳಿಬ್ಬರೂ ಧರ್ಮಮಾರ್ಗದಲ್ಲೇ ನಡೆಯುತ್ತಿದ್ದರು. ಆದರೆ ಕಾಲಗರ್ಭದಲ್ಲಿ ಏನ್ ಅಡಗಿದೆಯೋ ಬಲ್ಲವರಾರು? ನಾಗದತ್ತ ಅಕಾಲಿಕ ಮರಣಕ್ಕೆ ತುತ್ತಾದ, ಹೆಂಡತಿಯ ಮೇಲಿನ ವ್ಯಾಮೋಹದಿಂದ ಮೃತ್ಯುವಶನಾದ ನಾಗದತ್ತ ಮರುಜನ್ಮದಿ ಕಪ್ಪೆಯಾಗಿ ಹುಟ್ಟಿದ. ತನ್ನ ಮನೆಯ ಹಿತ್ತಲಿನ ಬಾವಿಯೇ ಆವಾಸಸ್ಥಾನವಾಗಿತ್ತು. ದಿನದಿನವೂ ಸೊರಗುತ್ತಿತ್ತು, ಆ ಬಾವಿಯಿಂದ ಹೊರಬರಲಾರದೆ ತಳಮಳಿಸುತ್ತಿತ್ತು.
ಒಂದು ದಿನ ಅಚಾನಕ್ಕಾಗಿ ಬಾವಿಯಿಂದ ನೀರು ಸೇದುವಾಗ ಬಿಂದಿಗೆಯೊಳಕ್ಕೆ ತೂರಿ ಹೊರಕ್ಕೆ ಬಂದುಬಿಟ್ಟಿತು.., ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಮನೆಯೊಳಕ್ಕೆ ಸೇರಿಕೊಂಡಿತು, ಹೆಂಡತಿ ಭವದತ್ತೆಯನ್ನು ಕಂಡಕೂಡಲೇ ಪ್ರೀತಿಯಿಂದ ಆಕೆಯ ಮೇಲೆ ಜಿಗಿಯುತ್ತ ಜಿಗಿಯುತ್ತಾ ಹೋಯಿತು ಹೆದರಿದ ಆಕೆಯ ಮನೆಯಿಂದ ಕಪ್ಪೆಯನ್ನು ಹೊರದೂಡಿ ಬಾಗಿಲು ಮುಚ್ಚಿಕೊಂಡಳು, ಅದು ಬಾಗಿಲು ತೆಗೆಯುವುದನ್ನೇ ಕಾಯ್ದು ಕುಳಿತು ಆಕೆಯನ್ನು ಕಂಡೊಡನೆ ಮತ್ತೆ ಮೇಲೆ ಜಿಗಿಯುತ್ತಿತ್ತು, ಭವದತ್ತೆಗೆ ಇಲ್ಲದ ಕಿರಿಕಿರಿಯನ್ನುಂಟುಮಾಡುತ್ತಿತ್ತು; ಹೀಗಿರುವಾಗ ಆ ನಗರಕ್ಕೆ ಸುವ್ರತರೆಂಬ ಜೈನಮುನಿಗಳು ಆಗಮಿಸಿದ್ದರು, ಅವರಿಗೆ ಅವಧಿಜ್ಞಾನವಿತ್ತು-ಕುಳಿತೆಡೆಲ್ಲೇ ಎಲ್ಲವನ್ನೂ ತಿಳಿಯುವ ಶಕ್ತಿಯೇ ಅವಧಿಜ್ಞಾನದ ಸ್ವರೂಪ. ವಿಷಯ ತಿಳಿದ ಭವದತ್ತೆ ಮುನಿಗಳ ದರ್ಶನ ಪಡೆದು ತನ್ನ ಸಂಕಷ್ಟಕ್ಕೆ ಪರಿಹಾರ ಕೇಳಲು ಮುನಿಗಳು ನಿನ್ನ ಪತಿಯ ಜೀವವೇ ಆ ಕಪ್ಪೆ. ಆರ್ತಧ್ಯಾನ*ದಿಂದ, ವ್ಯಾಮೋಹದಿಂದ ನಿನ್ನನ್ನು ಬಿಡಲಾರದೆ ಸತ್ತ ನಿನ್ನ ಪತಿ ಈ ಭವದಲ್ಲಿ ಕಪ್ಪೆ*ಯಾಗಿದ್ದಾನೆ, ಪೂರ್ವಭವದ ಸ್ಮರಣೆಯಿಂದ ಪೀಡಿತನಾಗಿ ನಿನ್ನ ಹತ್ತಿರಕ್ಕೆ ಬರುತ್ತಿದ್ದಾನೆ ಎಂದು ನುಡಿದರು. ವಿಷಯ ತಿಳಿದಂದಿನಿಂದ ಕಪ್ಪೆಯ ಮೇಲೆ ಕನಿಕರ, ಮರುಕ ಉಂಟಾಯಿತು, ಅದನ್ನು ಮನೆಯಲ್ಲಿಯೇಇಟ್ಟು ಭಯ-ಭಕ್ತಿಯಿಂದ ಸೇವೆ ಮಾಡತೊಡಗಿದಳು, ಅದು ಕೂಡ ಸಮಾಧಾನಗೊಂಡು ಆಕೆಯೊಂದಿಗೆ ಹೊಂದಿಕೊಂಡಿರತೊಡಗಿತು.  
ಮಗದೊಂದು ದಿನ ಭಗವಾನ್ ಮಹಾವೀರರು ವಿಹಾರಗೈಯ್ಯುತ್ತಾ ನಗರಕ್ಕೆ ಬಂದಿರುವ ಸುದ್ದಿಯನ್ನು ತಿಳಿದ ಜನತೆ ದರ್ಶನಭಾಗ್ಯವ ಪಡೆಯಲು ತಾಮುಂದು-ನಾಮುಂದು ಎಂದು ಸಡಗರ-ಸಂಭ್ರಮಾಚರಣೆಯೊಂದಿಗೆ ಸಾಗಿದರು, ಇದನ್ನು ಕಂಡು ಕಪ್ಪೆ ಮಹಾವೀರರ ದರ್ಶನಕ್ಕೆಂದು ಎಲ್ಲರೂ ಮಂಗಳದ್ರವ್ಯಗಳನ್ನು ಹೊಯ್ಯುತ್ತಿದ್ದಾರೆ ನಾನು ಏನನ್ನಾದರೂ ತೆಗೆದುಕೊಂಡು ಹೋಗಬೇಕು ಯೋಚಿಸುತ್ತಿರುವಾಗಲೇ ತನಗೆ ಸಿಕ್ಕ ಹೂ ವೊಂದನ್ನು ಬಾಯಲ್ಲಿ ಕಚ್ಚಿಹಿಡಿದುಕೊಂಡು ಹೊರಟಿತು. ಇತ್ತ ನಗರಕ್ಕೆ ಆಗಮಿಸಿದ ಮಹಾವೀರರನ್ನು ಸ್ವಾಗತಿಸಲು ಶ್ರೇಣಿಕನೂ ಆನೆಯ ಅಂಬಾರಿಯ ಮೇಲೆ ಹೊರಟಿದ್ದನು, ಕಪ್ಪೆಯೂ ಕುಪ್ಪಳಿಸುತ್ತಾ.., ಕುಪ್ಪಳಿಸುತ್ತಾ.., ದರ್ಶನ ಭಾಗ್ಯವ ಪಡೆಯಲು ಹೊರಟಿತ್ತು, ಆನೆಯಂಥ ಆನೆಗೆ ಸಣ್ಣಕಪ್ಪೆ ಅದ್ಹೇಗೆ ಕಂಡೀತೇ? ಆನೆ ಕಾಲ್ತುಳಿತಕ್ಕೆ ಸಿಕ್ಕು ಬಡಜಂತು ಉಳಿದುವುದುಂಟೇ? ನುಚ್ಚುನೂರಾಯಿತು! ಆದರೂ ಅದು ಭಕ್ತಿ-ಭಾವದಿಂದ ಕಚ್ಚಿದ್ದ ಹೂವು ಬಾಯಲ್ಲೇ ಇತ್ತು! ಆದರೆ ಮೃತ್ಯವನ್ನುಪ್ಪುವಾಗ ಅದರ ಮನಸ್ಸಿನಲ್ಲಿ ಮಹಾವೀರ ತೀರ್ಥಂಕರರ ಧ್ಯಾನವೇ ತುಂಬಿ ಹೋಗಿದ್ದರಿಂದ ಈ ಸದ್ಭಾವನೆಯ ದೆಸೆಯಿಂದಲೇ ಕಪ್ಪೆಗೆ ಅಂದರೆ ನಾಗದತ್ತನಿಗೆ ಸದ್ಗತಿಯು ಪ್ರಾಪ್ತಿಯಾಯಿತು.
ಧ್ಯಾನಗಳಲ್ಲಿ ನಾಲ್ಕುವಿಧಗಳು: ಆರ್ತಧ್ಯಾನ*[ಅತಿಆಸೆ, ನಿರತರೊಡನೆ ದುರ‍್ಮೋಹ], ರೌದ್ರಧ್ಯಾನ [ಕೋಪ, ಹಿಂಸೆ, ಅಪಕಾರ, ಅಹಂಕಾರ], ಧರ್ಮಧ್ಯಾನ [ಧಾರ್ಮಿಕತೆ, ದಯಾ, ಸಾಧುತ್ವ, ಧ್ಯಾನಾಸಕ್ತಿ], ಶುಕ್ಲಧ್ಯಾನ [ಇಂದ್ರಿಯಜಯ, ಪರಮಾತ್ಮ, ಅಂತರಾತ್ಮ ದರ್ಶನ, ಮೋಕ್ಷ].
ಲೇಶ್ಯೆ: ಮನಸ್ಸಿನಲ್ಲಿ ಉಂಟಾಗುವ ವಿವಿಧ ಪರಿಣಾಮಗಳು, ಇದರಲ್ಲಿ ಆರು ವಿಧಗಳು: ಕೃಷ್ಣಲೇಶ್ಯೆ [ಕೋಪಿಷ್ಟ, ನಿರ್ದಯಿ, ಧರ್ಮಹೀನತೆ -ನರಕಗತಿ], ನೀಲಲೇಶ್ಯೆ [ಸೋಮಾರಿ, ಅಂಜುಬುರುಕ, ವ್ಯಾಮೋಹಿ -ಏಕೇಂದ್ರಿಯ ಜೀವ], ಕಾಪೋತಲೇಶ್ಯೆ [ದುಃಖಿ, ಆತ್ಮಪ್ರಶಂಸೆ, ಸಿಡುಕು -ನೀಚಯೋನಿಯಲ್ಲಿ ಜನ್ಮತಾಳುವುದು], ಪೀತಲೇಶ್ಯೆ [ಬುದ್ಧಿವಂತ, ದಯಾಶಾಲಿ-ಮುನುಷ್ಯಗತಿಯಲ್ಲಿ ಹುಟ್ಟುವುದು], ಪದ್ಮಲೇಶ್ಯೆ[ಉದಾರಿ, ಕ್ಷಮಾಗುಣಿ, ಧಾರ್ಮಿಕ–ದೇವಗತಿ], ಶುಕ್ಲಲೇಶ್ಯೆ [ದೋಷರಹಿತ, ಆತ್ಮಧಾನ, ನಿತ್ಯತೃಪ್ತ–ಮೀಕ್ಷಪ್ರಾಪ್ತಿ].
ಫಲಾಫಲ: ಕೋಪಿ-ಹುಲಿಯಾಗಿ, ಗರ್ವಿ-ಕತ್ತೆಯಾಗಿ, ಕಪಟಿ-ಹುಳು, ಕ್ರಿಮಿಯಾಗಿ, ಲೋಭಿ-ಸರ್ಪವಾಗಿ, ಅತಿಕಾಮಿ- ಕಪ್ಪೆ, ಪಾರಿವಾಳವಾಗಿ ಹುಟ್ಟುವನು.

ಜೈನ ಕಥಾಕೋಶ:
ರವಿವಾರ, ಶುಕ್ರವಾರ, ಫಲಮಂಗಳವಾರ ನೋಂಪಿಕಥೆ, ಸೂತಕ ಪರಿಹಾರ, ಸಿದ್ಧರ, ಹಿಡಿಯಕ್ಕಿಯ, ದುರ್ಗತಿ ನಿವಾರಣೆ, ದೀಪಾವಳಿ, ಭವರೋಗಾಷ್ಟಮಿ, ಜೀವದಯಾಷ್ಟಮಿ, ನಿರತಿಶಯಸುಖ, ಪಂಚಾಣು ವ್ರತದ, ದಶಲಕ್ಷಣ, ಸೌಭಾಗ್ಯದ, ಗೌರೀ, ಶ್ರೀಮದನಂತ, ಶಿವರಾತ್ರೆ, ಐದು ಕೊಳಗನ, ನಾಗರಪಂಚಮಿಯ ಹೀಗೆ ಜೈನ ಕಥಾಕೋಶವು ನೋಂಪಿಕಥೆಗಳು ಭಾಗದಿ ಒಟ್ಟು ಹತ್ತೊಂಬತ್ತು ಕಥೆಗಳನ್ನು ಒಳಗೊಂಡಿದೆ.
ವಿಚಿತ್ರ ನೋಂಪಿ[ವ್ರತ]ಗಳು: ನಿಶ್ಯಂಕೆ-ಅಂಜನಾಚೋರನ ಕಥೆ:
ಕಾಶ್ಮೀರ ಪ್ರಾಂತ್ಯದ ವಿಜಯಪುರ ನಗರ, ಅರಿಮಥನು ರಾಜನಾಗಿದ್ದನು. ಸೌಂದರಿಯು ಆತನ ಅರ್ಧಾಂಗಿ ಯಾಗಿದ್ದಳು, ಇವರಿಬ್ಬರ ಕಣ್ಮಣಿಯಾಗಿ ಲಲಿತಾಂಗನು ಜನಿಸಿದನು. ಪೋಲಿ ಹುಡುಗರ ಸಂಗವಮಾಡಿ ವಿಷಯಾಸಕ್ತನಾಗಿ, ಹಂದಿಗಳ ಗುಂಪಿನಲ್ಲಿ ಸೇರಿಕೊಂಡ ಹಸುವಿನ ಕರುವೂ ಹೇಲು ತಿನ್ನುವುದನ್ನು ಕಲಿಯದಿರದು ಎನ್ನುವಂತೆ ಅಡ್ಡದಾರಿಯನ್ಹಿಡಿದನು. ದೇಶಭ್ರಷ್ಟನಾದ ಲಲಿತಾಂಗನು ವಿಜಯಪುರವನ್ನು ತೊರೆದು ನೇಪಾಳ ದೇಶಕ್ಕೆ ಬಂದು ಕಳ್ಳರ ಬಳಗದಿ ಸೇರಿಕೊಂಡನು.
ಅಂಜನ ಘಂಟಿಕೆಯನ್ನು ಸಿದ್ಧಿಮಾಡಿಕೊಂಡು ಅಂಜನಚೋರ, ಚೋರಶಿಖಾಮಣಿ ತಾನೆನಿಸಿ ಜೂಜುಕೋರ, ಬೇಟೆಗಾರನಾದನು. ಜಿನದತ್ತ ಶೆಟ್ಟಿಯ ಗಗನಗಾಮೀ ವಿದ್ಯೆಯು ಆತನ ಅನುಚರನಿಂದ ಈತನು ಕೈವಶಮಾಡಿಕೊಂಡನು. ಇದನ್ನು ಕಂಡು ಜಿನದತ್ತಶೆಟ್ಟಿಯು ತನಗೆ ಈ ಗಗನಗಾಮೀ ವಿದ್ಯೆ ಲಭಿಸಿದ ಬಗೆಯನ್ನು ವಿವರಿಸಿದನು. ಜಿನಪವೆಂಬ ದೇಶ, ಭುಮಿತಿಲಕ ನಗರ, ನರಪಾಲನು ರಾಜನಾಗಿದ್ದನು, ರಾಜಶ್ರೇಷ್ಠಿ ಸೌಂದರ, ಸುನಂದೆಯು ಸೆಟ್ಟಿಯ ಪತ್ನಿ ಯಾಗಿದ್ದಳು. ಈ ದಂಪತಿಗಳಿಗೆ- ಶ್ರೀವರ್ಮ, ಜಯವರ್ಮ, ಜಿನವರ್ಮ, ಜಿನದತ್ತ, ಜಿನದಾಸ ಮತ್ತು ಧನ್ವಂತರಿ ಎಂಬ ಆರು ಜನ ಮಕ್ಕಳಿದ್ದರು.
ರಾಜನ ಪುರೋಹಿತ ಸೋಮಶರ್ಮ ಇವನ ಹೆಂಡತಿ ಅಗ್ಗಿಲಿ, ಇವರ ಮಗ ವಿಶ್ವಾನುಲೋಮ ಮತ್ತು ಧನ್ವಂತರಿಯೂನ ಪ್ರಾಣಕ್ಕೆ ಪ್ರಾಣ ನೀಡುವ ಸ್ನೇಹಿತರು. ಇಬ್ಬರೂ ವಿಷಯಾಸಕ್ತರಾಗಿ ತಂದೆ-ತಾಯಿಯರ ಮಾತನ್ನೂ ಕೇಳದೆ ಇವರು ಊರುಬಿಟ್ಟು ಹೊರಟು ಕಳ್ಳರ ಗುಂಪು ಸೇರಿ ಒಬ್ಬೊಬ್ಬರು ಐನೂರು ಕಳ್ಳರ ಗುಂಪಿಗೆ ನಾಯಕರಾದರು. ಧನ್ವಂತರಿ ಮಾತ್ರ ಜಿನಾಲಯಕ್ಕೆ ಹೋಗುವುದನ್ನು ಮಾತು ತಪ್ಪಿಸಲಿಲ್ಲ, ಇಬ್ಬರೂ ಸ್ನೇಹಿತರು ಜೊತೆಗೂಡಿ ಮುನಿಗಳ ಪ್ರವಚನ ಕೇಳಿದಮೇಲೆ ವ್ರತಗಳನ್ನು ಅನುಗ್ರಹಿಸಿ ಎಂದು ಬೇಡಲು ಮುನಿಗಳು “ದಿನವೂ ಬೋಳುತಲೆ ಕಂಡ ಹೊರತು ಊಟಮಾಡಬೇಡ” ಎಂಬ ವ್ರತವನ್ನು ನೀಡಿದರು. ಈ ವ್ರತ ನೀವು ಕೇಳಿದ ಕೂಡಲೇ ಬೋಳುತಲೆ ಕುಂಬಾರನಿಗೆ ನಿಧಿಸಿಕ್ಕು, ಇವನು ಕಂಡೆ ನಾ ಕಂಡೆ ಎನ್ನಲು ವಿಷಯ ತಿಳಿದಿದೆಯೆಂದು ನಿಧಿಯ ಅರ್ಧಭಾಗವನ್ನು ನೀಡಿದನೆಂಬ ಕಥೆಯು ನೆನಪಿಗೆ ಬಂತೇ ಅದೇ ಕಥೆಯಿದು; ಮುಂದುವರೆದು ಮುನಿಗಳ ಬಳಿ ಹೋಗಿ ನಡೆದದ್ದೆಲ್ಲವನ್ನೂ ಹೇಳಿದಾಗ “ಎಷ್ಟೇ ಹಸಿವಾಗಿರಲಿ ಹೆಸರು ಗೊತ್ತಿಲ್ಲದ ಹಣ್ಣುಗಳನ್ನು ತಿನ್ನಬೇಡ” ಎಂಬ ವ್ರತವನ್ನು ದಯಪಾಲಿಸಿದರು.
ಈ ವ್ರತವನು ಹಿಡಿದ ಧನ್ವಂತರಿಯ ಮತ್ತು ಆತನ ಗೆಳೆಯ ತಮ್ಮತಮ್ಮ ಗುಂಪಿನೊಂದಿಗೆ ಸಾಗಿ ದರೋಡೆ ಮಾಡಿಕೊಂಡು ಕಾಡಿನ ದಾರಿಮಧ್ಯೆ ಆಯಾಸಗೊಂಡು, ಹಸಿವೆಯಿಂದ ಕಂಗೆಟ್ಟಾಗ ಕಾಡಿನಲ್ಲಿ ಪರಿಮಳಸೂಸುವ ರಸಭರಿತಹಣ್ಣುಗಳನ್ನು ಕಂಡು ಎಲ್ಲರೂ ತಿಂದರೂ ಇವರು ಮಾತ್ರ ವ್ರತದ ನಿಯಮದಂತೆ ಹೆಸರು ಗೊತ್ತಿರದ ಹಣ್ಣುಗಳನ್ನು ತಿನ್ನಲಿಲ್ಲ, ತಿಂದವರೆಲ್ಲರೂ ಸತ್ತರು, ಗೆಳಯರಿಬ್ಬರೂ ಒಡವೆ-ವಸ್ತç, ಧನ-ಕನಕಾದಿಗಳನ್ನೆಲ್ಲ ಸಮನಾಗಿ ಹಂಚಿಕೊಂಡು, ಮುನಿಗಳ ಬಳಿಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಲು; “ಎಂಥಾ ಸಮಯದಲ್ಲೂ ಹಿಟ್ಟಿನಿಂದ ಮಾಡಿದ ಮಾಟದ ಎತ್ತನ್ನೂ, ಬಂಡಿಯನ್ನೂ ತಿನ್ನಬಾರದು” ಎಂಬ ವ್ರತವನ್ನು ದಯಪಾಲಿಸಿದರು.
ಮತ್ತೊಂದು ಬೇರೊಂದು ನಗರಕ್ಕೆ ನುಗ್ಗಿ ಲೂಟಿಮಾಡಿಕೊಂಡು ಕಾಡಿನ ಹಾದಿಹಿಡಿದು ಬರುವಾಗ ನಾಗರಪಂಚಮಿ ದಿನ ಹುತ್ತಕ್ಕೆ ಪೂಜೆ ಸಲ್ಲಿಸಿ ಎಡೆಹಿಡಿದ ಹಿಟ್ಟಿನ ಎತ್ತನ್ನು ಬಂಡಿಯನ್ನು ಕಂಡು ಕಳ್ಳರೆಲ್ಲರೂ ತಿಂದರು ವ್ರತದ ನಿಯಮ ಪಾಲಿಸಿದ ಸ್ನೇಹಿತರು ಮಾತ್ರ ತಿನ್ನಲಿಲ್ಲ, ಹಿಟ್ಟಿನ ಎತ್ತು ಬಂಡಿಗಳ ಮೇಲೆ ನಾಗಶೇಷನು ವಿಷಕಾರಿದ್ದರಿಂದ ಎಲ್ಲರೂ ಸತ್ತುಹೋದರು, ಇವರು ಮಾತ್ರ ಬದುಕುಳಿದು ದೋಚಿದ್ದೆಲ್ಲವನ್ನೂ ಹಂಚಿಕೊಂಡು, ಮುನಿಗಳ ಬಳಿಬಂದು ವಿಷಯ ತಿಳಸಲು “ಅಷ್ಟಮಿ ಮತ್ತು ಚತುರ್ದಶಿಯಂದು ಹೆಂಡವನ್ನೂ, ಮಾಂಸವನ್ನೂ ತಿನ್ನಬಾರದು” ಎಂಬ ವ್ರತವನ್ನು ದಯಪಾಲಿಸಿದರು.
ಮಗದೊಂದು ದಿನ ಮಗದೊಂದು ಊರು, ದರೋಡೆಮಾಡಿ ನಗ-ನಾಣ್ಯಗಳನ್ನು ಹೊತ್ತಕೊಂಡು ಬಂದು ಊರ ಹೊರವಲಯದಿ ಬಿಡಾರಹೂಡಿ ಸಂಭ್ರಮಾಚರಣೆಗೆಂದು ಮಧ್ಯ ಮತ್ತು ಮಾಂಸದೂಟವನ್ನು ಸಿದ್ಧಪಡಿಸಲು ಮುಂದಾಗಿ ಎರಡೂ ಗುಂಪಿನ ಕಡೆಯವರು ಮಧ್ಯ-ಮಾಂಸ ತಂದು ಬಾಡೂಟವ ಮಾಡಿ ಕುಡಿದು-ತಿಂದು-ತೇಗಿ ಅಸುನೀಗಿದರು, ದೋಚಿದ ಸಂಪತ್ತಿನ ಆಸೆಗೆಬಿದ್ದು ಎರಡೂ ಗುಂಪಿನವರು ಮಧ್ಯ ಮತ್ತು ಮಾಂಸಕ್ಕೆ ವಿಷಬೆರೆಸಿಕೊಂಡು ಬಂದಿದ್ದರು; ಅಂದು ವ್ರತದ ನಿಯಮದಂತೆ ಅಷ್ಟಮಿ ದಿನವಾದ್ದರಿಂದ ಇವರಿಬ್ಬರೂ ಗೆಳೆಯರು ಕುಡಿಯಲಿಲ್ಲ, ತಿನ್ನಲಿಲ್ಲ ಹಾಗಾಗಿ ಬದುಕುಳಿದರು, ಸಂಪತ್ತನ್ನು ಹಂಚಿಕೊಂಡರು. ವ್ರತಗಳ ಮಹಿಮೆ ಕಂಡು ಹಿರಿಹಿರಿ ಹಿಗ್ಗಿದರು, ಮುನಿಗಳ ಬಳಿಬಂದು ವರದಿ ಒಪ್ಪಿಸಿದರು. ಆಗ ಮುನಿಗಳು “ನಿನಗೆ ಯಾವ ಪ್ರಾಣಿಯ ಮೇಲಾದರೂ ಕೋಪ ಬಂದಾಗ ಏಳು ಹೆಜ್ಜೆ ಹಿಂದಕ್ಕೆ ನಡೆದು ಅನಂತರ ನಿನಗೆ ತೋಚಿದಂತೆ ಮಾಡಬಹುದು” ಎಂಬ ವ್ರತವನ್ನು ದಯಪಾಲಿಸಿದರು.
ಪರಸ್ತ್ರೀಯರ ಚಿಂತನೆಯಲ್ಲೂ, ಪರರ ಧನವನ್ನು ದೋಚುವ ಚಿಂತೆಯಲ್ಲೂ ನಮ್ಮ ಆಯಸ್ಸು ಕಳೆದುಹೋಯಿತು ಎಂದು ಮರುಗಿ, ತಮ್ಮ ಊರು ಗಜಪುರಕ್ಕೆ ಬಂದರು. ಆದಿನ ನಿತ್ಯಕರ್ಮಗಳನ್ನು ಮುಗಿಸಿ ಜಿಜಮಂದಿರಕ್ಕೆ ಬಂದು ನಡುರಾತ್ರಿಯತನಕ ಜಿನರಾತ್ರಿಯ ಪೂಜಾ ವೈಭವದಲ್ಲಿ ಮೈಮರೆತು ಮನೆಗೆ ಬಂದು ತಾನು ಮಲಗುತ್ತಿದ್ದ ಕೋಣೆಯನ್ನು ಇಣುಕಿ ನೋಡಿದನು, ಹಾಸಿಗೆಯಲ್ಲಿ ತನ್ನ ಪತ್ನಿಯೊಡನೆ ಇನ್ನೊಬ್ಬರು ಮಲಗಿರುವುದನ್ನು ಕಂಡು ಕ್ರೋಧದಿಂದ ಕುದಿದನು, ಕೂಡಲೇ ಮುನಿವಾಕ್ಯ ನೆನೆದು ಏಳು ಹೆಜ್ಜೆ ಹಿಂದಕ್ಕೆ ನಡೆದನು, ಅಷ್ಟರಲ್ಲೇ ಅತ್ತೆ, ತುಂಬ ಸೆಕೆಯಾಗುತ್ತಿದೆ, ಸ್ವಲ್ಪ ಸರಿದು ಮಲಗಿ ಎಂದು ಹೇಳಿದ್ದನ್ನು ಕೇಳಿಸಿಕೊಂಡನು, ಅದೇ ವೇಳೆಗೆ ಇವನ ತಾಯಿಯೂ ತಾನು ಹೊದ್ದಿದ್ದನ್ನು ಓರೆಮಾಡಿದಳು ಅತ್ತೆ-ಸೊಸೆ ಇಬ್ಬರನ್ನು ಕಂಡು ಧನ್ವಂತರಿಯು ಚಕಿತಗೊಂಡನು, ಮುನಿಮಹಾತ್ಮರು ನನಗೆ ಐದು ಸುವ್ರತಗಳನ್ನು ಕೊಟ್ಟರು. ಸಿಟ್ಟಿನ ಕೈಗೆ ಬುದ್ಧಿಕೊಟ್ಟಿದ್ದರೆ ಹೆತ್ತ ತಾಯಿಯನ್ನು, ಬಸುರಿ ಹೆಂಡತಿಯನ್ನು ಕೊಂದುಹಾಕಿ ದುರ್ಗತಿಗೆ ಪಕ್ಕಾಗುತ್ತಿದ್ದೆನ್ನೆಲ್ಲ! ಮೊದಲ ನಾಲ್ಕು ವ್ರತಗಳಿಗಿಂತ ಐದನೇದು ಮಹತ್ತರವಾದದ್ದು ಇಹ-ಪರದಲ್ಲೂ ಶ್ರೇಯಸ್ಸು ಪಡೆಯುವಂತಾಯ್ತು,  ತಾನು ಮಹಾಪಾತಕದಿಂದ ಪಾರಾಗಿಬಂದ ಕಥನವನ್ನು ಮುನಿಗಳಬಳಿ ಹೇಳಿ, ತನ್ನದೆಲ್ಲವನ್ನೂ ತಾಯಿ ಮತ್ತು ಹೆಂಡತಿಗೆ ನೀಡಿ ವರಧರ್ಮಭಟ್ಟಾರಕ ಮುನಿಗಳ ಬಳಿ ದೀಕ್ಷೆಯನ್ನು ಪಡೆದು ಸದ್ಗತಿಯನ್ನು ಹೊಂದಿದನು.
“ಅಜ್ಞಾನವೇ ಪಾಪಕರ್ಮದ ಮೂಲ; ಜ್ಞಾನವೇ ಮುಕ್ತಿಯ ಮಾರ್ಗ”.
 *ಜೈನ – ವೀರಶೈವ ಪ್ರತಿರೋಧ:*
ಕೂ.ಸ.ಅಪರ್ಣರವರ ನಾಗಮಂಗಲ ತಾಲ್ಲೂಕಿನ ಜೈನಶಾಸನಗಳು ಎಂಬ ಲೇಖನದ ಒಟ್ಟಂದದಿ ಉಲ್ಲೇಖಿತ ಅಂಶವು: ಈ ತಾಲ್ಲೂಕಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ಜೈನಶಾಸನಗಳು ಸಮೃದ್ಧವಾಗಿ ದೊರಕುತ್ತವೆಂಬ ಅಂಶವು ಸ್ಪಷ್ಟವಾಗುತ್ತದೆ. ಆನಂತರವೂ ನಾಲ್ಕು-ಐದು ಶಾಸನಗಳು ಮಾತ್ರ ದೊರಕಿದ್ದು ಇದು ಜೈನಧರ್ಮದ ಇಳಿಮುಖವನ್ನು ಸೂಚಿಸುತ್ತದೆ ಎನ್ನಬಹುದು. ಈ ದಿಸೆಯಲ್ಲಿ ನಮಗೆ ಹನ್ನೆರಡು-ಹದಿಮೂರನೇ ಶತಮಾನದ ಕಂಬದಹಳ್ಳಿ(೩೧) ಮತ್ತು ಕಲಸಗೆರೆ(೧೭೦) ಶಾಸನಗಳು ದಾರಿದೀಪಗಳಾಗಿವೆ.
ಕುಲ್ಕುಣಿನಾಡ ಬಸದಿಯನ್ನು ಎಕ್ಕೋಟಿ ಜಿನಾಲಯವೆಂದು ಹೆಸರಿಸಲ್ಪಟ್ಟಿದ್ದನ್ನು ಕಲಸಗೆರೆ ಶಾಸನವು ಹೇಳಿದರೆ; ಕಂಬದಹಳ್ಳಿ ಶಾಸನವು ಎಕ್ಕೋಟಿ ಮಹಾರುದ್ರರು ಸೇರಿ ಅಲ್ಲಿನ ಬಸದಿಗೆ ಎಕ್ಕೋಟಿ ಜಿನಾಲಯವೆಂದು ಹೆಸರಿಟ್ಟು, ಪಂಚಮಹಾಶಬ್ದಗಳನ್ನು ನೀಡಿದ್ದನ್ನು ಹೇಳುತ್ತದೆ, ಅಲ್ಲದೇ ಈ ನಿಯಮವನ್ನು ಮೀರಿದವನು ಶಿವದ್ರೋಹಿ ಎಂದಿದೆ. ಈ ಕಾರಣದಿಂದ ಆ ಕಾಲದಲ್ಲಿ ವೀರಶೈವಧರ್ಮವು ಪ್ರಬಲವಾಗುತ್ತಿದ್ದು ಜೈನಧರ್ಮಕ್ಕೆ ಪ್ರತಿಸ್ಪರ್ಧಿಯಾಯಿತೆಂದೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದ ಜೈನಧರ್ಮವನ್ನು ಅದು ಪ್ರೋತ್ಸಾಹಿಸಿ ಆದರದಿಂದ ಕಂಡಿತೆಂದು ಹೇಳಬಹುದು. ಇಡೀ ಕರ್ನಾಟಕದಲ್ಲಿ ಜೈನಧರ್ಮದ ಪರಿಸ್ಥಿತಿಯು ಹೀಗೇ ಇತ್ತೆಂದು ಬೇರೆ ಹೇಳಬೇಕಾಗಿಲ್ಲ.
 *ಜೈನಧರ್ಮದ ಇಳಿಮುಖತೆಯ ಅಂಶಗಳು:*
ಜೈನಧರ್ಮದ ಕಠಿಣ ಆಚರಣೆಗಳು. ಬ್ರಾಹ್ಮಣೀಯ ಪುನರುತ್ಥಾನ, ಪ್ರಾದೇಶಿಕ ಸೀಮಿತತೆ, ರಾಜಾಶ್ರಯದ ಕೊರತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಪತ್ಯಕ್ಷ ಕಾರಣಗಳಾದರೆ; ಬೌದ್ಧ ಧರ್ಮ, ವೀರಶೈವಧರ್ಮ [ಸಂಘರ್ಷದ ಪ್ರಶ್ನೆ- ಕೆಲ ಸಾಹಿತ್ಯದಲ್ಲಿ ಜೈನ-ವೀರಶೈವ ಸಂಘರ್ಷದ ಉಲ್ಲೇಖ ಕಾಣಬಹುದು] ಪರೋಕ್ಷ ಕಾರ‍್ಯ-ಕಾರಣ ಅಂಶಗಳು ಎಂದು ಗುರುತಿಸಬಹುದಾಗಿದೆ.
 *ಮನೋಧೋರಣೆ:*
“ಸಾಹಿತ್ಯವನ್ನು ಅದರ ಕಾಲದ ಚೌಕಟ್ಟಿನಲ್ಲಿ ಓದಬೇಕು; ಆದರೆ ಇಂದಿನ ದೃಷ್ಟಿಯಿಂದ ಪ್ರಶ್ನಿಸುವುದು ವಿಮರ್ಶೆಯ ಕರ್ತವ್ಯ” – ಆಧುನಿಕ ವಿಮರ್ಶಾತತ್ತ್ವ
ಈ ಹಿನ್ನಲೆಯಲ್ಲಿ ಸ್ಥಿತಿಕರಣ ಚತುರ ವಾರಿಷೇಣ ಕಥೆಯನ್ನು ನೋಡುವುದಾದರೆ: ಚೇಳಿನಿ ಮಹಾದೇವಿ ಈಕೆ ಮಗಧ ಸಾಮ್ರಾಟ ಶ್ರೇಣಿಕನ ಪಟ್ಟದ ರಾಣಿ ಈ ದಂಪತಿಗಳ ಪುತ್ರ ಕಡುಲೋಭಿ ವಾರಿಷೇಣ ಕಳ್ಳತನದ ಆರೋಪ, ಕೊಂದು ಹಾಕುವಂತೆ ರಾಜಾಜ್ಞೆ, ಅಲ್ಲಿಂದ ಪರಾರಿಯಾದನು ಈತನ ಮಿತ್ರ ವೈದಿಕ ಧರ್ಮಾನುಯಾಯಿ ಪುಷ್ಪದಾಡ, ಇಬ್ಬರು ಸೇರಿ ಪುಷ್ಪಗಿರಿಗೆ ಬಂದು ಸುರದೇವಾಚರ‍್ಯರ ಸನ್ನಿಧಿಯಲ್ಲಿ ದಿಗಂಬರ ದೀಕ್ಷೆಪಡೆದರು; ಈ ಸಂದರ್ಭದಿ ಮುನಿಗಳು ನೀಡಿದ ಉಪದೇಶವನ್ನೊಮ್ಮೆ ಕೇಳಿ:
ಅರಿಷಿನದ ಕೂಳಿಗೆ ಬೀಗಿ ಬಾಯಿಬಿಟ್ಟು ವರ್ಷದ ಕೂಳನ್ನು ಕಳೆದುಕೊಳ್ಳುವ ಒಕ್ಕಲಿಗ -ನಂತೆ, ಒಂದು ಭವದ ತಪಸ್ಸಿಗೆ ಹಿಂಜರಿದು ಅನಂತಭವಗಳಲ್ಲಿ ಪಡಬಾರದ ಪಾಡನ್ನು ಪಡುತ್ತಿರುವೆ. ಹೆಣ್ಣು-ಹುಲಿಗಳಂತಿರುವ ಹೆಣ್ಣುಗಳನ್ನು ಹರಿಣಾಕ್ಷಿಯೆನ್ನುವರು. ಸೀಳುನಾಯಿ ಗಳಂತಿರುವ ಸುವಾಸಿನಿಯರನ್ನು ಲತಾ-ಲಲಿತಾಂಗಿಯೆನ್ನುವರು. ನಾರೀಮಣಿಯರನ್ನು ನಾಗವೇಣಿ ಯೆನ್ನುವರು. ಇವರು ಹೊಂಚುಹಾಕಿ ನಮ್ಮನ್ನುತಿಂದು-ತೇಗದೆ ಬಿಡರು. ನಳಿತೋಳುಗಳನ್ನು ಮಸೆದ ಮನ್ಮಥನ ಕತ್ತಿಯೆನ್ನದೆ ಬಳ್ಳಿಯೆನ್ನುವರು. ಕಾಮಿನಿಯರ ಕಡೆಗಣ್ಣ ನೋಟವನ್ನು ಕಾಮಪಾಶವೆನ್ನದೆ ನಗೆಗಣ್ಣು ಎನ್ನುತ್ತಿರುವರು. ಕಾಂತೆಯರ ಮೊಲೆಗಳನ್ನು ಮನ್ಮಥನ ಚಕ್ರಾಯುಧಗಳೆನ್ನದೆ ಚಕ್ರವಾಕವೆನ್ನುವರು. ಮಹಿಳಾಮಣಿಯರ ಮೇಲುಹೊದಿಕೆ ಯನ್ನು ಕಾಮನು ಬೀಸಿದ ಬಲೆಯೆನ್ನದೆ ಕಾಮನ ಧ್ವಜವೆನ್ನುವರು. ಸುಂದರಿಯ ಚೆಂದುಟಿಗಳನ್ನು ನರಕದ ಬಿಲವೆನ್ನದೆ ತೊಂಡೆಹಣ್ಣು ಎನ್ನುವರು. ಇದೆಲ್ಲವೂ ಬೆಣ್ಣೆಯೆಂದು ಸುಣ್ಣವನ್ನು ಮೆದ್ದಂತಲ್ಲವೆ? ನರಕದ ಹಾದಿಯನ್ನು ತಿಳಿಯದವರಿಗೆ ದಾರಿಯನ್ನು ತೋರಿಸುವುದಕ್ಕಾಗೇ ಈ ನಾರಿಯರು ಜನಿಸಿರುವರು. ಇವರು ಮೋಕ್ಷಮಾರ್ಗದಲ್ಲಿ ಹರಡಿಕೊಂಡಿರುವ ಮುಳ್ಳುಗಳು. ಇವರು ಮೋಕ್ಷಮಾರ್ಗ ಹಿಡಿದವರನ್ನು ಕಂಡು ಕಚ್ಚಲು ಬರುವ ಕಾವಲು ನಾಯಿಗಳು.

 *ಅನಾಸಕ್ತೆ ಅನಂತಮತಿ – ನಿಷ್ಕಾಂಕೆಯ ಕಥೆ:*
ಅಂಗದೇಶದ ಪ್ರಿಯದತ್ತಶೆಟ್ಟಿ, ಈತನ ಮಡದಿ ಅಂಗಮತಿ, ಇವರ ಪ್ರೇಮದ ಪುತ್ರಿ ಅನಂತಮತಿ ಕಡುಚೆಲುವೆ. ಬಾಲ್ಯದಲ್ಲಿ ತಂದೆ ಆಕೆಗೆ ಮುನಿಗಳಿಂದ ಬ್ರಹ್ಮಚರ‍್ಯೆ ವ್ರತವನ್ನು ಕೊಡಿಸಿರುತ್ತಾನೆ, ಶ್ರದ್ಧಾಭಕ್ತಿಯಿಂದ ಪರಿಪಾಲಿಸಿಕೊಂಡು ಹೋಗುತ್ತಿರುತ್ತಾಳೆ. ಕುಂಡಲ ಮಂಡಿತ ವಿದ್ಯಾಧರನು ವಿಜಯಾರ್ಧ ಪರ್ವತದ ದಕ್ಷಿಣಶ್ರೇಣಿಯ ಕಿನ್ನರಗೀತ ನಗರದ ರಾಜ, ಈತನ ಮಡದಿ ಸುಕೇಶಿನಿ ವಾಯುವಿಹಾರಕ್ಕೆ ಹೊರಟಿರುವಾಗ, ಚಂಪಾಪುರದ ಉದ್ಯಾನವನದಿ ಅನಂತಮತಿಯನ್ನು ಕಂಡು ಮೋಹಗೊಳ್ಳುತ್ತಾನೆ.
ಇತ್ತ ಅನಂತಮತಿಯ ನಿಲುವು: ದೇಹವು ಮಲದ ರಾಸಿಯಾಗಿದೆ, ರೋಗಗಳಿಗೆ ಇದು ತೌರುಮನೆಯಾಗಿದೆ, ಎಲುಬು, ರಕ್ತ, ಮಾಂಸಗಳಿಂದ ಈ ದೇಹ ರೂಪುಗೊಂಡಿದೆ. ನರಕವನ್ನು ನೆನೆದರೆ ಅಲ್ಲಿಯ ನಾನಾ ದುಃಖವನ್ನು ಜ್ಞಾಪಿಸಿಕೊಂಡರೆ ಮೈನಡುಕ ಬರುವುದು ಎಂದು ಅನಂತಮತಿ ಭವರೋಗಕ್ಕೆ ಹೆದರಿ ಜಿನಪಾದಗಳಲ್ಲಿ ಶರಣಾದಳು. ಮುಂದೆ ಶಂಕಪುರ ವಾಸಿಯಾದ ಬೇಡನ ಕಣ್ಣಿಗೆ ಬಿದ್ದು ಮೋಹಗೊಂಡು ಅಪಹರಿಸುತ್ತಾನೆ. ಅವನಿಗೆ ಒಲಿಯದೆ ಇದ್ದಾಗ ಆಕೆಯನ್ನು ಸತ್ಕರಿಸಿ ಅಯೋಧ್ಯೆಗೆ ಹೋಗಲು ಅನುವುಮಾಡಿಕೊಡುತ್ತಾನೆ. ಅಲ್ಲಿ ಬಸದಿಯೊಂದರಲ್ಲಿ ಜಿನದರ್ಶನ ಮಾಡುತ್ತಿರುವಾಗ ಪುಷ್ಪಕನೆಂಬ ವ್ಯಾಪಾರಿ ಆಕೆಯನ್ನು ಕಂಡು ಗೌರವದಿಂದ ತನ್ನ ಬಿಡಾರಕ್ಕೆ ಕರೆದುಕೊಂಡು ಹೋಗುತ್ತಾನೆ. ಆಕೆಯ ಪೂರ್ರ್ವಾಪರವನ್ನು ತಿಳಿಯಬಯಸಿದಾಗ ಆಕೆ ಹೇಳುವ ಮಾತುಗಳು ಗಮನಿಸುವಂತವುಗಳು.
ಕ್ಷಮೆಯೇ ನನ್ನ ಸ್ನೇಹಿತೆ, ಶೀಲವು ನನ್ನ ಏಕೈಕಪುತ್ರ, ಸದಾಚಾರವೇ ನನ್ನ ಬಳಿ ಇರುವ ಅಕ್ಷಯ ಸಂಪತ್ತು. ವಿಶ್ವಾನುಕಂಪವೇ ನನಗೆ ತಾಯಿ. ಸತ್ಯವೇ ನನ್ನ ಮುತ್ತಾತ, ನನ್ನ ಅಣ್ಣ-ತಮ್ಮಂದಿರು ಎಂದರೆ ಸದ್ಗುಣಗಳೇ. ಈನತ್ವವೇ ನನ್ನ ಏಕೈಕ ಪುತ್ರಿ. ಸಮ್ಯಕ್ತವೇ ನನ್ನ ನಿಜವಾದ ತಂದೆ. ಸಂಯಮವೇ ನನ್ನ ಬಿಡಾರ, ಮೋಕ್ಷವೇ ನನ್ನ ದೇಶ, ಜಿನವಾಣಿಯೇ ನನ್ನ ಊರು ಎಂದು ಅಧ್ಯಾತ್ಮಿಕವಾಗಿ ಉತ್ತರಕೊಟ್ಟಳು.
ಕೊನೆಮೊದಲಿಲ್ಲದ ಕೊನೆಯಲ್ಲಿ:
ಕನ್ನಡ ಜೈನ ನೋಂಪಿಕಥೆಗಳನ್ನು ಸಮಗ್ರವಾಗಿ ಗಮನಿಸಲಾಗಿ ಸ್ತ್ರೀಯ ಪಾಪವನ್ನು ವೈಯಕ್ತಿಕ ಸ್ವಭಾವಕ್ಕಿಂತ ಲಿಂಗಾಧಾರಿತ ದೌರ್ಬಲ್ಯವಾಗಿ ಚಿತ್ರಿಸಿರುವ ಪ್ರವೃತ್ತಿ ಇಲ್ಲಿ ಗೋಚರಿಸುತ್ತದೆ. ಮುನಿಗಳಾದ ಸುರದೇವಾಚರ‍್ಯರ ಹೆಣ್ಣಿನ ಕುರಿತಾದ ಉಪದೇಶ ಹಾಗೂ ಅನಾಸಕ್ತೆ ಅನಂತಮತಿಯು ಕೊಟ್ಟ ಉತ್ತರಗಳನ್ನು ಒರೆಗಚ್ಚಿ ನೋಡಲು ಯಾರ ಮತಿಯು ಸದ್ಭಾವದಿಂದ ಕೂಡಿದೆ ಎಂಬುದನ್ನು ಗ್ರಹಿಸುವವರ ಮತಿಯನ್ನವಲಂಬಿಸಿದೆ. ಇದೇ ವಿಷಯವನ್ನಿಟ್ಟುಕೊಂಡು ಮುಂದೆ ಸಂಶೋಧನಾರ್ಥಿಗಳು ವಿಸ್ತೃತ ಅಧ್ಯಯನ ಕೈಗೊಳ್ಳಲು ಮೊದಲ ಮೆಟ್ಟಿಲಾಗಬಹುದು ನನ್ನೀ ಲೇಖನವೆಂದು ಭಾವಿಸುವೆ ಇಲ್ಲವೇ ಭ್ರಮಿಸುವೆ.
-ಧನ್ಯವಾದಗಳೊಂದಿಗೆ..,


About The Author

Leave a Reply

You cannot copy content of this page

Scroll to Top