ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಮರುಕಳಿಸುತಿದೆ”


ಇತಿಹಾಸ ಮತ್ತೆ
ಮರುಕಳಿಸುತ್ತಿದೆ
ಯುದ್ಧವೆಂದರೆ
ಕೇವಲ ಸಾವು ನೋವಿನ
ಲೆಕ್ಕವಲ್ಲ
ಭೂಮಿ ಆಕ್ರಮಣವಲ್ಲ
ಬಲಿಷ್ಟರನ್ನು ಬಗ್ಗು ಬಡಿದು
ಗುಲಾಮರನ್ನಾಗಿ ಮಾಡುವುದಲ್ಲ
ಮನುಷ್ಯ ಮನುಷ್ಯರ ಮಧ್ಯೆ
ಹಗೆತನದ ಗೋಡೆ ನಿರ್ಮಾಣ
ಒಂದಾಗದ ಜನರ ಕಿಚ್ಚು
ಬೂದಿಯಾಗುವುದು ಭೂಮಿ
ಸುತ್ತಲೂ ಬಾಂಬ್ ಸಪ್ಪಳ
ಕ್ಷಿಪಣಿಗಳ ಹಾರಾಟ
ಎಳೆಯ ಮಕ್ಕಳು ಕುಳಿತಲ್ಲಿಯೇ
ಜೀವ ಬಿಟ್ಟಿದ್ದಾರೆ
ನಾಗಾಸಾಕಿ ಹಿರೋಶಿಮಾದ
ಕುರುಡು ಕೆಪ್ಪರ ಭೀತಿ
ರಾತ್ರಿ ಈಸ್ಟರ್ ನ ಭರ್ಜರಿ ಭೋಜನ
ಬೆಳಿಗ್ಗೆ ರಕ್ತ ಕಾರಿ ಸತ್ತರು
ಗಡಿವಲಯದ ಗ್ರಾಮಗಳು
ಶೆಲ್ ದಾಳಿಗೆ ಸುಟ್ಟು ಕರಕಲು
ಮಕ್ಕಳ ಮಹಿಳೆಯರ ಅರಚಾಟ
ಫೋನಿನ್ ಗಂಟೆ ಬಾರಿಸಿದಾಗಲೆಲ್ಲ
ಹೆದರುತ್ತಾರೆ ಮಡದಿ ಮಕ್ಕಳು
ಮಸಣದ ಗುಂಡಿಗಳ ನೆನಪು
ದಾರಿಯುದ್ದಕ್ಕೂ ಬಿದ್ದಿವೆ
ಎಲವು ಡೌವುಗಿಗಳು
ಕೊಂದವರ ಅಟ್ಟಹಾಸ
ಸತ್ತವರ ಶೋಕ ಸಭೆ ಪ್ರತಿಭಟನೆ.
ಒಮ್ಮೆ ಕೇಳಬೇಕಿದೆ
ಕಳಿಂಗ ಗೆದ್ದ ಮೇಲೂ
ವಿರಕ್ತನದ ಅಶೋಕನನ್ನು
ಜಗವೇ ಗೆಲ್ಲಲು ಹೋಗಿ
ಹೆಣದ ಪೆಟ್ಟಿಗೆಯಲ್ಲಿ ಮಲಗಿದ
ಅಲೆಕ್ಸಾಂಡರ್ ಚಕ್ರವರ್ತಿಯನ್ನು
ಗುಲಗಂಚಿ ಕಣ್ಣಿನ ಜಗದಂಬೆಯನ್ನು
ಏಕೆ ಈ ಯುದ್ಧ ?
ಯಾವ ಸಾಹಸ ಸ್ವಾರ್ಥಕೆ
ಪ್ರಾಣಿ ಪಶು ಪಕ್ಷಿಗಳು
ಒಂದಾಗುವ ಸಮಯದಲ್ಲಿ
ಮನುಷ್ಯ ಮನುಷ್ಯರ ಕೊಲ್ಲುವ
ಯುದ್ಧ ರಣ ನೀತಿ
ಕೇಳ ಬೇಕಿದೆ ಒಮ್ಮೆ
ಬುದ್ಧ ಬಸವ ಏಸು ಮಹಮ್ಮದರನ್ನು
ಗೆದ್ದು ಬೀಗಿದವರನ್ನು
ಸೋತು ಸತ್ತವರನ್ನು
ವಿಶ್ವ ಯುದ್ಧಕ್ಕೆ ಸಿದ್ಧರಾದವರನ್ನು
ಏಕೆ ಬೇಕು ಈ ಯುದ್ಧ?
ಮತ್ತೆ ಮತ್ತೆ ಇತಿಹಾಸ
ಮರುಕಳಿಸಬಹುದು
ಕನಸುಗಳು ಪುಡಿಯಾಗುವವು
ಹಿಟ್ಲರ್ ಬೈಬಲ್ ಓದುತ್ತಿರುವವನು
ನಾಳೆ ಏನಾಗುವುದೋ ಗೊತ್ತಿಲ್ಲ
ಇಂದು ಮಲಗೋಣ
ಬದುಕುಳಿದರೆ ನಾಳೆ ಇರೋಣ
ಇಲ್ಲಾ ಇಂದೇ ಆಲ್ ವಿದಾ
ಚರಮಗೀತೆ ಹಾಡೋಣ
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಕ್ರಾಂತಿಕಾರಕ ಕವನಗಳನ್ನು ಪ್ರಕಟ ಮಾಡಿ ಕನ್ನಡ ಓದುಗರನ್ನು ಜಾಗೃತಗೊಳಿಸುತ್ತಿರುವ ತಮಗೆ ಹಾಗೂ ಕವಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಇವರಿಗೆ ಧನ್ಯವಾದಗಳು
ಸರ್ ನಿಜಕ್ಕೂ ತುಂಬಾ ಅರ್ಥಪೂರ್ಣ ಕಾವ್ಯ ಇದಾಗಿದೆ
ಸುತ್ತಣ ಪರಿಸ್ಥಿತಿಗೆ ತಕ್ಷಣವೇ ಸ್ಪಂದಿಸುವವರೇ ನಿಜವಾದ ಬರಹಗಾರರು. ಯುದ್ದದ ಗಂಭೀರತೆಯನ್ನು ತಮ್ಮ ಕವನದಲ್ಲಿ ನಮಗೆ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ನಿಜವಾದ ಕಳಕಳಿಯನ್ನು ವ್ಯಕ್ತಪಡಿಸಿದ್ದೀರಿ
ಸುತೇಜ
ನಿಜಕ್ಕೂ ರಣಭೀಕರ ದೃಶ್ಯ ನೋಡಿ,ಮನ ಕಲುಕುತಿದೆ,ಸಮಯಕ್ಕೆ ತಕ್ಕ ನಿಮ್ಮ ಕವನ “ಇತಿಹಾಸ ಮರುಕಳಿಸುತ್ತಿದೆ”ಧನ್ಯವಾದಗಳು ಸರ್.
ವಿಜಯಲಕ್ಷ್ಮಿ ಹಂಗರಗಿ