ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೀಣಾ-ವಾಣಿ

“ಯುಥನೇಶಿಯ…. ದಯಾಮರಣಕ್ಕೆ ಅಸ್ತು” ವೀಣಾ ಹೇಮಂತ್‌ ಗೌಡ ಪಾಟೀಲ್.

ಬದುಕಿನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್. “ಯುಥನೇಶಿಯ…. ದಯಾಮರಣಕ್ಕೆ ಅಸ್ತು”  ಕಳೆದ ಹಲವಾರು ದಶಕಗಳಿಂದ ಭಾರತ ದೇಶದಲ್ಲಿ ದಯಾಮರಣ ಎಂಬ ಕಾನೂನನ್ನು ಜಾರಿಗೆ ತರಲು ಒತ್ತಾಯಿಸಲಾಗುತ್ತಿತ್ತು. ಇದೀಗ ಆ ಕಾನೂನನ್ನು ಕೆಲ ನಿರ್ದಿಷ್ಟ ನಿರ್ದೇಶನಗಳೊಂದಿಗೆ ಆದೇಶ ಮಾಡಲಾಗಿದೆ. ಏನಿದು ದಯಾ ಮರಣ? ವ್ಯಕ್ತಿಯು ಬದುಕಿದ್ದಾಗಲೇ ಆತನ ದೇಹದ ಎಲ್ಲಾ ಅಂಗಗಳು ನಿಷ್ಕ್ರಿಯಗೊಂಡು ಮುಂದೆ ಆತ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಆತನನ್ನು ಜೋಪಾನ ಮಾಡುವವರು ಅಸಹಾಯಕತೆಯಿಂದ ಕೈ ಚೆಲ್ಲಿದಾಗ, ಇನ್ನೆಂದೂ ಆತ ವಾಸಿ ಹೊಂದುವುದಿಲ್ಲ ಎಂಬ ಪರಿಸ್ಥಿತಿಯಲ್ಲಿ ಔಷಧಿ ಇಲ್ಲವೇ ಇಂಜೆಕ್ಷನ್ ನೀಡುವ ಮೂಲಕ ಆತನಿಗೆ ಮರಣವನ್ನು ದಯಪಾಲಿಸುವ ಕಾನೂನಾತ್ಮಕ ಒಪ್ಪಿಗೆಯನ್ನು ದಯಾ ಮರಣ ಎಂದು ಹೇಳಬಹುದು.  ಈ ಹಿಂದೆ ಸಾಕಷ್ಟು ಬಾರಿ ಬಹಳಷ್ಟು ಜನ ತಮ್ಮ ಆರೋಗ್ಯ ಸಮಸ್ಯೆಗಳಿಂದ ಬೇಸತ್ತು ಇನ್ನೆಂದೂ ವಾಸಿಯಾಗದ ಕಾಯಿಲೆಗಳಿಂದ ನೊಂದು ದಯಾ ಮರಣಕ್ಕೆ ಅರ್ಜಿ ಹಾಕಿ ರಾಷ್ಟ್ರಪತಿಗಳವರೆಗೆ ಪತ್ರಗಳು ಹೋಗಿದ್ದ ಪ್ರಕರಣಗಳು ಉಂಟು… ಆದರೆ ಭಾರತದ ಜೀವಪರ ಸಂಘಟನೆಗಳು ಈ ದಯಾಮರಣ ಪ್ರಕ್ರಿಯೆಯ ವಿರುದ್ಧ ಹೋರಾಟವನ್ನು ಆರಂಭಿಸಿತ್ತು. ಗೊತ್ತಿದ್ದು ಕೂಡ ಯಾವುದೇ ಒಂದು ಜೀವಿಯ ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂಬುದು ಅವರ ವಾದವಾಗಿತ್ತು…. ಇದು ನಿಜ ಕೂಡ.ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕನಸುಗಳನ್ನು ಹೊತ್ತು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣ ಶಾಮ್ ಭಾಗ್ ಎಂಬ  ಯುವತಿ ಮುಂಬೈಯ ಕೆ ಎಂ ಆಸ್ಪತ್ರೆಗೆ ನರ್ಸ್ ಆಗಿ ಕೆಲಸಕ್ಕೆ ಸೇರಿದಳು.1973ರ ನವಂಬರ್ 27 ರಂದು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರುಣಾಳನ್ನು ವಾರ್ಡ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೋಹನ್ ಲಾಲ್ ಭಾರ್ತಾ ಎಂಬ ಯುವಕ ಅತ್ಯಾಚಾರ ಮಾಡಲು ಪ್ರಯತ್ನಿಸಿ ಪ್ರತಿರೋಧಿಸಿದ ಆಕೆಯ ಕೊರಳಿಗೆ ಕಬ್ಬಿಣದ ಸರಪಳಿಯಿಂದ ಬಿಗಿದ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ. ಕುತ್ತಿಗೆಗೆ ಬಿಗಿದ ಸರಳಿನಿಂದಾಗಿ ಆಕೆಯ ಮೆದುಳಿಗೆ ಸಂಪರ್ಕ ತಪ್ಪಿ ಆಕೆ ಕೋಮಾಕ್ಕೆ ಜಾರಿದಳು. ಆಸ್ಪತ್ರೆಯ ವೈದ್ಯರ ಸಿಬ್ಬಂದಿಗಳ ಅವಿರತ ಪ್ರಯತ್ನದ ಹೊರತಾಗಿಯೂ ಕೂಡ ಆಕೆ ಚೇತರಿಸಿಕೊಳ್ಳಲಿಲ್ಲ. ಕುಟುಂಬದವರು ಕೂಡ ಹಿಂದೆ ಸರಿದರು.1980 ರಲ್ಲಿ ಆಕೆಯನ್ನು ಆಸ್ಪತ್ರೆಯಿಂದ ಹೊರ ಹಾಕುವ ಪ್ರಯತ್ನವನ್ನು ಮುಂಬೈ ಮಹಾನಗರ ಪಾಲಿಕೆ ಮಾಡಿದರೂ ಅದರ ವಿರುದ್ಧ ಉಗ್ರವಾಗಿ ಧ್ವನಿಯೆತ್ತಿದ ಆಸ್ಪತ್ರೆಯ ನರ್ಸ್ ಗಳ ದೆಸೆಯಿಂದಾಗಿ ಆ ಕಾರ್ಯ ಸ್ಥಗಿತವಾಯಿತು. ಆಸ್ಪತ್ರೆಯ ಒಂದು ಕೋಣೆಯಲ್ಲಿ ಸರಿ ಸುಮಾರು 42 ವರ್ಷಗಳ ಕಾಲ ಆಕೆಯನ್ನು ಮಗುವಿನಂತೆ ಅಲ್ಲಿಯ ನರ್ಸ್ ಗಳು ಜೋಪಾನ ಮಾಡಿದರು.  ಆಕೆಯ ಪರಿಸ್ಥಿತಿಯನ್ನು ಕಂಡು ಕೇಳಿ ನೊಂದ ಪಿಂಕಿ ವಿರಾನಿ ಎಂಬ ವಕೀಲರು ಆಕೆಗೆ ದಯಾಮರಣವನ್ನು ನೀಡಬೇಕಾಗಿ ನ್ಯಾಯಾಲಯದ ಮೊರೆ ಹೋದರು. ಆದರೆ ಹಲವಾರು ಪರ ವಿರೋಧಗಳ ಕಾರಣಕ್ಕೆ ದಯಾಮರಣದ ವಿಷಯ ಜನರ ಗಮನವನ್ನು ಸೆಳೆದಿತ್ತು. ಸುಮಾರು 42 ವರ್ಷಗಳ ಕಾಲ ಕೋಮಾದಲ್ಲಿಯೇ ಇದ್ದ ಅರುಣ 2015ರಲ್ಲಿ ನ್ಯೂಮೋನಿಯಾಗೆ ತುತ್ತಾಗಿ ಸಹಜ ಸಾವನ್ನು ಅಪ್ಪಿದರು ಇದೀಗ ಮತ್ತೆ ದಯಾಮರಣದ ಕುರಿತ ವಿಷಯ ಮುನ್ನೆಲೆಗೆ ಬರಲು ಕಾರಣವಾಗಿದ್ದು ಹಾಗೂ ದಯಾಮರಣವನ್ನು ಕಾನೂನು ಬದ್ಧವಾಗಿ ನೀಡಲು ಮುಂದಾಗಿದ್ದು ಕಳೆದ 13 ವರ್ಷಗಳಿಂದ ಕೋಮದಲ್ಲಿದ್ದು ಮುಂದಿನ ದಿನಮಾನಗಳಲ್ಲಿಯೂ ಕೂಡ ಆರೋಗ್ಯದಲ್ಲಿ ಚೇತರಿಕೆ ಕಾಣುವ ಯಾವುದೇ ಲಕ್ಷಣಗಳು ಇಲ್ಲದ ಕಾರಣ ದೆಹಲಿಯ ಸುಪ್ರೀಂ ಕೋರ್ಟ್ ಅವರಿಗೆ ದಯಾಮರಣವನ್ನು ನೀಡಲು ಒಪ್ಪಿಕೊಂಡಿದ್ದು ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಆರಂಭವಾಗಿವೆ. .ಮೂಲತಃ ದೆಹಲಿಯವರಾದ ಹರೀಶ್ ರಾಣಾ ಅವರು ಚಂಡಿಗಡದ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದರು. 2013 ಆಗಸ್ಟ್ 20ರಂದು ರಕ್ಷಾಬಂಧನದ ದಿನ ಆಕಸ್ಮಿಕವಾಗಿ ತಾವು ಉಳಿದುಕೊಂಡಿದ್ದ ಹಾಸ್ಟೆಲ್ನ ವಸತಿಗೃಹದ ನಾಲ್ಕನೇ ಮಹಡಿಯಿಂದ ನೆಲಕ್ಕೆ ಬಿದ್ದ ಅವರ ದೇಹದ ಎಲ್ಲ ಭಾಗಗಳು ನಿಷ್ಕ್ರಿಯಗೊಂಡಿದ್ದು ಕಳೆದ 13 ವರ್ಷಗಳಿಂದ ಅವರು ಹಾಸಿಗೆಯಲ್ಲಿಯೇ ಇದ್ದಾರೆ. ಮುಂದೆ ಯಾವುದೇ ಚೇತರಿಕೆಯನ್ನು ಕಾಣುವ ಅವಕಾಶವೇ ಇಲ್ಲದ ಅವರ ಪರಿಸ್ಥಿತಿಯನ್ನು ಕಂಡ ಅವರ ಪಾಲಕರು ಹಲವಾರು ವೈದ್ಯಕೀಯ ಮಂಡಳಿಗಳ ದಾಖಲೆಗಳನ್ನು ಹೊತ್ತು ತಮ್ಮ ಮಗನಿಗೆ ದಯಾಮರಣವನ್ನು ದಯಪಾಲಿಸುವ ಅನುಮತಿ ನೀಡಿ ಎಂದು ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದರು.  ಹಲವಾರು ಪರಿಶೀಲನೆಗಳ ನಂತರ ಅಂತಿಮವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜೆಪಿ ಪರ್ದಿ ವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರು ಕುಟುಂಬದ ಒಪ್ಪಿಗೆ ಹಾಗೂ ವೈದ್ಯಕೀಯ ಮಂಡಳಿಗಳ ವರದಿಯನ್ನು ಆಧರಿಸಿ ಮೊನ್ನೆ ಮಾರ್ಚ್ 11, 2026 ರಂದು ಸಂಪೂರ್ಣ ಜೀವಚ್ಚವವಾಗಿರುವ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾ ಮರಣ ನೀಡಲು ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರಿಗೆ ಆದೇಶ ನೀಡಿದ್ದಾರೆ.  ಈಗಾಗಲೇ ಕೋರ್ಟ್ ಆದೇಶದಂತೆ ಮೊದಲ ಪ್ರಕ್ರಿಯೆ ಆರಂಭವಾಗಿದ್ದು ಅವರಿಗೆ ಬಾಹ್ಯವಾಗಿ ಆಹಾರವನ್ನು ಸೇವಿಸಲು ಬಾಯಿಗೆ ಹಾಕಿರುವ ನಳಿಕೆಗಳನ್ನು ತೆಗೆದು ಹಾಕಿದ್ದು ಹಾಗೂ ದೇಹಕ್ಕೆ ಅಳವಡಿಸಲ್ಪಟ್ಟ ವಿಸರ್ಜನಾ ವ್ಯವಸ್ಥೆಗಳನ್ನು  ತೆಗೆದುಹಾಕಲಾಗಿದೆ.ಆತನಿಗೆ ಪಾಲಕರು ಹಾಗೂ ಕುಟುಂಬದವರು ಅಂತಿಮ ವಿದಾಯ ಹೇಳಿದ್ದಾರೆ. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹೋದರಿಯರು ಅವರನ್ನು ಕುರಿತು ಎಲ್ಲರನ್ನೂ ಕ್ಷಮಿಸು, ಎಲ್ಲರಿಗೂ ಕ್ಷಮೆ ಕೇಳು ಹಾಗೂ ಶಾಂತಿಯಿಂದ ಹೊರಟುಬಿಡು ಎಂಬ ಅಂತಿಮ ವಾಕ್ಯಗಳನ್ನು ಹೇಳಿ ಅತ್ಯಂತ ಕರುಣಾಪೂರ್ವಕ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ಹತ್ತು ಹಲವಾರು ಕಾಯಿಲೆಗಳಿಂದ ಸಂಪೂರ್ಣ ದೇಹಗಳು ನಿಷ್ಕ್ರಿಯಗೊಂಡು ಮನೋ ದೈಹಿಕ ಯಾತನೆಯನ್ನು ಅನುಭವಿಸುತ್ತಿರುವ, ಬದುಕಿರುವಾಗಲೇ ಸತ್ತಂತೆ ಇರುವ ಹಲವಾರು ಜನರು ಆಸ್ಪತ್ರೆಯ ಮೂಲೆಯ ಬೆಡ್ಗಳಲ್ಲಿ, ಮನೆಗಳಲ್ಲಿ ಇದ್ದು ಅವರಿಗೆ ಮತ್ತು ಅವರ ಯಾತನೆಯನ್ನು ಕಂಡು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ಅವರ ಕುಟುಂಬದವರಿಗೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ನೆಮ್ಮದಿಯ ನಿಟ್ಟುಸಿರನ್ನು ತಂದಿದೆ. ಯಾವುದೇ ಕಾನೂನುಗಳು ದುರ್ಬಳಕೆಯಾಗಬಾರದು ಎಂಬುದಷ್ಟೇ ಸಮಾಜದ ಕಳಕಳಿ. ಹರೀಶ್ ರಾಣಾಗೆ ಭಾವಪೂರಿತ ವಿದಾಯವನ್ನು ಕೋರುತ್ತಾ ವೀಣಾ ಹೇಮಂತ್ ಗೌಡ ಪಾಟೀಲ್

“ಯುಥನೇಶಿಯ…. ದಯಾಮರಣಕ್ಕೆ ಅಸ್ತು” ವೀಣಾ ಹೇಮಂತ್‌ ಗೌಡ ಪಾಟೀಲ್. Read Post »

ನಿಮ್ಮೊಂದಿಗೆ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-11 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆಗಣನೀಯಕೊಡುಗೆ ನೀಡಿದ ಹಿರಿಯ ಚೇತನ ಜಯದೇವಿ ತಾಯಿಯವರ ಜೀವನ ತ್ಯಾಗದ ಮತ್ತೊಂದು ಹೆಸರು.ಸಮಾಜ ಸೇವೆಯ ಪಥದಲ್ಲಿ ನಡೆದುಹೋಗುತ್ತಿದ್ದ ಅವರ ಹೆಜ್ಜೆಗಳು ಎಷ್ಟು ದೃಢವಾಗಿದ್ದವೋ, ಅಷ್ಟೇ ಮನೆಯ ಹೊಣೆಗಾರಿಕೆಯನ್ನು ಹೊತ್ತಿದ್ದ  ಹೃದಯ ಅಷ್ಟೇ ಮೃದುವಾಗಿತ್ತು. ೧೯೪೨ರ ವೇಳೆ ಅಷ್ಟರಲ್ಲಿ ತಾಯಿಯವರು ಇನ್ನೂ ಮೂರು ಮಕ್ಕಳಿಗೆ ಜನ್ಮ ನೀಡಿದರು…ಇಗ ತಾಯಿಯವರಿಗೆ‌‌ ಐದು ಜನ ಮಕ್ಕಳಾದರು… ಅತ್ಯಂತ ಸದೃಢ ಸದ್ೃಪಿ ಎರಡು ಗಂಡು ಮಕ್ಕಳು ಪ್ರಭುರಾಜ ಹಾಗು ಬಸವರಾಜ ಜನಿಸಿದರು. ನಂತರ ಒಂದು ಸುಂದರ  ಹೆಣ್ಣು ಮಗು ಲಲ್ಲೇಶ್ವರಿ(ನನ್ನ ತಾಯಿ )ಜನ್ಮ ಕೊಟ್ಟರು. ಒಂದೆಡೆ ಸಮಾಜದ ನೋವುಗಳನ್ನು ಕೇಳಿ ಪರಿಹರಿಸಲು ಓಡಾಡುತ್ತಿದ್ದ ತಾಯಿಯವರು, ಮತ್ತೊಂದೆಡೆ ತಮ್ಮ ಪುಟ್ಟ ಮಕ್ಕಳ ಅಳುವಿನಲ್ಲೂ, -ನಗುಮುಖದಲ್ಲೂ ಜೀವನದ ಅರ್ಥವನ್ನು ಕಂಡುಕೊಳ್ಳುತ್ತಿದ್ದರು.ಹಗಲು ಜನರ ನಡುವೆ ತಿರುಗಿ, ರಾತ್ರಿ ಮಕ್ಕಳೊಡನೆ ಸಮಯ ತೆಗೆಯುತ್ತಿದ್ದರು.ಅವರಿಗೆ ವಿಶ್ರಾಂತಿ ಅನ್ನುವುದು ಇರಲಿಲ್ಲ. ಸಮಾಜ ಸೇವೆಎಂಥ ಪವಿತ್ರ ದಾರಿ ಒಂದೆಡೆ ಇದ್ದರೆ, ತಾಯಿಯ ಹೃದಯದ ಕರ್ತವ್ಯ ಮತ್ತೊಂದೆಡೆ ಇತ್ತು. ಆದರೆ ಜಯದೇವಿ ತಾಯಿಯವರು ಯಾವತ್ತೂ ದಣಿಯಲಿಲ್ಲ. ಸಮಾಜದ ಸೇವೆಯ ಜೊತೆಗೆ ಕುಟುಂಬದ ಪ್ರೀತಿಯನ್ನೂ ಸಮಾನವಾಗಿ ಪಾಲಿಸಿಕೊಂಡು ಹೋಗುತ್ತಿದ್ದ ಅವರ ಜೀವನ ನಿಜಕ್ಕೂ ಆದರ್ಶಮಯವಾಗಿತ್ತು.ಒಂದೇ ಸಮಯದಲ್ಲಿ ಸಮಾಜಕ್ಕೆ ದೀಪವಾಗಿಯೂ, ತಮ್ಮ ಮಕ್ಕಳಿಗೆ ಮಮತೆಯ ನೆರಳಾಗಿಯೂ ಬದುಕಿದ ಜಯದೇವಿ ತಾಯಿಯವರ ಜೀವನಗಾಥೆ ತಾಯಿತನದ ಮಹತ್ವವನ್ನು ಹೇಳುವ ಅಮರ ಕಥೆಯಾಗಿದೆ. ಯಾಕೆಂದರೆ ಅವರ ಗಂಡ ಚನ್ನ ಮಲ್ಲಪ್ಪನವರ ಆರೋಗ್ಯವು ಆಗಲೇ ಹದಗೆಡಲಾರಂಭಿಸಿತ್ತು.ಮಧ್ಯ ಮಧ್ಯದಲ್ಲಿ ತಾಯಿಯವರ ಆರೋಗ್ಯವು ಕೈಕೊಡುತ್ತಿತ್ತು.ಗಂಡನ ಸೇವೆ, ಮಕ್ಕಳ ಪೋಷಣೆ,ಸಮಾಜ ಪರ ಕೆಲಸಗಳು, ಸಾಹಿತ್ಯದ ಸೇವೆ, ಸಿದ್ದರಾಮನ ಆರಾಧನೆಯು ಸತತವಾಗಿ ನಡೆದಿರುತ್ತಿತ್ತು. ಎಲ್ಲ ಮನೆಗಳಲ್ಲಿ ಕಂಡುಬರುವಂತೆ, ಜಯದೇವಿ ತಾಯಿಯವರ ಮನೆಯಲ್ಲಿಯೂ  ಅಣ್ಣತಮ್ಮಂದಿರ ಮನಸ್ತಾಪಗಳು ಬೆಳೆಯುತ್ತಾ ನಡೆದವು.ಸಣ್ಣಸಣ್ಣ ಮಾತುಗಳಿಂದ ಆರಂಭವಾದ ಭಿನ್ನಾಭಿಪ್ರಾಯಗಳು. ಅಣ್ಣ ತಮ್ಮಂದಿರು ಬೇರೆಯಾಗುವ ಸಂದರ್ಭ ಬಂದಿತು. ಪಾಲು ಮಾಡಲಾಗಿ ಲಿಗಾಡೆಯವರ ದೊಡ್ಡವಾಡಿಯು ಸಣ್ಣ ತಮ್ಮನ ಪಾಲಿಗೆ ಬಂದಿತ್ತು. ಮನೆಯ ಶಾಂತಿ ನಿಧಾನವಾಗಿ ಕರಗುತ್ತ ಹೋಗಿತು. ಒಂದು ದಿನ ಆ ಮನೆಯ ಮೌನವೇ ಹೃದಯವನ್ನು ಕಲುಕುವಂತಾಯಿತು…….ಅತ್ತೆ ಪ್ರಯಾಗಬಾಯಿಯು ಯಾವುದೋ ಕೆಲಸಕ್ಕೆ ಬೇರೆ ಊರಿಗೆ ಹೋಗಿದ್ದರು. ಹಾಗೆ ಗಂಡ ವೈದ್ಯರಿಗೆ ತೋರಿಸಿಕೊಂಡು ಬರಲು ಕೋಲ್ಕತ್ತಾಗೆ ಹೋಗಿದ್ದರು,ಜಯದೇವಿ ತಾಯಿಯವರ ಪುಟ್ಟ ಮಗು ಜ್ವರದಿಂದ ಕಂಗೆಟ್ಟು ಮಲಗಿತ್ತು. ತಾಯಿಯ ಕಣ್ಣುಗಳಲ್ಲಿ ಆತಂಕ, ಹೃದಯದಲ್ಲಿ ಕಳವಳ. ಮಗು ಜ್ವರದಲ್ಲಿ ಮೈ ಸುಡುತ್ತಿತ್ತು……ಆದರೆ ಆ ಮನೆಯಲ್ಲಿದ್ದ ಕೆಲವು ಹೃದಯಗಳು ಆ ನೋವನ್ನು ಅರ್ಥಮಾಡಿಕೊಳ್ಳಲಿಲ್ಲ. ಜ್ವರದಿಂದ ನರಳುತ್ತಿದ್ದ ಆ ಮಗುವಿನ ಕಡೆಗೆ ನಿರ್ಲಕ್ಷ್ಯದ ಕಣ್ಣುಗಳು ತಿರುಗಿದವೇ…….. ಹೊರತು ಮಗುವಿಗೇನು ಆಗಿದೆ ಅಂತ ಕೇಳದೇ  ಹೊರಗಡೆ ಹೊರಟು ಹೋದರು. ತಾಯಿಯವರಿಗೆ ಏನು ಮಾಡಬೇಕು ಅನ್ನುವುದು ತಿಳಿಯಲಿಲ್ಲ…. ಹೀಗಾಗಿ ಮನೆಯಲ್ಲಿ  ಯಾವುದಾದರೂ ಔಷದವನ್ನು ತರಬೇಕು ಎಂದು ಮೇಲೆಗಡೆ ಕೋಣೆಗೆ ಹೋದಾಗ ಆ ಕೋಣೆಗಳಿಗೆಲ್ಲ ಬೀಗ ಹಾಕಿದ್ದು ನೋಡಿ ಎದೆ  ಝಲ್ಲೆಂದಿತ್ತು…….!!?? ತಾಯಿಗೆ ಆ ಕ್ಷಣ ಸ್ಪಷ್ಟವಾಯಿತು — ಇಲ್ಲಿ ಉಳಿದರೆ ತನ್ನ ಮಕ್ಕಳಿಗೆ ಬೇಕಾದ ಮಮತೆ ಮತ್ತು ಆರೈಕೆ ಸಿಗುವುದಿಲ್ಲ ಎಂಬ ಸತ್ಯತಿಳಿದು ಕಣ್ಣೀರು ತಡೆದುಕೊಂಡು, ತನ್ನ ಮಕ್ಕಳನ್ನು ಮುದ್ದಾಗಿ ತಬ್ಬಿಕೊಂಡರು, ಹೊಸ ನಿರ್ಧಾರವನ್ನು ತೆಗೆದುಕೊಂಡರು.  ತನ್ನ ಮಕ್ಕಳಿಗಾಗಿ ಒಂದು ಬೇರೆ ಮನೆ ಕಟ್ಟಬೇಕೆಂಬ ಮನಸ್ಸು ಮಾಡಿದರು. ಆ ನಿರ್ಧಾರದಲ್ಲಿ ನೋವು ಇತ್ತು…ಕುಟುಂಬದವರೆಲ್ಲರೂ ಒಂದಾಗಿ ಒಂದು ಕಡೆ ಸಂತೋಷದಿಂದ ನಗುನಗುತ ನಲುವಿನಲಿ ನಲಿಯುತ ಬಾಳಬೇಕೆಂಬುವ ಆಶೆಯಗಳ ವಿಚ್ಛೇದನೆಯ ವೇದನೆ ಅದಾಗಿತ್ತು…….!!! ಹೀಗಾಗಿ ಜಯದೇವಿ ತಾಯಿಯವರು ತಮ್ಮ ನೋವನ್ನು ಮನದಾಳದಲ್ಲಿ ಮರೆಮಾಡಿಕೊಂಡು, ಮಕ್ಕಳ ಭವಿಷ್ಯಕ್ಕಾಗಿ ಹೊಸ ಜೀವನದ ದಾರಿಯನ್ನು ಆರಿಸಿಕೊಂಡರು.ಜ್ವರದಲ್ಲಿದ್ದ ಮಗುವನ್ನು ಎತ್ತಿಕೊಂಡು ತವರು ಮನೆ ಕಡೆ ಹೆಜ್ಜೆ ಹಾಕಿದರು.ಆ ದಿನದಿಂದ ಅವರ ಜೀವನದಲ್ಲಿ ಮತ್ತೊಂದು ಹೊಸ ಹೋರಾಟ ಪ್ರಾರಂಭವಾಯಿತು… ಆದರೆ ಆ ಹೋರಾಟದ ಹಿಂದಿದ್ದ ಶಕ್ತಿ — ತಾಯಿತನದಾಗಿತ್ತು. ತವರು ಮನೆಯಲ್ಲಿ ತಂದೆ ತಾಯಿ ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡು. ಅವರನ್ನು ಸಂತೈಸಿ ಅಳಿಯ ಬಂದ ಮೇಲೆ ಬೇರೆ ಮನೆಗೆ ಹೋಗಲು  ಬಿಡದೆ ತಮ್ಮ ಮನೆಯಲ್ಲಿಯೇ ಕೆಳಗಡೆ ಇರಲು ಅನು ಮಾಡಿಕೊಟ್ಟರು. ಅವರ ಮನೆಯ ಎದುರುಗಡೆ ವಾರದ ಮಲ್ಲಪ್ಪನವರ ಮನೆಯಿತ್ತು. ಅವರ ವಾಡೆಯ ಎದುರುಗಡೆ ಜಗ ಖಾಲಿ ಇತ್ತು. ಆ ಜಗವನ್ನು ಖರೀದಿ ಮಾಡಿ ಅಲ್ಲಿಯೇ ಮನೆ ಕಟ್ಟಲು ಪ್ರಾರಂಭಿಸಿದರು.ಆ ಮನೆಗೆ ಅತ್ಯಂತ ಪ್ರೀತಿಯಿಂದ *ಜಯನೀಕೆತನ* ಅಂತ ತಾಯಿಯವರ ಹೆಸರಲ್ಲಿ ಗಂಡ ಚೆನ್ನಮಲ್ಲಪ್ಪನವರು ಮನೆ ಕಟ್ಟಿಸಿದರು. ಇಪ್ಪತ್ತೆರಡು ಕೋಣೆಗಳನ್ನು ಹೊಂದಿರುವ ಭವ್ಯವಾದ ಮನೆ…. ಅರಮನೆಯಂತೆ ವಿಶಾಲವಾಗಿ ಕಟ್ಟಿದರು. ದೂರದಿಂದ  ನೋಡಿದವರಿಗೆ ಅದು ಸಾಮಾನ್ಯ ಮನೆ ಅಲ್ಲ, ಒಂದು ದೊಡ್ಡ ಸಂಸ್ಕೃತಿಯ ಸಂಕೇತದಂತೆ ಕಾಣುತ್ತಿತ್ತು.ಮನೆಯ ಒಳಗೆ ಕಾಲಿಟ್ಟ ತಕ್ಷಣ ದೊಡ್ಡ ವಿಶಾಲವಾದ ಶಿವಯೋಗಿ ಸಿದ್ದರಾಮನ ಭಾವಚಿತ್ರದ ದರ್ಶನ ಮಾಡಿ ಒಳಗೆ ಹೋಗಬೇಕಾಗುತಿತ್ತು….._ಸಿದ್ದರಾಮನ ಭಾವ ಚಿತ್ರ ಒಳಗೆ ಹೋದರೆ ವಿಶಾಲವಾದ ಅಂಗಳ ಕಣ್ಣಿಗೆ ಬೀಳುತ್ತಿತ್ತು . ಮನೆಯಲ್ಲಿ ಚೆನ್ನಾಗಿ ಬೆಳಕು ಗಾಳಿ ಆಡಲೆಂದು ಮಧ್ಯದಲ್ಲಿ ತೆರೆದ ಅಂಗಳವಿತ್ತು.ಮನೆಯ ವಿವಿಧ ದಿಕ್ಕುಗಳಿಗೆ ಕೊಣೆಗಳು. ಪ್ರತಿಯೊಂದು ಕೋಣೆಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿತ್ತು—ಕೆಲವು ವಿಶ್ರಾಂತಿಗಾಗಿ, ಕೆಲವು ಅತಿಥಿಗಳಿಗಾಗಿ, ಇನ್ನೊಂದು ದೇವರ ಮನೆಗಾಗಿ ಮೀಸಲಿದ್ದರೆ ಒಂದು ದೊಡ್ಡ ಅಡಿಗೆಯ ಮನೆ  ಇನ್ನೊಂದು ಚಿಕ್ಕ ಅಡಿಗೆ ಮನೆ ಇತ್ತು .ಇನ್ನೊಂದು ಕಾಳುಗಳ ಸಂಗ್ರಹಣೆ ಮಾಡುವ ಕೋಣೆ, ಊಟದ ಮನೆ ಇನ್ನೊಂದು ಮನೆಯ ವಸ್ತ ಒಡವೆಗಳನ್ನು  ಕಾಗದ ಪತ್ರಗಳನ್ನು ಬಂಗಾರ ಬೆಳ್ಳಿಯ ಸಾಮಗ್ರಿಗಳನ್ನು ಇಡುವ ಟ್ರೆಝರಿ ಕೋಣೆ ಬೇರೆಯಾಗಿತ್ತು.  ಒಂದು ವಿಶಾಲವಾದ ಕೋಣೆ ಬಡ್ಡಿ ವ್ಯವಹಾರದಲ್ಲಿ ಅಡವಿ ಇಟ್ಟುಕೊಂಡ ಸಾಮಗ್ರಿಗಳದ್ದು.(ಈ ಕೋಣೆ ತಾಯಿಯವರಿಗೆ ಇಷ್ಟವಾಗುತ್ತಿರಲಿಲ್ಲ ಏಕೆಂದರೆ ಜನರು ಅನಿವಾರ್ಯತೆಯಲ್ಲಿ ತಂದಿಡುವ ಸಾಮಗ್ರಿಗಳನ್ನು ನೋಡಿದರೆ ಅವರಿಗೆ ಬಹಳ ಕಳಗಳಾಗುತ್ತಿತ್ತು) ಹಾಗೇ ನೆಲಮನೆಯಲ್ಲಿ ಸುಮಾರು  14 ಮುನಿಮರು(ಕಾರಭಾರಿಗಳು )ಕುಳಿತುಕೊಂಡು ಇಡೀ ಆಸ್ತಿಯ ವಹಿವಾಟದ ಲೆಕ್ಕಾಚಾರವನ್ನು ಇಡಲು ಬರುತ್ತಿದ್ದರು .ಅವರಿಗಾಗಿ ಕೆಳಮನೆಯಲ್ಲಿ ಒಂದು ದೊಡ್ಡ ಮನೆ ಕಟ್ಟಲಾಗಿತ್ತು. ಅದರ ಮೇಲ್ಗಡೆ ಇನ್ನೊಂದು ರೂಮು ಹೊರಗಡೆಯಿಂದ ಬಂದು ಹೋಗುವರಿಗಾಗಿ ಆಫೀಸ್ ರೂಮ್ ಅನ್ನು ಮಾಡಲಾಗಿತ್ತು.ಮೊದಲನೇ ಅಂತಸ್ತಿನ ಕೋಣೆಗಳೆಲ್ಲ ಮಕ್ಕಳು- ಸೊಸೆಯಂದಿರಗಾಗಿ ತಮಗಾಗಿ ಮೀಸಲಿದ್ದವು .ಅಲ್ಲಿ ಒಂದು ದೊಡ್ಡ ಹಾಲ್ ಕಟ್ಟಲಾಗಿತ್ತು. ಕೆಳಗಡೆ ಒಂದು ಕೂಡಾ ದೊಡ್ಡ ಹಾಲ್   ಇತ್ತು……ಮನೆಗೆ ಬಂದು ಹೋಗುವ ಅತಿಥಿಗಳಾಗಿ … ಸಂಪತ್ ಭರಿತವಾದ ಮನೆ……..!! ಜಯದೇವ ತಾಯಿಯವರ ವಾಡೆ ಮೊದಲನೇ ಅಂತಸ್ತಿಗೆ ಹೋದರೆ ಎದುರುಗಡೆ ಜಯದೇವಿ ತಾಯಿಯವರ ಕೋಣೆ, ಎಡ ಭಾಗಕ್ಕೆ ಚಿಕ್ಕದೊಂದು ಹೂವೂ ತೋಟವನ್ನು ನಿರ್ಮಿಸಿಕೊಂಡಿದ್ದರು. ಅದಕ್ಕಾಗಿ  ಗಾಳಿ ಬೆಳಕು ಆಡಲೆಂದು ಮೇಲೆ ಸ್ಥಳ ಬಿಟ್ಟಿದ್ದರು. ಸುಂದರ ಚಿಕ್ಕ ತೋಟದಲಿ‌ ಹಸಿರು ಗಿಡಗಳು, ಬಣ್ಣ ಬಣ್ಣದ ಹೂಗಳು ಅವುಗಳಲ್ಲಿ ಮುಖ್ಯವಾಗಿ ಟ್ಯೂಬ್ ರೊಜ ಅಂದರೆ ನಿಶಿಗಂಧ ಹೂಗಳು ಬಹಳ ಪ್ರಿಯವಾದ ಹೂಗಳು ತಾಯಿಯವರಿಗೆ … ಇನ್ನೂ ‘ರಾತ‌ರಾಣಿ’ಹೂವುಗಳು ‘..ರಾತ್ರಿ ಸುಗಂಧ ಸುಸೂವ ಗಿಡಗಳಿದ್ದವು. ರಾತ್ರಿ ಪರಿಮಳವು  ಗಾಳಿಯಲ್ಲಿ ಹರಡಿ  ಮನೆಯ ವಾತಾವರಣವನ್ನು ಇನ್ನಷ್ಟು ಮನಮೋಹರ ವಾಗಿಸುತ್ತಿತ್ತು. ‘ಜಯನಿಕೇತನವು’  ಕೇವಲ ಸುಂದರ ಕಟ್ಟಡ ಮಾತ್ರವಲ್ಲ;ಅದು ವೈಭವ, ಸಂಸ್ಕೃತಿ ಮತ್ತು ಆತಿಥ್ಯವನ್ನು ಹೊತ್ತು ನಿಂತಿರುವ ಒಂದು ಜೀವಂತ ಅರಮನೆ ಎಂಬ ಭಾವನೆಯನ್ನು ಮೂಡಿಸುತ್ತಿತ್ತು.*ಜಯನಿಕೇತನ್*ಒಂದು ನಂದನ ವನದಂತೆ ರಾರಾಜಿಸಲಾರಂಭಿಸಿತ್ತು. ಜಯದೇವಿ ತಾಯಿಯವರು ಬಳಸುತ್ತಿದ್ದ ಕನ್ನ ಹಿರಿಯ ಮಗಳು ಮತ್ತು ತಂಗಿಯಂದಿರೇಲ್ಲ ಸೇರಿ ಶಾಲೆಗೆ ಹೋಗಿ ಬರುತ್ತಿದ್ದರು. ಹಿರಿಯ ಮಗಳು ಶಶಿಕಲಾ ತುಂಬಾ ಸುಂದರ ಹಾಗೂ ಜಾಣ ತಾಯಿಯಂತೆ ನಿರ್ಗಳವಾಗಿ ಹಾಡುವ ಹಾಗೂ ಭಾಷಣ ಮಾಡುತ್ತಿದ್ದರು. ಜಯದೇವಿ ತಾಯಿಯವರು ಬಾಲ ಸಿದ್ದರಾಮ ಅಕ್ಕಮಹಾದೇವಿ ಮುಂತಾದ ಶರಣರ ನಾಟಕಗಳನ್ನು ತಾವೇ ಬರೆದು ಮಕ್ಕಳ ಕೈಯಲ್ಲಿ ನಾಡಹಬ್ಬದಲ್ಲಿ ನಟನೆ ಮಾಡಿಸುತ್ತಿದ್ದರು ಮುಖ್ಯ ಪಾತ್ರದಲ್ಲಿ ಮಗಳು ಶಶಿಕಲಾ ಭಾಗವಹಿಸುತಿದ್ದರು. ಸಿದ್ದರಾಮನು ಮಲ್ಲಯ್ಯ ನೀನು ಎಲ್ಲಿ ಅಡಗಿದಿಯಾ ಎಂದು ಪರಿಪರಿಯಾಗಿ ಹಂಬಲಿಸಿ….ನಟನೆ ಮಾಡುತ್ತಿದ್ದ ದೃಶ್ಯವನ್ನು ನೋಡಿ ಧಾರಾಕಾರವಾಗಿ ತಾಯಿಯವರ ಕಣ್ಣೀರು ಹರಿಯಲಾರಂಭಿಸುತ್ತಿತ್ತು. ಭಾವುಕರಾಗುತ್ತಿದ್ದರು. ಅಕ್ಕನ ಪಾತ್ರದಲ್ಲಿ ಮಗಳು……. “ಅಳಿಸಂಕುಲವೇ ಮಾಮರವೇ ನೀವು ಕಣ್ಣಂಡಿರಾ ಎನ್ನ ಚೆನ್ನಮಲ್ಲಿಕಾರ್ಜುನನ್ನು ನೀವು ಕಂಡಿರಾ” ಅಂತ ಅತ್ಯಂತ ಭಾವಕಳಾಗಿ ಮಗಳು ನಟಿಸುತ್ತಿರುವದ ನೋಡಿ ಶರಣೆ ಅಕ್ಕನನ್ನು ನೆನೆದು ಹನಿಗಣ್ಣ ಆಗುತ್ತಿದ್ದರು.ಮಗಳನ್ನು ಅತ್ಯಂತ ಅಭಿಮಾನದಿಂದ ಎದೆಗಪ್ಪಿ ಕೊಳ್ಳುತ್ತಿದ್ದರು.ತಮ್ಮ ಸಂಸ್ಕಾಗಳ ಗೂಡಿನಲಿ ಮಕ್ಕಳಿಗೆ ಬೆಳಿಸಲಾರಂಭೀಸಿದರು. ಜಯದೇವಿ ತಾಯಿಯವರು ತಮ್ಮ ಬದುಕಿನ ಅನುಭವಗಳಿಂದ ಒಂದು ಮಹತ್ವದ ಸತ್ಯವನ್ನು ಅರಿತುಕೊಂಡಿದ್ದರು – ಸಮಾಜದ ಬದಲಾವಣೆ ಮನೆಯೊಳಗೇ ಆರಂಭವಾಗಬೇಕು ಎಂದು. ಅದಕ್ಕಾಗಿಯೇ ಅವರು ತಮ್ಮ ಮಕ್ಕಳನ್ನು ಶರಣ ಸಂಸ್ಕೃತಿಯ ಮೌಲ್ಯಗಳಲ್ಲಿ ಬೆಳೆಸಲು ಆರಂಭಿಸಿದರು. ಮನೆಯೊಳಗೆ ಒಮ್ಮೆ ಇದ್ದ ಮೂಢನಂಬಿಕೆಗಳು, ಅನಾವಶ್ಯಕ ಆಚರಣೆಗಳು ನಿಧಾನವಾಗಿ ಕಣ್ಮರೆಯಾಗಲು ಆರಂಭಿಸಿದವು. ಜಯದೇವಿ ತಾಯಿಯವರು ಯಾವ  ಮಡಿ ಮೈಲಿಗೆಯನ್ನು ಒಪ್ಪುತ್ತಿರಲಿಲ್ಲ…. ಜಾತಿ ಧರ್ಮ ನೀಚ ಸಂಕೋಲನದಿಂದ ಹೊರಗಿದ್ದರು.“ಮನುಷ್ಯನಿಗೆ ಮಾನವೀಯತೆಯೇ ದೊಡ್ಡ ಧರ್ಮ” ಎಂದು ತಾಯಿ ಮಕ್ಕಳಿಗೆ ಹೇಳುತ್ತಿದ್ದರು. ಹೆಣ್ಣು ಗಂಡೆಂದು  ದೇವರು ಭೇಧ ತೋರಲಾರ ಎನ್ನುತ್ತಿದ್ದರು. ಮುಟ್ಟಾದರೆ ಹೆಣ್ಣನ್ನು ಕೀಳಾಗಿ ನೋಡುವುದು ಖಂಡಿಸುತ್ತಿದ್ದರು ಏಕೆಂದರೆ ತಾಯಿ ಜಗದಂಬೆಯು ಕೂಡ ಹೆಣ್ಣಲ್ಲವೇ ಅಂತ ಕೇಳುತ್ತಿದ್ದರು. ಅದಕ್ಕೆ ದೇವರನ್ನು ಆ ಸಮಯದಲ್ಲಿ  ಯಾಕೆ ಮುಟ್ಟಬಾರದು  ಅನ್ನುವ ಪ್ರಶ್ನೆ ಅವರದಾಗಿತ್ತು…!!??? ಅವರ ಮಾತುಗಳಲ್ಲಿ ಕೇವಲ ಉಪದೇಶವಿರಲಿಲ್ಲ; ಬದುಕಿನಲ್ಲಿ ಅವರು ಅದನ್ನು ಅನುಸರಿಸುತ್ತಿದ್ದರು. ಮಕ್ಕಳು ಏನನ್ನಾದರೂ ಪ್ರಶ್ನಿಸಿದಾಗ,“ಹೀಗೆ ಮಾಡಬೇಕು ಎಂದು ಹೇಳಿತಿದ್ದರು  ಅದರ ಒಳ ಅಡಕವಾದ ಅರ್ಥ ಏನು ಎಂದು ತಿಳಿದುಕೊಳ್ಳಿ  ಮೊದಲು ಎಂದು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರ ಮನೆ ನಿಧಾನವಾಗಿ ಜ್ಞಾನ, ಸಮಾನತೆ ಮತ್ತು ಪ್ರೀತಿ ತುಂಬಿದ ಶರಣ ಸಂಸ್ಕೃತಿಯ ಮನೆ ಆಗಿ ರೂಪುಗೊಂಡಿತು.ಅತ್ಯಂತ ಸಾಂಪ್ರದಾಯಸ್ತ ಮನೆಯಾದ ಲಿಗಾಡೆ ಮನೆತನದವರು ವೈಚಾರಿಕತೆಯ ಶರಣ ಆಚರಣೆ ಅತ್ತ ತಿರುಗಲಾರಂಭಿಸಿದರು. *ಮೂಢನಂಬಿಕೆಗಳು ಮನುಷ್ಯನ ಮನಸ್ಸನ್ನು ಬಂಧಿಸುತ್ತವೆ… ಶರಣರ ಮಾರ್ಗ ಮನುಷ್ಯನ ಮನಸ್ಸನ್ನು ಮುಕ್ತಗೊಳಿಸುತ್ತದೆ.”* ಆ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರುರರಾಲಂಭೀಸಿದವು.ಅವರು ಕೇವಲ  ಮಕ್ಕಳಿಗೆ ತಾಯಿಯಾಗಿರಲಿಲ್ಲ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡ ಶರಣ ಸಂಸ್ಕೃತಿಯ ವಾರಸುದಾರರು ಆಗಿ ಬೆಳೆಯಲು ಆರಂಭಿಸಿದರು.ಹೀಗೆ, ಜಯದೇವಿ ತಾಯಿಯ ಮನೆಅದು ಸಮಾನತೆ, ಜ್ಞಾನ ಮತ್ತು ಮಾನವೀಯತೆಯನ್ನು ಬೆಳೆಸುವ ಒಂದು ಚಿಕ್ಕ ಸಮಾಜ ಆಗಿತ್ತು. ಇದಕ್ಕೆ ಉದಾಹರಣೆ ಎಂದರೆ ಜಯದೇವಿತಾಯಿಯವರ ಐದು ಅತ್ತೆಯಂದಿರು ಸಾಂಪ್ರದಾಯಸ್ಥರು …..ಪಡಸಾಲೆಯಲ್ಲಿ ನಿಂತು ಮಾತನಾಡಿದರೆ ,ಅಂಗಳದಲ್ಲಿ ನಿಂತು ಕುಂಕುಮವನ್ನು ಇಟ್ಟಿರೆ ಸಾವಿರ ಸಲ ಬೈದ  ಅತ್ತೆಯಂದರು ….ಮುಂದೆ ತಾಯಿಯವರನ್ನು ಸಭೆ ಸಮಾರಂಭಗಳಿಗೆ ಅತ್ಯಂತ ಆನಂದಭರಿತರಾಗಿ ಕಳುಹಿಸಿ ಕೊಡಲಾರಂಭಿಸಿದರು .ಗಂಡನ ಅನಾರೋಗ್ಯದಲ್ಲಿ ತಾಯಿಯವರಿಗೆ  ಸಮಾರಂಭಗಳಿಗೆ ಹೋಗಲು ಮನಸ್ಸಿಇಲ್ಲದಿದ್ದರು …. ಗಂಡ ತಮ್ಮ ಕಾರುಗಳನ್ನು ಕೊಟ್ಟು ಬೇರೆ ಊರುಗಳಿಗೆ ಹೋಗಿ ಭಾಷಣ ಮಾಡಿ ಬರಲು ಒತ್ತಾಯಿಸುತ್ತಿದ್ದರು. ” ಇಲ್ಲಿ ನನ್ನ ನೋಡಿಕೊಳ್ಳಲು ಅನೇಕ ಜನರಿದ್ದಾರೆ…… ಅಲ್ಲಿ ನೀನು ಇಡೀ ಸಮಾಜಕ್ಕೆ ಬೇಕಾಗಿದ್ದೀಯಾ ನೀನು ಹೋಗು “ಅನ್ನುವಷ್ಟರ ಮಟ್ಟಿಗೆ ಅವರು ವೈಶಾಲ್ಯ ಮನೋಭಾವನೆಯನ್ನು ಹೊಂದಿದ್ದರು. ಚೆನ್ನ ಮಲ್ಲಪ್ಪನವರು ಕಾಯಿಲೆಯಲ್ಲಿ ಬಳಲಾರಂಭಿಸಿದ ವೇದನೆಯ ದಿನಗಳು ಅವು….  ವೈದ್ಯರಿಗೆ ತೋರಿಸಲು ದೊಡ್ಡ ದೊಡ್ಡ ಊರುಗಳಿಗೆ ಕಲ್ಕತ್ತಾ ಬೊಂಬೆ  ಊರುಗಳಿಗೆ ಹೋಗುವಾಗ ಇಡೀ ರೈಲ್ವೆ ಒಂದು ಬಂಡಿಯಲ್ಲಿ ಅವರಿಗಾಗಿ ಮೀಸಲಾಗಿಡಲಾಗುತ್ತಿತ್ತು. ಹಾಗೇ ಊರುಗಳಿಗೆ ಹೋದಲ್ಲೆಲ್ಲ ಹೆಂಡತಿಗೆ‌ ಅಪ್ಪಟ ರೇಷ್ಮೆ ಸೀರೆ ಹಾಗೂ ವಜ್ರಗಳ ‌ಆಭರಣಗಳನ್ನು ತಂದು

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ”ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಕರ್ನಾಟಕವು ಹಲವು ಶರಣರ ಸಂತರ ದಾರ್ಶನಿಕರ ನೆಲೆಬೀಡು.  ಸಂಪ್ರದಾಯಸ್ಥ ವಿಶ್ವ ಕರ್ಮರ  ಕುಟುಂಬದಲ್ಲಿ ಜನಿಸಿ ಅತ್ಯಂತ ವೈಚಾರಿಕತೆಯ ವಚನಗಳನ್ನು ರಚಿಸಿ ಸಾಮಾಜಿಕ ಧಾರ್ಮಿಕ ಅಂಕು ಡೊಂಕುಗಳನ್ನು ತಿದ್ದಿ ಟೀಕಿಸುವ ವಿಡಂಬಿಸುವ ತನ್ನ ಹುಟ್ಟು ಕುಲದ ಜನರನ್ನೇ ಟೀಕಿಸಿ ಎಚ್ಚರಿಸುವ ದಿಟ್ಟ ಶರಣ ಸಂಸ್ಕೃತಿಯ ವಾರಸುದಾರ ತಿಂಥಣಿ ಮೌನೇಶ್ವರ ಅಥವಾ ಮೌನಪ್ಪ ಮೌನೋದ್ದಿನ ಎಂಬ ಬೇರೆ ಬೇರೆ ಸಮುದಾಯದ ಪ್ರೀತಿಗೆ ಭಕ್ತಿಗೆ ಪಾತ್ರರಾದವರು ಮೌನೇಶ್ವರರು. ಪೌರಾಣಿಕ ಹಿನ್ನೆಲೆ ಅಂದಿನ ಗುಲಬರ್ಗಾ ಜಿಲ್ಲೆಯ ಇವತ್ತಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ  ಎಂಬ ಗ್ರಾಮದ ಪಂಚಾಳ ಅಥವಾ ವಿಶ್ವಕರ್ಮ ಕುಲದಂಪತಿಗಳಾದ ಶೇಷಪ್ಪ ಆಚಾರ್ಯ ಮತ್ತು ಶೇಷಮ್ಮರೆಂಬ  (ಇವರಿಗೆ ಹಾವಪ್ಪ ಮತ್ತು ಹಾವಕ್ಕ ಎಂದು ಕರೆಯಲಾಗುತ್ತಿತ್ತು) ದಂಪತಿಗಳಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಿರಲಿಲ್ಲ. ಶೀಲೆ ಶೇಷಮ್ಮಳು ಆ ಊರಿನ ಆದಿಲಿಂಗೇಶ್ವರ ದೈವಕ್ಕೆ 12 ವರ್ಷಗಳ ಕಾಲ ದಿನನಿತ್ಯವೂ ಬೆಳಗ್ಗೆ ಪೂಜೆಗೈದು ಬರುತ್ತಿದ್ದಳು. ಕೊನೆಗೊಂದುದಿನ ಗಂಡನಿಗೆ ಸಂಶಯ ಬಂದು ಅವಳನ್ನು ಹಿಂಬಾಲಿಸಿದಾಗ ಅವನಿಗೆ ದೃಗ್ಗೋಚರವೇ ಎದುರಾಯಿತು. ಏನೆಂದರೆ ಶೇಷಮ್ಮಳು ಆದಿಲಿಂಗೇಶ್ವರನಿಗೆ ಎಂದಿನಂತೆ ಪೂಜೆಗೈದು ‘ತಂದೆ ಹನ್ನೆರಡು ವರ್ಷಗಳ ಕಾಲ ನಿನ್ನ ಪೂಜೆಗೈದಿರುವೆ ಈಗಲಾದರೂ ಮಕ್ಕಳ ಭಾಗ್ಯವನೀತ್ತು ಸಲಹು ತಂದೆ’ ಎಂದಾಗ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ “ಮಗಳೇ ಶೇಷಮ್ಮ ನೀನು ನನ್ನ ಪನ್ನಂಗಾಭರಣವಾದ್ದರಿಂದ ಆ ಬ್ರಹ್ಮನು ನಿನ್ನ ದೈವದಲ್ಲಿ ಸೃಷ್ಟಿ ಬೆಳೆಸುವ ಸಂತಾನ ಭಾಗ್ಯ ಫಲವನ್ನಿಡುವ ಸಾಹಸ ಮಾಡಲಿಲ್ಲ. ಆದಕಾರಣ ನಾನೇ ನಿನ್ನ ಮಗನಾಗಿ ನಾಳೆಯ ಉಷಾ ಕಾಲದಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿರುವೆ” ಎಂದು ಹೇಳಿ ಪರಮಾತ್ಮನು ಅಂತರ್ಗತನಾಗುತ್ತಾನೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ದೇಗುಲದ ಒಂದು ಕಂಬದ ಮರೆಯಲ್ಲಿ ನಿಂತು  ನೋಡುತ್ತಿದ್ದ ಶೇಷಮ್ಮಳ ಗಂಡ ಶೇಷಪ್ಪನ ಸಂಶಯವೆಲ್ಲವೂ ದೂರವಾಗಿ ಭಕ್ತಿಯ ಮಹಾಪೂರವು ಅವನ ಮನದಲ್ಲಿ ನೆಲೆಯಾಗುತ್ತದೆ ಎಂಬ ಐತಿಹ್ಯ ಪೌರಾಣಿಕ ಕಥೆಗಳಿಂದ ಮೌನೇಶ್ವರನ ಚಿತ್ರಣ ವ್ಯಕ್ತವಾಗಿದೆ. ನಂತರ ಪರಶಿವನೇ ಅಯೋನಿಜನಾಗಿ ಮೌನೇಶ್ವರರ ಅವತಾರದಿ ಚೆಲುವಿನ, ಚೆಂದದ, ಮುದ್ದಾದ ಮಗುವಿನ ರೂಪದಲ್ಲಿ ವರಪ್ರಸಾದವಾಗಿ ಧರೆಗಿಳಿದು ಬರುತ್ತಾನೆ ಎನ್ನುವ ಐತಿಹ್ಯವೂ ಇದೆ. ಜಗದ್ಗುರು ಶ್ರೀ ಮೌನೇಶ್ವರರು ಬರೀ ಮಹಿಮಾಪುರುಷರಲ್ಲದೆ ಕಾಲಜ್ಞಾನಿಗಳು, ವಚನಕಾರರು, ಸಮನ್ವತಾವಾದಿಗಳು, ಮಹಾನ್ ಮಾನವತಾವಾದಿಗಳೂ ಆಗಿದ್ದಾರೆ.  16ನೇ ಶತಮಾನದಲ್ಲಿ ಬರುವ ಶರಣರ, ವಚನಕಾರರ, ಸಂತರ ಸಾಲಿನಲ್ಲಿ ಮೌನೇಶ್ವರರು ಪ್ರಮುಖ ವಚನಕಾರರಾಗಿ ಕಂಡುಬರುತ್ತಾರೆ.  ಮೌನೇಶ್ವರರು ಒಟ್ಟು 796ಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಮೌನೇಶ್ವರರು ತಮ್ಮ ಎಲ್ಲ ವಚನಗಳಲ್ಲಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಹೆಸರನ್ನು ಅಂಕಿತನಾಮವಾಗಿ ಬರೆದಿರುವುದನ್ನು ಕಾಣಬಹುದು. *ಭಾವೈಕ್ಯತೆಯ ಸಂತ* ಮೌನೇಶ್ವರರು ಹಿಂದೂ ಮುಸಲ್ಮಾನ ಧರ್ಮದ ಭಾವೈಕ್ಯತಾ ಸೂಚಕವಾಗಿ ಹೀಗೆ ಹೇಳಿದ್ದಾರೆ: “ಹಿಂದೂ ತುರುಕರಿಗೆ ಚಂದ್ರಮನೊಬ್ಬನೆ ನಿಂದಿಸಿದವನೇ ಅಧಮನು” ಎಂದು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರರು ತಮ್ಮ ಸರಳ ಸಜ್ಜನಿಕೆಯ ಆಚಾರ ವಿಚಾರಗಳಿಂದಲೇ ಎಲ್ಲರನ್ನೂ ಆಕರ್ಷಿಸಿದ್ದರು. ಇವರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಾಹಪುರ, ಸುರಪುರ, ದೇವದುರ್ಗ, ಲಿಂಗನಬಂಡಿ, ವರವಿ, ಛಬ್ಬಿ, ರಾಚೋಟಿ, ಶಿರಸಂಗಿ, ತಿರುಪತಿ, ಕಾಶಿ, ಮುಂತಾದೆಡೆ ತಿರುಗಾಡಿ, ಸಾಮಾಜಿಕ ಸುಧಾರಣೆಯನ್ನು  ಮೆರೆದವರೆಂಬುದು ಇತಿಹಾಸ.  ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಮೌನೇಶ್ವರರು ವಿಶ್ವಕರ್ಮ ಸಮಾಜದಿಂದ ಬಂದವರು. ದಕ್ಷಿಣ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಜೀವನದುದ್ದಕ್ಕೂ ಸಾರಿದವರು ಮೌನೇಶ್ವರರೇ. ಅವರ ಒಂದು ಪದ್ಯ ಹೀಗಿದೆ- ‘|| ಓಂ ಏಕಲಾಖ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನಾಧೀನ್ ಜಿತಾಪೀರ್ ಪೈಗಂಬರ್ ಮಾಧೀದೀ ಕಾಶೀಶೀಪತಿ ಗಂಗಾಧರ ಹರ ಹರ ಮಹಾದೇವ||’ ಮಹಮ್ಮದ್ ಪೈಗಂಬರ ಮತ್ತು ಗಂಗಾಧರ ಒಬ್ಬರೇ ಎಂದು ಮೌನೇಶ್ವರರು ಇದರಲ್ಲಿ ಸಾರಿದ್ದಾರೆ. ಈ ಮಾತಿನ ಅಖಂಡಾರ್ಥ ಮೌನೇಶ್ವರರ ಪದ್ಯದಲ್ಲಿದೆ. ಓಂ ಮತ್ತು ಅಲ್ಲಾ ಒಂದೇ ಎಂಬ ಅದ್ವಯಭಾವದ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮಹಾಮಾನವತಾವಾದಿ, ಸಾಮಾಜಿಕ ಸಂತ ತಿಂಥಿಣಿ ಮೋನಪ್ಪಯ್ಯ! ಜನನ ತಿಂಥಿಣಿ ಮೌನೇಶ್ವರ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದ ಇವರು ‘ಬಸವಣ್ಣ’ ಎಂಬ ಅಂಕಿತದಲ್ಲಿ ಹಲವಾರು ವಚನಗಳನ್ನು ಬರೆದಿದ್ದಾರೆ, ಹಂಪೆಯ ಎಮ್ಮೆ ಬಸವಣ್ಣನನ್ನು (ಕ್ರಿ.ಶ. 1510-1570) ವಚನದಲ್ಲಿ ನೆನೆದಿದ್ದಾರೆ. ವಿಜಯಪುರ ಜಿಲ್ಲೆಯ ಗೋಲಗೇರಿ ಎಂಬಲ್ಲಿದ್ದ 16ನೇ ಶತಮಾನದ ಕುರುಬಗೊಲ್ಲಾಳ ನನ್ನು ಮತ್ತೊಂದು ವಚನದಲ್ಲಿ ಸ್ಮರಿಸಿದ್ದಾರೆ. ಇವರೊಂದು ವಚನದಲ್ಲಿ, ಬಿಜಾಪುರದ ಮೊದಲನೆಯ ಆದಿಲ್​ಶಾಹನಿಗೆ (ಕ್ರಿ.ಶ. 1557-1580) ಪಟ್ಟಕಟ್ಟಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಕ್ರಿ.ಶ. 1612ರಲ್ಲಿ ಬಿಜಾಪುರದ ಸುಲ್ತಾನರ ಸುಬೇದಾರ್ ಆಗಿದ್ದ ಅಂಕುಶ ಖಾನನು ಬಾವಿಯೊಂದನ್ನು ಕಟ್ಟಿಸಲು ಯತ್ನಿಸುತ್ತಾನಷ್ಟೆ. ಆದರೆ ಅಲ್ಲಿ ಜಲ ಬರುವುದಿಲ್ಲ. ಆಗ ಮೌನೇಶ್ವರರು ಬಾವಿಗಿಳಿದು ಜಲ ತಂದುದರ ವಿವರಣೆ ಅವರ ವಚನವೊಂದರಲ್ಲಿ ಬರುತ್ತದೆ. ಇವೆಲ್ಲದರ ಆಧಾರದ ಮೇಲೆ ಇವರು 16ನೇ ಶತಮಾನದ ಮಧ್ಯಭಾಗದಿಂದ 17ನೇ ಶತಮಾನದ ಉತ್ತರಾರ್ಧದವರೆಗೆ ಇದ್ದರೆಂಬುದು ರುಜುವಾತು ಆಗುತ್ತದೆ! *ಜೀವನ ಮತ್ತು ಬಾಲ್ಯ ಮೌನೇಶ್ವರರ ತಂದೆ-ತಾಯಿ ಶೇಷಪ್ಪ (ಹಾವಪ್ಪ), ಶೇಷಕ್ಕ (ಹಾವಕ್ಕ) ಎಂಬ ಉಲ್ಲೇಖ ಐತಿಹ್ಯವಾಗಿ ದೊರಕುತ್ತದೆ. ಜಾನಪದದಲ್ಲೂ ಮೌನೇಶ್ವರರ ಬಾಲ್ಯದ ವಿವರಗಳು ತುಂಬಾ ಕಡಿಮೆ. ಅವರ ಬಗ್ಗೆ    ಕಥೆ ಐತಿಹ್ಯ ಏನೇ ಇದ್ದರೂ  ಮೌನೇಶ್ವರರು- ‘ಇಂದ್ರಿ ಸೂತಕದಿಂದ ಅಂದೆ ನಾನು ಜನಿಸಿದೆನು /ಇಂದು ನಾನು ಕೊಳೆಯಲೆ ಪ್ರಭುದೇವ ನಾ/ ಬಂದಂಥ ಭವಕೆ ಮಿತಿಯಿಲ್ಲ ಪ್ರಭುದೇವರ ನಾ/ ಹಿಂದಿಗಿಂತ ಕಡಿಮೆಯಯ್ಯ ಬಸವಣ್ಣ’/ -ಎಂದು ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ.  ಜಾನಪದ-ಪುರಾಣ ಮುಂತಾದುವು ಅಯೋನಿಜರೆಂದರೆ, ಮೌನೇಶ್ವರರ ವಚನವು ‘ಯೋನಿಜ’ರೆಂದು ಸಾರುತ್ತದೆ. ಎಲ್ಲ ಶರಣರು ಹೊಲೆಯೊಳಗಿಂದಲೇ ಜನ್ಮಿಸಿದರೆಂದು ಹೇಳುವ ಮೌನೇಶ್ವರರು ‘ಕುಲವನೆಲ್ಲಿ ಅರಸುವುದು?’ ಎಂಬ ಪ್ರಶ್ನೆಯನ್ನು ನಮಗೆ ಹಾಕುತ್ತಾರೆ ಶರಣರೇ ನಿಜವಾದ ತಾಯ್ತಂದೆಗಳೆಂಬುದು ಇಲ್ಲಿ ಪ್ರಸಿದ್ಧಾರ್ಥ. ಸಾಹಿತ್ಯ ಸಂಪದ ಮೌನೇಶ್ವರರು ವಚನವೊಂದರಲ್ಲಿ ತನ್ನ ಗುರುಮನೆ ಗೋಗಿನ ಎಂದೂ, ಗುಂಡಿ ಬಸವಯ್ಯ ತಮ್ಮ ಗುರುವೆಂದೂ ಹೇಳಿಕೊಂಡಿದ್ದಾರೆ. ಇಲ್ಲಿಯ ಸೂಚಿತಾರ್ಥಗಳನ್ನು ಗ್ರಹಿಸಿದರೆ ಮೌನೇಶ್ವರರು ಕೆಲವು ಗುರುಗಳ ಬಳಿ ಸಾಧನೆ ಮಾಡಿರಬೇಕು. ಗುರುವಿನ ಮಾರ್ಗದರ್ಶನ ಇಲ್ಲದೆ, ಯಾವೊಬ್ಬ ಶಿಷ್ಯನೂ ಸಾಧಕನಾಗಲಾರನಷ್ಟೆ. ಆದರೆ, ಅಲ್ಲಮಪ್ರಭುದೇವ ಮಾತ್ರ ಇದಕ್ಕೆ ಅಪವಾದ. ಮೌನೇಶ್ವರರು ಅನೇಕ ವಚನಗಳಲ್ಲಿ ಅಲ್ಲಮಪ್ರಭುವಿನ ಹೆಸರನ್ನು ಪದೇಪದೆ ಬಳಸುತ್ತಾರೆ. ಅಲ್ಲಮನು ಯಾವ ಮಾಯೆಗೂ ಸಿಗದೆ, ಎಲ್ಲರೊಳಗಿನ ಮಾಯೆಯನ್ನು ಕಿತ್ತೆಸೆದವನು. ಮೌನೇಶ್ವರರು ಇಂಥ ಅಲ್ಲಮನ ದಾರಿಯಲ್ಲಿ ನಡೆದಿದ್ದಾರೆ. ಒಂದಂತೂ ನಿಜ. ಮೌನೇಶ್ವರರು ಕಠೋರ ತಪಸ್ಸಾಧನೆ ಮಾಡಿ ಅಪೂರ್ವ ಸಿದ್ಧಿಗಳನ್ನು ಪಡೆದಿರಬೇಕು. ಅವುಗಳ ಮೂಲಕ ಪವಾಡಗಳನ್ನೂ ಮಾಡಿರಬೇಕು. ಈಗಲೂ ಜನರ ಬಾಯಲ್ಲಿ ಅವರ ಪವಾಡ, ಮಹಿಮೆಗಳು ರೂಢಿಯಲ್ಲಿವೆ. ಆ ಕಾಲದ ಜನರನ್ನೋ ಸುಲ್ತಾನರನ್ನೋ ಸುಬೇದಾರರನ್ನೋ ಪ್ರಭಾವ ಗೊಳಿಸಬೇಕಾದರೆ ಇಂಥ ಪವಾಡಗಳನ್ನು ಮಾಡಿಯೇ ಸೆಳೆಯಬೇಕಿತ್ತು. ಜನಹಿತಕಾರ್ಯಕ್ಕೆ ಇದೊಂದು ಪೂರ್ವ ಮೀಮಾಂಸೆಯೇ. ಮೌನೇಶ್ವರರಿಗೆ ಅಲೌಕಿಕ ಸಿದ್ಧಿಗಳಿದ್ದಂತೆ ಅಸಾಮಾನ್ಯ ಅನುಭಾವೀ ಜೀವನವೂ ಇತ್ತು. ಅವೆರಡು ಇವರಲ್ಲಿ ಹಾಳತವಾಗಿ ಸೇರಿದ್ದಕ್ಕೆ ಅವರ ಬರಹಗಳೇ ಸಾಕ್ಷಿ. *ಉಪನಯನ ವೈದಿಕ ಸಂಸ್ಕಾರ ಬಾಲ್ಯಾವಸ್ತೆಯಲ್ಲಿ ಜಗದ್ಗುರು ಮೌನೇಶ್ವರರಿಗೆ 8 ವರ್ಷ ತುಂಬಿದಾಗ ವಿಶ್ವಕರ್ಮ ಧರ್ಮದ ವೈದಿಕ ಪರಂಪರೆಯ ಅನುಸಾರ ಗಾಯತ್ರಿ ಮಂತ್ರೋಪದೇಶದೊಂದಿಗೆ ಉಪನಯನವಾಯಿತು. ಗಾಯತ್ರಿ ಮಂತ್ರೋಪದೇಶವಾಗಿ ಅದರ ರಹಸ್ಯಾರ್ಥಗಳು ದೃಗ್ಗೋಚರವಾದುವು. ನಂತರ ಮೌನೇಶ್ವರರು ಸುರಪುರದ ಗುರುಕುಲದಲ್ಲಿ ಶಿವಸ್ವಾಮಿ ಗುರುಗಳ ಬಳಿ 4 ವರ್ಷ, ಸಂಸ್ಕೃತ, ಉರ್ದು, ಕನ್ನಡ ಕಲಿತು ಹಲವಾರು ಶಾಸ್ತ್ರಗಳ ಪರಿಚಯ ಮಾಡಿಕೊಂಡರು. ಜತೆಗೆ ಸದಾನಂದ ಗುರುಗಳ ಸಂಪೂರ್ಣ ಅನುಗ್ರಹವೂ ಮೌನೇಶ್ವರರ ಮೇಲಿತ್ತು. ಈ ನಡುವೆ ಕಾಶೀಯಾತ್ರೆ ಮುಗಿಸಿಬಂದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ಹೋಗಿ ವೀರಭದ್ರದೇವರ ಆರಾಧನೆ ಮಾಡಿದ್ದು ವಿಶೇಷ. ನಂತರ ವರವಿ, ಲಿಂಗನಬಂಡಿಗಳಲ್ಲಿ ಅನೇಕ ಪವಾಡಗಳನ್ನು ಮಾಡಿದರೆಂದು ಪುರಾಣಗಳು ನಿರೂಪಿಸುತ್ತವೆ. ತಂದೆ-ತಾಯಿ ವೃದ್ಧರಾಗಿ ತೀರಿಕೊಂಡ ಮೇಲೆ ಮೌನೇಶ್ವರರು ದೇಶಸಂಚಾರ ಮಾಡುತ್ತ, ಎಲ್ಲ ಸಮುದಾಯದವರ ಕಷ್ಟ-ಕಾರ್ಪಣ್ಯ ನೀಗಿಸುತ್ತ ಸಮಾಜದ ಕೀಲಕಸ್ಥಾನದಲ್ಲಿ ಉಳಿದುಬಿಟ್ಟರು. *ಸಾಹಿತ್ಯ ಮೌನೇಶ್ವರರು ಶತಕಗಳನ್ನೂ ಕಾಲಜ್ಞಾನವನ್ನೂ ಬರೆದಿದ್ದಾರೆ. ದಂಡಕ, ಸುವ್ವಿಹಾಡು, ಜೋಗುಳಪದ, ಆರತಿಪದ, ಮೊಹರಂಗೀತೆ, ಕೋಲುಪದ, ಭಜನೆಹಾಡುಗಳನ್ನ್ನೂ ರಚಿಸಿದ್ದಾರೆ. ಇವರ ಪದಗಳಲ್ಲಿ ಉರ್ದು, ಪರ್ಷಿಯನ್ ಪದಗಳು ವಿಪುಲವಾಗಿವೆ. ಕನ್ನಡ, ಉರ್ದು ಕೂಡುನುಡಿಗಳಂತೂ ಬಹಳಷ್ಟಿವೆ- ಮೌನದೀನ ಪೀರ | ಸದ್ಗುರು ಜಿತಾ ಪೈಗಂಬರ ||ಪ|| ಹಿಂದೂ ಮುಸಲ್ಮೆ ಮನದ ಪ್ರಕಾರ/ ಬಲ್ಲಂಥ ಜ್ಞಾನಿಗೆ ನೀನೊಬ್ಬ ದೇವರ ಆಕಾರ ನಿರಾಕಾರ ಎರಡಕ್ಕೆ ನೀನೆ ಗಂಭೀರ/ ಶೇಕ್ ಸಯ್ಯದ ಮೊಗಲ ಪಠಾಣ ನಾಲ್ಕು ಅವತಾರ ತಾಳಿ ಮಾಡಿದಿ ಉದ್ಧಾರ ||2|| ಈ ಪದ್ಯವು ಮೌನೇಶ್ವರರ ರಚನೆಯ ಬಗೆಯನ್ನು ತಿಳಿಸುತ್ತದೆ. ಅವರು ಹಿಂದೂ-ಮುಸ್ಲಿಂ ಬಂಧುತ್ವವನ್ನು ಒಂದೆಡೆ ಸೇರಿಸಿದವರಷ್ಟೆ. ಹೀಗೆ ಭಾವೈಕ್ಯತೆ ಮತ್ತು ಮತೈಕ್ಯತೆಗಳ ಸಂಕೇತವಾಗಿ ಇವರು ಕಾಣಿಸಿಕೊಂಡರೆಂಬುದು ವಿಶೇಷ. ಮೌನೇಶ್ವರರು 17ನೇ ಶತಮಾನದ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಸಾಹಿತ್ಯದಲ್ಲಿ ಬಳಸಿಕೊಂಡರು. ಇವರ ಪದ್ಯಗಳಲ್ಲಿ ಉರ್ದುಭಾಷೆ, ಅಭಿವ್ಯಕ್ತಿಗೆ ಅನುಗುಣವಾಗಿ ಕಾಣಿಸಿಕೊಂಡಿದೆ. ಆಡುಮಾತಿನ ಪಲುಕು ಉದ್ದಕ್ಕೂ ಕಾಣಿಸುತ್ತದೆ. ಭಾಷೆಯ ದೃಷ್ಟಿಯಿಂದ ನೋಡಿದರೆ, ಎಷ್ಟೋ ಅಪಪ್ರಯೋಗಗಳು ಇವೆ. ಆದರೆ, ಮೌನೇಶ್ವರರು ಜನಸಾಮಾನ್ಯರಂತೆ ವಚನಗಳನ್ನು ಕಟ್ಟಿದ್ದಾರೆ. ಹಳ್ಳಿಗರು ಬಳಸುತ್ತಿದ್ದ ಹಾಡಿನ ಮಟ್ಟುಗಳ ಜಾಡುಹಿಡಿದು ಅನುಭವಗಳನ್ನು ಸಾರಿದ್ದಾರೆ. ಮೌನೇಶ್ವರರ ವಚನಗಳು ಬಹುತೇಕವಾಗಿ ಕನ್ನಡದ ಅಂಶಗಣಕ್ಕೆ ಹೆಚ್ಚು ಹೊಂದುತ್ತವೆ. ಇವು ಬರಹರೂಪದ ವಚನಗಳಲ್ಲ; ಅವರು ಹಾಡುತ್ತ, ಹೇಳುತ್ತ ಹೋದಂತೆ ಶಿಷ್ಯರು ಸಂಗ್ರಹಿಸಿ ಬರೆದಿಟ್ಟದ್ದೆಂದು ತೋರುತ್ತದೆ! ಮೌನೇಶ್ವರರು ತಮ್ಮ ಬಗೆಗೆ ಹೆಚ್ಚಿಗೇನೂ ಹೇಳಿಕೊಂಡಿಲ್ಲ. ತಾನು ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನ ಅವತಾರವೆಂದು ಮಾತ್ರ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಜನ್ಮ ಯಾವುದೋ ಮುಖ್ಯ ಉದ್ದೇಶಕ್ಕಾಗಿ ಆಗಿದೆಯೆಂದು ಅವರು ತಿಳಿದುಕೊಂಡಿದ್ದರು. ಆ ನಂಬುಗೆ ಅವರಲ್ಲಿ ಪ್ರಬಲವಾಗಿದ್ದುದು ಕಂಡುಬರುತ್ತದೆ. ಅವರ ಮಾತಿದು. ಅಕ್ಕ ನಾಗಲಿಯ ಮಗ ಚಿಕ್ಕ ಚನ್ನಬಸವಣ್ಣ/ ಅಕ್ಕಸಾಲೆಯರ ಒಡಲೊಳಗೆ ಜನಿಸಿ ನಿಂತು/ ರೆಕ್ಕ ಲೆಕ್ಕಕ್ಕೆ ಝುಡತಿಯ ಕೇಳಬೇಕೆಂದು/ ತಕ್ಕಡಿಯ ತ್ರಾಸು ಪಿಡಿದುಕೊಂಡು ನಿಂತಾತನ ಕೂಡ -ಈ ವಚನದಲ್ಲಿ ತಾನು ‘ಅಕ್ಕಸಾಲಿಗ’ ಎಂಬುದನ್ನು ಖಚಿತಪಡಿಸಿದ್ದಾರೆ. ‘ವಿಶ್ವಕರ್ಮ’ ಎಂದು ಪ್ರಸಿದ್ಧಿ ಪಡೆದ ಇವರು ಸಮಾಜದ ಕೀಲಕ ಸ್ಥಾನದಲ್ಲಿದ್ದವರೇ. ಮರದ ಕೆಲಸ ಮಾಡುವವರು ‘ಬಡಗಿ’ಯಾದರೆ ಕಬ್ಬಿಣದ ಕೆಲಸ ಮಾಡುವವರು ‘ಕಮ್ಮಾರ’ರು; ಕಂಚಿನ ಕೆಲಸ ಮಾಡುವವರು ‘ಕಂಚುಗಾರ’ರಾದರೆ, ಶಿಲೆಯ ಕೆಲಸ ಮಾಡುವವರು ‘ಶಿಲ್ಪಿಗರು’. ಇಷ್ಟು ಜನರನ್ನು ವಿಶ್ವಕರ್ಮರೆಂದೇ ಗ್ರಾಮ ಸಮುದಾಯ ಕರೆಯುತ್ತಿತ್ತು. ಸಮುದಾಯದಲ್ಲಿ ಇವರ ಸ್ಥಾನ ಮೇಲ್ಮಟ್ಟದ್ದಾಗಿತ್ತೆಂಬುದನ್ನು ಸಮಸ್ತರೂ ಗುರುತಿಸಿದ್ದಾರೆ. ಇವರ ವೃತ್ತಿಯು ಕೌಶಲಪ್ರಧಾನವಾದುದು. ಪಟ್ಟಣ, ಖೇಡ, ಖರ್ವಡ, ದ್ರೋಣಾಮುಖ ಎಂಬ ವಿವಿಧ ಬಗೆಯ ನಗರ ನಿರ್ವಣದಲ್ಲಿ ಇವರದು ಎತ್ತಿದ ಕೈ. ಅದಕ್ಕನುಗುಣವಾಗಿ ಬಡಿಗೇರ, ಕಮ್ಮಾರರು ಬಳಸುವ ಉಪಕರಣಗಳನ್ನು ವಚನದಲ್ಲಿ ಅಧ್ಯಾತ್ಮದ ಸಂಕೇತವಾಗಿಯೂ ಬಳಸಿ ಕೊಂಡಿದ್ದಾರೆ. ಗ್ರಾಮಜೀವನದ ಕಾಯಕವರ್ಗಕ್ಕೆ ಅನುಗುಣವಾದ ಅಡಿಗಲ್ಲು, ತ್ರಾಸು, ಮೂಸೆ, ಸುತ್ತಿಗೆಯಂಥ ಪರಿಕರಗಳನ್ನು ವಚನಗಳಲ್ಲಿ ಬಳಸಿದ್ದಾರೆ. ‘ಬಡಿಗ, ಕಮ್ಮಾರರು ಪೊಡವಿಗಕರ್ತರು’ ಎಂಬ ಮಾತು ಇದಕ್ಕೆ ಸಾಕ್ಷಿ. ಗುರು ಮೌನೇಶ್ವರ *ಬದುಕೆ ಅನುಭವ ಪಾಠ ಶಾಲೆ* ________________________ ನಮ್ಮ ಬಾಳು ಹೇಗಿರಬೇಕೆಂಬುದನ್ನು ಹಲವಾರು ವಚನಗಳಲ್ಲಿ ಮೌನೇಶ್ವರರು ಹೇಳುತ್ತಾರೆ. ಅವರ ವಚನಗಳು ಶರಣರ ಮಾರ್ಗವನ್ನು ಮುಂದುವರಿಸುತ್ತವೆ. ಅವರು ಹೆಜ್ಜೆಹೆಜ್ಜೆಗೂ ಹಿಂದಿನ ಶರಣರ ನುಡಿಗಡಣವನ್ನು ಮುಂದಿರಿಸಿಕೊಂಡು ಮಾತಾಡುತ್ತಾರೆ. ಅರಿವಿಲ್ಲದೆ ಬಾಳುವೆ ಮಾಡುವುದು ವ್ಯರ್ಥ. ಅಂಥವರಿಗೆ ಎಲ್ಲಿಯ ಗುರು, ಎಲ್ಲಿಯ ದೈವ? ಎಂದು ಒಂದೆಡೆ ಪ್ರಶ್ನಿಸುತ್ತಾರೆ. ಮೌನೇಶ್ವರರಿಗೆ ಹಳ್ಳಿಯ ಸರಳಜೀವನ ತುಂಬಾ ಇಷ್ಟ.

ಸಾವಿಲ್ಲದ ಶರಣರು ಮಾಲಿಕೆ”ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top