ಕಾವ್ಯ ಸಂಗಾತಿ
ಮಾಲಾ ಚಲುವನಹಳ್ಳಿ
ಗಜಲ್


ನಡೆಯುವ ಹಾದಿಯಲ್ಲಿ ಹೂವು ಚೆಲ್ಲಿ
ಕೈ ಹಿಡಿದು ನಡೆಸುವೆನು ಸಖ
ತಡೆಯುತ ಅಡೆತಡೆಯ ಸಹಬಾಳ್ವೆಗೆ
ಹೂ ಮಳೆಯ ಸುರಿಸುವೆನು ಸಖ
ಸಮ್ಮತಿ,ಅಸಮ್ಮತಿಗಳ ಅಸಮತೋಲನ
ಸಂಸಾರದಲ್ಲಿ ಸಹಜವಲ್ಲವೇನು
ನಮ್ಮದೇ ನಿಸ್ವಾರ್ಥದ ಚೌಕಟ್ಟಿನಲ್ಲಿ
ನಿನ್ನ ಮೈ ಮರೆಸುವೆನು ಸಖ
ಹರೆಯವೆಂದರೆ ಬಣ್ಣದ ಚಿತ್ತಾಕರ್ಷಕ
ಅರಿಯದ ಮೂಢನಲ್ಲ ನೀ
ಕರೆಯುವ ಕಾಮನೆಗಳ ಜೊತೆ ಪ್ರೇಮ
ಸೌಧದಿ ನಿನ್ನ ಇರಿಸುವೆನು ಸಖ
ಶಬ್ದವಾಗಲಾರದ ಭಾವಗಳು ಅದೆಷ್ಟೋ
ಎದೆಯೊಳಗೆ ನಗಾರಿಯಾಗಿವೆ
ಸ್ಥಬ್ಧವಾದ ಮಾತುಗಳೂ ತಾಕಲಾಟವ
ನಡೆಸುವುದ ಅರ್ಥೈಸುವೆನು ಸಖ
ಭವಿಷ್ಯದ ಹಾದಿ ತೆರೆದುಕೊಂಡಿರುವ
ಈ ಘಳಿಗೆ ತವಕ ನೂರಾಗಿದೆ
ನವಿರಾದ ಕನಸುಗಳು ಮಾಲಾಳ ಎದೆಯ
ಹಾಡಾಗಿರುವುದ ತಿಳಿಸುವೆನು ಸಖ
ಮಾಲಾ ಚೆಲುವನಹಳ್ಳಿ



