ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಪ್ರತಿಷ್ಠೆಗಾಗಿ ಪಣ
ಬಲಾಬಲಕ್ಕಾಗಿ ಬಣ;
ಹೊಡೆದಾಡಿ ಬಡಿದಾಡಿ
ಒಂದಿವಸ ರಣಾಂಗಣದಲ್ಲಿ
ಹೆಂಗೆಂಗೋ ಬಿದ್ದ ಹೆಣ

ಗೆಲ್ಲಲೇಬೇಕು ಎಂದವನಿಗೆ ಸೋಲು
ಸೋತು ಸುಣ್ಣವಾಗಿ ನೆಲಕ್ಕೆ
ಬೀಳುವಾಗ ಅದೃಷ್ಟವಶಾತ್ ಗೆಲುವು;
ಇವೆರಡೂ ನಾಣ್ಯದ ಎರಡು ಮುಖಗಳು
ಕಂಡೂ ಕಾಣದಂತೆ ಕಳಚಿ
ಬೀಳುತ್ತಿವೆ ಮುಖವಾಡಗಳು

ಇತಿಹಾಸದ ಹಾಸುಗಲ್ಲಿನ ಮೇಲೆ
ಬಿದ್ದ ರಕ್ತದ ಕಲೆ ಇನ್ನೂ ಒಣಗಿಲ್ಲ

ಭೂಮಿಯನ್ನು ಹತ್ತಾರುಪಟ್ಟು ಸುಡುವಷ್ಟು
ಮದ್ದು ಗುಂಡು ಬಾಂಬುಗಳ
ಸುಧಾರಿತ ಹೊಸ ತಳಿಗಳು;
ವಿಜ್ಞಾನದ ಬಳುವಳಿಗಳು

ಆರಂಭದ ಹೊರತು ಅಂತ್ಯ
ಅರಿಯದು ಯುದ್ಧೋನ್ಮಾದ

ಸೂರ್ಯೋದಯ, ಚಂದ್ರೋದಯಕ್ಕೆ
ಪರಮಾಶ್ಚರ್ಯ; ನಿನ್ನೆ ಕಂಡ ಬೃಹತ್
ಕಟ್ಟಡಗಳು ಇಂದು ನೆಲಸಮ
ಕಾಡು, ಪ್ರಾಣಿ, ಪಕ್ಷಿ ಸಂಕುಲ ಸುಟ್ಟು ಭಸ್ಮ

ಸರ್ವನಾಶದ ಕಿಚ್ಚು ಹೊತ್ತಿ
ನರಕದ ಹೆಬ್ಬಾಗಿಲು ತೆರೆಯುತ್ತಿರುವಾಗ
ನಾಳೆ ಮತ್ತೇನೋ…ಮತ್ತಿನ್ನೇನೋ…

ಯುದ್ಧ ಅಂದ್ರೆ ಸುಮ್ನೆ ಏನು!?


About The Author

Leave a Reply

You cannot copy content of this page

Scroll to Top