ಅನುವಾದ ಸಂಗಾತಿ
ಗಾಳಿಗಾಗಿ ಹೋರಾಟ
ತೆಲುಗು ಮೂಲ : ಪ್ರಸಾದ ಮೂರ್ತಿ
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್



ಗಾಳಿಗೆ ಗಾಳಾಡುವ ಜಾಗವೇ ಇಲ್ಲವಂತೆ
ಒಂದು ಸುಳಿಗಾಳಿ ಸುದ್ದಿ ತಂದುಕೊಟ್ಟಿತು—
ಉಸಿರಾಟವೇ ಸಿಗದಂತೆ ಎದೆಗೆ ಅಪ್ಪಳಿಸಿ
ಸ್ಕೂಲಿನಲ್ಲಿ ಇರುವ ಮೊಮ್ಮಗಳು ನೆನಪಾಯಿತು—
ಅವಳಿಗೆ ಹೇಳಬೇಕು
ಅನ್ನದ ಡಬ್ಬಿಯ ಜೊತೆಗೆ
ಒಂದು ಆಕ್ಸಿಜನ್ ಡಬ್ಬಿಯನ್ನೂ ಹಾಕಿಕೊಡಲು,
ಒಂದು ಮಾಸ್ಕ್ ಕೊಂಡು ಕೊಡಲು.
ರಾಜಧಾನಿ ನಗರ
ಸಂಸತ್ತಿನ ಮುಂದೆ ಮೊಣಕಾಲೂರಿದೆ ಎನ್ನುವ
ವಾರ್ತೆಯನ್ನು ಹೊತ್ತು ತಂದ ಪತ್ರಿಕೆ
ನಮ್ಮ ಮನೆಯ ಗೇಟಿನ ಬಳಿ
ಹಾವಿನಂತೆ ಸರಿದು ಕಾಣಿಸಿತು—
ಸಂಸತ್ತನ್ನೇ ತಮ್ಮ ಸುರಕ್ಷತೆಗೆ
ಅಂತರಿಕ್ಷದಲ್ಲಿ ಕಟ್ಟಿಕೊಳ್ಳಲು
ಎಂಜಿನಿಯರ್ಗಳು, ವಿಜ್ಞಾನಿಗಳ ಜೊತೆ
ಸಭೆಯಲ್ಲಿ ಆಡಳಿತಗಾರರು
ಬ್ಯುಸಿ ಯಾಗಿದ್ದಾರೆ ಅಂತೆ—
ತಮ್ಮ ಬ್ಯಾಂಕ್ ಖಾತೆಗಳಲ್ಲಿ
ಮೊಟ್ಟೆಗಳನ್ನು ಉಳಿಸಿಕೊಂಡು
ಕಾರ್ಪೊರೇಟ್ ಅನಾಕೊಂಡಾಗಳು
ನಿದ್ರೆಗೆ ಜಾರಿರುವ ದೃಶ್ಯ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಂತೆ
ಮತ್ತೊಂದು ಸುದ್ದಿ.
ಐದು ವರ್ಷಕ್ಕೊಮ್ಮೆ
ಸಾರ್ವತ್ರಿಕ ಶವಪರೀಕ್ಷೆಗಳು—
ಜೀವಂತ–ನಿರ್ಜೀವ
ದೇಹಗಳ ಜಾತ್ರೆ
ಪರಿಸರದ ಪಾಡೆಯ ಮೇಲೆ
ಪ್ರಜಾಸತ್ತಾತ್ಮಕ ಮೆರವಣಿಗೆ
ಹಳದಿ ಬಳಿದಿದ್ದ ಕೊರಡಗಳಿಂದ
ಮಹಾ ನಾಯಕರ ಪ್ರದರ್ಶನ—
ಅಧಿನಾಯಕನ
ನಾನ್–ಬೈಯಾಲಾಜಿಕಲ್ ಅಹಂಕಾರಕ್ಕೆ
ಸಾಷ್ಟಾಂಗ ವಂದನೆ ಸಲ್ಲಿಸುವ
ಶಲ್ಯಾವಶೇಷವಾದ ಸ್ವಾತಂತ್ರ್ಯ.
ನಗರಗಳಿಂದ ಮನುಷ್ಯರಂತೆ
ಮನುಷ್ಯರಿಂದ ನಗರಗಳಂತೆ
ಯಾರು ಮೊದಲು ಓಡಬೇಕು ಅನ್ನೋದು ತಿಳಿಯದೆ
ಒಂದು ಸಂಧಿಗ್ಧ ಕ್ಷಣದಲ್ಲಿ
ನಲಿದು ಹೋಗುತ್ತಿರುವ ಕಾಲಕ್ಕೆ
ಮತ್ತೊಂದು ಅಕಾಲದ ಗರ್ಭಧಾರಣೆ
ದೇಶವಿಡೀ
ಮಾಲಿನ್ಯದ ಪ್ರಸವ ವಾಸನೆ!
ಅಪ್ಪಂದಿರೇ!
ನೀವು ಮಕ್ಕಳಿಗಾಗಿ ಆಸ್ತಿಗಳನ್ನು ಸೇರಿಸುತ್ತೀರಾ—
ಸರಿ, ಆದರೆ ಸ್ವಲ್ಪ ಆಕ್ಸಿಜನ್ ಕೂಡ ಸಂಗ್ರಹಿಸಿ.
ಇನ್ನು ನಿಮ್ಮ ಆತುರಗಳನ್ನು ಬದಿಗಿಟ್ಟು
ಗಾಳಿಗಾಗಿ ಹೋರಾಟಗಳನ್ನು ಆರಂಭಿಸಿ!
ಮಂಜಿನ ಮುಖವಾಡ …
ಬೆಳದಿಂಗಳ ನಗು…
ಗಾಳಿಯಲ್ಲಿ ಕಾವಲು ಕಾಸುತ್ತಿರುವ
ಮೃತ್ಯುವನ್ನು
ಗುರುತಿಸಲಾಗುವುದೇ ಇಲ್ಲ
ತೆಲುಗು ಮೂಲ : ಪ್ರಸಾದ ಮೂರ್ತಿ
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್



