ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ಜಯಶ್ರೀ.ಜೆ. ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಅವಮಾನದ ಒಂದು ಪ್ರಸಿದ್ಧ ಉದಾಹರಣೆ; ಪವಿತ್ರ ನರ್ಮದಾ ನದಿಯಲ್ಲಿ ಒಮ್ಮೆ ಸಂತ ಏಕನಾಥ ಸ್ನಾನ ಮಾಡಿ ಹೊರ ಬರುತ್ತಿದ್ದ.ಆಗ ಪಠಾಣನೊಬ್ಬ ಮನದಲ್ಲಿ ವಿಷ ತುಂಬಿಕೊAಡು ಸಂತನ ಮೇಲೆ ಉಗುಳಿದ. ಏಕನಾಥ ‘ಜೈ ವಿಠ್ಠಲ’ ಎನ್ನುತ್ತ ಮತ್ತೆ ನರ್ಮದೆಗಿಳಿದ. ಈ ರೀತಿ ಮುಂಜಾನೆಯಿoದ ಸಂಜೆಯವರೆಗೂ ಇಬ್ಬರ ನಡುವೆ ನಡೆಯಿತು ಯಾರು ಸೋಲುತ್ತಾರೆಂದು ನದಿ ತಟದಲ್ಲಿ ಜನ ನಿಂತು ನೋಡುತ್ತಿದ್ದರು. ಕೊನೆಗೆ ಪಠಾಣ, ಸಂತರನ್ನು ಉದ್ದೇಶಿಸಿ ನಾನು ಯಾವುದೇ ಕಾರಣವಿಲ್ಲದೇ ನಿಮ್ಮನ್ನು ಹೀಗೆ ಅವಮಾನಗೊಳಿಸುತ್ತಿದ್ದೇನೆ ಅಶುದ್ಧಿಗೊಳಿಸುತ್ತಿದ್ದೇನೆ.ಆದರೆ ನೀವು ನನ್ನ ಮೇಲೆ ಕೋಪಿಸಿಕೊಳ್ಳದೇ ನಗುತ್ತಲೇ ನನ್ನನ್ನು ಸ್ವೀಕರಿಸುತ್ತಿದ್ದೀರಿ ಇದು ಹೇಗೆ ಸಾಧ್ಯವೆಂದು ಕೇಳಿದ. ’ನೀನು ನನ್ನ ಪೋಷಕ.’ನಿನ್ನಿಂದಾಗಿ ಇಂದು ಪವಿತ್ರ ನರ್ಮದೆಯಲ್ಲಿ ಇಷ್ಟು ಬಾರಿ ಮಿಂದೆದ್ದೆ. ನನ್ನನ್ನು ಶುದ್ಧೀಕರಿಸಿಕೊಳ್ಳಲು ಒಂದು ಅವಕಾಶ ನೀಡಿದೆ ಎಂದನoತೆ. ಫೋರ್ಡ್ ಕಾರಿನ ಹೆನ್ರಿ ,ವಿಮಾನ ಸಂಶೋಧಿಸಿದ ರೈಟ್ ಬ್ರದರ್ಸ್, ಅಬ್ರಹಾಂ ಲಿಂಕನ್,ಇತಿಹಾಸ ಪ್ರಸಿದ್ಧ ಚಾಣಕ್ಯ, ಮಹಾತ್ಮ ಗಾಂಧಿ, ಹಿಂದಿ ಚಿತ್ರ ಲೋಕದ ದಿಗ್ಗಜ ಅಮಿತಾಬ್ ಬಚನ್, ಸಾವಿರ ಸಂಶೋಧನೆಗಳ ಸರದಾರ ಥಾಮಸ್ ಅಲ್ವಾ ಎಡಿಸನ್‌ನಂಥ ಸಾವಿರ ಗೆಲುವಿನ ಸರದಾರರು ಅವಮಾನದ ತಿರುವುಗಳನ್ನೇ ಗೆಲುವಿನ ಮೈಲಿಗಲ್ಲುಗಳನ್ನಾಗಿ ರೂಪಿಸಿಕೊಂಡಿದ್ದು ಈಗ ಇತಿಹಾಸ.  ಅವಮಾನವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅವು ಮೈಲಿಗಲ್ಲುಗಳಾಗುವುದು ಅವಲಂಬಿತವಾಗುತ್ತದೆ.ಅವಮಾನವನ್ನು ಅನುಭವಿಸಿದವರು ಕೋಟಿ ಕೋಟಿ ಜನ ಆದರೆ ಅದನ್ನು ಗಂಭೀರವಾಗಿ ಕೈಗೆತ್ತಿಕೊಂಡವರ ಸಂಖ್ಯೆ   ಸಾವಿರ ಇಲ್ಲವೇ ಲಕ್ಷ ದಾಟುವುದಿಲ್ಲ. ಉಳಿದವರಿಗೆ ಸವಾಲಾಗದೇ ಕಾಡದೇ ಇದ್ದುದು ಎದುರಿಸಿ ನಿಲ್ಲಬೇಕೆನ್ನುವವರಿಗೆ ಸವಾಲಾಗಿ ಕಂಡಿದ್ದು ನಿಜ. ಅಳ್ಳೆದೆಯವರಿಗೆ ಅವಮಾನವೆಂಬ ಪದವೇ ದೂರ ಸರಿಯುವಂತೆ ಮಾಡುವುದೂ ಅಷ್ಟೇ ಸತ್ಯ. ದೂರು ಸರಿಯುವ ಬದಲು ಗಟ್ಟಿ ಧೈರ್ಯ ಮಾಡಿದರೆ ಅವಮಾನದೊಂದಿಗೆ  ಮುಖಾಮುಖಿಯಾಗಬಹುದು. ಹಾಗಾದರೆ ಅವಮಾನವೆಂದರೇನು? ಅದರ ಲಕ್ಷಣಗಳೇನು? ಪರಿಣಾಮಗಳು ಎಂಥವು? ಅದನ್ನು ನಿರ್ವಹಿಸುವ ಕಲೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಅವಮಾನವೆಂದರೆ. . . . ? ಯಾರಿಗೂ ಹೇಳಿಕೊಳ್ಳಲಾಗದ ಅನುಮಾನದ ನೋವುಗಳನ್ನು ಎದೆಯ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ತಿರುಗುವ ನೋವು ನಮ್ಮ ಶತ್ರುಗಳಿಗೂ ಬೇಡ. ‘ “ನಮ್ಮ ಭೀಮ ಗಾತ್ರದ ಶಕ್ತಿಗಳನ್ನು ಲವಲೇಶಕ್ಕೂ ಬೆಲೆ ಇಲ್ಲದಂತೆ ಲಘುವಾಗಿಸುವ ಪ್ರಯತ್ನ ನಡೆಸುವುದೇ ಅವಮಾನ.” ಅವಮಾನಿಸಿಯೇ ನಮ್ಮ ಗಮನ ಸೆಳೆಯುವವರೂ ಕಾಣ ಸಿಗುತ್ತಾರೆ. ಅದಕ್ಕೆಲ್ಲ ಬೇಸರಿಸಿಕೊಳ್ಳುವ ಹಾಗಿಲ್ಲ. ಅವರ ಹೀಯಾಳಿಕೆಯನ್ನೇ ಹೆಗ್ಗಳಿಕೆಯಾಗಿಸಿಕೊಳ್ಳುವುದೇ ಜಾಣತನ. ಭಯ ಆತಂಕದಿoದಲೇ ಪಡೆಯಬೇಕಾದುದನ್ನು ಮನಸಾರೆ ಸ್ವೀಕರಿಸಿದರೂ ಅಗಾಧ ಬದಲಾವಣೆಯನ್ನು ತರುವ ಅಪಾರ ಶಕ್ತಿ ಅವಮಾನಕ್ಕೆ ಉಂಟು. ಅವಮಾನಿಸಿದವರ ಮುಂದೆ ತಲೆ ಎತ್ತಿ ಬದುಕಬೇಕೆಂದರೆ ಅವಮಾನವನ್ನೇ ಉತ್ಸಾಹವಾಗಿಸಿಕೊಳ್ಳಬೇಕು. ಅದೇ ಉತ್ಸಾಹ ನಮ್ಮನ್ನು ಉತ್ತೇಜಿಸುತ್ತದೆ. ಹೀಗೆ ದೊರೆತ ಉತ್ಸಾಹ ಬದಲಾಗುತ್ತ ಬೆಳೆಯುತ್ತ ಹೋಗುತ್ತದೆ. ಸನ್ಮಾನದತ್ತ ತಂದು ನಿಲ್ಲಿಸುತ್ತದೆ. ಲಕ್ಷಣ ಕಪಾಳಮೋಕ್ಷ,ಗುದ್ದುವುದು, ಅಪಹಾಸ್ಯದ ನಗು, ಮುಖದಲ್ಲಿಯ ಅಭಿವ್ಯಕ್ತಿ  ಹೀಗೆ ದೈಹಿಕವಾಗಿರಬಹುದು. ಇಲ್ಲವೇ ಸಾಮಾನ್ಯವಾಗಿ ವ್ಯಂಗ್ಯವಾಡುವುದು, ಅಣುಕಿಸುವುದು, ಅವಾಚ್ಯ ಶಬ್ದಗಳ ಬಳಕೆ ಅಸಂಬದ್ಧ ಟೀಕೆಗಳನ್ನು ಮಾಡುವುದಿರಬಹುದು. ಪರಿಣಾಮಗಳು ಅವಮಾನ ಮಾಡುವ ಅಡ್ಡ ಪರಿಣಾಮಗಳು ಒಂದೇ ಎರಡೇ? ಅದರ ಪಟ್ಟಿ ಮಾಡುತ್ತ ಸಾಗಿದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಮೊದಲನೆಯದಾಗಿ ನಮ್ಮ ಸಂತೋಷವನ್ನೇ ಹಾಳು ಮಾಡುತ್ತದೆ. ಆತ್ಮವಿಶ್ವಾಸವನ್ನು ಸ್ವ ಗೌರವವನ್ನು ಒಮ್ಮಿಂದೊಮ್ಮೆಲೇ ಕೆಳಕ್ಕೆ ತಳ್ಳುತ್ತದೆ.ಏಕಾಂಗಿಯಾಗಿಸುತ್ತದೆ. ಸಿಟ್ಟು ತರಿಸುತ್ತದೆ. ಆತಂಕಕ್ಕೆ ಒಳಪಡಿಸುತ್ತದೆ. ಅಷ್ಟೇ ಅಲ್ಲ ಇನ್ನೂ ಮುಂದಕ್ಕೆ ಹೋಗಿ ಖಿನ್ನತೆಯೂ ಆವರಿಸುವಂತೆ ಮಾಡುತ್ತದೆ. ನಿರ್ವಹಿಸುವ ಬಗೆ ಹಲವು ಅವು ಇಲ್ಲಿವೆ ನೋಡಿ   ಸಿಟ್ಟು ಅವಮಾಕ್ಕೆ ಸಿಟ್ಟಿನಿಂದ ಉತ್ತರಿಸುವುದು ನಿಜಕ್ಕೂ ತುಂಬ ಅಶಕ್ತವೆನಿಸುತ್ತದೆ. ಅವಮಾನಿಸಿದವರನ್ನು ಮತ್ತು ಅವಮಾನವನ್ನು ಅತಿ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅವಮಾನದಲ್ಲಿ ಸತ್ಯವಿದೆ ಎನಿಸುತ್ತದೆ. ಮನದ ಸ್ಥಿರತೆಯನ್ನು ತಗ್ಗಿಸುತ್ತದೆ. ಮತ್ತಷ್ಟು ಅವಮಾನಕ್ಕೆ ಎಡೆಮಾಡುತ್ತದೆ. ಹೀಗಾಗಿ ಅವಮಾನವನ್ನು ಸಿಟ್ಟಿನಿಂದ ಎದುರಿಸುವುದ ಅಷ್ಟು ಸೂಕ್ತವಲ್ಲ ಎನಿಸುತ್ತದೆ. ಸ್ವೀಕರಿಸುವಿಕೆ ಮೇಲ್ನೋಟಕ್ಕೆ ಅವಮಾನವನ್ನು ಸ್ವೀಕರಿಸುವುದು ಅಶಕ್ತವೆನಿಸಿದರೂ ಸಶಕ್ತ ವಿಧಾನವಾಗಿದೆ. ಅವಮಾನಿತಗೊಂಡಾಗ ಮೂರು ವಿಷಯಗಳನ್ನು ಪರಿಗಣಿಸಬೇಕು. ಅವಮಾನ ಸತ್ಯದ ಆಧಾರದ ಮೇಲಿದೆಯೇ? ಅವಮಾನಿಸಿದವರು ಯೋಗ್ಯರೇ? ಅವಮಾನ ಏಕೆ ಮಾಡಲ್ಪಟ್ಟಿತು? ಸತ್ಯವೆನಿಸಿದರೆ, ಯೋಗ್ಯರೆನಿಸಿದರೆ, (ಪಾಲಕರು, ಗುರುಗಳು, ಗೆಳೆಯರು) ಉದ್ದೇಶ ಒಳ್ಳೆಯದಿತ್ತು ಎನಿಸಿದರೆ ಅವಮಾನವ ಮಾಡಿದವರು ನೀವು ಗೌರವಿಸುವ ವ್ಯಕ್ತಿಯಾಗಿದ್ದರೆ ಆ ಅವಮಾನವನ್ನು ಉಡಾಫೆ ಮಾಡುವಂತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆಯನ್ನು ಅರಿತು ಬದಲಾಗಲು ಸ್ವೀಕರಿಸಬೇಕು. ಮರಳಿಸುವಿಕೆ ಅವಮಾನವನ್ನು ಮರಳಿಸುವಿಕೆಯಲ್ಲಿ ಕೆಲವೊಂದಿಷ್ಟು ವಿಷಯಗಳು ಹುದುಗಿವೆ. ಆದ ಅವಮಾನ ಮರಳಿಸಲು ಯೋಗ್ಯವಾಗಿರಬೇಕು. ಸರಿಯಾದ ಸಮಯಕ್ಕೆ ಜಾಣತನದಿಂದ ಉತ್ತರಿಸುವಂತಿರಬೇಕು.’ಪರಿಪೂರ್ಣತೆಯನ್ನು ಕಡಿಮೆ ಮಾಡುವುದು ವಿರಳವಾಗಿ ಉತ್ತಮ ಪ್ರತಿಕ್ರಿಯೆ’ ಎಂದಿದ್ದಾನೆ ಆಸ್ಕರ್ ವೈಲ್ಡ್. ಆದರೆ ಹೀಗೆ ಕಡಿಮೆ ಮಾಡುವ ಪ್ರತಿಕ್ರಿಯೆಯ ಒಂದು ಮುಖ್ಯ ಸಮಸ್ಯೆ ಎಂದರೆ ಎಷ್ಟೇ ಜಾಣರಾಗಿದ್ದರೂ ಅದು ನಮ್ಮನ್ನು ಅವಮಾನಿಸಿದವರ ಮಟ್ಟಕ್ಕೆ ಇಳಿಸುತ್ತದೆ. ಹೀಗಾಗಿ ಇದು ಅಂದವಾದ ದುರ್ಬಲವಾದ ವಿಧಾನ. ಇದರಲ್ಲಿನ ಅವಮಾನಿಸಿದವರನ್ನು ಕೆರಳಿಸಿ ಮತ್ತಷ್ಟು ಆಕ್ರಮಣಗಳನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದರೆ ಈ ವಿಧಾನವನ್ನು ಹಾಸ್ಯಮಯವಾಗಿ ಗೆಳೆಯರೊಂದಿಗೆ ಸಮವಯಸ್ಕರೊಂದಿಗೆ ಬಳಸಬಹುದು. ಅಲಕ್ಷಿಸುವಿಕೆ ಹಾಸ್ಯ, ಶೋಚನೀಯವಾಗಿ ಮರಳಿಸುವಿಕೆಯ ಫಲಿತಾಂಶವನ್ನು ಪಡೆದಿದೆ. ನಿಮ್ಮ ಉತ್ತರ ಮೋಜಿನದಾಗಿರಬೇಕು. ಸರಿಯಾದ ಸಮಯಕ್ಕೆ ಸರಿಯಾದ ಭಾವದೊಂದಿಗೆ ಹೇಳುವಂತಿರಬೇಕು. ನಿಜದಲ್ಲಿ ಅವಮಾನವನ್ನು ಅಲಕ್ಷಿಸುವಿಕೆ ಬಹು ಸರಳ ಮತ್ತು ಹೆಚ್ಚು ಪರಿಣಾಮಕಾರಿ ವಿಧಾನ ಎನ್ನಬಹುದು. ಈ ವಿಧಾನವು ಅಪರಿಚಿತರೊಂದಿಗೆ ಸರಿಯಾಗುತ್ತದೆ. ಆದರೆ ಇದು ನಮ್ಮ ವೈಯಕ್ತಿಕ ವೃತ್ತಿಪರ ಸಂಬoಧಗಳೊoದಿಗೆ ಸರಿ ಹೊಂದುವುದಿಲ್ಲ.ಇoಥ ಸಂದರ್ಭದಲ್ಲಿ ಸರಿಯಾದ ಶಬ್ದವನ್ನು ಬಳಸುವುದು ಆಯ್ಕೆಗೆ ಅರ್ಹವಾದುದು.ಶಬ್ದ ಬಳಸುವಾಗ ನಮ್ಮ ಎಲ್ಲೆಗಳನ್ನು ಮೀರದಂತೆ ಪುನಃ ದೃಢಪಡಿಸಲು ಪ್ರಯತ್ನಿಸಬೇಕು. ವೈಯಕ್ತಿಕ ಮತ್ತು ವೃತ್ತಿಪರ ಆರೋಗ್ಯಕರ ಪರಿಸರ ನಿರ್ಮಿಸುವುದು ಒಂದು ಸವಾಲಿನ ಸಂಗತಿಯೇ ಸರಿ. ಇಲ್ಲಿ ಶಾರೀರಿಕ  ಎಲ್ಲೆಗಳನ್ನು ಎಷ್ಟರಮಟ್ಟಿಗೆ ನಿರ್ಧಿಷ್ಟವಾಗಿ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದೊಂದು ನಾಯಿ ಬಾಲವನ್ನು ನೆಟ್ಟಗಾಗಿಸಿದಂತೆ.ಪ್ರತಿ ಬಾರಿ ಅದನ್ನು ಪುನಃ ದೃಢಪಡಿಸುವಾಗಲು ಅದು ಬಿಡಿಸದಂತೆ ಡೊಂಕಾಗಿರುತ್ತದೆ. ಇದಕ್ಕೆ ಸಾಕಷ್ಟು ಪ್ರಯತ್ನ ಬೇಕು. ಕೆಲವು ಬಾರಿ ಧೈರ್ಯವೂ ಬೇಕಾಗುತ್ತದೆ. ಆದರೆ ಈ ವಿಧಾನವನ್ನು ಪ್ರಾರಂಭದಿoದಲೇ ರೂಢಿಸಿಕೊಂಡರೆ ಇದು ಬಹು ಪರಿಣಾಮಕಾರಿ ವಿಧಾನ. ಅವಮಾನ ಅಪರಾಧವಲ್ಲ ಅವಮಾನವನ್ನು ಅಪರಾಧವೆಂದು ಎಂದೂ ತಿಳಿಯಬಾರದು. ಅಪರಾಧವು ನಾವು ಅವಮಾನಕ್ಕೆ ಪ್ರತಿಕ್ರಿಯಿಸುವುದರಲ್ಲಿದೆ. ನಮ್ಮ ಪ್ರತಿಕ್ರಿಯೆಗಳು ನಮ್ಮ ಹತೋಟಿಯಲ್ಲಿರುತ್ತವೆ. ಒಬ್ಬ ಗಮಾರನನ್ನು ಗಮಾರನೆಂದು ನಿರೀಕ್ಷಿಸುವುದು ಅಸಮಂಜಸವಾಗಿದೆ. ಅವನ ಕೆಟ್ಟ ನಡುವಳಿಕೆಯಿಂದ ನಮ್ಮನ್ನು ಅಪರಾಧಿಗಳೆಂದುಕೊoಡರೆ ನಮ್ಮನ್ನು ನಾವು ದೂಷಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ಆದ್ಯತೆಗಳೂ ಕಾರಣವಾಗುತ್ತವೆ. ಅದಕ್ಕಾಗಿಯೇ ಸುತ್ತಲಿನ ಲೋಕ ಚಾಲ್ತಿ ಪಡೆಯುತ್ತದೆ. ಮೇಲ್ನೋಟದಲ್ಲಿ ಅವಮಾನವೆನಿಸುವುದು ಅವಮಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಮ್ಮೊಳಗಿನ ಚೇತನವನ್ನು ಬಡಿದೆಬ್ಬಿಸುವ ದೊಡ್ಡ ಕೆಲಸವನ್ನು ಮಾಡುವ ಮಾಯಾ ಶಕ್ತಿಯನ್ನು  ಹೊಂದಿರುತ್ತದೆ ಎಂಬುದನ್ನು ತಿಳಿದು ನಮ್ಮ ಶಕ್ತಿ ದೌರ್ಬಲ್ಯವನ್ನು ಅಳೆದು ತೂಗಿ ನೋಡಿ ಸಾಧಿಸಬೇಕಾದ ಗುರಿಗೆ ಗುರಿ ಇಡಬೇಕು. ಅನುಮತಿಯಿಲ್ಲದೇ ಅವಮಾನವಿಲ್ಲ ‘ನಿನ್ನ ಅನುಮತಿ ಇರಲಾರದೇ ನಿನ್ನನ್ನು ಯಾರೂ ಅನುಮಾನಿಸಲಾರರು.’ ಎಂಬುದು ಅನುಭವಿಕರ ನುಡಿ. ಅನುಮಾನದ ಭೀತಿ ಇರುವವರೆಗೂ ಅನುಮಾನಗಳು ನಮ್ಮನ್ನು ಸುತ್ತುವರೆಯುತ್ತವೆ. ಅನುಮಾನದ ಭೀತಿ ತೊರೆದ ಮೇಲೆ ನಮ್ಮನ್ನು ಬಿಟ್ಟು ತೊಲಗುತ್ತವೆ. ಅವಮಾನಕ್ಕೆ ಪ್ರತಿಕ್ರಿಯಿಸಿ ಮತ್ತೆ ಅವಮಾನಿಸಿಕೊಳ್ಳುವುದು ಮೂರ್ಖತನವೇ ಸರಿ.ಅವಮಾನಕ್ಕೆ ಪ್ರತಿಯಾಗಿ ಅಸಂಬದ್ಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಕುಳಿತರೆ ನಡೆಯುವ ದಾರಿ ತಪ್ಪಿ ಹೋಗುತ್ತದೆ. ಅವಮಾನ ಎದುರಿಸುವಾಗ ಎಚ್ಚರದಿಂದಿರು. ಅವಮಾನವೆಂಬ ಹೆಸರಿನಲ್ಲಿ ಜೀವನದ ಖಾತೆಗೆ  ನಷ್ಟ. ಜನರ ದೃಷ್ಟಿಯಲ್ಲಿ ಅವಮಾನ ಸಣ್ಣದಿರಲಿ ದೊಡ್ಡದಿರಲಿ ನಮ್ಮ ಪಾಲಿಗಂತೂ ಅದು ದೊಡ್ಡ ಕಹಿಯೇ ‘ಅವಮಾನ ಹೆಚ್ಚಿದಷ್ಟು ಹೆಚ್ಚು ಲಾಭ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ..’ ಕೊನೆ ಹನಿ ಗೆಲುವಿನೆಡೆಗೆ ಪಯಣ ಬೆಳೆಸುವಾಗ ಅವಮಾನ ಕಟ್ಟಿಟ್ಟ ಬುತ್ತಿ. ಇಲ್ಲಿ ಅವಮಾನ ಯಾರಿಗಿಲ್ಲ ಹೇಳಿ.ಲೋಕದಲ್ಲಿ ಹುಟ್ಟಿದ ಎಲ್ಲರೂ ಅವಮಾನ ಅನುಭವಿಸಿದವರೆ. ಹೆಜ್ಜೆ ಹೆಜ್ಜೆಗೂ ಕಾಡುವ ಅವಮಾನ ಗೆಲುವಿನ ಏಣಿ ಏರಿ ಯಶಸ್ಸಿನ ಶಿಖರವನ್ನು ಮುಟ್ಟಲು ಕಾರಣವಾಗತ್ತದೆ.ಸಣ್ಣ ಪುಟ್ಟ ಘಟನೆಗಳ ಅವಮಾನವೂ ಗಮನ ಸೆಳೆಯುತ್ತದೆ. ಒಮ್ಮೊಮ್ಮೆಯಂತೂ ನಿರುತ್ಸಾಹ ಮೂಡಿಸಿ ಹಿಂಡಿ ಹಿಪ್ಪಿ ಮಾಡಿ ಬಿಡುತ್ತದೆ. ಅವಮಾನಗಳಿಗೆ ಹೆದರುವ ಅಗತ್ಯವಿಲ್ಲ. ಅನಗತ್ಯ ಅವಮಾನವಾಗಿದ್ದರೆಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಎಲ್ಲರೂ ನಮ್ಮನ್ನು ಮೆಚ್ಚಿಕೊಂಡರೆ ನಾವು ಶುದ್ಧರಾಗುವುದಿಲ್ಲ. ಶುದ್ಧೀಕರಣ ಇತರರು ನಮ್ಮನ್ನು ಪರೀಕ್ಷೆಗೆ ಒಡ್ಡಿದಾಗ ಟೀಕಿಸಿದಾಗ ಉಂಟಾಗುತ್ತದೆ. ಅನುಮಾನವೆಂಬ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು. ಅವಮಾನದ ಸಂದರ್ಭದಲ್ಲಿ ಗೆಳೆಯರು ಬಂಧುಗಳು ಕೈ ಬಿಟ್ಟರೂ ಸಂಗಾತಿಯಾಗಿ ನಿಲ್ಲುವುದೇ ಆತ್ಮವಿಶ್ವಾಸ.ಅವಮಾನದ ಪ್ರತಿ ತಿರುವನ್ನು ಸವಾಲಾಗಿ ಸ್ವೀಕರಿಸಿದರೆ ಒಂದೊoದು ಅವಮಾನದ ಪ್ರತಿ ತಿರುವೂ ನಿಮ್ಮ ಗೆಲುವಿನ ಮೈಲಿಗಲ್ಲುಗಳಾಗಿ ಜನರು ನಮ್ಮನ್ನು ಅಭಿಮಾನದಿಂದ ತಿರುಗಿ ನೋಡುವಂತೆ ಮಾಡುತ್ತವೆ.ಅವಮಾನಿಸಿದವರೇ ಸನ್ಮಾನಿಸುವಂತೆ ಬೆಳೆದು ತೋರಿಸುವುದೇ ಅವಮಾನಕ್ಕೆ ತಕ್ಕ ಉತ್ತರವಲ್ಲವೇ? ಜಯಶ್ರೀ ಜೆ ಅಬ್ಬಿಗೇರಿ

“ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ಜಯಶ್ರೀ.ಜೆ. ಅಬ್ಬಿಗೇರಿ Read Post »

ಕಾವ್ಯಯಾನ

ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ “ವಿಶ್ವಪಥ”

ಕಾವ್ಯಸಂಗಾತಿ ಡಾ  ಗೀತಾ ದಾನಶೆಟ್ಟಿ ವಿಶ್ವಪಥ ಉಡುವ ಬಟ್ಟೆನಡೆವ ಬದುಕುಹಲವು ಬಗೆರೀತಿಯಾದರೇನು ?ಮನುಜ ಮತ ಒಂದೇ ಇರಲುದ್ವೇಷ ಅಸೂಯೆಗಳೆತಕೆಭ್ರಾಂತಿ ಅಳಿದು,ಶಾಂತಿ ಉಳಿದುಸತ್ಯ ಸಮತೆಗೆ ಮಣಿದುಮತ್ತೆ ಬೆಳೆಯಲಿಮನುಜ ಮತನಿತ್ಯ ಸಾಗುವ  ವಿಶ್ವಪಥ ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ “ವಿಶ್ವಪಥ” Read Post »

ಇತರೆ

ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ!ವಿಶೇಷ ಲೇಖನ, ಐಗೂರು ಮೋಹನ್ ದಾಸ್ ಜಿ.

ಜಾಲತಾಣ ಸಂಗಾತಿ ಐಗೂರು ಮೋಹನ್ ದಾಸ್ ಜಿ. ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ! ಒಂದು ಮಾತು :ಕೆಲ ದಿನಗಳ ಹಿಂದೆ ದೇವರನಾಡು ಕೇರಳ ರಾಜ್ಯದಲ್ಲಿ,ಸಾಮಾಜಿಕ ಜಾಲತಾಣದ ಹುಚ್ಚು ಮೋಹದಿಂದ ಯುವತಿಯೊಬ್ಬಳ ಹುಚ್ಚಾಟಕ್ಕೆ, ಒಂದು ಮನೆಯ ‘ಬೆಳಕು’ವಾಗಿದ್ದ ‘ದೀಪಕ್’ ಎನ್ನುವ ಯುವಕ ‘ಆತ್ಮಹತ್ಯೆ’ ಮಾಡಿಕೊಂಡಿರುವ ವಿಚಾರ ನಿಮಗೂ ಗೊತ್ತಿರಬೇಕು.    ಈ ಯುವತಿಯ ಸುಳ್ಳು ಆರೋಪದಿಂದ ಒಂದು ಗಂಡು ಜೀವ ಹೋಗಿದೆ…. ಪ್ರಜ್ಞಾವಂತ ಜನತೆ ಈ ಯುವತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.   ಇಂದು ಈ ಆತ್ಮಹತ್ಯೆ ಪ್ರಕರಣದಲ್ಲಿ ಯುವತಿಯ ‘ಬಂಧನ’ವಾಗಿದೆ.ಆದರೆ ದೇಶದ ಕಾನೂನು ವ್ಯವಸ್ಥೆ ಈ ತಪ್ಪಿಗೆ ಏನು ‘ಶಿಕ್ಷೆ’ ನೀಡುತ್ತದೆ ಎಂಬುವುದು ಗೊತ್ತಿಲ್ಲ…!ಯಾವುದೇ ತಪ್ಪು ಮಾಡದೇ ಸಮಾಜದಲ್ಲಿ ತಲೆ ತಗ್ಗಿಸಿ ನಿಲ್ಲುವಂತಹ ದಿನಗಳು ಬಂದರೇ, ಉತ್ತಮ ಗುಣ-ನಡತೆಯನ್ನು ಹೊಂದಿರುವ ದೀಪಕ ನಂತಹ ಒಳ್ಳೆಯ ಗುಣವಂತ ಮಂದಿ  ನಾಚಿಕೆಯಿಂದ ‘ಆತ್ಮಹತ್ಯೆ’ಯಂತಹ ಕೆಟ್ಟನಿಧಾ೯ರವನ್ನು ತೆಗೆದುಕೊಳ್ಳುತ್ತಾರೆ… ಜೊತೆಗೆ ಈಗ ಸಾಮಾಜಿಕ ಜಾಲತಾಣ ಗಳು  ಉರಿಯುವ ಬೆಂಕಿಗೆ ತುಪ್ಪ ಸುರಿದ ರೀತಿಯಾಗಿದೆ…!   ಒಂದು ಹೆಣ್ಣು’ ಜನಪ್ರಿಯತೆ’ ಹೊಂದಲು ಮಾಡಿದ ತಪ್ಪಿಯಿಂದ, ಒಂದು ಕುಟುಂಬವೇ ಕಣ್ಣೀರು ಸುರಿಸುತ್ತಿದೆ… ಎಲ್ಲಾಡೆ ಈ ಪಾಳು ಜನ್ಮದ ಹೆಣ್ಣಿನ ಮೇಲೆ ‘ಶಾಪ’ ದ ಮಳೆ ಸುರಿಸುತ್ತಿದೆ…!ಆದರಿಂದ ಈ ಪ್ರಕರಣವನ್ನು ಧೀಘ೯ವಾಗಿ ಎಳೆಯುವುದು ಇಲ್ಲ..! ಬದಲಾಗಿ ಈ ಪ್ರಕರಣದ ಸರ್ವ ದುರಂತಕತೆಯನ್ನು ಎರಡು ಗೆರೆಯ ಕವಿತೆಯೊಂದಿಗೆ ಮುಗಿಸುವೆ..!ಇದು ಮಲಯಾಳಂ ಕವಿಯೊಬ್ಬರು ಬರೆದ ಕವಿತೆಯ ‘ಅನುವಾದ ‘ವಾಗಿದೆ…! ದುರಂತ..!  ‘ಸ್ತನ’  ತಾಗಿಒರ್ವನ ಸಾವು…!!?.  ಐಗೂರು ಮೋಹನ್ ದಾಸ್ ಜಿ.

ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ!ವಿಶೇಷ ಲೇಖನ, ಐಗೂರು ಮೋಹನ್ ದಾಸ್ ಜಿ. Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ನನ್ನ ತಾಯಿಯ ತವರೂರು ಗದಗ ಜಿಲ್ಲೆಯ ಮುಳಗುಂದ .ಬಾಲಲೀಲಾ ಮಹಾಂತ ಸ್ವಾಮಿಗಳು ,ದಾವಲ ಮಲಿಕ್ ಶಿರಹಟ್ಟಿ ಫಕೀರೇಶ್ವರ ಹೀಗೆ ಬೇರೆ ಬೇರೆ ಮಹಾತ್ಮರ ಪರಿಸರದಲ್ಲಿ ನನ್ನ ತಾಯಿ ಲಿಂಗೈಕ್ಯ ಸರೋಜಾ ರುದ್ರಪ್ಪ ಪಟ್ಟಣ ಲಿಂಗೈಕ್ಯ ಶ್ರೀ ವೀರಭದ್ರಪ್ಪ ವಾಲಿ ಮತ್ತು ಲಿಂಗೈಕ್ಯ ಶ್ರೀಮತಿ ಚೆನ್ನವೀರವ್ವ ಅವರ ಉದರದಲ್ಲಿ ಜನಿಸಿದ ಹಿರಿಯ ಮಗಳು. ಐವತ್ತು ವರುಷದ ಹಿಂದೆ ನಾನು ಬಾಲಕನಾಗಿದ್ದಾಗ ನನ್ನ ಅಜ್ಜ ಲಿಂಗೈಕ್ಯ  ಶ್ರೀ ವೀರಭದ್ರಪ್ಪ ವಾಲಿ ಅವರು ನನಗೆ ನಿತ್ಯ ಸಂಜೆ  ರಾತ್ರಿ  ಕಥೆ ಹೇಳುತ್ತಿದ್ದರು ಅವರು ಹೇಳಿದ ಒಂದು ಸಹಜ ಪ್ರಕರಣದ ಭಾಗವನ್ನು ಇಲ್ಲಿ ಸ್ಮರಿಸುತ್ತೇನೆ. ಮುಳಗುಂದ ವ್ಯಾಪಾರಸ್ಥರು  ಒಮ್ಮೆ ಶ್ರೀ  ಪಂಚಾಕ್ಷರಿ ಗವಾಯಿಗಳನ್ನು   ಜಾತ್ರಾ ಮಹೋತ್ಸವಕ್ಕೆ ಮುಳಗುಂದಕ್ಕೆ ಕರೆಸಿದರಂತೆ ಕಾರ್ಯಕ್ರಮ ಮುಗಿದ ಮೇಲೆ ಶ್ರೀ   ಶ್ರೀ  ಪಂಚಾಕ್ಷರಿ ಗವಾಯಿಗಳು ತಾವು ತಂದ ಧೋತರ ಅಲ್ಲಿನವರು ಬೇರೆಯವರ ಧೋತರಗಳ ಜೊತೆಗೆ ಬೆರೆಸಿ ಇಟ್ಟಿದ್ದರಂತೆ ,ಇವರ ತೀಕ್ಷ್ಣತೆ ಪರೀಕ್ಷೆ ಮಾಡಲು, ಇಪ್ಪತ್ತು ದೋತುರಗಳಲ್ಲಿ ಶ್ರೀ  ಪಂಚಾಕ್ಷರಿ ಗವಾಯಿಗಳು ತಮ್ಮ ದೋತುರವನ್ನೇ ಆಯ್ಕೆ ಮಾಡಿಕೊಂಡರಂತೆ. ಅದೇ ರೀತಿ ಅವರ ಉಣ್ಣುವ ಗಂಗಾಳ ಮತ್ತು ಚರಿಗೆಯನ್ನು ಅವರು ಪತ್ತೆ ಹಚ್ಚಿ ಜನರಿಗೆ ಆಶ್ಚರ್ಯವನ್ನು   ಉಂಟು ಮಾಡುತ್ತಿದ್ದರಂತೆ ,ಇದನ್ನು ನನ್ನ ಅಜ್ಜ ಸ್ವತಹ ಕಣ್ಣಿಂದ  ಕಂಡ ದೃಶ್ಯವೆಂದರೆ ಶ್ರೀ  ಪಂಚಾಕ್ಷರಿ ಗವಾಯಿಗಳು ಎಷ್ಟು ತೀಕ್ಷ್ಣಮತಿಗಳಾಗಿದ್ದರು ಎಂದು ತಿಳಿಯುತ್ತದೆ. ಇಂತಹ ಅಪ್ರತಿಮ ಸಂಗೀತ ಸಾಮ್ರಾಟನ ಪರಿಚಯ ಮಾಡುವುದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ.  ಕರ್ನಾಟಕವು ಅದರಲ್ಲೂ ಉತ್ತರ ಕರ್ನಾಟಕವು ಸಂಗೀತ ಸಾಹಿತ್ಯ ದಿಗ್ಗಜರನ್ನು ನಾಡಿಗೆ ಸಮರ್ಪಿಸಿದೆ .ಅಂತಹ ಸಾಧಕರಲ್ಲಿ ನಮ್ಮ ಪಂಚಾಕ್ಷರಿ ಗವಾಯಿಗಳು. ಶ್ರೀ ಪಂಚಾಕ್ಷರ ಗವಾಯಿಗಳು  ಗದುಗಿನಲ್ಲಿರುವ ಪ್ರಸಿದ್ಧ ಸಂಗೀತ ಆಶ್ರಮವಾದ “ಶ್ರೀ ವೀರೇಶ್ವರ ಪುಣ್ಯಾಶ್ರಮ”ದ ಸಂಸ್ಥಾಪಕರು. ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, ದಿನಾಂಕ: ೨, ಫೆಬ್ರುವರಿ ೧೮೯೨ರಂದು. ಇವರ ತಾಯಿ ನೀಲಮ್ಮ ಹಾಗು ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟು ಹೆಸರು. ಗದಿಗೆಯ್ಯ ಹಾಗು ಇವರ ಅಣ್ಣ ಗುರುಬಸಯ್ಯ ಇಬ್ಬರೂ ಹುಟ್ಟು ಕುರುಡರು. ಸ್ಥಳೀಯವಾಗಿ ಸಾಧ್ಯವಿದ್ದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ಒಮ್ಮೆ ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಈ ಕುರುಡು ಬಾಲಕರ ಹಾಡು ಕೇಳಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು ಈ ಎಳೆಯರನ್ನು ತಮ್ಮ ಉಡಿಯಲ್ಲಿ ಹಾಕಿಕೊಂಡರು.ಹಾನಗಲ್ ಕುಮಾರಸ್ವಾಮಿಗಳು ಇವರಿಗೆ ಸಂಗೀತ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ಸಂಗೀತ ಶಿಕ್ಷಣ ಅಣ್ಣತಮ್ಮಂದಿರಿಬ್ಬರಿಗೂ ಅನೇಕ ಗುರುಗಳಿಂದ ಸಂಗೀತ ಶಿಕ್ಷಣ ದೊರೆಯಿತು. ಶ್ರೀ ಕುಮಾರಸ್ವಾಮಿಗಳು ಹಳ್ಳಿಹಳ್ಳಿಗಳಲ್ಲಿ ಭಿಕ್ಷೆ ಎತ್ತಿ ನೆಲವಿಗಿಯಲ್ಲೊಂದು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಅಲ್ಲಿ ಇತರ ಹುಡುಗರ ಜೊತೆಗೆ ಈ ಹುಡುಗರೂ ಸಹ ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದ. ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತ ವಿದ್ಯಾಭ್ಯಾಸವಾಯಿತು. ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯನವರು, ಆ ಬಳಿಕ ಬಾಗಲುಕೋಟೆಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರಸ್ವಾಮಿಗಳಿಂದ “ಪಂಚಾಕ್ಷರಿ ಗವಾಯಿ” ಎಂದು ಉದ್ಘೋಷಿತರಾದರು. ಆ ಬಳಿಕ ಸಹ ಮತ್ತೆ ನಾಲ್ಕು ವರ್ಷ ಹಿಂದುಸ್ತಾನಿ ಸಂಗೀತವನ್ನು ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು. ಸಂಗೀತದ ಮೂಲಕವೆ ಸಮಾಜಸೇವೆ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮಮಾರ್ಗದಲ್ಲೂ ಮುನ್ನಡೆದರು. *ಸಂಗೀತ ಪ್ರಚಾರ* _________________ ಪಂಚಾಕ್ಷರಿ ಗವಾಯಿಗಳು ನಾಡಿನಲ್ಲೆಲ್ಲ ಸಂಚರಿಸುತ್ತ ಒಂದು ಸಂಚಾರೀ ಪಾಠಶಾಲೆಯನ್ನು ಪ್ರಾರಂಭಿಸಿದರು. ೧೯೧೪ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದಲ್ಲಿ ಶಿವಯೋಗ ಮಂದಿರದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳವರು ಬಸವ ಜಯ೦ತಿಯ೦ದು ಸ್ಥಾಪಿಸಿಕೊಟ್ಟರು. ಶಾಖೆಯಾಗಿ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಿದರು. ಈ ಸಂಗೀತಶಾಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಗಳನ್ನು ಸಹ ಹೇಳಿಕೊಡಲಾಗುತ್ತಿತ್ತು. ಇವರ ಶಿಷ್ಯರಲ್ಲಿ ಇವರ ಉತ್ತರಾಧಿಕಾರಿಯಾಗಿ ದೊರೆತ, ಪ್ರಸಿದ್ಧ ಗವಾಯಿ ಪುಟ್ಟರಾಜರೂ ಸಹ ಕುರುಡರೇ! ಸಂಗೀತಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ ಕೈಸುಟ್ಟುಕೊಂಡದ್ದೂ ಆಯಿತು. ಈ ನಡುವೆ ೧೯೩೦ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು. *ಕನ್ನಡ ಪ್ರೇಮಿ ____________ ಎಚ್.ಎಮ್.ವಿ. ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಮುಂಬಯಿಗೆ ಕರೆಸಿದ್ದರು. ಕನ್ನಡದಲ್ಲಿಯೇ ಗಾಯನ ಮಾಡುವದಾಗಿ ಹಟ ಮಾಡಿದ ಪಂಚಾಕ್ಷರಿ ಗವಾಯಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಾಗ, ಕಂಪನಿಯವರು ಗವಾಯಿಗಳ ಆಗ್ರಹಕ್ಕೆ ಮಣಿಯಲೇ ಬೇಕಾಯಿತು. *ಸ್ವದೇಶಾಭಿಮಾನಿ ಗ್ರಾಮ್ಯ ಸಂಸ್ಕೃತಿ* —————————————— ಪಂಚಾಕ್ಷರಿ ಗವಾಯಿಗಳು ಖಾದಿಯನ್ನೇ ತೊಡುತ್ತಿದ್ದರು. ಉದರ ರೋಗದಿಂದ ಬಳಲುತ್ತಿರುವಾಗ ಆಯುರ್ವೇದದ ಹೊರತಾಗಿ, ಇಂಗ್ಲಿಷ್ ವೈದ್ಯಕೀಯಕ್ಕೆ ಗವಾಯಿಗಳು ಒಪ್ಪಿಕೊಳ್ಳಲಿಲ್ಲ. ಕೊನೆಗೂ ಇದೇ ರೋಗಕ್ಕೆ ಗವಾಯಿಗಳು ಬಲಿಯಾದರು. *ಲಿಂಗೈಕ್ಯ* ——————- ಸುಮಾರು ನಾಲ್ಕು ವರ್ಷಗಳವರೆಗೆ ಗವಾಯಿಗಳು ಉದರ ರೋಗದಿಂದ ಬಳಲಿದರು. ಕೊನೆಗೆ ದಿನಾಂಕ ೧೧, ಜೂನ್ ೧೯೪೪ರಂದು ಪಂಚಾಕ್ಷರ ಗವಾಯಿಗಳು ವಿಶ್ವಸಂಗೀತದಲ್ಲಿ ಲೀನರಾದರು ಮತ್ತು ನಿಧನರಾದರು. ತಮ್ಮ ಜೀವಿತ ಐವತ್ತೆರಡು ವರುಷಗಳಲ್ಲಿ ಸಂಗೀತ ಸಾಮ್ರಾಜ್ಯವನ್ನು ಕಟ್ಟಿದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,”ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

“ದಂಡೇಶು ದುರ್ಗಾ…” ಕವಿತೆ ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ದಂಡೇಶು ದುರ್ಗಾ…” ಬಂದ್ಯಾ ನನ್ ಮಗ್ನೇ…ಈಟೊತ್ತಿಗ್ ನೆಪ್ಪಾಯ್ತ ನಿಂಗೆಮನಿ ಮಕ್ಳ್ ಮರಿ ?ನೆಟ್ಟಗ್ ನಿಲ್ಲಾಕು ಆಯ್ತ ಇಲ್ಲಅಷ್ಟ್ ಆಕವ್ನೆಬಡ್ಡೀಮಗನ್ ತಂದು !ಅಕ್ಕಿ ಡಬ್ಬದಾಗ್ ಕೈ ಆಕಿತೆಗ್ದವ್ನೆ ತಿಂಗಳ್ ರೊಕ್ಕಇವತ್ತ್ ನಿನ್ ಗ್ರಾಚಾರಬಿಡಸ್ತೀನ್ ನೋಡ್ಕ…ಗಡಂಗ್ನಾಗ್ ಕುಂತುಎಂಡ ಇಳಸ್ತಾನೆಎಂಡ್ತೀ ಒಡ್ವೆ ಮಾರಿಭಡವಾ ಬೇವಾರ್ಸಿಬೆಂಕಿ ಬೀಳಾ ನಿನ್ನನ್ಹಡದವ್ಳ ಹೊಟ್ಟೀಗೆ !ನಾಚ್ಕೀ ಆಗಾಕಿಲ್ಲ ? ನಂಗ್ ಬರಾ ಕೋಪಕ್ಕೆ…ನಿನ್ ಕಾಲ್ ಕಟ್ಟಿಬಟ್ಟಿ ಒಗ್ಯಾ ಬಂಡಿ ಮ್ಯಾಗ್ ಕುಕ್ಕಿಮಂಡಿ ಒಡ್ದ್ ಆಕ್ಬೇಕ್ ಅನ್ಸ್ ತ್ತೈತಿಆದ್ರ ಎನ್ ಮಾಡ್ಲಿನೀ ಗೊಟಕ್ ಅಂದ್ರನಾನ್ ತಾನೆ ಮುಂಡೆ ಆಗಾಕಿಇದ್ರೂ ನಷ್ಟ ಮಾಡಾಂವಸತ್ರೂ ಕಷ್ಟ ಕೊಡಾಂವ !ನಿನ್ ಮಖಕ್ಕಿಷ್ಟು ! ಸುಮತಿ ನಿರಂಜನ

“ದಂಡೇಶು ದುರ್ಗಾ…” ಕವಿತೆ ಸುಮತಿ ನಿರಂಜನ Read Post »

ಪುಸ್ತಕ ಸಂಗಾತಿ

ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ

ಪುಸ್ತಕ ಸಂಗಾತಿ ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ ಪ್ರೀತಿ‌ಪ್ರೇಮದಾಚೆ ಲಂಘನ‌ ಮಾಡುವ ಶಾಯಿರಿ‌ಲೋಕಪ್ರೀತಿ‌ಪ್ರೇಮದಾಚೆ ಲಂಘನ‌ ಮಾಡುವ ಶಾಯಿರಿ‌ಲೋಕಡಾ.ಮಂಜುನಾಥ .ಬಮ್ಮನಕಟ್ಟಿಯವರ ನೂರಾರು ಶಾಯಿರಿಗಳುಕನ್ನಡಕ್ಕೆ ಶಾಹಿರಿ ಪ್ರಕಾರವನ್ನು ಪರಿಚಯಿಸಿದವರು ಇಟಗಿಈರಣ್ಣನವರು‌.ಗಜಲ ನ ಹಾಗೆ ಉರ್ದು ಸಾಹಿತ್ಯದಿಂದ ಕನ್ನಡಕ್ಕೆ ಬಂದ ಈ‌ ಕಾವ್ಯ‌ ಪ್ರಕಾರವನ್ನು , ಪ್ರೊ  ಭಿಕ್ಷಾವರ್ತಿಮಠ , ಶ್ರೀ ಅಸಾದುಲ್ ಬೇಗ್ ಮೊದಲಾದವರು ಬೆಳೆಸಿದರು .೧೯೭೬ರಲ್ಲಿ ಇಟಗಿ ಈರಣ್ಣನವರ  ಕನ್ನಡ ಶಾಹಿರಿ ಸಂಕಲನ‌ ಪ್ರಕಟವಾಯಿತು. ತದನಂತರದಲ್ಲಿ ಅವರ ಸ್ನೇಹಿತರೇ ಆದ ಪ್ರೊ. ಎಚ್.ಎ.ಭಿಕ್ಷಾವರ್ತಿ‌ಮಠ ಅವರು ೧೯೮೧ ರಲ್ಲಿ ತಮ್ಮ ಕನ್ನಡ ಶಾಯಿರಿ‌ಲೋಕ ಎಂಬ ಸಂಕಲನ ಪ್ರಕಟಿಸುವ ಮೂಲಕ ಈತನ ಕಾವ್ಯ ಪ್ರಕಾರದ ಬೆಳವಣಿಗೆಗೆ ಕಾರಣರಾದರು. ಈಗ ಹಲವರು ಶಾಯಿರಿ ಗಳನ್ನು  ಬರೆಯುತ್ತಿದ್ದಾರೆ. ಗದಗ,ಮತ್ತು‌ಕೊಪ್ಪಳ ಭಾಗದಲಿ ಇದು ವಿಶೇಷವಾಗಿ ರಚನೆಯಾಗುತ್ತಿದ್ದು  ಪರಮೇಶ್ವರಪ್ಪ‌ ಕುದರಿ, ಮರುಳಸಿದ್ದಪ್ಪ ದೊಡಮನಿ.ಯಲ್ಲಪ್ಪ ಹರ್ನಾಳಗಿ, ಕೊಟ್ರೇಶ ಜವಳಿ ,ಕಸ್ತೂರಿ ಡಿ.ಪತ್ತಾರ, ಡಾ ಸಿದ್ರಾಮ ಹೊನ್ಕಲ್ ಮೊದಲಾದವರು ಶಾಹಿರಿಗಳನ್ನು ಬರೆಯುತ್ತಿದ್ದಾರೆ‌.ಎಲ್ಲರಿಗೂ  ಇಟಗಿ ಈರಣ್ಣನವರ  , ಪ್ರೊ. ಭಿಕ್ಷಾವರ್ತಿಮಠ  ಅವರ ಶಾಹಿರಿಗಳೇ ಪ್ರೇರಣೆ ಎಂಬ ಮಾತನ್ನು ಮರೆಯಲಾಗದು. ಪತ್ರಕರ್ತರೂ,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾಗಿ ಚಿಕ್ಕ ಮಗಳೂರಿನಲ್ಲಿ ಕೆಲಸ ಮಾಡುತ್ತಿರುವ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಯವರು  ಪ್ರವೃತ್ತಿ ಯಿಂದ ಕವಿಗಳೂ ಪ್ರಬಂಧಕಾರರೂ, ಸಾಮಾಜಿಕ ಕ್ಷೇತ್ರ ದ ಸಂಶೋಧಕರೂ  ಆಗಿ ತುಂಬ ಚಟುವಟಿಕೆಯಿಂದ ಕೂಡಿರುವ ಬರಹಗಾರರು ಈವರೆಗೆ ಹನಿಗವನ, ಕವಿತೆ,  ಜೀವನ ಚರಿತ್ರೆ, ಪ್ರಬಂಧ ಸಂಕಲನ, ಮತ್ತು ಸಂಶೋಧನ ಕೃತಿಗಳು ಸೇರಿದಙತೆ ೧೮   ಕೃತಿಗಳನ್ನುರಚಿಸಿದ್ದಾರೆ. ಬಹಳ ವಿಶೇಷವಾದದ್ದು ಕರ್ನಾಟಕ ದ ಮಹಿಳಾ ಪೋಲಿಸ್  ಇಲಾಖೆಯ ಮೇಲೆ ಸಂಶೋಧನೆ ಮಾಡಿ ಅವರು ಬರೆದ ಕೃತಿ. ಹಾಗೆಯೆ ಬಹಳ ವಿಶಿಷ್ಟವಾದ ” ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ದಿ” ಎಂಬ ಅಧ್ಯನ ಕೈಕೊಂಡು‌ ಪಿಎಚ್. ಡಿ‌ ಪದವಿ‌ ಪಡೆದ ಪ್ರತಿಭಾವಂತರು ಅವರು. ಈಗ  “ಕತ್ತಲು  ಬೆಳಕು” ಎಂಬ ನೂರಾರು ಶಾಯಿರಿಗಳ ಚಂದದ ಸಂಕಲನವನ್ನು ಪ್ರಕಟಿಸುವ ಮೂಲಕ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಇದಕ್ಕೆ ಹಿರಿಯರಾದ ಪ್ರೊ‌ಭಿಕ್ಷಾವರ್ತಿಮಠ ಅವರ ಮುನ್ನುಡಿ ,ಇನ್ನೋರ್ವ ಖ್ಯಾತ‌, ಕವಿ  ,  ಕಾದಂಬರಿಕಾರ , ಪತ್ರಕರ್ತರಾದ ಡಾ . ಸರಜೂ ಕಾಟ್ಕರ್ ಅವರ ನಲ್ನುಡಿ ಇವೆ. ಶಾಯಿರಿ ಕ್ಷಣವೊಂದರ ಸ್ಮಾರಕ.ಹನಿಗವನ, ಚುಟುಕು, ತನಗ, ಹಾಯಕು ಇವುಗಳ ಹಾಗೆ ಓದಿದೊಡನೆ ಮನಸ್ಸು ಪ್ರಪುಲ್ಲಿತವಾಗಿ ವಾವ್ ಎಂಬ ಬೆರಗು ಹೊರಡಿಸಿವ ಚತುರತೆ ಅದರ ಗುಣ.ಈ ಕಾವ್ಯದ ಲಕ್ಷಣಗಳನ್ನು ನಲ್ನುಡಿಯಲ್ಲಿ ಹಿರಿಯರಾದ ಡಾ ಕಾಟ್ಕರ್ ಅವರು ವಿವರಿಸುತ್ತ ” ಶಾಯಿರಿಯ ಮುಖ್ಯ ಲಕ್ಷಣ ಕೆಲವೇ ಕೆಲವು ಸಾಲುಗಳಲ್ಲಿ ಬ್ರಹ್ಮಾಂಡವನ್ನು ಹೇಳುವದು.ನೋಡಿದ, ಕೇಳಿದ ಅನುಭವಿಸಿದ ಪ್ರಸಂಗಗಳಿಗೆ  ಕವಿಯಾದವನು ಕಾವ್ಯದ ಅಮರತ್ವವನ್ನು ನೀಡಬೇಕಾಗುತ್ತದೆ.ಆ ಶಬ್ದಗಳ ಜಾಲವು ಓದುಗನನ್ನು ಕೊನೆಯಲ್ಲಿ  ಥಕ್ಕಾಗಿಸುವಂತೆ ಮಾಡಿದರೆ  ಆ ಕಾವ್ಯವು ಸಾರ್ಥಕತೆಯನ್ನು ಪಡೆಯುತ್ತದೆ”  ಎನ್ನುತ್ತಾರೆ. ಅದು ಸಾಮಾನ್ಯವಾಗಿ ಪ್ರೇಮದ ಮುಗುಳು ಚಿಗುರಿಸುವ ಹೂವಿನ  ತೋಟ. ಶಾಯಿರಿ ರಚಿಸುವಾಗ ಪ್ರೇಮ ,ವಿರಹದಾಚೆಗೆ ಬಹಳ ಜನ ಕವಿಗಳು ದಾಟುವುದೆ ಇಲ್ಲ.ಆದರೆ ಡಾ ಬೊಮ್ಮನಕಟ್ಟಿಯವರ. ಓದಿನ ಮತ್ತು ಸೇವೆಯ ಹರಿವು ವಿಸ್ತಾರವಾದ್ದರಿಂದ ಬದುಕಿನ ಬೇರ ಬೇರೆ ಸಂಗತಿಗಳು ಇಲ್ಲಿ ಶಾಯಿರಿಗಳಾಗಿವೆ. ಡಾ ಸರಜೂ ಕಾಟ್ಕರ್ ಸರ್ ಹೇಳಿದಂತೆ ಇಲ್ಲಿನ ಶಾಯಿರಿಗಳಿಗೆ ಅಮರತ್ವದ ಗುಣ ಪ್ರಾಪ್ತವಾಗಿದೆ. ಶಾಯಿರಿಗಳೂ ಕೂಡ ತನಗ ಹೈಕು ಗಜಲ್ ಗಳ ಹಾಗೆ ಶೀರ್ಷಿಕೆಯಿಲ್ಲದ ಹೆಸರೊಲ್ಲದ ಚಿತ್ರಗಳೇ ಆಗಿವೆಇಲ್ಲಿನ ನೂರಾರು (೧೦೬) ಶಾಯಿರಿಗಳಲ್ಲಿ ಬದುಕಿನ ತಾತ್ವಿಕ ಚಿಂತನೆ ಪ್ರೀತಿ ಪ್ರೇಮಗಳ ಅನಂತ ನೋಟ ಎಲ್ಲವೂ ಇವೆ. ಮೊದಲ ಶಾಯಿರಿಯಲ್ಲಿಯೆ ಅದು ಕಾಣುತ್ತದೆ. ಮನುಷ್ಯ ಇರುವದರೊಳಗೆ ನಾಲ್ಕು ಮಂದಿಗೆ ಬೇಕಾಗುವಂಗ ಬದುಕಬೇಕು  ಎನ್ನುವದನ್ನು ಸಂಖ್ಯೆಗಳ ಚಮತ್ಕಾರದಲ್ಲಿ ಹಿಡಿದಿಡುವ ರೀತಿ ವಿಶಿಷ್ಟವಾಗಿದೆ . ಒಂದು ಎರಡು ಬಂದ ಬರತೈತಿಮೂರು ಆರುನಾಕ ಜನಕ್ಕ ಬೇಕ ಬೇಕು.ಅಷ್ಟರೋಳಗ ಈ ಬದುಕಬೆಳಗಬೇಕು ಬೆಳಗಸಬೇಕುಹತ್ತರ ಕೂಟ ಹನ್ನೊಂದು ಯಾಕ‌ ಆಗಬೇಕುಮನುಷ್ಯರಾಗಿ ಸುಮ್ಮನೆ ಬಂದವರಲ್ಲ, ಸಾಯುವದರೊಳಗೇ ಏನಾದರೂ  ಸಾಧಿಸದೆ ಇದ್ರೆ ಬದುಕಿ ಏನು‌ ಲಾಭ ? ಇದು ಕವಿಯ ಪ್ರಶ್ನೆ! ‘ಮೂರು ಆರು’ ಅಡಿ ಜಾಗ ಅಂತಿಮವಾಗಿ ಎಲ್ಲರಿಗೂ ಬೇಕೇ ಬೇಕು‌.ಮತ್ತು ಕೊನೆಯಲ್ಲಿ ಹೊತ್ತ ಒಯ್ಯಲು ನಾಲ್ಕು ಜನರ ಅಗತ್ಯನೂ ಇದೆ. ಇದಂತೂ ಪರಮ  ಸತ್ಯ.ಅಷ್ಟರೊಳಗೆ ನಮ್ಮ ಬದುಕು ಬೆಳಗಬೇಕು ,ಇತರರ ಬದುಕನ್ನು ಬೆಳಗಿಸಬೇಕು ಎನ್ನುವದನ್ನು ಶಾಯಿರಿ ಸಾರುತ್ತದೆ. ಜೀವನದ ತಾತ್ವಿಕತೆಯನ್ನು ಚಿಂತಿಸು ವ ಶಾಯಿರಿಗಳು ಗಮನ ಸೆಳೆಯುತ್ತವೆ. ಬದುಕನ್ನು‌ಬೇರೆ ಬೇರೆ ಮಾತುಗಳಲ್ಲಿ ವತ್ಣಿಸುವದಕ್ಕಿಂತ ,  ಬದುಕಿನ ನಿಜವಾದ ಅರ್ಥ ಎಂದರೆ ಅದನ್ನು ಸರಿಯಾಗಿ‌ ಬದುಕಿ ತೋರಿಸುವುದೆ ಆಗಿದೆ. ಅದನ್ನೇ ಬೊಮ್ಮನಕಟ್ಟಿಯವರ ಶಾಯಿರಿ ಬದುಕಂದ್ರಹಂಗಲ್ಲ, ಹಿಂಗಲ್ಲಬದುಕೊದಂದರ ಸಾಮಾನ್ಯ ಅಲ್ಲಬದುಕು ಬಳ ದೊಡ್ಡದುಅದಕ$ ನೀ ಬದುಕುಈ ಬದುಕು ಬದುಕು ಎನ್ನುವ ಪದ ಮತ್ತೆ ಮತ್ತೆ ಬಂದು‌ ಕೊಡುವ ಅರ್ಥ ವಿಶೇಷವಾದದ್ದು.ಈ ಬದುಕಿನಲ್ಲಿ ಕಪ್ಪೂ ಇದೆ . ಬಿಳಿಯೂ ಇದೆ.ಅಂದರೆ ಪಾಸಿಟಿವ್ ,ನೆಗೆಟಿವ್ ಎರಡೂ ಇವೆ. ಛಾಯಾಚಿತ್ರದ ರೂಪಕವನ್ನು ಬಳಸುವ ಕವಿ “ಪೊಸಿಟಿವ್, ನೆಗೆಟಿವ್   ಎರಡೂ ಸೇರಿದ್ರನ ಪೋಟೊ ಆಗತೈತಿ” ಎನ್ಜುವದು ಸರಿಯಾಗಿಯೆ ಇದೆ.ಅದನ್ನೆ ಒಂದು ಶಾಯಿರಿಯ ಭಾಗ ವಿವರಿಸುತ್ತಾ ಬೆಳಕು ಕತ್ತಲು ಹಗಲ ರಾತ್ರಿ ಇದ್ದಂಗಜೀವನದಾಗ ಸುಖ ದುಃಖ ಬಂದಾಂಗಇವು ಬ್ಯಾರೆ ಬ್ಯಾರೆ ಅಲ್ಲಒಂದಕ್ಕೊಂದು ಬಿಟ್ಟ ಇರೊದು ಹೆಂಗಎನ್ನುತ್ತಾರೆ. ಕತ್ತಲು ಬೆಳಕು ಎರಡೂ ಸೇರಿಯೇ ಬದುಕಾಗುತ್ತದೆ ಎನ್ನುವದನ್ನು ಅವರ ಶಾಯಿರಿ ಸಾರುತ್ತವೆ.ಈ ಮನಸ್ಸು ಬೇಲಿ ಹಾಕದಿದ್ದರೆ ಅದುವೆತ್ತ ಬೇಕು ಅತ್ತ ಓಡುತ್ತದೆ.ಅದಕ್ಕೆ ಬೇಲಿಹಾಕಬೇಕು ಎನ್ನುವ ಕವಿ ಕಾವಲು ಇರದೆ ಮನಸ್ಸು ಓಡಾಡಿದರೆ ಕಷ್ಟ ಎನ್ನುತ್ತಾರೆ.ಮನುಷ್ಯನ ಎದೆಎನ್ನುವದು ಬೆಳಗುವ ದೀಪವೂ ಹೌದು.ನಿಗಿ ನಿಗಿ ಉರಿವ ಕುಲಮೆಯೂ ಹೌದು‌‌. ಅದರಿಂದ ದೀಪವನ್ನು ಹಚ್ಚಬಹುದು.ಎದೆಯನ್ನು ಸುಡಬಹುದು . ಎರಡೂ ನಮ್ಮ‌ ಕೈಯಲ್ಲಿವೆ.ವಿವೇಚನೆ ಅಗತ್ಯ ಎಂದು ಒಂದು ಶಾಯಿರಿ ಸಾರುತ್ತದೆ. ಈ ಜಗತ್ತಿನಲ್ಲಿ ಎಲ್ಲವೂ ನನ್ನದೆ ಎಂದು ಸಾರಿದವರಾರೂ ಉಳಿದೆ ಇಲ್ಲ.  ಭೂಮಿಯನ್ನು ಗೆದ್ದು ಭೂಮಿಪ ಎನಿಸಿಕೊಂಡ ಅರಸರೆಲ್ಲ ಸತ್ತಿದ್ದಾರೆ.ಭೂಮಿ‌ ಮಾತ್ರ ಶಾಸ್ವತ ಎನ್ನುತ್ತಾನೆ ಕವಿ ಕುಮಾರವ್ಯಾಸ.ಕವಿ‌ಪಂಪನಲ್ಲಿ  ಜಗತ್ತು ಗೆದ್ದೆನೆಂದು ಮೆರೆವ ಭರತ ಚಕ್ರಿಯ ಅಹಂಕಾರ ರಸ ಕೊಳೆಗೊಂಡು ಸೋರುತ್ತದೆ ಎಂಬ‌ ಮಾತು ಬರುತ್ತದೆ.ಯಾವಬಕಾಲದ ಕಾವ್ಯ ವಾಗಲಿ ಸಾರುವದು ಇದನ್ನೇ .ಶಾಯಿರಿಯಂಥ ಸದ್ಯಕಾಲದಲ್ಲಿ ಬದುಕುವ ವರ್ತಮಾನದ ಕವಿತೆ ಕೂಡ ಸಾರ್ವತ್ರಿಕ ವಾದುದನ್ನು ಸಾರುತ್ತದೆ ಎನ್ನುವದಕ್ಕೆ ಸಾಕ್ಷಿ ಈ‌ ಮೂರೇ  ಸಾಲಿನ ಶಾಯಿರಿ.ಕವಿ ನಂದು ನಂದೂನಾನು‌ ನಾನೂಅಂದವರು ಯಾರೂ  ಉಳದೇ ಇಲ್ಲ ಎನ್ನುತ್ತಾನೆ.ಇಷ್ಟೇ ಕವಿತೆ .ಹೆಚ್ಚಿಗೆ ಹೇಳುವದಿಲ್ಲ. ಅದರಲ್ಲಿಯೆ ನೂರು ಸಾಲಿನ ಅರ್ಥ ಅಡಗಿದೆ. ಇಂಥ‌ ಪದ್ಯಗಳೇ ಈ ಕವಿಯ  ಸಂಕಲನವನ್ನು  ಬಹುಕಾಲ ನಿಲ್ಲಿಸುತ್ತವೆ. ಜಾತಿ ಇಲ್ಲವಾಗಿದೆ ಎಂಬ‌ ಮಾತನ್ನು‌ ಕೆಲವರು ವೇದಿಕೆಯ‌ ಮೇಲಿಂದ ಮುತ್ತಿನಂತೆ ಉದುರಿಸುತ್ತಾರೆ.ಆದರೆ ನಿಜವಾಗಿಯೂ ಜಾತಿ ವ್ಯವಸ್ತೆ ಹೋಗಿದೆಯೇ? ಎಂದು ಪ್ರಶ್ನಿಸುವ ಕವಿ  ನಿಜಕ್ಕೂ ಜಾತಿ ವ್ಯವಸ್ಥೆ ಇಲ್ಲವಾಗಿದೆ ಎಂಬುದನ್ನು ಒಪ್ಪುವದಿಲ್ಲ‌. ಏಕೆಂದರೆ‌ ಇಂದು‌ ಬದುಕಿನ ರೀತಿ ಅದಕ್ಕೆ ಪೂರಕವಾಗಿಲ್ಲ.ನಾವು ಜಾತಿ ಎಂಬ ಪಿಡುಗನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡೇ ಬಂದಿದ್ದೇವೆ ಈ ಸತ್ಯವನ್ನು ಅವರ ಶಾಯಿರಿ ಸಾರುತ್ತದೆ. ಜಾತಿ ಇಲ್ಲದಂಗಾತು ಅಂತ ಕೇಳಿಎದಿಯಾಗಿನ ಬೆಂಕಿ ದೀಪ  ಆತುದೀಪ ಬೆಳ ಚಲ್ಲುದರೊಳಗಹುಟ್ಟಿದ ಈ ಜಾತಿ ಸಾಯೊವಲ್ಕದುಅಂತ ಮೈಯೆಲ್ಲ ಧಗಧಗ ಹೊತ್ತಿ ಉರಿತುಕಡೆಯ ಸಾಲೇ ಸತ್ಯವಾಗಿ ಪ್ರಾಮಾಣಿಕ‌ ಪ್ರಜ್ಞಾವಂತರ ಎದೆ ಹೊತ್ತಿ ಉರಿಯುವ ಸ್ಥಿತಿ ಬಂದಿರುವದನ್ನು ಕವಿತೆ ಸಾರುತ್ತದೆ. ಇಡೀ ಸಂಕಲನವೇ ಬೆಳಕು‌ ಕತ್ತಲೆಯ ನಡುವಿನ ಜಿಜ್ಞಾಸೆ ನಡೆಸುತ್ತದೆ.ಇಲ್ಲಿ ಬೆಳಕು ಮತ್ತು ಕತ್ತಲೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತವೆ..ಆದರೆ ಕವಿ ಯಾವುದೆ ಒಂದರ ಪರ ನಿಲ್ಲುವದಿಲ್ಲ ಕತ್ತಲೆ ಮತ್ತು ಬೆಳಕಿನ ಹಿತವಾದ ಹೊಂದಿಕೊಳ್ಳುವದರಲ್ಲಿಯೆ ನಿಜವಾದ ಬದುಕಿದೆ ಎಂಬುದು‌ ಕವಿಗೆ ಗೊತ್ತಿದೆ. ಕತ್ತಲೆ ಬೆಳಕು ಇಲ್ಲಾಂದ್ರೆಬದುಕು ಇರಾಂಗಿಲ್ಲ ಎಂದು ಒಂದು ಶಾಯಿರಿ ಹೇಳಿದರೆ ಇನ್ನೊಂದು ಶಾಯಿರಿ ಬೆಳಕಿಗೆ ಅದರ ಕೂಡಹಿಟ್ಟಿದ ಕತ್ತಲುಶಡ್ಡು ಹೊಡದೈತಿನನ್ನ‌ ಜನಕ ನೀನ ..ನೀನ ಅಂತಎನ್ನುತ್ತದೆ .ಆದರೆ ಇಲ್ಲಿ ಬೆಳಕು ಮತ್ತು‌ ಕತ್ತಲೆ ಒಂದರ ಕೂಡ ಒಂದು ಹುಟ್ಟಿದರೂ ಅವುಗಳ‌ ನಡುವೆ ಸ್ಪರ್ದೆ ಇರುವದನ್ನು ಹೇಳುವ ಕವಿ ಅವು ತಂದೆ‌ ಮಗನ‌ ಸಂಬಂಧ ಹೊಂದಿದವು ಎನ್ನುವಂತೆ ಚಿತ್ರಿಸುತ್ತಾನೆ.ಅಂದರೆ ಬೆಳಕಿನಲ್ಲಿ ಕತ್ತಲೆ ಹುಟ್ಟಿದೆ ಎನ್ನುವಲ್ಲಿ ಹೊಂದಾಣಿಕೆ ಇರಬೇಕಾಗಿತ್ತು .ಆದರೆ ಶಡ್ಡು ಹೊಡೆದಿದೆ ಎನ್ನುವ ನುಡಿಗಟ್ಟು ಯಾಕೊ ಅಷ್ಟು ಸರಿಯಲ್ಲವೇನೋ ಎಂದು ಅನಿಸುತ್ತದೆ. ಇದು ಜಿಜ್ಞಾಸೆಯ ವಿಷಯ. ಕವಿ ಲೌಕಿಕದಲ್ಲಿ  ಚಿಂತಿಸುತ್ತಲೇ ಅಲೌಕಿಕದತ್ತ ,ಅನುಭವ ದಿಂದ ಅನುಭಾವದತ್ತ ಸಾಗುವ‌ ಪರಿ ಅನನ್ಯವಾದುದು.ಉದಾಹರಣೆಗೆ ಆಕಿ ಎರಡಕ್ಕ ಕರಿತಾಳಬಲದಿಂದ ಆವರಿಸಿಕೊಳ್ಳಾಕಆಕಿ ಕರದಾಗೆಲ್ಲಈ ಬಲಾ ಎಡಕಾಡತಾವುಇವುಗಳದ್ದೂ ಬಿಡದ ಹಟಸಾಮಾನ್ಯರಿಗೆ ತಿಳಿಯದ ಗಂಟು  ಇಲ್ಲಿ ಬಳಸಿದ ನುಡಿಗಟ್ಟುಗಳು ಸಾಮಾನ್ಯ ಬದುಕಿನವೇ ಆದರೆ ಕಡೆಯಲ್ಲಿ ಧ್ವನಿಸುವ ಅರ್ಥ ಮಾತ್ರ ಕೈ ಗೆಟುಕದ್ದು. ಹೀಗೆ‌ ಲೌಕಿಕದ ಈ‌ ಕಾವ್ಯ ಅಲೌಕಿಕದ ಚಿಂತನೆ ಮಾಡುವದು ವಿಶೇಷವಾಗಿದೆ. ಕವಿ ಸಂಕಲನಕ್ಕೆ “ಕತ್ತಲು ಬೆಳಕು” ಎಂಬ ಹೆಸರಿರಿಸಿದ್ದಾರೆ. ಜೀವನವೇ ಕತ್ತಲು ಬೆಳಕಿನ ಸಂಗಮ ಒಂದಾದ‌ ಮೇಲೊಂದು ,ಒಂದರೊಳಗೊಂದು ಸೇರಿಕೊಂಡು ಬದುಕಿಗೆ ಅರ್ಥ ಕಲ್ಪಿಸುವ ಕಾರ್ಯ‌ಮಾಡುತ್ತವೆ. ಅವರಿಗೆ ಅವಳ ಪ್ರೀತಿ ಅಂದರೇನೆ ಬೆಳಕು,ಅವರಡೂ ನೇರೆ ಬೇರೆ ಅಲ್ಲವೇ ಅಲ್ಲ ಅದನ್ನೇ  ಶಾಯಿರಿ ೯೬ ರಲ್ಲಿ ಕತ್ತಲ ಬೆಳಕಿನ ಒಡಕ ಬ್ಯಾಡಈ ಒಂದ ಬದುಕಿಗೆ ಎರಡೂ ಬೇಕಎಂದರೆ೯೫ ರಲ್ಲಿ ಬೆಳಕಿನೊಳಗ ಕತ್ತಲುಕತ್ತಲಿನೊಳಗ ಬೆಳಕುತಮ್ಮ ತಮ್ಮ ಹೊಳಪು ತೋರಸ್ತಾವಎನ್ನುವ ಸಾಲಿವೆ . ಶಾಹಿರಿ ೮೮ ರಲ್ಲಿ ಬೆಳಕು ಬರಿ‌ಬೆಳಕಲ್ಲಕತ್ತಲು ಹೊತ್ತು ತರೋ ವ್ಯಾಪಾರಿಕತ್ತಲು ಬರಿ‌ಕತ್ತಲಲ್ಲಬೆಳಕಿಗೆ ಬೆಲೆ ತರೋ ಸರಕು  ಎನ್ನುತ್ತಾರೆ. ಇಂಥ ಸಾಲುಗಳು‌ ಇಲ್ಲಿ‌ ಮತ್ತೆ ಮತ್ತೆ ಎದುರಾಗುತ್ತವೆ.ಕವಿಗೆ ಅವರ ಪ್ರೀತಿ‌ ಕೂಡ ಕತ್ತಲ ಬೆಳಕಿನ ಆಟವೇ..ಬೆಳಕು ಕತ್ತಲಿನೊಡನೆ ತಮ್ಮ ಪ್ರೇಮ ಸಮೀಕರಣ ಮಾಡುವ ಕವಿ ಬೆಳಕ ನೋಡಿಕತ್ತಲು ಯಾವತ್ತೂ ಸಿಟ್ಟಾಗಿಲ್ಲಕತ್ತಲ ನೋಡಿಬೆಳಕು ಯಾವತ್ತೂ ಸಿಟ್ಟ ಮಾಡಿಕೊಂಡಿಲ್ಲನಾನು-ನೀನು ಹೀಂಗ ಇದ್ದರನಮ್ಮ ಪ್ರೀತಿ ಹಾಲು ಬೆಲ್ಲ ಎಂದು ಎರಡಕ್ಕೂ ಹೊಂದಾಣಿಕೆ ಇರುವದನ್ನು ಸಾರುತ್ತಾರೆ.ಈ  ಸಾಲು ಬರೆದ ಕವಿಯೆ ಇನ್ನೊಂದು ಕಡೆ ಕತ್ತಲೆ ಬೆಳಕಿನ ನಡುವೆ ಸವತಿ ಮಾತ್ಸರ್ಯ ಇದೆ ಎನ್ನುವದು ಅಷ್ಟೇನೂ ಹಿತಕರವಾಗಿ ಕಾಣಿಸುವದಿಲ್ಲ  (ಶಾಯಿರಿ ೮೯) ಎನ್ನಿಸದೆ ಇರದು. ಇಲ್ಲಿನ ಒಂದೆರಡು ಶಾಯಿರಿ ಗಳು ಬಹಳ ವಿಶೇಷ ವಸ್ತುವನ್ನು ಒಳಗೊಂಡಿವೆ ಎನಿಸುತ್ತದೆ.ಅವೆಂದರೆ ಕನ್ನಡದ ಸ್ವಾಮಿಜಿಗಳೆಂದೇ ಹೆಸರಾದ ಲಿಂ.ತೋಟದ ಸಿದ್ದಲಿಂಗ ಮಹಾಸ್ವಾಮಿಗಳವರ ಕುರಿತಾದ ಶಾಯಿರಿಗಳು. ಒಂದು ಶಾಯಿರಿ ಅವರು “ನಡೆದದ್ದೆಲ್ಲಾ ಬೆಳಕು”  ಎಂದು ಅವರನ್ನು ಬಹಳ ಸುಂದರವಾಗಿ‌ ಬಣ್ಣಿಸಿದೆ.ಶಾಯಿರಿ ಎಂದರೆ ಬಹುತೇಕ ಗಂಡು ಹೆಣ್ಣಿನ ನಡುವಿನ‌ ಪ್ರೇಮದ ಮಧುರ ಭಾವಗಳನ್ನೊ ,ಅವರು ಅಗಲಿದ ವಿರಹದ ನೋವನ್ನೋ ವ್ಯಕ್ತ‌ ಮಾಡುವ ಕಾವ್ಯ ಎಂಬುದು ಸಾಮಾನ್ಯ ಸಂಗತಿ ಯಾಗಿತ್ತು. ಆದರೆ ಡಾ. ಬಮ್ಮನಕಟ್ಟಿಯವರ  ಶಾಯಿರಿ ಕತ್ತಲೆ ಬೆಳಕಿನ ಸಂದರ್ಭವನ್ನು ಪೂಜ್ಯರ ವ್ಯಕ್ತಿತ್ವ ಕಟ್ಟಿಕೊಡಲು ಬಳಸಿಕೊಂಡಿರುವದು  ವಿಶೇಷವಾಗಿದೆ. ದೀಪದ ಬುಡಕ ಕತ್ತಲುದೀಪದ ಬುಡದಾಗ‌ ಕತ್ತಲು ಅನ್ನೋದುಅಜ್ಜಾ ನಿನ್ನ‌ ನೋಡಿದಾಗsಮರೆತುs ಹೋಗಿತ್ತುಆದರ ಅಜ್ಜಾ ನೀ ಹೋದ ಮ್ಯಾಲೆಈ ಕತ್ತಲು ಮತ್ ಮತ್ ಕಾಡೇತಿ ಬೆಳಕೇ ತಾವಾಗಿದ್ದ  ಪೂಜ್ಯರು ಹೋದ ಮೇಲೆ ಇಲ್ಲೀಗ ಕತ್ತಲು ಮತ್ತೆ ಮತ್ತೆ ಕಾಡುವದು ಕವಿಯನ್ನು

ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ Read Post »

ಕಾವ್ಯಯಾನ

ವಿಮಲಾರುಣ ಪಡ್ಡoಬೈಲು,”ಗೀಚಿನಿಂದರಳಿದ ಗೀತೆ”

ಕಾವ್ಯ ಸಂಗಾತಿ ವಿಮಲಾರುಣ ಪಡ್ಡಂಬೈಲು ಗೀಚಿನಿಂದರಳಿದ ಗೀತೆ ಆ ಪುಟ್ಟ ಕೈಯಲಿ  ಅಂದುತೋಚಿ ಗೀಚಿದ ಸಾಲುಬಿಳಿಹಾಳೆ ಮೇಲೇರಿ ಕವಿತೆಯಾಗಲುಮನದಿ ಮೂಡಿದ  ಆ ಭಾವ ಬಲು ಹಿತ. ಸೂರ್ಯ-ಚಂದಿರ-ಚುಕ್ಕಿ-ತಾರೆಗಳಪಿಸುಮಾತು ಎದೆಗಿಳಿಯಲುನನ್ನ  ದಿಟ್ಟಿಸಿ  ನಕ್ಕಿದ್ದವುನೈಜ ಭಾವದ ನನ್ನ ತಾಳ-ಮೇಳಕೂ ವರ್ಣ ಕುಹಕವೋ ಮೋಹಕವೋ ತಿಳಿಯದಾದೆ!ಆದರೂ ಕವಿತೆ ಗಾನವಾದಾಗ  ನಾ ಸಂಭ್ರಮಿಸಿದ ಆ ದಿನಗಳೆಷ್ಟು ಚೆಂದ.. ಹಿತ್ತಲಲ್ಲರಳಿದ ಜಾಜಿ ಸೇವಂತಿಗೆ ಗುಲಾಬಿಕಂಪು ಸೂಸುತ್ತ ಹನಿಯ ಬಿಗಿದಪ್ಪಿರಲುಮೌನಗರ್ಭದಿ ಕೂಸು ಮಿಸುಕಾಡಿದಂತಾಯ್ತುಖಾಲಿ ಕಾಗದದಿ ಜೀವ ತಳೆದಾಯ್ತುನಾನೋ ಅದರ ಬೆನ್ನು ತಟ್ಟಿದ್ದೆಅಥವಾ ಅದು ನನ್ನೊಳಗಿನ ಸ್ಪಂದನೆಗೆಸ್ಪರ್ಶಸಿತ್ತೋ?ಒಂದಂತೂ ದಿಟಅರಿಯದ ಆ ಮುಗ್ಧ ಮಹಾದಾನಂದ. ಚಿಮಣಿ ದೀಪ ಸುತ್ತ ಸೆಳಕು ಚೆಲ್ಲಿರಲುಉರಿವ ಸೌದೆಯ  ಉರಿಯಲಿಅಮ್ಮನ  ಬೆವರು  ಬಸಿದಿರಲುತುತ್ತು ಉಣ್ಣಿಸಿದ ಖುಷಿಗೆಆತ್ಮತೃಪ್ತಿಯ ಎರಕ ಹೊಯ್ದನಾ ಬರೆದ ಎರಡು ಸಾಲುಅವಳಿಗದೆಷ್ಟು ಸಂತೃಪ್ತಿ!ಹಿಗ್ಗಿತ್ತು ನನ್ನ ಹೃದಯ. ಅಪ್ಪನ ಹೆಗಲೇರಿ ನೋಡಿದ ಜಾತ್ರೆಅಕ್ಕತಂಗಿಯರೊಡಗೂಡಿ ಆಡಿದ ಆಟಮರದ ನೆರಳಲ್ಲಿ ಬಿತ್ತಿದ ಬೀಜಗಳುಬರಹದ ಬೇರಾಗಿ ಅವು ಕವಿತೆಯಾಗಿಬೀಸುವ ಕುಳಿರ್ಗಾಳಿ ನೀ ಕವಿಯೆಂದುಪಿಸುಗುಟ್ಟಿದ ಆ ದಿನವೆಷ್ಟು ಚೆಂದ … ಅಂದು ಗೀಚಿದ್ದೆ ಗೀತೆ ಅದೆಂಥಾ ಆನಂದಇಂದು ಭಾವಗಳ ಹೆಣೆದಷ್ಟು ನಿರ್ಭಾವಜೋಂಪು ನಿದಿರೆಯಲಿ ಮುದುಡಿದ ಪದಗಳಭಾವವಾಗಿ ನನ್ನತ್ತ ಹರಿಯ ಬಿಡು ಕವಿತೆನಿನ್ನಾಗ ಜಗ ಮೆಚ್ಚುವುದು ಸುನೀತೆ. ವಿಮಲಾರುಣ ಪಡ್ಡoಬೈಲು

ವಿಮಲಾರುಣ ಪಡ್ಡoಬೈಲು,”ಗೀಚಿನಿಂದರಳಿದ ಗೀತೆ” Read Post »

ಇತರೆ

“ಅಲ್ಲಮ ಪ್ರಭು ವಚನ ವಿಶ್ಲೇಷಣೆ” ವಿಜಯಲಕ್ಷ್ಮಿ ಹಂಗರಗಿ

ವಚನ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಅಲ್ಲಮ ಪ್ರಭು ವಚನ ವಿಶ್ಲೇಷಣೆ” ಸತಿಯ ಕಂಡು ಬೃತಿಯಾದ ಬಸವಣ್ಣ ಸತಿಯ ಕಂಡು ಬೃತಿಯಾದ ಬಸವಣ್ಣ ಸತಿಯ ಕಂಡು ಬೃತಿಯಾದ ಬಸವಣ್ಣಬೃತಿಯಾದ ಬ್ರಹ್ಮಚಾರಿಯಾದ ಬಸವಣ್ಣಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯ ಬಸವಣ್ಣಗೃಹೇಶ್ವರ ನಿಮ್ಮಲ್ಲಿ ಬಾಲ ಬ್ರಹ್ಮಚಾರಿಯಾಗಿ ಬಸವಣ್ಣ ಒಬ್ಬನೇ-ಅಲ್ಲಮ ಪ್ರಭುಗಳು. ಪ್ರಾಪಂಚಿಕ ಬದುಕಿನ ವಿಷಯಾದಿಗಳ, ಆಮಿಷ, ಆಸೆ ಆಕರ್ಷಣೆಗಳ ಕಂಡು ಬಸವಣ್ಣ ವೃತ್ತಿಯಾದನು. ಅವುಗಳನ್ನು ಹೊರತುಪಡಿಸಿ ಶುದ್ಧನಾದ ಆಚಾರವಂತ ಗುಣವಂತ ವೃತವನ್ನು ಹಿಡಿದನು. ಕಾಮ ಕ್ರೋಧ ಮೋಹ ಲೋಭ ಮದ ಮತ್ಸರ ಮುಂತಾದ ಅರಿ ಷಡ್ ವರ್ಗಗಳ ಬೆಂಕಿಗೆ ಸಿಲುಕದೆ ತನ್ನ ನಿಯಮ   ವೃತವನ್ನು ಆಚರಿಸಲು ಸತಿಯೇನೆಂಬ ವ್ಯಾಮೋಹದಿಂದ ದೂರವಿರಲು ಬೃತೀಯಾದ (ವೃತಿ) ಬಸವಣ್ಣ.ಬೃತಿಯಾದ ಬ್ರಹ್ಮಚಾರಿಯಾದ ಬಸವಣ್ಣವೃತ್ತಿಯಾದ ಬಸವಣ್ಣ ಬ್ರಹ್ಮಚಾರಿಯಾಗಿ ಇಂತಹ ಸಂಸಾರಿಕ ಮೋಹಕ್ಕೆ ಸಿಲುಕದೆ ಭವ ಭವದಲ್ಲಿ ಬೆಂದು ಬಳಲಿ ಮುಕ್ತಿ ಕಾಣದೆ ಪರದಾಡುವದಕ್ಕಿಂತ,ಪ್ರಾಪಂಚಿಕ ಬದುಕಿನಲ್ಲಿ ಪಾರಮಾರ್ಥಿಕ ದೀಕ್ಷೆ ಪಡೆದ ಬಸವಣ್ಣ ಜ್ಞಾನಮಾರ್ಗದಲ್ಲಿ ನಡೆದನು. ಬ್ರಹ್ಮಚಾರಿ ಎನ್ನುವುದು ಕೇವಲ ಸನ್ಯಾಸತ್ವಕ್ಕೆ ಸೀಮಿತ ಪದವಲ್ಲ. ಸೃಷ್ಟಿ ಸ್ಥಿತಿ ಲಯದ ಜೊತೆಗೆ ಕಾಯ ಮನಸ್ಸು ಆತ್ಮಗಳ ನಿರಂತರ ಮಿಲನಗಳ ಶೋಧನೆಯ ಬ್ರಹ್ಮಚಾರಿತನ. ಹಾಗೆ ವ್ರತವ ಹಿಡಿದು ಬ್ರಹ್ಮಚಾರಿಯಾದ ಬಸವಣ್ಣ.ಬ್ರಹ್ಮಚಾರಿಯಾಗಿ ಭವಗೆಟ್ಟಣಯ್ಯಾ ಬಸವಣ್ಣಅಪೂರ್ವ ಬ್ರಹ್ಮಚಾರಿತನ ಸ್ವೀಕರಿಸಿದ ಬಸವಣ್ಣನವರು ಭವದಿಂದ ಮುಕ್ತರಾದರು. ಭವದಲ್ಲಿ ಸಿಲುಕದೆ ಭತ್ತನಾದರು ಬಸವಣ್ಣನು. ತನ್ನ ಭವದ ಪಾಶ ಕಳೆದುಕೊಂಡು ಭಕ್ತಿ ಮಾರ್ಗದಲ್ಲಿ ನಿತ್ಯಮುಕ್ತರಾದರು ಬಸವಣ್ಣ.ಗುಹೇಶ್ವರ ನಿಮ್ಮಲ್ಲಿ ಬಾಲಬ್ರಹ್ಮಚಾರಿ ಯಾದ ಬಸವಣ್ಣ ಒಬ್ಬನೇಬಸವಣ್ಣನವರು ಮದುವೆಯಾಗಿ ಮಂತ್ರಿ ಪದವಿ ಪಡೆದು ಐಶ್ವರ್ಯ ಅಂತಸ್ತು ಇದ್ದರೂ ಅವುಗಳನ್ನು ತ್ಯಜಿಸಿ ಭೃತ್ಯಚಾರದ ಭಕ್ತ ಪದವಿಯಿಂದ ನಿರ್ಲಪ್ತರಾದರು.ಇಂತಹ ಘನ ಮಹಿಮರು ಗುಹೇಶ್ವರ ಲಿಂಗದಲ್ಲಿ ಬಾಲ ಬ್ರಹ್ಮಚಾರಿಯಾಗಿ ಬಸವಣ್ಣ ಒಬ್ಬನೇ. ಹುಟ್ಟಿನಿಂದ ವಿರಕ್ತ ಭಾವಸಮತೆ ಧ್ಯಾನ ಮುಕ್ತಿಯತ್ತ ಆಸಕ್ತನಾದವರು ಬಸವಣ್ಣನವರು ಬಾಲ ಬ್ರಹ್ಮಚಾರಿ ಹುಟ್ಟು ಬ್ರಹ್ಮಚಾರಿ ಆಗಿ ಬದುಕಿದವರು. ವ್ಯವಸ್ಥೆಯ ಎಲ್ಲ ಬಂಧನಗಳನ್ನು ಸಂಕೋಲೆಗಳನ್ನು ಕಿತ್ತುಹಾಕಿ, ಆಡಂಬರಗಳನ್ನು ಧಿಕ್ಕರಿಸಿ ಮುಕ್ತ ಸಾರ್ವಕಾಲಿಕ ಸಮಾನತೆ ಸಮಾಜ ಕಟ್ಟಲು ಬಾಲ್ಯದಿಂದಲೇ ಸಂಕಲ್ಪ ಮಾಡಿದವರು ಸೃಷ್ಟಿಯಲ್ಲಿ ಬಸ್ವಣ್ಣನೊಬ್ಬರೇ ಎಂದು ಅಲ್ಲಮಪ್ರಭುಗಳು ಬಸವಣ್ಣನವರ ದಿವ್ಯ ವ್ಯಕ್ತಿತ್ವದ ಗುಣ ಗಾನ ಮಾಡುತ್ತಾರೆ. ವಿಜಯಲಕ್ಷ್ಮಿ ಹಂಗರಗಿ

“ಅಲ್ಲಮ ಪ್ರಭು ವಚನ ವಿಶ್ಲೇಷಣೆ” ವಿಜಯಲಕ್ಷ್ಮಿ ಹಂಗರಗಿ Read Post »

ಇತರೆ

“ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ” ಗೊರೂರು ಅನಂತರಾಜು

ಮಾಧ್ಯಮ ಸಂಗಾತಿ ಗೊರೂರು ಅನಂತರಾಜು “ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ” ಗಿಲ್ಲಿ ನಟ ಗೆದ್ದಿದ್ದಾರೆ. ದಡದಪುರದ ಹಳ್ಳಿಯ ರೈತಾಪಿ ಕುಟುಂಬದ ಹುಡುಗ ಗೆಲುವಿನ ದಡ ಸೇರಿದ್ದಾರೆ. ಗಿಲ್ಲಿ ಗೆಲುವನ್ನು ಹಾಗೆ ಮೆಲುಕು ಹಾಕುತ್ತಾ ಹೋದೆ. ಹಲವು ಸಿನಿಮಾ ದೃಶ್ಯಗಳು ನೆನಪಾದವು. ಸಿನಿಮಾ ಕಥೆಗೂ ಬಾಸ್ ಬಾಸ್ ಶೋಗೂ ವ್ಯತ್ಯಾಸ ಇದೆ. ಅಂತೆಯೇ ಸಾಮ್ಯತೆಯೂ ಇದೆ. ಆದರೂ ಟಿವಿ ವೀಕ್ಷಕರಾದ ನಮಗೆ ಎರಡೂ ಒಂದೇ. ಸಿನಿಮಾದಲ್ಲಿ ಕಟ್ ಅಂಡ್ ಆಕ್ಷನ್ ಇರುತ್ತದೆ. ಇಲ್ಲಿ ಇರುವುದಿಲ್ಲ ಅಷ್ಟೇ. ನಮ್ಮ ಬಾಲ್ಯ ಜೀವನದಲ್ಲಿ ಟಿವಿ ಇರಲಿಲ್ಲ. ಆಗೆಲ್ಲಾ ನಮಗೆ ಮನರಂಜನೆ ನೀಡುತ್ತಿದ್ದಿದ್ದು ಸಿನಿಮಾಗಳೇ. ಗಿಲ್ಲಿಯಂತೆ ಸಿನಿಮಾ ನೋಡುವ ಚಟಕ್ಕೆ ಬಿದ್ದು ಓದಿನಲ್ಲಿ ಹಿಂದೆ ಬಿದ್ದು ಜಸ್ಟ್ ಪಾಸ್ ಸ್ಟೂಡೆಂಟ್‌ಗಳು ನಾವು. ಸಿನಿಮಾವೊಂದರಲ್ಲಿ ಪ್ರೇಮಕತೆಯನ್ನು ಕೇಂದ್ರವಾಗಿಸಿ ಪೋಷಕ ಪಾತ್ರಗಳಿಂದ ಸಾಂಸರಿಕ ಕಥೆಯನ್ನು ಹೆಣೆಯಲಾಗುತ್ತ ಬಂದಿರುವುದನ್ನು ಕಾಣಬಹುದು. ಒಬ್ಬ ಹೀರೋನನ್ನು ಸೃಷ್ಟಿಸುವವಳು ಹೀರೋಯಿನ್. ಪ್ರೇಮಕಾವ್ಯದ ಹಾಡುಗಳು, ಮರ ಸುತ್ತವ ಪ್ರೇಮಿಗಳು, ಇವರ ಹಾಡು ನೃತ್ಯದ ದೃಶ್ಯಗಳಿಗೆ ಹಿನ್ನಲೆಯಲ್ಲಿ ಪ್ರಕೃತಿ ಸಿರಿಯ ಸೊಬಗನ್ನು ಸೆರೆ ಹಿಡಿಯುವುದು ಸಿನಿಮಾದ ಒಂದು ಭಾಗ. ಇಲ್ಲಿ ನಾವು ಪುಟ್ಟಣ ಕಣಗಾಲ್‌ರನ್ನು ನೆನೆಯಲೇ ಬೇಕು. ಒಳ್ಳೆಯ ಹೀರೋ ಎನಿಸಿಕೊಳ್ಳಬೇಕಿದ್ದರೆ ಅವನೆದರು ವಿಲನ್ ಇಲ್ಲವಾದರೇ ಹೀರೋ ಜೀರೋ ಹೌದಷ್ಟೇ. ಇದಷ್ಟೇ ಆದರೆ ಸಿನಿಮಾ ರಂಜಿಸುವುದೇ..? ಇಲ್ಲಾ ಅಲ್ಲೊಬ್ಬ ಗಿಲ್ಲಿ ನಟನಂತಹ ಹಾಸ್ಯ ನಟ ಇರಬೇಕು. ಈ ಫಾರ್ಮುಲಾಗಳಲ್ಲೇ ಸಿನಿಮಾ ರೀಲು ಸುತ್ತಿಕೊಂಡು ಬಂದಿವೆ. ಇಂತಹ ಫಾರ್ಮುಲಾಗಳು ಬಿಗ್ ಬಾಸ್‌ನಲ್ಲಿ ಗೋಚರಿಸುತ್ತವೆ. ಇಲ್ಲಿಯ ಲವ್ ತರಹದ ಸ್ಟೋರಿ ರೆಡಿಮೇಡ್ ಅಗಿರಲಿಲ್ಲಾ. ಆದರೂ ಜನರಿಗೆ ಇಷ್ಟವಾಯ್ತು. ರಾಜಕುಮಾರ್ ಭಾರತಿ ಅಭಿನಯದ ಬಂಗಾರದ ಮನುಷ್ಯ ಭಲೆ ಜೋಡಿ ಸಿನಿಮಾ ನೋಡಿದಂತಾಯಿತು. ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ಜಗಳಗಂಟಿ ಮಂಜುಳ ಮತ್ತು ರಾಜಕುಮಾರ್ ನಟನೆಯನ್ನು ನೆನಪಿಸಿದ್ದು ಗಿಲ್ಲಿನಟ ಅಶ್ವಿನಿಗೌಡರ ಜಗಳದ ಜುಗಲ್‌ಬಂದಿ. ಗಿಲ್ಲಿ ರಘು ಜೋಡಿ ಸಾಧು ಕೋಕಿಲ ದೊಡ್ಡಣ್ಣರ ಹಾಸ್ಯ ಜೋಡಿ ಎನಿಸಿತು. ಇನ್ನೂ ಮಕ್ಕಳಿಗೆ ಟಾಮ್ ಅಂಡ್ ಜರ‍್ರಿ ಕಾರ್ಟೂನ್ ಫಿಲಂ ನೋಡಿದಷ್ಟೇ ಖುಷಿ. ಗಿಲ್ಲಿ ಎಂಬ ಎರಡಕ್ಷರದ ಹೆಸರು ಮಕ್ಕಳ ನಾಲಿಗೆಯಲ್ಲಿ ನಲಿಯಿತು. ರಕ್ಷಿತಾಶೆಟ್ಟಿ ಗಿಲ್ಲಿ ನಡುವಿನ ಬಾಂಧವ್ಯ ಸಿನಿಮಾ ಕಥೆಯ ಅಣ್ಣ ತಂಗಿಯರಂತೆ ಗೋಚರಿಸಿತು. ರಾಜಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾದಲ್ಲಿ ಜಡೆಯಂತೆ ಕೂದಲು ಬಿಟ್ಟ ಮುತ್ತಣ್ಣನನ್ನು ಊರು ಬಿಟ್ಟು ಓಡಿಸಲಾಗುತ್ತಿದೆ. ಮುತ್ತಣ್ಣ ಬೆಂಗಳೂರಿಗೆ ಬಂದು ಮೇಯರ್ ಆದಂತೆ ಗಿಲ್ಲಿ ವಿನರ್ ಆಗಿದ್ದಾರೆ. ಅಲ್ಲಿ ಭಾರತಿ ಮುತ್ತಣ್ಣನ ಜಡೆ ಕಟ್ ಮಾಡಿದರೆ ಇಲ್ಲಿ ಕಾವ್ಯ ಶೈವ ಗಿಲ್ಲಿಗೆ ತಲೆ ಬಾಚಿಕೊಳ್ಳಲು ಬಾಚಣಿಕೆ ಪ್ರಸೆಂಟ್ ಮಾಡುತ್ತಾರೆ. ಆದರೂ ತಲೆ ಬಾಚಿಕೊಳ್ಳದೇ ಇದ್ದಾಗಲೇ ಗಿಲ್ಲಿ ಚೆನ್ನಾಗಿ ಕಾಣಿಸುತ್ತಿದ್ದರು ಎಂದಿತು ಒಂದು ಹುಡುಗಿ. ಆಗಿನ ವಿಲನ್ ನಾಗಪ್ಪನಂತೆ ವೀಕ್ಷಕರಿಗೆ ಗೋಚರಿಸಿದ್ದು ಧ್ರುವಂತ್. ಬಂಗಾರದ ಪಂಜರ ಸಿನಿಮಾದಲ್ಲಿ ಕುರಿ ಕಾಡು ಹಳ್ಳಿಯ ಬದುಕಿನೊಂದಿಗೆ ಹೊಂದಿಕೊಂಡ ಪಾತ್ರ ನಗರಕ್ಕೆ ಬಂದು ಎಷ್ಟೇ ಶ್ರೀಮಂತಿಕೆ ಐಷರಾಮಿ ಬದುಕು ಇದ್ದರೂ ಹೊಂದಿಕೊಳ್ಳಲಾಗದೇ ಹಳ್ಳಿಯ ಬದುಕೇ ನನಗಿಷ್ಟ ಎಂದು ಒದ್ದಾಡುತ್ತದೆ. ಬಂಗಾರದ ಪಂಜರದಲ್ಲಿ ಕೂಡಿ ಹಾಕಿದಂತೆ ಬಿಗ್ ಬಾಸ್ ಮನೆಯಲ್ಲೂ ಕೂಡಿ ಹಾಕಿ ಒಂದಿಷ್ಟು ಟಾಸ್ಕ್ ನೀಡಿ ಉಳಿದಂತೆ ಅಲ್ಲಿ ನಡೆಯುವ ಗಲಾಟೆ ಗದ್ದಲ, ವಿರಸ ಸರಸ ಸಲ್ಲಾಪ ದೃಶ್ಯಗಳನ್ನೇ ಹೆಕ್ಕಿ ತೆಗೆದು ತೋರಿಸಲಾಗುತ್ತದೆ. ನಾವಾದರೂ ಅಷ್ಟೇ ಒಂದು ಒಳ್ಳೆಯ ಭಾಷಣ ಇದೆ ಕೇಳಲು ಬನ್ನಿ ಎಂದರೆ ಬರುವರೇ ? ಅದೇ ಎಲ್ಲಾದರೂ ಜಗಳ ನಡೆಯುತ್ತಿರಲಿ ಅದನ್ನು ನಿಂತು ನೋಡುವವರೇ ಹೆಚ್ಚು. ಜಗಳ ಮನುಷ್ಯನನ್ನು ಕುತೂಹಲದಿಂದ ಆಕರ್ಷಿಸುವುದು ಇದಕ್ಕೆ ಕಾರಣ. ಹಳ್ಳಿಯ ಅರಳಿಕಟ್ಟೆಯಲ್ಲಿ ಊರಿನ ಜಗಳ ವಿಷಯ ಚರ್ಚೆಗೆ ಬರುವುದು ಸರ್ವೆ ಸಾಮಾನ್ಯ. ಸೀರಿಯಸ್ ಆದ ಜಗಳದ ವಿಷಯವನ್ನು ವಿಡಂಬಿಸಿ ಹೇಳುವುದು ಒಂದು ಕಲೆ. ಅದು ಸಮಯಪ್ರಜ್ಞೆ. ತಮಾಷೆಯಾಗಿ ಮಾತನಾಡುವ ವ್ಯಕ್ತಿಯ ಸುತ್ತಾ ಜನ ಸೇರಿ ನಗುವುದು ಸಹಜವೇ. ಮನೆ ಜಗುಲಿಯಲ್ಲಿ ಹೆಂಗಸರು ಅವರಿವರ ಮನೆ ವಿಷಯ ಮಾತನಾಡಿಕೊಳ್ಳುತ್ತಾ ಅವರೆಕಾಯಿ ಸುಲಿಯುತ್ತಿರುವುದನ್ನು ನೋಡುವುದಿಲ್ಲವೇ? ಹಿಂದೆ ನಾನೊಂದು ಹನಿಗವನ ಬರೆದಿದ್ದೆ.ನಮ್ಮೂರಿನ ಕೆಲ ಹೆಂಗಸರುಕಟು ವಿಮರ್ಶಕರುದಿನ ಚಾವಡಿಯಲ್ಲಿನೆರೆಮನೆ ಕತೆಯನ್ನುಕಟುವಾಗಿ ವಿಮರ್ಶಿಸುತ್ತಿರುತ್ತಾರೆಹಾಸ್ಯವಾಗಿ ಮಾತನಾಡುವುದು ಒಂದು ಕಲೆಗಾರಿಕೆ. ಇನ್ನೊಬ್ಬರ ನಡೆನುಡಿಯನ್ನು ಅನುಕರಿಸಿ ಅಣಕಿಸಿ ಮಿಮಿಕ್ರಿ ಮಾಡುವುದು ನೋಡಿದ್ದೇವೆ. ಅದು ಒಂದು ಕಲೆ. ಹಾಸ್ಯದ ಒಂದು ಪ್ರಕಾರ. ಇದು ಗಿಲ್ಲಿಯಲ್ಲಿದ್ದ ಒಂದು ಗುಣ ಲಕ್ಷಣ. ಅವರ ಮುಖವಾಡವಿಲ್ಲದ ಗ್ರಾಮೀಣ ಭಾಷೆ ನಡೆನುಡಿ ಗ್ರಾಮೀಣ ಜನರಿಗೆ ಇಷ್ಟವಾಯಿತು. ಪ್ರಾರಂಭದಲ್ಲಿ ನಾನು ಬಿಗ್ ಬಾಸ್ ನೋಡದೇ ಮಲಗಿಬಿಡುತ್ತದೆ. ಒಂಬತ್ತೂವರೆಗೆ ಮಲಗುವುದು ನನ್ನ ದಿನಚರಿ. ಐದಾರು ವಾರಗಳ ನಂತರ ನಿಧಾನವಾಗಿ ನೋಡುತ್ತಾ ಕಡೆಕಡೆಗೆ ಪೂರ್ತಿ ನೋಡಿಯೇ ಮಲಗುತ್ತಿದ್ದೆ. ಗಿಲ್ಲಿಯ ಸುತ್ತಲೇ ಕ್ಯಾಮರಗಳು ಗಿರಕಿ ಹೊಡೆಯಲು ಗಿಲ್ಲಿನಟನ ಹಾಸ್ಯಪ್ರಜ್ಞೆಗೆ ಆಕರ್ಷಿತನಾದೆ. ಸಾಮಾಜಿಕ ಜಾಲ ತಾಣಗಳಲ್ಲಿ ಗಿಲ್ಲಿ ಗೆಲ್ಲುವ ಮಾತು ಜೋರಾಗಿ ಅವರ ಹಿಂದಿನ ಕಾಮಿಡಿ ಶೋ ಶಾರ್ಟ್ ಫಿಲಂಗಳನ್ನು ನೋಡಿದೆ. ಎಲ್ಲೋ ಒಂದು ಕಡೆ ನರಸಿಂಹರಾಜು, ಮಿಸ್ಟರ್ ಬೀನ್, ಚಾರ್ಲಿ ಚಾಪ್ಲಿನ್, ಸಾಧು ಕೋಕಿಲರ ಹಾಸ್ಯಾಭಿನಯ ಸ್ಮರಿಸಿ ಅವೆಲ್ಲವೂ ಗಿಲ್ಲಿ ನಟನೆಯಲ್ಲಿ ಗೋಚರಿಸಿದವು. ಒಂದು ಕಾಲದಲ್ಲಿ ನಮ್ಮ ಹಳ್ಳಿಗೆ ತೊಗಲುಗೊಂಬೆ ಮೇಳದವರು ಬಂದು ಮನರಂಜನೆ ನೀಡುತ್ತಿದ್ದರು. ಊರಲ್ಲಿ ಜಾತ್ರೆ ಹಬ್ಬಕ್ಕೆ ಹುಡುಗರು ನಾಟಕ ಕಲಿಯುತ್ತಿದ್ದರು. ಕಲಿಯುವುದಕ್ಕೆ ಮೂರು ತಿಂಗಳು ಊರಲ್ಲಿ ಮನರಂಜನೆ. ನಂತರ ಸಿದ್ಧತೆ ಪ್ರದರ್ಶನದ ಸಂತೋಷದ ಕ್ಷಣಗಳನ್ನು ವರ್ಷವಿಡಿ ನೆನಪಿಸಿಕೊಳ್ಳುತ್ತೇವೆ. ನಾಟಕ ಅಂದು ದೊಡ್ಡ ಮನರಂಜನೆ. ನಾಟಕ ರಂಗದಿಂದಲೇ ಬಂದ ಕಲಾವಿದರು ಸಿನಿಮಾ ರಂಗದಲ್ಲಿ ಪ್ರಸಿದ್ಧರಾದರು. ಆದರೆ ಸಿನಿಮಾವೇ ನಾಟಕಕ್ಕೊ ದೊಡ್ಡ ತೊಡಕಾಯಿತು. ಟಿವಿ ಮನೆಗೆ ಬಂತು. ಬಿಟ್ಟಿ ಸಿನಿಮಾ ಮನೆಯಲ್ಲೇ ನೋಡುವಾಗ ದುಡ್ಡು ಕೊಟ್ಟು ನೋಡಲು ಜನ ಥಿಯೇಟರ್‌ಗೆ ಬರುತ್ತಿಲ್ಲ. ನ್ಯೂಸ್ ಚಾನಲ್‌ಗಳು ಮಹಿಳೆಯರಿಗೆ ಪ್ರಿಯವಾಗದೇ ಧಾರಾವಾಹಿಗೆ ಮೊರೆಹೋದರು. ಧಾರಾವಾಹಿ ಕಲಾವಿದರು ಬಿಗ್‌ಬಾಸ್‌ಗೆ ಬಂದರು. ಇವರಿಗೆ ಪ್ರತಿಸ್ಫರ್ಧಿಗಳಾಗಿ ಮಾತಿನ ಮಲ್ಲರು, ಸಾಮಾಜಿಕ ಜಾಲತಾಣದ ಜಾಣರು, ಗಾಯಕರು ಮಿಕ್ಸಿಂಗ್ ಆದರು. ಉಪ್ಪು, ಕಾರ, ಹುಳಿ, ಬೆಳ್ಳುಳ್ಳಿ ಬೆರೆತು ರುಚಿಯಾದ ಊಟ ಅಡಿಗೆ ಮನೆ ಬೆಳಕಿಗೆ ಬಂತು. ನಲ್ಲಿ ಮೂಳೆ ತಿಂದು ಗಿಲ್ಲಿ ಗೆದ್ದರು. ಜಾಣ ವಿದ್ಯಾರ್ಥಿಯಂತೆ ಯಾರ ತಂಟೆಗೂ ಹೋಗದೆ ಟಾಸ್ಕ್ನಲ್ಲಿ ಫಸ್ಟ್ ಕ್ಲಾಸ್ ಬಂದರೂ ಧನುಷ್ ವೀಕ್ಷಕರ ಹೃದಯ ಗೆಲ್ಲಲು ವಿಫಲರಾದರು. ಗಿಲ್ಲಿ ಗೆಲುವಿಗೆ ಕಾವ್ಯ ಶೈವ, ಅಶ್ವಿನಿಗೌಡ, ರಘು, ರಕ್ಷಿತ ಶೆಟ್ಟ ಮತ್ತು ರಜತ್ ಅವರ ಪಾತ್ರ ಅದು ನೆಗಟಿವ್ ಆಗಿರಲಿ ಪಾಸಿಟಿವ್ ಆಗಿರಲಿ ಪರೋಕ್ಷವಾಗಿ ನೆರವಾಗಿದೆ. ಅದು ಒಂದು ಧಾರವಾಹಿಯಂತೆ, ಸಿನಿಮಾದಂತೆ ಜನರಿಗೆ ಮನರಂಜನೆ ನೀಡಿದೆ. ಮೊದಲೇ ಪರೀಕ್ಷೆಗೆ ಸಿದ್ಧವಾಗಿ ಬಂದಿದ್ದ ಗಿಲ್ಲಿನಟ ಸಂದರ್ಭ ಸನ್ನಿವೇಶಗಳನ್ನು ತಮ್ಮ ಅನುಕೂಲಕ್ಕೆ ಸೂಕ್ತವಾಗಿ ಬಳಸಿಕೊಂಡು ಹಾಸ್ಯ ವಿಡಂಬನೆ ಮಾತಿನಿಂದಲೇ ಜನಮನ ಗೆದ್ದರು. ಗೊರೂರು ಅನಂತರಾಜು,

“ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ” ಗೊರೂರು ಅನಂತರಾಜು Read Post »

You cannot copy content of this page

Scroll to Top