ಅಂಕಣ ಸಂಗಾತಿ
ಧಾರಾವಾಹಿಕಂತು=106
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಪಾರಾಗಿ ಬಂದ ಮಕ್ಕಳು

ತನ್ನನ್ನು ಬಲವಾಗಿ ಹಿಂದಿನಿಂದ ಹಿಡಿದುಕೊಂಡವನು ಯಾರೆಂದು ಅವಳಿಗೆ ಊಹಿಸಲು ಸಾಧ್ಯವಿರಲಿಲ್ಲ. ಈ ದಿನ ತನಗೆ ಆಪತ್ತು ಖಂಡಿತ ಹಾಗಾಗಿ ಹೇಗಾದರೂ ಮಾಡಿ ಇವನಿಂದ ಬಿಡಿಸಿಕೊಳ್ಳಬೇಕು. ಎಂದು ಮನದಲ್ಲೇ ಅಂದುಕೊಂಡು “ಕೃಷ್ಣಾ ನನಗೆ ಶಕ್ತಿ ಕೊಡು” ಎಂದು ಕೇಳಿಕೊಂಡಳು. ಕೈಯಲ್ಲಿ ಪುಸ್ತಕ ಹಾಗೂ ಮಡಚಿಟ್ಟಿದ್ದ ಕೊಡೆ ಇತ್ತು. ಅವಳು ಪುಸ್ತಕವನ್ನು ಎದೆಗಾನಿಸಿಕೊಂಡು ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ವಸ್ತ್ರವನ್ನು ಧರಿಸಿದ್ದರೂ ಶಲ್ಯವನ್ನು ಹೊದ್ದುಕೊಂಡಿದ್ದರೂ ಕ್ಯಾಮರಾ ಕಣ್ಣುಗಳಿಂದ ವಕ್ಷಸ್ಥಳವನ್ನೇ ದಿಟ್ಟಿಸಿ ನೋಡುವ ಲಂಪಟರ ನೋಟಕ್ಕೆ ಬೇಸತ್ತು ಪುಸ್ತಕವನ್ನು ಎದೆಗವಚಿಕೊಂಡು ನಡೆಯುತ್ತಿದ್ದಳು. ತನ್ನನ್ನು ಬಲವಾಗಿ ಹಿಡಿದುಕೊಂಡವನ ಕರಗಳಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಕೈಯಲ್ಲಿದ್ದ ಕೊಡೆಯ ಹಿಡಿಯಿಂದ ಬಲವಾಗಿ ಒತ್ತಿದಳು. ಬಹುಶಃ ಆತನಿಗೆ ಹೊಟ್ಟೆಗೆ ಏನೋ ಚುಚ್ಚಿದಂತ ಅನುಭವ ಆಗಿರಬೇಕು ಹಿಡಿತವನ್ನು ಸ್ವಲ್ಪ ಸಡಿಲಿಸಿದ. ಇದು ಗಮನಕ್ಕೆ ಬಂದ ಕೂಡಲೇ ಆ ಹುಡುಗಿ ಹಿಂತಿರುಗಿ ನೋಡದೆ ಮಡಚಿದ್ದ ಕೊಡೆಯನ್ನು ಹಿಡಿದುಕೊಂಡು ಅದರ ಹಿಡಿಯಿಂದ ಮತ್ತೊಮ್ಮೆ ಬಲವಾಗಿ ಹೊಟ್ಟೆಗೆ ಗುದ್ದಿದಳು. ಬಹುಶಃ ಅವಳನ್ನು ಹಿಡಿದುಕೊಂಡಾತ ಹೆಚ್ಚು ಎತ್ತರವಿಲ್ಲದವನಿದ್ದಿರಬೇಕು. ಅವನ ಮರ್ಮಾಂಗಕ್ಕೆ ಕೊಡೆಯ ಹಿಡಿಯ ಹೊಡೆತ ಬಲವಾಗಿ ಬಿದ್ದುದರಿಂದ ಅಮ್ಮಾ ಎಂದು ಜೋರಾಗಿ ಕಿರುಚಿಕೊಂಡು ಆತ ಅವಳನ್ನು ಬಿಟ್ಟು ನೆಲದ ಮೇಲೆ ದೊಪ್ಪನೆ ಕುಳಿತುಬಿಟ್ಟ.
ಆತನ ಸ್ನೇಹಿತ …”ಏನಾಯ್ತೋ ನಿನಗೆ”….ಎನ್ನುತ್ತಾ ಆತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಟಾರ್ಚ್ ಕೈಯಿಂದ ಕೆಳಗೆ ಬಿದ್ದ ಸದ್ದು ಕೇಳಿಸಿತು. ಕೂಡಲೇ ಆ ಹುಡುಗಿ ಜಾಗ್ರತಳಾಗಿ ಪುಸ್ತಕವನ್ನೆಲ್ಲ ಅಲ್ಲಿ ಬಿಸಾಡಿ ತನ್ನ ತಂಗಿಯ ಕೈ ಹಿಡಿದು ಮಾತಾಡದೆ ಎಳೆದುಕೊಂಡು ನೆಲಗೇಟಿನ ಗ್ರಿಲ್ ಮೇಲೆ ಹೆಜ್ಜೆ ಇಟ್ಟು ವೇಗವಾಗಿ ಓಡಲು ಶುರು ಮಾಡಿದಳು. ತಂಗಿಯು ತನ್ನ ತೋಳಲ್ಲಿದ್ದ ಪುಸ್ತಕದ ಚೀಲವನ್ನು ಕೆಳಗೆ ಬಿಸಾಡಿ ಅಕ್ಕನೊಂದಿಗೆ ಓಡಿದಳು. ಎಲ್ಲಿ ತಮ್ಮ ಹಿಂದೆ ಅವರು ಬರುತ್ತಿವರೋ ಎಂದು ಹೆದರುತ್ತ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಓಡುವ ಪ್ರಯತ್ನವನ್ನು ಮಾಡಿದರು. ಮಣ್ಣಿನ ಕಚ್ಚಾ ದಾರಿಯಲ್ಲಿ ಅಲ್ಲಲ್ಲಿ ಕಲ್ಲುಗಳು ಎದ್ದಿದ್ದವು. ಜೊತೆಗೆ ಕತ್ತಲು ಬೇರೆ, ಓಡುತ್ತಿರುವಾಗ ತಂಗಿ ಎಡವಿ ಬಿದ್ದಳು. ಬಿದ್ದ ತಂಗಿಯನ್ನು ಹಿಡಿದೆತ್ತಿ….”ಬಾ ಆದಷ್ಟು ಬೇಗ ಹೋಗೋಣ ….ಇಲ್ಲದಿದ್ದರೆ ನಮಗೆ ಆಪತ್ತು ಖಂಡಿತ”… ಎಂದಾಗ ಮಂಡಿ ತರಚಿ ಹೆಬ್ಬೆರಳು ಕೂಡ ನೋಯುತ್ತಿದ್ದರೂ ಅಕ್ಕನ ಮಾತಿಗೆ ಸರಿ ಎಂದು ಜೊತೆಗೆ ತಾನೂ ಓಡಿದಳು. ಇಳಿಜಾರು ದಾಟಿದ ನಂತರ ತಿರುವಿನ ಪಕ್ಕದಲ್ಲಿಯೇ ರೈಟರ್ ಮನೆ ಇತ್ತು. ಅಕ್ಕ ಓಡುತ್ತಲೇ ಹೋಗಿ ರೈಟರ್ ಮನೆಯ ಬಾಗಿಲನ್ನು ತಟ್ಟಿದಳು…” ಸರ್ ದಯವಿಟ್ಟು ಬಾಗಿಲು ತೆಗೆಯಿರಿ”… ಎಂದು ಜೋರಾಗಿ ಬಾಗಿಲನ್ನು ಬಡಿದಳು. ಆಗತಾನೆ ರಾತ್ರಿಯ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲೆಂದು ಕುಳಿತಿದ್ದ ರೈಟರ್ ಬಾಗಿಲು ಜೋರಾಗಿ ಬಡಿಯುವ ಸದ್ದಿಗೆ ಬೇಗನೆ ಬಂದು ಬಾಗಿಲು ತೆರೆದರು. ನೋಡಿದರೆ ಸುಮತಿಯ ಇಬ್ಬರು ಮಕ್ಕಳೂ ಏದುಸಿರು ಬಿಡುತ್ತಾ ನಿಂತಿದ್ದರು. ಬಹಳ ಹೆದರಿದಂತೆ ಕಂಡರು.
“ಏನಾಯ್ತು ಮಕ್ಕಳೇ?…. ಯಾಕೆ ಹೀಗೆ ಹೆದರುತ್ತಾ ನಿಂತಿರುವಿರಿ?… ಎಂದು ರೈಟರ್ ಕೇಳಿದಾಗ ಹೇಳಲು ಬಾಯಿ ತೆರೆದಳಾದರೂ ಅವಳಿಂದ ಮಾತು ಬರಲಿಲ್ಲ ಬಾಯಿ ಒಣಗಿ ಹೋಗಿತ್ತು. ಅದನ್ನರಿತ ರೈಟರ್ ತನ್ನ ಪತ್ನಿಯನ್ನು ಕೂಗಿ ಸ್ವಲ್ಪ ನೀರು ತೆಗೆದುಕೊಂಡು ಬಾ ಎಂದು ಹೇಳಿದರು. ಒಂದು ಗುಟುಕು ನೀರು ಕುಡಿದ ಹುಡುಗಿ ನಡುಗುತ್ತಲೇ ಎಲ್ಲಾ ವಿವರವನ್ನು ತಿಳಿಸಿದಳು. ತಂಗಿಯು ಹೆದರಿ ಗಾಬರಿಯಿಂದ ನಿಂತಿದ್ದಳು ಜೊತೆಗೆ ಅವಳಿಗೆ ಕಾಲು ಕೂಡ ತುಂಬಾ ನೋಯುತ್ತಿತ್ತು. ಸುಮತಿಯ ಮಗಳ ಮಾತನ್ನು ಆಲಿಸಿದ ರೈಟರ್ ಒಳಗೆ ಹೋಗಿ ಟಾರ್ಚ್ ತಂದು…”ನಡೆಯಿರಿ ಮಕ್ಕಳೇ ನಾನು ನಿಮ್ಮ ಜೊತೆ ಬರುತ್ತೇನೆ…. ನೋಡೋಣ ನೆಲಗೀಟಿನ ಬಳಿ ಯಾರಿದ್ದರೆ ನೋಡೋಣ?….. ಎಂದು ಹೇಳುತ್ತಾ ಮಕ್ಕಳ ಜೊತೆ ಅವರು ಅಲ್ಲಿಯವರೆಗೆ ಹೋದರು. ಅಲ್ಲಿ ಯಾರೂ ಇರಲಿಲ್ಲ. ಬಹುಶಃ ತಮ್ಮಿಂದ ಬಿಡಿಸಿಕೊಂಡು ಓಡಿದ ಮಕ್ಕಳು ಯಾರನ್ನಾದರೂ ಕರೆದುಕೊಂಡು ಬರಬಹುದು ಎನ್ನುವ ಅರಿವಿದ್ದುದರಿಂದ ಅವರಿಬ್ಬರೂ ಅದಾಗಲೇ ಅಲ್ಲಿಂದ ಹೊರಟಿದ್ದರು. ಮಕ್ಕಳ ಪುಸ್ತಕ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಎಲ್ಲಾದರೂ ತೋಟದೊಳಗೆ ಅಡಗಿ ಕುಳಿತಿರಬಹುದು ಎನ್ನುವ ಗುಮಾನಿಯಿಂದ ರೈಟರ್ ಒಂದಷ್ಟು ದೂರದವರೆಗೂ ಟಾರ್ಚ್ ಲೈಟ್ ಹಾಕಿ ಹುಡುಕಿದರು. ಅಲ್ಲಿ ಯಾರೂ ಇರಲಿಲ್ಲ. ಮಕ್ಕಳಿಗೆ ಧೈರ್ಯ ಹೇಳುತ್ತಾ ಜೊತೆಗೆ ಕರೆದುಕೊಂಡು ಮನೆಯ ಕಡೆಗೆ ಹೊರಟರು. ರೈಟರ್ ಮನೆಯ ಒಂದು ತಿರುವಿನ ನಂತರವೇ ಸುಮತಿ ವಾಸಿಸುತ್ತಿದ್ದ ಮನೆ ಇದ್ದಿದ್ದು. ಹಾಗಾಗಿ ಮಕ್ಕಳು ರೈಟರ್ ರವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟರು. ಅಕ್ಕ ತಂಗಿಯರಿಬ್ಬರೂ ಆತಂಕದಲ್ಲಿದ್ದರು. ಯಾವುದೋ ಒಂದು ದುರ್ಘಟನೆಯಿಂದ ಕೂದಲೆಳೆಯಲ್ಲಿ ಪಾರಾದ ಸಮಾಧಾನವೂ ಇತ್ತು.
ಮಕ್ಕಳು ಇಷ್ಟೊತ್ತಾದರೂ ಮನೆಗೆ ಬರದ ಕಾರಣ ಸುಮತಿ ಮನೆಯಿಂದ ಆಚೆ ಬಂದು ನಲ್ಲಿಯ ಕಟ್ಟೆಯ ಬಳಿ ನಿಂತು ದಾರಿಯೆಡೆಗೆ ನೋಡುತ್ತಿದ್ದಳು. ಎರಡು ನೆರಳು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಅಕ್ಕ-ತಂಗಿಯರಿಬ್ಬರು ದಾರಿಯಲ್ಲಿ ನಡೆದು ಬರುವಾಗ ನಗುತ್ತಾ, ತಮಾಷೆ ಮಾಡುತ್ತಾ ಬರುವವರು, ಇಂದು ಮೌನವಾಗಿ ನಡೆದು ಬರುತ್ತಿದ್ದರು. ಅವರ ಮೌನವನ್ನು ನೋಡಿ ಸುಮತಿ ತಾನು ಒಂದೆರಡು ಹೆಜ್ಜೆ ಮುಂದೆ ನಡೆದಳು. ಕತ್ತಲಿನಲ್ಲೂ ಅಮ್ಮನ ಆಕೃತಿ ಮಕ್ಕಳಿಗೆ ಗೋಚರಿಸಿತು. ಇಬ್ಬರೂ ಓಡೋಡಿ ಬಂದು ಅಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡರು. ಮಕ್ಕಳ ಈ ಚರ್ಯೆ ಸುಮತಿಗೆ ಹೊಸದೆನಿಸಿತು. ಅವ್ಯಕ್ತ ಭಯವೊಂದು ಮನವನ್ನು ಕಾಡಿ ಗಾಬರಿಯಾದಳು….”ಏನಾಯ್ತು ಮಕ್ಕಳೇ, ಏಕೆ ಇಂದು ಇಷ್ಟು ಮೌನವಾಗಿದ್ದೀರಿ?!!.. ಎಂದು ಕೇಳಿದಾಗ ಎರಡನೇ ಮಗಳು ಸಣ್ಣಗೆ ಬಿಕ್ಕುತ್ತಿರುವುದು ಸುಮತಿಯ ಅರಿವಿಗೆ ಬಂತು. ಅವಳ ಬಿಕ್ಕುವಿಕೆ ಕೇಳಿ ಸುಮತಿಯ ಹೃದಯ ಸಣ್ಣಗೆ ನಡುಗಿತು. ಮೂರನೇ ಮಗಳು….,”ಅಮ್ಮಾ ಕಾಲು ನೋಯುತ್ತಿದೆ…. ನಡಿ ಬೇಗ ಮನೆಗೆ ಹೋಗೋಣ…. ಅಲ್ಲಿ ಹೋಗಿ ಮಾತನಾಡೋಣ”…. ಎಂದಳು. ಮಕ್ಕಳು ದಾರಿಯಲ್ಲಿ ಬಿದ್ದಿರಬಹುದು. ಹೆಚ್ಚು ಪೆಟ್ಟಾಗಿರಬಹುದು. ಹಾಗಾಗಿ ಎರಡನೇ ಮಗಳು ಬಿಕ್ಕುತ್ತಿರಬಹುದು. ಎಂದು ತಿಳಿದ ಸುಮತಿ….. “ಬನ್ನಿ ಮಕ್ಕಳೇ, ಅಡುಗೆ ಮಾಡಿದ್ದೇನೆ ಬಿಸಿಯಾದ ಊಟವನ್ನು ತಿನ್ನುವಿರಂತೆ”….ಎಂದು ಮೂರನೇ ಮಗಳ ಕೈ ಹಿಡಿದು ನಿಧಾನವಾಗಿ ಮೆಟ್ಟಲುಗಳನ್ನು ಇಳಿದಳು. ಎರಡನೇ ಮಗಳು ಬಿಕ್ಕುತ್ತಲೇ ಅವರಿಬ್ಬರನ್ನು ಹಿಂಬಾಲಿಸಿದಳು.




