ಕಾವ್ಯ ಸಂಗಾತಿ
ಶ್ರೀನಿವಾಸ್ ಕೆ ಎಂ
ಸಂಕ್ರಮಣ


ಬುವಿ ಬಾನ ನಡುವೆಯೂ
ಅವಿನಾಭಾವದ ಬಿಡಿಸಲಾರದ ನಂಟು
ದಕ್ಷಿಣದ ಪಂಥದಿಂದ ಉತ್ತರದ ಕಡೆ
ಪಥ ಬದಲಿಸುವ ರವಿಯ ಸಂಕ್ರಮಣ.
ಕತ್ತಲೆ ಜಗತ್ತು;ಬೆಳದಿಂಗಳ ಒನಪು
ತಾರೆಗಳ ನಡುವೆ;ಚಂದಿರನ ಸಖ್ಯ
ಪಿಸುಗುಡುವ ಗಾಳಿ;ಮೈ ಕೊರೆವ ಚಳಿ
ನಿನ್ನದೆ ಒಲವ ಬೆಳದಿಂಗಳು; ಸಂಕ್ರಮಣದ ಸುಗ್ಗಿ
ಮಾಗುವುದು ಎಂದರೆ;ಅನುಭವದ ಹದ ಬೆರೆತ
ಹಬೆಯಾಡುವ ಮುದ್ದೆ,ಕಾಳು-ಕಡ್ಡಿ, ಭತ್ತ-ರಾಗಿ
ಒಪ್ಪ ಓರಣ; ರಾಶಿಯ ನಡುವೆ ನಗುವ
ಮಾಮರದ ಚಿಗುರು.
ಮಾಗಿ ಕಳೆಯೆ,ನವುರಾದ ಭಾವಗಳ;
ಉಣ ಬಡಿಸುವ ಬುತ್ತಿ
ತೆರೆದಷ್ಟು ಸವಿಯಲು; ಅನುಭವದ ಸ್ವಾದ!
ನಿಸರ್ಗದ ಅದ್ಭುತ ಚಣ; ಅದೇ ಸುಗ್ಗಿ ಸಂಕ್ರಮಣ
ಶ್ರೀನಿವಾಸ ಕೆ ಎಂ



