ಪುಸ್ತಕ ಸಂಗಾತಿ
ಡಾ.ಬಸವರಾಜ ಗೌಡನಬಾವಿ
“ಬರಗೂರು ರಾಮಚಂದ್ರಪ್ಪನವರ
ಸೌಹಾರ್ದ ಭಾರತ
ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,


ಮನುಷ್ಯನನ್ನು ಪ್ರೀತಿಸಿದರೆ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಂದು ಭಾರತದ ಸೌಹಾರ್ದ ವಾತಾವರಣ ಕದಡುತ್ತಿದೆ. ಇಂತಹ ವಾತಾವರಣದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯೂ ಮನುಷ್ಯ ಸಂಬಂಧಗಳ ಬೆಸೆಯುವ ಕನಸನ್ನು ಹೊತ್ತು ಬರುತ್ತಿದೆ.
ಬರಗೂರು ರಾಮಚಂದ್ರಪ್ಪನವರು ತಮ್ಮ ಕೃತಿಯ ಮೂಲಕ ದೇಶದಲ್ಲಿರುವ ತಾರತಮ್ಯ, ಅಸಮಾನತೆ, ಮೂಲಭೂತವಾದಿತನ, ದ್ವೇಷ, ಈರ್ಷ್ಯೆಗಳು ಸಮಾನತೆ, ಸೌಹಾರ್ದತೆಯ ಆಶಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ವಿಷಾದಿಸುತ್ತಾರೆ.
ಬರಗೂರು ರಾಮಚಂದ್ರಪ್ಪನವರು ವಿವಿಧ ಸಂದರ್ಭದಲ್ಲಿ ಬರೆದ ಮಹತ್ವದ ಲೇಖನಗಳನ್ನು ಈ ಕೃತಿಯಲ್ಲಿ ಜೊಡಿಸಿಕೊಟ್ಟಿದ್ದಾರೆ.
ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಎನ್ನುವ ಈ ಕೃತಿ ಒಟ್ಟು ಹತ್ತು ಲೇಖನಗಳನ್ನು ಒಳಗೊಂಡಿದೆ. ಸೌಹಾರ್ದತೆ ಮತ್ತು ಸಮಾನತೆ ಭಾರತದ ಎರಡು ಕಣ್ಣುಗಳು. ಸೌಹಾರ್ದತೆ ಎಂದರೆ ಪಕ್ಷಪಾತವಲ್ಲ, ಪೂರ್ವಗ್ರಹವಲ್ಲ, ಯಾವುದರ ಪರವೂ, ವಿರೋಧವೂ ಅಲ್ಲ. ಎಲ್ಲ ಅವಿವೇಕಗಳನ್ನು ಮೀರಿದ ವಿವೇಕ ಹಾದಿ. ಇಲ್ಲಿ ನಾವು ವಿವೇಕಾನಂದರ ಧೀರೋದಾತ್ತ ನಿಲುವನ್ನು ಕಾಣುತ್ತವೆ. ಅವರ ಪ್ರಖರ ಸಾಮಾಜಿಕ ವ್ಯಕ್ತಿತ್ವ, ದೀನ, ದಲಿತರ ಉದ್ಧಾರವೇ ಧರ್ಮದ ಮೂಲತತ್ವ ಎನ್ನುವಲ್ಲಿ ಅವರ ವೈಚಾರಿಕತೆ ಸತ್ಯದ ಅನಾವರಣವಾಗುತ್ತದೆ.
ಗಾಂಧೀಜಿಯು ಪರಧರ್ಮ ಸಹಿಷ್ಣುತೆಯ ಪ್ರತೀಕ. ಧರ್ಮವು ರಾಷ್ಟ್ರೀಯತೆಯ ಮಾನದಂಡವಲ್ಲ. ಅದೇನಿದ್ದರೂ ಮನುಷ್ಯ ಮತ್ತು ದೇವರ ನಡುವಿನ ವೈಯಕ್ತಿಕ ಸಂಬಂಧ ಎಂದು ಹೇಳುವ ಮೂಲಕ ಪರಧರ್ಮ ಸಹಿಷ್ಣುತೆಯನ್ನು ಪ್ರಬಲವಾಗಿ ಪ್ರತಿಪಾದಿಸುವ ಗಾಂಧೀಜಿಯ ವಿಚಾರಧಾರೆ ರಾಷ್ಟ್ರೀಯತೆಗೂ ಧರ್ಮನಿಷ್ಠೆಗೂ ಸಂಬಂಧವನ್ನು ಕಲ್ಪಿಸುತ್ತಿರುವ ಈ ಸಂದರ್ಭದಲ್ಲಿ ತುಂಬಾ ಅಗತ್ಯವೆಂದು ತಿಳಿಸುತ್ತದೆ. ಅವರ ಸತ್ಯನಿಷ್ಠೆ, ಪರಧರ್ಮ ಸಹಿಷ್ಣುತೆ, ಪ್ರಾಮಾಣಿಕತೆ ಯಾರಿಗೂ, ಯಾವತ್ತಿಗೂ ಆದರ್ಶವೇ, ಅನುಕರಣೀಯವೇ ಆಗಿದೆ. ಗಾಂಧಿ ಎಲ್ಲಾ ಧರ್ಮಿಯರಿಗೂ ಪರಧರ್ಮ ಸಹಿಷ್ಣುತೆ ಉಳ್ಳವರಿಗೂ ಸಾಂಕೇತಿಕ ದಾರಿದೀಪವಾಗಿದ್ದಾರೆ.

ಸಾಮಾಜಿಕ ಪ್ರಜಾಪ್ರಭುತ್ವವನ್ನು ಕುರಿತಂತೆ ಅಂಬೇಡ್ಕರರ ವಿಚಾರಗಳನ್ನು ಕೃತಿ ದಾಖಲಿಸುತ್ತದೆ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು ಎನ್ನುವ ಪ್ರಶ್ನೆಗೆ ಅದೊಂದು ಜೀವ ಕ್ರಮ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳನ್ನು ಜೀವನ ತತ್ವವನ್ನಾಗಿಸಿಕೊಂಡ ಕ್ರಮ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೂಲತತ್ವಗಳಿಗೆ ಧರ್ಮವು ಮನ್ನಣೆ ನೀಡಲೇಬೇಕು. ಇಲ್ಲದಿದ್ದರೆ ಧರ್ಮವು ನಾಶವಾಗುತ್ತದೆ. ನಿಜವಾದ ಧರ್ಮವಿರುವುದು ಮಾನವನ ಹೃದಯದಲ್ಲೇ ಹೊರತು ಶಾಸ್ತ್ರಗಳಲ್ಲಿ ಅಲ್ಲ ಎನ್ನುವುದು ಮನುಷ್ಯ ಬದುಕಿನ ವಾಸ್ತವದ ಮಾತು. ಈ ಮಾತು ಕುವೆಂಪು ಅವರ ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿವುದೇನು? ಎಂಬ ಸಾಲನ್ನು ನೆನಪಿಸುವುದಲ್ಲದೇ ಬದುಕಿನ ವಾಸ್ತವ ಮತ್ತು ಭಾವನಾತ್ಮಕತೆಯ ವೈರುಧ್ಯಗಳನ್ನು ತೆರೆದಿಡುತ್ತದೆ.
ಮನುಷ್ಯರನ್ನು ಹುಡುಕುತ್ತಾ ಹೊರಡುವ ಕೃತಿ ಮನುಷ್ಯರ ಬದಲು ಜಾತಿ ಧರ್ಮಗಳ ಲೆಕ್ಕ ಕೊಡುವ ಸಮಾಜವನ್ನು ಕಂಡು ವ್ಯಥೆಪಡುತ್ತದೆ.
ಕನ್ನಡತ್ವದಲ್ಲಿ ಮನುಷ್ಯತ್ವದ ಪರಂಪರೆಯನ್ನು ಕಂಡುಕೊಂಡು ಭವಿಷತ್ತಿನ ಆಶಾವಾದವನ್ನು ಪ್ರಕಟಿಸುತ್ತದೆ. ಅದೇ ಸಮಯದಲ್ಲಿ ತಾಯ್ತನವನ್ನು ಕಳೆದುಕೊಳ್ಳುತ್ತಿರುವ ಸಮಾಜದ ಬಗ್ಗೆಯೂ ಮರುಕಪಡುತ್ತದೆ. ಈ ಕೃತಿಯನ್ನು ಸ್ವೀಕರಿಸುವ ಜನಕ್ಕೆ ತಾಯ್ತನದ ಕರುಳು ಇಲ್ಲದೇ ಹೋದರೂ ಕನಿಷ್ಠ ತಾಯ್ತನದ ಹಂಬಲವಾದರೂ ಹುಟ್ಟಲಿ ಎನ್ನುವ ಆಶಯವನ್ನು ಕೃತಿ ವ್ಯಕ್ತಪಡಿಸುತ್ತದೆ.
ಡಾ.ಬಸವರಾಜ ಗೌಡನಬಾವಿ




