ಕಾವ್ಯ ಸಂಗಾತಿ
“ನನ್ನವನ ಸ್ವಗತ, ನೀನಿಲ್ಲದೆ”
ಡಾ.ಮೀನಾಕ್ಷಿ ಪಾಟೀಲ್


ನನ್ನವನ ಸ್ವಗತ ನೀನಿಲ್ಲದೆ…..
ಏಳಬೇಕು ಎಬ್ಬಿಸಲು ನೀನಿಲ್ಲ
ಅಲಾರಾಂ ಹೊಡೆದುಕೊಳ್ಳುತ್ತದೆ
ಈಗ ನಿನಗೆ ನಾನೇ ಗತಿ
ಏಳುತ್ತೇನೆ ಅಡುಗೆ ಮನೆ ಕಡೆ ನೋಡುತ್ತೇನೆ.
ಬಳೆಗಳ ಸದ್ದಿಲ್ಲದೆ ಸುಮ್ಮನಾಗುತ್ತೇನೆ
ಪೆದ್ದನಂತೆ
ಬಿಸಿ ನೀರು ಕಷಾಯ ಕಾಫಿ ಕುದಿಸುವವರಿಲ್ಲ
ನಾನೇ ಕುದಿಯುತ್ತೇನೆ ಒಮ್ಮೊಮ್ಮೆ
ಎದುರಾಳಿ ನೀನಿಲ್ಲದೆ
ಕಸಗುಡಿಸಿ ನೀರು ಚಿಮುಕಿಸುತ್ತೇನೆ
ತಳಿವುಂಡ ಅಂಗಳ ಅಣಕಿಸುತ್ತದೆ
ರಂಗೋಲಿ ಎಳೆಯುವ ನೀನಿಲ್ಲದೆ
ಅಡುಗೆ ಮನೆಯೊಳಗೆ ಬರುತ್ತೇನೆ
ಏನಾದರೊಂದನ್ನು ಬೇಯಿಸಿಕೊಳ್ಳಲೇಬೇಕು
ಹೊರಗಡೆ ಏನನ್ನು ತಿನ್ನುವ ಹಾಗಿಲ್ಲ
ಮೂರು ಗೆರೆ ದಾಟಲಾರದ ಸಂಕಟ
ಕೈಸುಟ್ಟುಕೊಳ್ಳುವುದು
ಅನಿವಾರ್ಯ ನಾನು ನಳನಂತೆ ಅಲ್ಲದಿದ್ದರೂ
ಒಲೆಯ ಮೇಲಿಟ್ಟ ಹಾಲು ಉಕ್ಕದಂತೆ
ಮಾಡಲಿಟ್ಟ ಉಪ್ಪಿಟ್ಟು ತಳ ಹತ್ತದಂತೆ
ನೋಡಿಕೊಳ್ಳಬೇಕು ಮೈ ತುಂಬಾ ಕಣ್ಣಾಗಿ
ಸ್ನಾನಕ್ಕೆ ಬಿಟ್ಟುಕೊಂಡ ಬಿಸಿನೀರು
ತುಂಬಿ ಹೊರ ಚೆಲ್ಲುತ್ತದೆ
ಗ್ಯಾಸ್ ವೇಸ್ಟ್ ಆಗುತ್ತೆ ಎಂದು ಮಕ್ಕಳಿಗೆ ಬಯ್ಯುವ
ನಾನು ಈಗ ಅವಳಿಲ್ಲದೆ ನಾನೇ ಮಗುವಾಗಿದ್ದೇನೆ
ಏನೊಂದು ತೋಚದು ಅವಸರದಲ್ಲಿ
ಟಿಫಿನ್ ಬಾಕ್ಸ್ ಸಿದ್ಧಗೊಳಿಸಿಕೊಳ್ಳುವುದು
ದೊಡ್ಡ ಯುದ್ದ
ದಿನವೂ ಅವಳ ಮೆನು ಮೆಸೇಜ್
ನೋಡಿ ಸಾಕಾಗಿ ಬಿಟ್ಟಿದೆ
ಸ್ವೀಟ್ ಅಂತೆ ಹಣ್ಣಂತೆ ಕಾಳುಗಳಂತೆ
ಮತ್ತೆ ಮೇಲೆ ಟಿಫನ್ ಅಂತೆ
ಅಯ್ಯೋ…. ಯಾಕಾದರೂ
ಹೋದಳೊ ಇವಳು ಊರಿಗೆ
ಏನಾದರೊಂದು ಮರೆಯುತ್ತೇನೆ
ಗಡಿಬಿಡಿಯಲ್ಲಿ ಪುಸ್ತಕ ಪೆನ್ನು ಡೈರಿ
ಒಮ್ಮೊಮ್ಮೆ ಮೊಬೈಲ್ ಬೈಕ್ ಕೀ
ಮತ್ತೆ ಒಳಗೆ ಬರುತ್ತೇನೆ
ಹಿಂಬಾಗಿಲು ಮುಂಭಾಗಲು
ಲಾಕ್ ಮಾಡಿದ್ದೇನೊ ಇಲ್ಲವೋ
ಎನ್ನುವ ಸಂಶಯ
ಹೀಗೆ …. ಅವಳು ಹೋದಾಗಿನಿಂದ
ದಿನಚರಿಯ ದಿಕ್ಕು ತಪ್ಪಿದೆ
————–
ಡಾ. ಮೀನಾಕ್ಷಿ ಪಾಟೀಲ್



