ಕಥಾ ಸಂಗಾತಿ
ಡಾ. ರೇಣುಕಾ ಹಾಗರಗುಂಡಗಿ
“ಏ ಭೇಟಾ ಸಬ್ಜಿ ಲೇ”


ಬೆಗಳಾಗುತ್ತಲೆ ಹೊರಗಡೆ “ಬೇಟಾ ಸಬ್ಜಿ ಲೇ” ಅಂತ ಕರೆಯುವ ಕೂಗಿನ ಧ್ವನಿಯ ಒಡತಿ ಹೀರಾ ನಿಜವಾಗಿಯೂ ಸೌಂದರ್ಯದ ಖಣಿಯೇ ಸರಿ. ಸುಕ್ಕುಗಟ್ಟಿದ ಆಕೆಯ ಚರ್ಮ,ಮುಖದ ತುಂಬೆಲ್ಲ ನೆರಿಗೆಗಳಿದ್ದರೂ ಚಿಕ್ಕಚಿಕ್ಕ ಕಣ್ಣುಗಳು ಮೀಟುಕಿಸುತ್ತ ಆ ಲಂಬಾಣಿಯ ಶ್ರೀಮಂತದ ಉಡುಪು ಅಲ್ಲಲ್ಲಿ ಸ್ವಲ್ಪ ತೇಪೆಹಚ್ಚಿದ್ದರು ನಾನಿಯ ಚೆಲುವಿನ ಮುಂದೆ ಯಾವದೂ ಲೆಕ್ಕಕ್ಕಿಲ್ಲ. ಅಂಥ ಸೌಂದರ್ಯವತಿ ಹೀರಾ ನಾನಿ.
ಇಳೆ ವಯಸ್ಸಿನಲ್ಲಿರುವ ಈ ತಾಯಿಗೆ ದುಡ್ಡಿನ ಅವಶ್ಯಕತೆಯಾದರೂ ಯಾಕೆ ಅಂತ ನಾನು ಹಾಗೆ ತೆಲೆಕೆಡಿಸಿಕೊಳ್ಳುತ್ತಲೆ ಇರುವಾಗ ನನ್ನ ಪಕ್ಕದ ಮನೆಯ ಮಗು ಹೇಳ್ತು ಆಂಟಿ ಈ ಅಜ್ಜಿನ ನೀವು ಯಾರಂತ ಭಾವಿಸಿರುವಿರಿ, ಅವರು ರೋಹಿತ್ ಅಣ್ಣನ ನಾನಿ ಅಂತ, ಅದಕ್ಕೆ ನಾನು ಮತ್ತೆ ಯಾಕೆ ಇವರು ಹೀಗೆ ಬರ್ತಾರೆ ಅಂತ ಥಟ್ಟನೆ ಕೇಳಿದ ನನ್ನ ಪ್ರಶ್ನೆಗೆ ಮಗು ಹೇಳ್ತು ಆ ಅಜ್ಜಿ ರೋಹಿತ್ ಅಣ್ಣನ ಮಮ್ಮಿ ಅವರ ಮಮ್ಮಿ. ಅವರ ಮಕ್ಕಳು ಅವರಿಗೆ ಮನೆಯಿಂದ ಹೊರ ದೂಡಿದ್ದಾರೆ ಅದಕ್ಕೆ ಅಜ್ಜಿ ಈಗ ಮಗಳ ಮನೆಯಲ್ಲಿದ್ದಾರೆ. ಹಾಗೆ ಯಾಕೆ ಬಿಟ್ಟಿಕೂಳ ತಿನ್ನೋದು ಅಂತ ಸಬ್ಜಿ ಮಾರ್ತಾರೆ ಎಂದು ಮಗು ಹೇಳ್ತಾ ಓಡಿಹೋಯಿತು.
ನನಗಂತೂ ತುಂಬಾ ಬೇಸರವಾಯಿತು. ಮಕ್ಕಳನ್ನ ಬೆಳೆಸೋದರಲ್ಲಿ ಪಾಲಕರು ಎಲ್ಲಿ ಎಡವುತ್ತಿದ್ದಾರೆ ಅಂತ ಯೋಚಿಸುತ್ತಲೇ ಹಾಗೆ ಫ್ಲ್ಯಾಶ್ ಬ್ಯಾಕ್ ಹೋದೆ. ಇದು ಈ ಒಂದು ಮನೆಯ ಹೀರಾ ನಾನಿಯ ಕಥೆ ಅಲ್ಲ.ಹಿಂಥ ಅನೇಕ ಹೀರಾ ನಾನಿಯರು ಶ್ರೀಮಂತ, ಬಡವರೆನ್ನದೆ ಎಲ್ಲಡೆಯು ಮೂಲೆಗುಂಪಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣವಾದರೂ ಏನು? ಅಂತ ಯೋಚಿಸುತ್ತಲೇ ಇರುವಾಗ ನೆನಪಾದದ್ದು ನಾನು ಕಂಡ ಒಂದು ಮಧ್ಯಮ ವರ್ಗದ ಕುಟುಂಬ. ಅಲ್ಲಿ ಆ ದಂಪತಿಗಳು ಮಕ್ಕಳಿಲ್ಲದೆ ಹರಕೆಯನ್ನ ಹೊತ್ತು ಹೆತ್ತ ಮಕ್ಕಳೆ ತಮ್ಮ ತಂದೆತಾಯಿಗೆ ಇಳೆ ವಯಸ್ಸಲ್ಲಿ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಸ್ವಾರ್ಥದ ಮದ, ಬಯಕೆಯ ಹುಚ್ಚಾಟ,ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿರುವುದನ್ನ ಮನಗಂಡು ಇಡೀ ಕುಟುಂಬವನ್ನೆ ಬಿರುಗಾಳಿಗೆ ಸಿಲುಕಿಸಿ ಆಸ್ತಿ, ಅಂತಸ್ತು ಅಂತ ಮನೆ ಒಡೆಯುವ ಕಾರ್ಯಕ್ಕೆ ಮುಂದಾಗುತ್ತಾರೆ. ತಮಗೆ ಬೇಕಾದ ಮಕ್ಕಳ ಪರವಹಿಸಿ ದಂಪತಿಗಳಿರ್ವರೂ ಬೇರೆಯಾಗುತ್ತಾರೆ.ಆಸ್ತಿಗಾಗಿ ಮಕ್ಕಳ ಕಿರಿಕಿರಿ ಅನುಭವಿಸುತ್ತಲೇ ಯಜಮಾನ ತೀರಿಹೋಗುತ್ತಾರೆ. ಮತ್ತೊಬ್ಬ ಮಗ ತಾಯಿಯನ್ನು ತಿನ್ನುವ ಎಣ್ಣೆ ಕೈತಪ್ಪಿ ಚಲ್ಲಿದ್ದಕ್ಕೆ ಮುಖಕ್ಕೆ ಉಗಿದು ಈಗ ಅಡುಗೆ ಹೇಗೆ ಮಾಡೋದು ಅಂತ ಅವಾಚ್ಯ ಮಾತುಗಳನ್ನೆಲ್ಲ ಅಂದು ರೇಲ್ವೆ ಹಳಿಯ ಮೇಲೆ ಬಿದ್ದು ಸಾಯಿ ಅಂತ ಮಗ ಕಿರುಚಾಡಿದರು ಆ ತಾಯಿ ಮಗನಿಗೆ ಹಿಂದಿರುಗಿಸಿ ಒಂದು ಮಾತನಾಡದೆ ದುಃಖವನ್ನ ನುಂಗಿದಳು. ಇವಳೂ ಮತ್ತೊಬ್ಬ ಹೀರಾ ನಾನಿಯೇ..ಸರಿ ..ಹಿಂತಹ ಅನೇಕ ಅವಮಾನಗಳು ಸಹಿಸುತ್ತ ಮಗನ ಮೇಲಿರುವ ಮಮಕಾರಕ್ಕೆ ಮೂಕವಿಸ್ಮಿತಳಾಗಿ ಎಲ್ಲವೂ ಸಹಿಸುತ್ತ ಕುಗ್ಗಿಹೋದರು ಮಕ್ಕಳ ಬಗ್ಗೆ ಒಂದು ದಿನವು ಮತ್ತೊಬ್ಬರಲ್ಲಿ ದೂರ ಹೇಳಲಿಲ್ಲ.
ಮಕ್ಕಳ ಭವಿಷ್ಯಕ್ಕಾಗಿ ತಂದೆತಾಯಿಗಳು ತಾವು ಅರೆಹೊಟ್ಟೆ ತಿಂದು ನಾಳೆ ಮಕ್ಕಳಿಗೆ ಏನಾದರೂ ಸಹಾಯ ಆಗಬಹುದು ಅಂತ ಎಲ್ಲವನ್ನು ಕೂಡಿಟ್ಟು ತಮ್ಮ ಆಸೆ,ಆಕಾಂಕ್ಷೆಗಳನ್ನೆಲ್ಲ ತ್ಯಾಗಮಾಡಿ ತಮ್ಮ ಇಡೀ ಜೀವನವನ್ನೆ ಮಕ್ಕಳಿಗಾಗಿ ಮೂಡುಪಾಗಿಡುತ್ತಾರೆ . ಮಕ್ಕಳು ಸಹ ಹೆತ್ತವರ ಪರಿಶ್ರಮವನ್ನು ಅರಿಯಬೇಕು. ಹಿರಿಯರನ್ನು ಕಡೆಗಾಣಿಸದೇ ಅವರನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕಿದೆ.ನಮಗಾಗಿ ತಮ್ಮದೆಲ್ಲವನ್ನು ಧಾರೆಯೆರೆದ ದೇವತೆಗಳನ್ನು ನಮ್ಮ ಕಣ್ಣುರೆಪ್ಪೆಯಂತೆ ಕಾಪಾಡಿಕೊಳ್ಳಬೇಕಿದೆ. ಅವರಿಂದಲೇ ನಾವು ಎಂಬುದು ಮನಗಾಣಬೇಕಿದೆ. ನಮ್ಮದೆಲ್ಲವನ್ನು ಅವರಿಗಾಗಿ ಸಮರ್ಪಿಸಬೇಕೆಂದೇನಿಲ್ಲ, ಅದು ಅವರ ಬಯಕೆಯೂ ಅಲ್ಲ. ಅವರಿಗೆ ಬೇಕಾದದ್ದು ನಮ್ಮ ಪ್ರೀತಿ,ಕಾಳಜಿ,ನಮ್ಮ ಮಕ್ಕಳ ಪ್ರೀತಿ ಅಷ್ಟು ಕೊಟ್ಟರೆ ಅವರಿಗೆ ಅದೇ ಸ್ವರ್ಗ ಅಲ್ಲವೇ? ಮನುಷ್ಯರಾಗಿ ಹುಟ್ಟಿದ ಮೇಲೆ ಮನುಷ್ಯರಂತೆ ಬಾಳಬೇಕಲ್ಲವೇ? ಈ ಮೂಲಕವಾದರೂ ಅಲ್ಲಲ್ಲಿ ಕಂಡು ಬರುವ ಹೀರಾ ನಾನಿಯರನ್ನು ಕಾಣದ ಹಾಗೆ ಮಾಡುತ್ತ ನಮ್ಮ ಜೀವನ ಸಾರ್ಥಕಗೊಳಿಸೋಣ ಅಂತ..
ಡಾ. ರೇಣುಕಾ ಹಾಗರಗುಂಡಗಿ




