ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ”

ಕಾವ್ಯ ಸಂಗಾತಿ ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ” ನಿನ್ನೆದೆಯ ಹಸಿ ಹಸಿ ಪ್ರೀತಿ ಒರತೆಸಿಂಚನವಾಗಿದೆ ಮನದ ಬುಗ್ಗೆಯಲಿ ಮತ್ತೆ ಕನಸು ಹೊತ್ತು ಸಾಗಿದೆನಿನ್ನಧರ ಮಧುರ ಮುತ್ತಿಗೆ ಮಿಡುಕಿದಂತಾಯಿತು ಎದೆಯ ವೀಣೆಯಾರು ನುಡಿಸಿದರೊ ಪ್ರೇಮ ರಾಗವ ತಲ್ಲಣದ ಮನದಲಿ ಕಡಲ ಭೋರ್ಗರೆತನಿನ್ನ ಬೆರಳ ಸ್ಪರ್ಶದ ಅಪ್ಪುಗೆಯ ಸಾಂತ್ವಾನ ಶೀತ ಗಾಳಿಯ ಪ್ರೀತಿಗೆ ನೆನಪಿನ ಕಂಬಳಿ ಹೊದ್ದು  ಬೆಚ್ಚನೆಯ ಮುತ್ತನಿಟ್ಟು ಮಲಗು ಅಪ್ಪಿಕೊಳ್ಳುವೆ ಕನಸಿನಲಿ  ಬೇಡ ಬಿಡು ಒಸರುವ ತೊರೆ ಪ್ರೀತಿ ಭೂತಗನ್ನಡಿಯ ಹುಸಿ ಪ್ರೇಮ ಎಂದೆಯಾ  ಮೆಚ್ಚಿಕೊಳ್ಳುವ  ಮನಸ್ಸಿಲ್ಲದಿದ್ದರೆ ಕೊಚ್ಚಿ ಹಾಕಿಬಿಡು ಭಾವವನ್ನು ಚುಚ್ಚಬೇಡ ಹಚ್ಚಿಕೊಂಡ ಎದೆಯ ದನಿಗೆಬಿಚ್ಚು ಮನಸ್ಸಿನ ತುಡಿತಕೆ ನಾ ಬರುವ ದಾರಿಗೆ ನಿರೀಕ್ಷೆಯ ಹೂಹಾಸುಬಂದೇ ಬರುವೆನು ಕ್ಷಣದಲ್ಲಿ ನಿನ್ನ ಹೃದಯ ಗೂಡಿಗೆ ಡಾ. ಮೀನಾಕ್ಷಿ ಪಾಟೀಲ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ದುಃಸ್ವಪ್ನಗಳಿಗೆ ಹೆದರಿ ನಿದ್ದೆಮಾಡದಿದ್ದರೆ ಹೇಗೆ ಸಖಿಕಲ್ಲು-ಮುಳ್ಳಿಗೆ ಹೆದರಿ ಹೆಜ್ಜೆಯಿಡದಿದ್ದರೆ ಹೇಗೆ ಸಖಿ ಕತ್ತಲಲ್ಲೂ ಬೆಳಕನು ಹೊತ್ತು ಚಂದಿರ ಬರುವನಂತೆಕವಿದ ಇರುಳಿಗೆ ಹೆದರಿ ಕಣ್ತೆರೆಯದಿದ್ದರೆ ಹೇಗೆ ಸಖಿ ಆ ಮರುಭೂಮಿಯಲ್ಲೂ ಬುಗ್ಗೆ ಲಗ್ಗೆಯಿಡುವದಂತೆಬಿರುಬಿಸಿಲಿಗೆ ಹೆದರಿ ಹೊರಬರದಿದ್ದರೆ ಹೇಗೆ ಸಖಿ ಕಲ್ಲು ಉಳಿಯ ಪೆಟ್ಟು ಉಂಡು ಶಿಲೆಯಾಗುವದಂತೆಹಣೆ ಬರಹಕೆ ಹೆದರಿ ತಲೆಯೆತ್ತದಿದ್ದರೆ ಹೇಗೆ ಸಖಿ ಕುಂಬಾರನೆದೆ ಪಾತ್ರೆ ಸುಟ್ಟಷ್ಟೇ ಗಟ್ಟಿಯಾಗುವದಂತೆಕಡುಕಷ್ಟಗಳಿಗೆ ಹೆದರಿ ಎದುರಿಸದಿದ್ದರೆ ಹೇಗೆ ಸಖಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಇತರೆ

“ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ವೀಣಾ ಹೇಮಂತ್‌ ಗೌಡ ಪಾಟೀಲ್

ಕಾವ್ಯ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇರುವ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ಅಲ್ಲಲ್ಲಿ ಪುಟ್ಟ ಬಾಲಕಿಯರು ಗರ್ಭಿಣಿಯರಾಗಿರುವ ಮಕ್ಕಳನ್ನು ಹೆತ್ತಿರುವ ವಿಷಯಗಳನ್ನು ಮಾಧ್ಯಮಗಳಲ್ಲಿ ಓದುತ್ತಲೇ ಇದ್ದೇವೆ. ಆತಂಕಕ್ಕೆ ಈಡು ಮಾಡುವ ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರಲು ಕಾರಣ ಮಕ್ಕಳಲ್ಲಿ ಇರುವ ಅಜ್ಞಾನವೇ ಕಾರಣ. ಬಾಲ್ಯ ವಿವಾಹದಿಂದ ಆಗುವ ಅನಾಹುತಗಳ ಕುರಿತು ಕೂಡ ಅಲ್ಲಲ್ಲಿ ನೋಡುವ, ಕೇಳುವ, ಎಷ್ಟೋ ಬಾರಿ ಕೆಲ ಜನರು ಮೂಕ ಸಾಕ್ಷಿಗಳಾಗುವ ಪರಿಸ್ಥಿತಿ  ಇರುತ್ತದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಈ ರೀತಿಯ ಘಟನೆಗಳು ಆಗಲು ಕಾರಣ ಏನು?? .ಇದೇನಿದು ಎತ್ತಣ ಮಾಮರ ಎತ್ತಣ ಕೋಗಿಲೆ ಎಲ್ಲಿಂದೆಲ್ಲಿಯ ಸಂಬಂಧ? ಎಂದು ನೀವು ಕೇಳಬಹುದು! ಖಂಡಿತವಾಗಿಯೂ ಇವೆರಡಕ್ಕೂ ಮತ್ತಷ್ಟು ವಿಷಯಗಳು  ಸಂಬಂಧಿಸಿವೆ. ಒಂದೆಡೆ ಆಸ್ಪತ್ರೆಗಳಲ್ಲಿ ಚಿಕ್ಕ ವಯಸ್ಸಿನ ಬಾಲಕಿಯರು ಮಕ್ಕಳನ್ನು ಹೆತ್ತು ಮಗು ಇಲ್ಲವೇ ತಾಯಿಯ ಮರಣವಾಗುತ್ತಿರುವುದನ್ನು ನಾವು ನೋಡುತ್ತಿದ್ದರೆ ಮತ್ತೊಂದೆಡೆ ಹೆಣ್ಣು ಮಕ್ಕಳು ಅರಿಯದ ವಯಸ್ಸಿನಲ್ಲಿ ದೈಹಿಕ ಆಕರ್ಷಣೆಗೆ ಒಳಗಾಗಿ ಅದನ್ನೇ ಪ್ರೀತಿ ಎಂದು ಭಾವಿಸಿ ತಮ್ಮ ಮನದೊಂದಿಗೆ ತನುವನ್ನು ಕೂಡ ಅರ್ಪಿಸಿ ಅದರ ಪರಿಣಾಮವಾಗಿ ಗರ್ಭಿಣಿಯರಾಗುತ್ತಿದ್ದಾರೆ. ಸಮಾಜ ಬಾಹಿರ ವಿವಾಹ ಬಾಹಿರ ಕೃತ್ಯ ಎಂಬ ಅರಿವಾಗುವ ಹೊತ್ತಿಗೆ ಸಮಯ ಮೀರಿ ಹೋಗಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಮಡಿಲ ಕೆಂಡ ಎಂದು ಭಾವಿಸಿ, ಮತ್ತೆ ಕೆಲವೊಮ್ಮೆ ಜವಾಬ್ದಾರಿ ಕಳೆದುಕೊಳ್ಳಬೇಕು ಎಂಬ ಆಶಯದಿಂದ ಕಾನೂನಿಗೆ ವಿರುದ್ಧವಾದುದು ಎಂದು ಗೊತ್ತಿದ್ದರೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುವ ಸಾಹಸಕ್ಕೆ ಪಾಲಕರು ಇಳಿಯುತ್ತಾರೆ. ಹೆಣ್ಣಿರಲಿ ಗಂಡಿರಲಿ ತಪ್ಪು ಯಾರಿಂದಲೇ ನಡೆದರೂ, ಪ್ರಕೃತಿ ಸಹಜವಾದ ಈ ಕ್ರಿಯೆಯ ಹೊಣೆಗಾರಿಕೆಯನ್ನು   ಅನುಭವಿಸುವ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ. ಎಲ್ಲದಕ್ಕೂ ಅಂತಿಮವಾಗಿ ಹೆಣ್ಣನ್ನೇ ಹೊಣೆಯಾಗಿಸುವ, ಜವಾಬ್ದಾರಿಯಾಗಿಸುವ, ಅಂತಿಮವಾಗಿ ಗುರಿಯಾಗಿಸುವ ಈ ಸಮಾಜದಲ್ಲಿ ಕೇವಲ ಬಾಲ್ಯ ವಿವಾಹ ನಿಷೇಧ ಮಾಡಿದರೆ ಸಾಲದು, ಸುರಕ್ಷಿತ ವಸತಿ ಸಹಿತ ಶಿಕ್ಷಣ ನೀಡಿದರೂ ಸಾಲದು ಬದಲಾಗಿ ಎಲ್ಲ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು ಹಾಗೂ ಲೈಂಗಿಕತೆಯ ಕುರಿತ ಅರಿವು ಮೂಡಿಸಬೇಕು. ಜೀವನ ಮೌಲ್ಯಗಳು ನಾವು ನಮ್ಮ ಬದುಕಿನಲ್ಲಿ  ಪರಿಪಾಲಿಸಲೇಬೇಕಾದ ಅಲಿಖಿತ ಸಂವಿಧಾನವಿದ್ದಂತೆ.ಪಾಲಕರಿಂದ, ಕುಟುಂಬದಿಂದ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಎಲ್ಲ ಬಲ್ಲ ಮೂಲಗಳಿಂದ ದೊರೆಯುವ ಮೌಲ್ಯಗಳ ಪಾಠ ನಮ್ಮ ಬದುಕಿಗೆ ದಾರಿದೀಪವಾಗಲೇಬೇಕು. ಯಾವ ರೀತಿ ದೇವರ ಗರ್ಭಗುಡಿಯಲ್ಲಿ ಎಲ್ಲರಿಗೂ ಪ್ರವೇಶ ಇರುವುದಿಲ್ಲವೋ ಹಾಗೆಯೇ ನಮ್ಮ ಮೈಮನಗಳ ಗರ್ಭಗುಡಿಯಲ್ಲಿ ಯಾರಿಗೂ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂಬ ತಿಳುವಳಿಕೆಯನ್ನು ಮಕ್ಕಳಲ್ಲಿ ಮೂಡಿಸಬೇಕು…. ವಿಶೇಷವಾಗಿ ಈ ವಯಸ್ಸಿನಲ್ಲಿ ಉಂಟಾಗುವ ದೈಹಿಕ ಆಕರ್ಷಣೆಗಳ ನಿರ್ವಹಣೆಯನ್ನು ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು. ಈ ಹಿಂದಿನಂತೆ ಕೂಡು ಕುಟುಂಬಗಳು ನಮ್ಮಲ್ಲಿ ಇಲ್ಲವಾದರೂ ಆ ಕೌಟುಂಬಿಕ ಮೌಲ್ಯಗಳು ಉಳಿದುಕೊಂಡಿವೆ. ಉದ್ಯೋಗ, ವ್ಯವಹಾರ ನಿಮಿತ್ತ ತಮ್ಮ ಕುಟುಂಬದಿಂದ ದೂರವಾಗಿ ಬೇರೆಯ ಊರುಗಳಲ್ಲಿ ನೆಲೆಸಿರುವ ದಂಪತಿಗಳು ತಮ್ಮ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳ ಅರಿವಿನ ಜೊತೆಗೆ ಸಂಬಂಧಗಳಲ್ಲಿ ಇರುವ ಸೌಹಾರ್ದ ಭಾವದ ಮಾರ್ದವತೆಯ ಅರಿವನ್ನು, ಜವಾಬ್ದಾರಿಯನ್ನು ಮೂಡಿಸಬೇಕು. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಾಮಾಜಿಕ ನೀತಿ, ನಿಯಮಾವಳಿಗಳ ಕುರಿತು ಭಯವನ್ನಲ್ಲ!! ಎಚ್ಚರಿಕೆಯನ್ನು ಮೂಡಿಸಬೇಕು.ಮಕ್ಕಳನ್ನು ತೀರಾ ಮುಚ್ಚಟೆಯಾಗಿ ಬೆಳೆಸದೆ ಸಮಾಜದ ಆಗುಹೋಗುಗಳ ಪರಿಣಾಮಗಳ ಅರಿವನ್ನು ಹೊಂದಿರುವ ರೀತಿಯಲ್ಲಿ ಬೆಳೆಸಬೇಕು. ತಪ್ಪು ಸರಿಗಳ ಪರಿಕಲ್ಪನೆ ಮಕ್ಕಳಲ್ಲಿ ಮೂಡಲೇಬೇಕು. ಯಾವುದೇ ವಿಷಯದ ಕುರಿತು ಮಕ್ಕಳು ಪಾಲಕರ ನಾಳ ಕೇಳುವ ನಿಟ್ಟಿನಲ್ಲಿ ಮಕ್ಕಳೊಂದಿಗೆ ಮಾತನಾಡುವಷ್ಟು ತಾಳ್ಮೆ, ಸಮಯ ಮತ್ತು ವ್ಯವಧಾನವನ್ನು ಹೊಂದಿರಬೇಕು. ಮಕ್ಕಳು ಪಾಲಕರನ್ನು ಪ್ರಶ್ನಿಸುವ ಬದಲು ಗೂಗಲ್ ನ ಮೊರೆ ಹೋದರೆ ಅದು ಒಂದು ರೀತಿಯಲ್ಲಿ ‘ಗಣಪನನ್ನು ಮಾಡು ಎಂದರೆ ಅವರಪ್ಪನನ್ನು ಮಾಡಿದಂತೆ ‘ ಆಗುತ್ತದೆ. ಮಕ್ಕಳು ತಿಳಿದುಕೊಳ್ಳಬೇಕಾದ ವಿಷಯಕ್ಕಿಂತ ನೂರು ಪಟ್ಟು ಹೆಚ್ಚು ವಿಷಯಗಳ ಕುರಿತು ಅನವಶ್ಯಕ ಕುತೂಹಲ, ಆಸಕ್ತಿ ಹುಟ್ಟಿಸುವಂತಹ ವಿಷಯ ನಿರೂಪಣೆಯನ್ನು ಶ್ರವಣ, ದೃಶ್ಯ ಮಾಧ್ಯಮಗಳಲ್ಲಿ ಪಡೆಯಬಹುದು. ಇಲ್ಲಿ ಎಷ್ಟೋ ಬಾರಿ ಮನವನ್ನು ಅರಳಿಸುವ ಬದಲಾಗಿ ಕೆರಳಿಸುವ ರೀತಿಯಲ್ಲಿ ವಿಷಯಗಳು ಮಕ್ಕಳಿಗೆ ತಲುಪಬಹುದು…. ಇದಕ್ಕೆ ಬದಲಾಗಿ ಪಾಲಕರು ತಮ್ಮ ಇತಿ ಮಿತಿಯಲ್ಲಿ ವಿಷಯಗಳನ್ನು ವೈಜ್ಞಾನಿಕವಾಗಿ ವಿವರಿಸಬಹುದು. ಶಾಲೆಗಳಲ್ಲಾದರೂ ಅಷ್ಟೇ… ಗಂಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಹೈಸ್ಕೂಲು ಹಾಗೂ ಕಾಲೇಜು ಹಂತದಲ್ಲಿ ಕೂಡ ಯಾವುದೇ ರೀತಿಯ ಲೈಂಗಿಕ ಶಿಕ್ಷಣದ ಅರಿವನ್ನು ಮೂಡಿಸುವ ತರಬೇತಿಗಳು ಇಲ್ಲ. ಅವರು ಕೇಳುವ, ಅರಿಯುವ ವಿಷಯಗಳು ಅವರಂತೆಯೇ ಇರುವ ಅಬೋಧ ಸ್ನೇಹಿತರ ಕಪೋಲ ಕಲ್ಪಿತ ವಿಷಯಗಳಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ. ಅವಿಭಕ್ತ ಕುಟುಂಬಗಳಲ್ಲಿ… ನಮಗೆ ದೊರೆಯದ್ದು ನಮ್ಮ ಮಕ್ಕಳಿಗಾದರೂ ದೊರೆಯಲಿ ಎಂಬ ಭಾವದಲ್ಲಿ ಮಕ್ಕಳು ಕೇಳುವ ಮುನ್ನವೇ ಅವರಿಗೆ ಎಲ್ಲವನ್ನು ಕೊಡ ಮಾಡುವ ಪಾಲಕರು, ಅವಶ್ಯಕತೆಗಿಂತ ಅನವಶ್ಯಕವಾದ ಆಹಾರ ಪದಾರ್ಥಗಳಲ್ಲಿ ಆಸಕ್ತಿಯನ್ನು ಹುಟ್ಟಿಸುವ ಮಾಧ್ಯಮಗಳು ಹಾಗೂ ಅಂತಹ ಪದಾರ್ಥಗಳ ಸೇವನೆಯಿಂದ ಹೆಚ್ಚುವರಿ ಹಾರ್ಮೋನುಗಳ ಬಿಡುಗಡೆಯಾಗಿ ಪ್ರಾಪ್ತ ವಯಸ್ಸಿಗೆ ಮುನ್ನವೇ ಹದಿವಯಸ್ಸಿನ ಹಸಿ-ಬಿಸಿ ಕಲ್ಪನೆಗಳನ್ನು ಮೂಡಿಸಿಕೊಳ್ಳುವ ಮಕ್ಕಳು ಪಾಲಕರಿಗೆ ಸಮಸ್ಯೆಯಾಗಿದ್ದಾರೆ. ಇನ್ನು ಶಾಲೆಯ ಕೆಲಸಗಳಿಗೆ ಬೇಕೇ ಬೇಕು ಎಂದು ಹಠ ಮಾಡಿ ಕೊಂಡುಕೊಳ್ಳುವ ಮೊಬೈಲ್, ಟ್ಯಾಬ್ ನಂತಹ ಗ್ಯಾಜೆಟ್ ಗಳು ಕೂಡ ಮಕ್ಕಳ ಮನಸ್ಸನ್ನು ಕೆಡಿಸುತ್ತಿವೆ. ಪ್ರೈವೆಸಿ ಎಂಬ ಹೆಸರಿನಲ್ಲಿ ಎಲ್ಲದಕ್ಕೂ ಪಾಸ್ವರ್ಡ್ ಇಟ್ಟು ಅದು ಯಾರ ಕೈಗೂ ಸಿಗದಂತೆ ಎಚ್ಚರ ವಹಿಸುವ ಮಕ್ಕಳು ಹಾದಿ ತಪ್ಪಲು ಮತ್ತಿನ್ನೇನು ಬೇಕು? ಸಾಮಾಜಿಕವಾಗಿ ಎಲ್ಲ ವಿಷಯಗಳಿಂದ ದೂರವಾಗಿರುವ ಕುಟುಂಬಗಳ ಮಕ್ಕಳು, ಕೌಟುಂಬಿಕ ಕಲಹ, ಪಾಲಕರ  ವಿಚ್ಛೇದನದ ಭೀತಿ, ಬಡತನ ಬೇರೊಬ್ಬರ ಐಷಾರಾಮಿ ಬದುಕನ್ನು ಕಂಡು ಹಾಗೆಯೇ ಇರಬೇಕೆಂದು ಆಶಿಸುವ ಮಕ್ಕಳು, ಪ್ರಸ್ತುತ ಸಮಾಜ ಇರುವುದೇ ಹೀಗೆ ಎಂಬ ಭ್ರಾಂತಿಯನ್ನು ಹುಟ್ಟು ಹಾಕುವ ಸಾಮಾಜಿಕ ಜಾಲತಾಣಗಳು, ಬೇರೊಬ್ಬರ ತಲೆ ಹೊಡೆದು ಆಸ್ತಿ ಮಾಡಿ ಅದನ್ನು ಅನುಭವಿಸುವುದೇ ಬದುಕಿನ ಮಹತ್ವದ ಸಾಧನೆ, ಮಚ್ಚು ಲಾಂಗುಗಳನ್ನು ಕೈಯಲ್ಲಿ ಹಿಡಿದು ತಿರುಗುವವನೇ ನಿಜವಾದ ಹೀರೋ, ಮನದ ಕಾಮನೆಗಳನ್ನು ಬಡಿದೆಬ್ಬಿಸುವ ಹಸಿ ಬಿಸಿ ಪ್ರಣಯದ ದೃಶ್ಯಗಳನ್ನು ಬಿಂಬಿಸುವ ಚಲನಚಿತ್ರಗಳು…. ಇವುಗಳ ಪರಿಣಾಮವಾಗಿ ಮಕ್ಕಳು ನೈತಿಕತೆಯ ಪರಿಧಿಯನ್ನು ದಾಟಿ ಹಾಳಾಗಿ ಹೋಗುತ್ತಿದ್ದಾರೆ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ಮಕ್ಕಳಿಗಾಗಿ ಉತ್ತಮ ಮೌಲ್ಯಯುತ ಬದುಕನ್ನು ಕಟ್ಟಿ ಕೊಡುವುದು ಆಗಿದೆ. ಪರಿಹಾರ ನಮ್ಮ ಕೈಯಲ್ಲಿಯೇ ಇದ್ದರೂ ಅದಷ್ಟು ಸುಲಭ ಸಾಧ್ಯವಿಲ್ಲ ಎಂಬ ಮಾತುಗಳು ಪಾಲಕರದ್ದಾಗಿವೆ…ನಿಜ! ಆದರೆ ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ ಅಲ್ಲವೇ ? *ಪಾಲಕರ ( ತಂದೆ ಮತ್ತು ತಾಯಿ ) ನಡುವಿನ ಸೌಹಾರ್ದ ಸಂಬಂಧ ಮಕ್ಕಳಲ್ಲಿ ಧೈರ್ಯವನ್ನು, ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಅಭದ್ರತೆಯ ನೆಲೆಯಲ್ಲಿ ಮಕ್ಕಳು ತಪ್ಪು ಹಾದಿಗೆ ಎಳಸುವುದು ಹೆಚ್ಚು. * ಮಾಧ್ಯಮಿಕ ಶಾಲೆಯಿಂದಲೇ ಮಕ್ಕಳಿಗೆ ನಮ್ಮ ದೇಹದ ಕುರಿತು ವೈಜ್ಞಾನಿಕ ವಿವರಣೆಯ ಜೊತೆಗೆ ಅವುಗಳ ಕಾರ್ಯ ವ್ಯಾಪ್ತಿಯ ಕುರಿತು ಅರಿವು ಮೂಡಿಸಬೇಕು. ಹದಿಹರೆಯದ ಅಲ್ಲಲ್ಲ…. ಹತ್ತರಿಂದ ಇಪ್ಪತ್ತರ ವಯಸ್ಸಿನವರೆಗಿನ ದೈಹಿಕ, ಮಾನಸಿಕ, ಪ್ರಚೋದನೆಗಳ ನಿರ್ವಹಣೆಯ ನಿಟ್ಟಿನಲ್ಲಿ ಮಕ್ಕಳನ್ನು ಹಾಡು, ನೃತ್ಯ, ನಾಟಕ, ಸಂಗೀತ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಬೇಕು. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳ ಮನಸ್ಸಿನಲ್ಲಿ ಹರೆಯದ ಹುಚ್ಚು ಕೋಡಿಯಂತಹ ಭಾವನಾತ್ಮಕ ಒತ್ತಡಗಳು ಹರಿದುಹೋಗುತ್ತವೆ. *ಸುಳ್ಳೇ ಆದರೂ ಸರಿ ನಾಟಕ, ನೃತ್ಯ, ಹಾಡುಗಳಲ್ಲಿ ನವರಸಗಳನ್ನು ಅಭಿನಯಿಸುವ, ಪ್ರದರ್ಶಿಸುವ ಮೂಲಕ ಮಕ್ಕಳ ಭಾವನೆಗಳ ಕಟ್ಟು ಸಹಜವಾಗಿ ಮತ್ತು ಸರಿಯಾದ ರೀತಿಯಲ್ಲಿ ಒಡೆದು ಹೋಗುವ ಕಾರಣ ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಅತ್ಯವಶ್ಯಕ.ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳು ನಿಧಾನವಾಗಿ ಶಿಸ್ತು, ಸಂಯಮ, ಶ್ರದ್ಧೆ ಹಾಗೂ ತಾಳ್ಮೆಯನ್ನು ಬದುಕಿನಲ್ಲಿ ರೂಡಿಸಿಕೊಳ್ಳುತ್ತಾರೆ. ಭಾವನಾತ್ಮಕ ಮತ್ತು ವಾಸ್ತವ ಜಗತ್ತಿನ ನಡುವಿನ ಅಂತರವನ್ನು ಕಂಡುಕೊಳ್ಳುತ್ತಾರೆ. ಬದುಕೇ ಬೇರೆ ಭಾವನೆಗಳೇ ಬೇರೆ ಎಂಬ ಅರಿವನ್ನು ಹೊಂದುತ್ತಾರೆ. *ಸಹವಾಸ…. ಸಮಾನ ಮನಸ್ಕರ ಸಹವಾಸಕ್ಕಿಂತ ಬದುಕಿನಲ್ಲಿ ಉತ್ತಮ ಗುರಿ, ಶ್ರದ್ಧೆ ಹೊಂದಿರುವ ಸ್ನೇಹಿತರ ಜೊತೆಗೆ ಸ್ನೇಹವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಹೂವಿನ ಜೊತೆ ನಾರು ಕೂಡ ಸ್ವರ್ಗಕ್ಕೆ ಹೋಗುತ್ತದೆ ಎಂದು ಹೇಳುತ್ತಾರಲ್ಲವೇ ಹಾಗೆಯೇ ಉತ್ತಮರ ಒಡನಾಟ ಬದುಕಿನಲ್ಲಿ ಉನ್ನತವಾದದನ್ನು ಸಾಧಿಸಲು ಅವಶ್ಯಕ ಎಂಬುದನ್ನು ಮಕ್ಕಳಿಗೆ ಮನಗಾಣಿಸಬೇಕು. * ನುರಿತ ತಜ್ಞ ವೈದ್ಯರಿಂದ, ಸಮಾಲೋಚಕರಿಂದ ಲೈಂಗಿಕ ಶಿಕ್ಷಣದ ಅರಿವನ್ನು ಮೂಡಿಸಬೇಕು. ದೇಹ ಮತ್ತು ಮನಸ್ಸುಗಳ ಶುಚಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕುರಿತು ಮಕ್ಕಳಿಗೆ ಅರಿವನ್ನು ಮೂಡಿಸಬೇಕು. ತಮ್ಮ ಮನದಲ್ಲಿ ಮೂಡುತ್ತಿರುವ ಭಾವನೆಗಳನ್ನು ಯಾವ ರೀತಿ ನಿಯಂತ್ರಿಸುವ ಹಾಗೂ ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಹೊಣೆಗಾರಿಕೆಯ ಅರಿವನ್ನು ಮೂಡಿಸಬೇಕು. * ಒಂದೊಮ್ಮೆ ತಪ್ಪು ಮಾಡಿದ್ದೆ ಆದರೆ ಅದರ ಪರಿಣಾಮಗಳ ಅರಿವನ್ನು ಕೂಡ ಗೊತ್ತು ಪಡಿಸಬೇಕು.  ಇದೆಲ್ಲದರ ಹೊರತಾಗಿಯೂ ನಮ್ಮ ನೆಲದ ಕಾನೂನಿನ ಕುರಿತು ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ  ಇರಲೇಬೇಕು. ಪ್ರೊಟೆಕ್ಷನ್ ಆಫ್ ಚೈಲ್ಡ್ ಫ್ರಮ್ ಸೆಕ್ಷುಯಲ್ ಆಫೆನ್ಸಸ್ (POCSO) ಕಾಯ್ದೆಯ ಅರಿವನ್ನು ಮಕ್ಕಳಿಗೆ ಮೂಡಿಸಬೇಕು. ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆಯ ಕುರಿತು ಮುಕ್ತವಾಗಿ ಅವರೊಂದಿಗೆ ಮಾತನಾಡುವ ಚರ್ಚಿಸುವ ಸಮಾಲೋಚಿಸುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಅರಿವಿಗೆ ಬರುವ ಮುನ್ನವೇ ಸಂಭವಿಸಬಹುದಾದ ಅಪರಾಧಗಳ ಸುಳಿಯಲ್ಲಿ ಮಕ್ಕಳು ಸಿಲುಕಿ ಒದ್ದಾಡಬಾರದು ಅಲ್ಲವೇ? ಈ ನಿಟ್ಟಿನಲ್ಲಿ ಬುದ್ಧಿಜೀವಿಗಳು, ಸಾಮಾಜಿಕ ಮನ ಶಾಸ್ತ್ರ ಪರಿಣತರು, ಶಿಕ್ಷಣ ತಜ್ಞರೊಂದಿಗೆ ಸರಕಾರಗಳು ಸಮಾಲೋಚನೆ ಮಾಡಿ ಮುಂದುವರೆಯಬೇಕು. ಮಕ್ಕಳ ಭವಿಷ್ಯಕ್ಕೆ ಹೊಸ ಹಾದಿಯನ್ನು ತೋರಬೇಕು ಎಂಬ ಆಶಯದೊಂದಿಗೆ ವೀಣಾ ಹೇಮಂತಗೌಡ ಪಾಟೀಲ್

“ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

You cannot copy content of this page

Scroll to Top