ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ.

ಲೇಖನ ಸಂಗಾತಿ “ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ. ದೆವ್ವ ಎಂದರೆ ನಮ್ಮ ಮನಸ್ಸಿಗೆ ತಕ್ಷಣ ಭಯಾನಕ ರೂಪ, ಕತ್ತಲೆ, ಕೂಗು, ಕಂಪನ—ಇವೆಲ್ಲವೂ ನೆನಪಾಗುತ್ತವೆ. ಆದರೆ ನಾನು ಕಂಡ ದೆವ್ವ ಯಾವುದೋ ಸಮಾಧಿಯಿಂದ ಹೊರಬಂದ ಭಯಾನಕ ರೂಪವಲ್ಲ. ಅದು ನನ್ನೊಳಗೇ ಹುಟ್ಟಿಕೊಂಡ, ನನ್ನ ಜೊತೆಯಲ್ಲೇ ಬೆಳೆಯುತ್ತಿದ್ದ, ನನ್ನ ನೆರಳಿನಂತೆ ನನ್ನನ್ನು ಹಿಂಬಾಲಿಸುತ್ತಿದ್ದ ದೆವ್ವ. ಅದರ ಹೆಸರು—ಅಸಹಾಯಕತೆ ಮತ್ತು ಅನುಮಾನ. ನನ್ನ ಜೀವನದ ಪ್ರತಿಯೊಂದು ತಿರುವಿನಲ್ಲೂ, ನಾನು ಧೈರ್ಯದಿಂದ ಮುಂದೆ ಸಾಗಬೇಕಾದ ಕ್ಷಣಗಳಲ್ಲೂ, ನನ್ನೊಳಗಿನ ಈ ದೆವ್ವ ನಿಧಾನವಾಗಿ ತಲೆಯೆತ್ತುತ್ತಿತ್ತು. “ನೀನು ಸಾಧ್ಯವಿಲ್ಲ”, “ನಿನ್ನಿಂದ ಆಗದು”, “ಇತರರು ನಿನ್ನಿಗಿಂತ ಮೇಲು”—ಎಂಬ ಗುಸುಗುಸು ಮಾತುಗಳನ್ನು ಅದು ನನ್ನ ಕಿವಿಯಲ್ಲಿ ಹಚ್ಚುತ್ತಿತ್ತು. ಮೊದಲಿಗೆ ನಾನು ಅದನ್ನು ನಿರ್ಲಕ್ಷ್ಯ ಮಾಡುತ್ತಿದ್ದೆ. ಆದರೆ ದಿನಗಳು ಕಳೆಯುತ್ತಿದ್ದಂತೆ, ಅದು ನನ್ನ ಆಲೋಚನೆಗಳನ್ನೇ ಆವರಿಸಿತು. ಅಸಹಾಯಕತೆ ಎನ್ನುವುದು ಏಕಾಏಕಿ ಬರುವ ಭಾವವಲ್ಲ. ಅದು ನಿಧಾನವಾಗಿ ನಮ್ಮ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಒಂದು ಸೋಲು, ಒಂದು ಟೀಕೆ, ಒಂದು ಹೋಲಿಕೆ—ಇವುಗಳೇ ಅದರ ಆಹಾರ. ಸಮಾಜದ ನಿರೀಕ್ಷೆಗಳು, ಕುಟುಂಬದ ಒತ್ತಡ, ಸ್ನೇಹಿತರ ಸಾಧನೆಗಳು—ಇವೆಲ್ಲವೂ ಸೇರಿ ನನ್ನೊಳಗಿನ ಅಸಹಾಯಕತೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದವು. ನಾನು ಪ್ರಯತ್ನಿಸಬೇಕೆಂದಾಗಲೆಲ್ಲ, “ಪ್ರಯತ್ನಿಸಿ ಏನು ಪ್ರಯೋಜನ?” ಎಂಬ ಪ್ರಶ್ನೆ ನನ್ನನ್ನು ತಡೆಹಿಡಿಯುತ್ತಿತ್ತು. ಅನುಮಾನ ಇನ್ನೊಂದು ಮುಖ. ಅದು ಕೇವಲ ಇತರರ ಮೇಲಿನ ಅನುಮಾನವಲ್ಲ; ಅದು ನನ್ನ ಮೇಲಿನ ಅನುಮಾನ. ನನ್ನ ಸಾಮರ್ಥ್ಯಗಳ ಬಗ್ಗೆ, ನನ್ನ ನಿರ್ಧಾರಗಳ ಬಗ್ಗೆ, ನನ್ನ ಕನಸುಗಳ ಬಗ್ಗೆ. ನಾನು ಒಂದು ಹೆಜ್ಜೆ ಮುಂದಿಟ್ಟರೆ, ಅನುಮಾನ ಹತ್ತು ಹೆಜ್ಜೆ ಹಿಂದೆ ಎಳೆಯುತ್ತಿತ್ತು. ಈ ಅನುಮಾನವೇ ನನ್ನೊಳಗಿನ ದೆವ್ವಕ್ಕೆ ಕಣ್ಣು, ಕಿವಿ, ಬಾಯಿ—ಎಲ್ಲವನ್ನೂ ನೀಡಿತ್ತು. ನನ್ನ ಜೀವನದ ಒಂದು ಹಂತದಲ್ಲಿ, ನಾನು ಸಂಪೂರ್ಣವಾಗಿ ಈ ದೆವ್ವದ ಹಿಡಿತದಲ್ಲಿದ್ದೆ. ಹೊಸ ಅವಕಾಶಗಳು ಬಂದಾಗ ನಾನು ಹಿಂದೆ ಸರಿದೆ. ನನ್ನ ಮಾತುಗಳಿಗೆ ಮೌಲ್ಯ ಇಲ್ಲವೆಂದು ಭಾವಿಸಿದೆ. ನನ್ನ ಕನಸುಗಳು ಅಸಾಧ್ಯವೆಂದು ನಂಬಿದೆ. ಹೊರಗೆ ನಗುತ್ತಿದ್ದರೂ, ಒಳಗೆ ನಾನು ನಿತ್ಯವೂ ಯುದ್ಧ ಮಾಡುತ್ತಿದ್ದೆ—ನನ್ನನ್ನೇ ನನ್ನ ವಿರುದ್ಧ ನಿಲ್ಲಿಸಿದ ಯುದ್ಧ. ರಾತ್ರಿ ನಿದ್ರೆಗೆ ಜಾರುವಾಗ, ನನ್ನೊಳಗಿನ ದೆವ್ವ ಹೆಚ್ಚು ಸಕ್ರಿಯವಾಗುತ್ತಿತ್ತು. ದಿನದ ಎಲ್ಲ ಘಟನೆಗಳನ್ನು ಅದು ಮರುಕಳಿಸುತ್ತಿತ್ತು. ನಾನು ಮಾಡಿದ ಸಣ್ಣ ತಪ್ಪುಗಳನ್ನು ದೊಡ್ಡದಾಗಿ ತೋರಿಸುತ್ತಿತ್ತು. ನಾನು ಹೇಳದೆ ಉಳಿದ ಮಾತುಗಳನ್ನು, ಮಾಡದೆ ಉಳಿದ ಕೆಲಸಗಳನ್ನು ನೆನಪಿಸಿ, “ನೀನು ಸೋತವನು” ಎಂದು ಮುದ್ರೆ ಹಾಕುತ್ತಿತ್ತು. ಆ ಕ್ಷಣಗಳಲ್ಲಿ, ನಿಜಕ್ಕೂ ನಾನು ಭಯಪಟ್ಟಿದ್ದೆ—ಆ ದೆವ್ವದಿಂದಲ್ಲ, ನನ್ನನ್ನೇ ಕಳೆದುಕೊಳ್ಳುವ ಭಯದಿಂದ. ಆದರೆ ಪ್ರತಿಯೊಂದು ಕತ್ತಲಿಗೂ ಒಂದು ಬೆಳಕು ಇರುವಂತೆ, ನನ್ನ ಜೀವನದಲ್ಲೂ ಒಂದು ತಿರುವು ಬಂದಿತು. ಅದು ಯಾವುದೇ ಅದ್ಭುತ ಘಟನೆಯಲ್ಲ. ಒಂದು ಸರಳ ಪ್ರಶ್ನೆ—“ನನ್ನನ್ನು ಇಷ್ಟು ವರ್ಷ ತಡೆದಿದ್ದು ಯಾರು?” ಎಂಬ ಪ್ರಶ್ನೆ. ಉತ್ತರ ಹುಡುಕುತ್ತಾ ಹೋದಾಗ, ಬೆರಳು ಹೊರಗಿನ ಲೋಕದತ್ತ ಅಲ್ಲ, ನನ್ನ ಹೃದಯದತ್ತ ತೋರಿಸಿತು. ನಾನು ಕಂಡ ದೆವ್ವ ಬೇರೆ ಯಾರೂ ಅಲ್ಲ; ನಾನು ಬೆಳೆಸಿಕೊಂಡ ಭಯವೇ ಅದು. ಆ ದಿನದಿಂದ, ನಾನು ಆ ದೆವ್ವವನ್ನು ಎದುರಿಸುವ ನಿರ್ಧಾರ ಮಾಡಿದೆ. ಹೋರಾಟ ಎಂದರೆ ಕತ್ತಿ ಹಿಡಿದು ಯುದ್ಧ ಮಾಡುವುದಲ್ಲ. ನನ್ನ ಆಲೋಚನೆಗಳನ್ನು ಪ್ರಶ್ನಿಸುವುದೇ ನನ್ನ ಮೊದಲ ಹೆಜ್ಜೆ. “ನೀನು ಸಾಧ್ಯವಿಲ್ಲ” ಎಂಬ ಧ್ವನಿ ಬಂದಾಗ, “ಏಕೆ ಸಾಧ್ಯವಿಲ್ಲ?” ಎಂದು ನಾನು ನನ್ನನ್ನೇ ಕೇಳಿಕೊಳ್ಳತೊಡಗಿದೆ. ಉತ್ತರ ಸಿಗದಾಗ, ಅನುಮಾನವೇ ಸೋಲತೊಡಗಿತು. ನಾನು ಸಣ್ಣ ಸಣ್ಣ ಗೆಲುವುಗಳನ್ನು ಸಂಭ್ರಮಿಸಲು ಕಲಿತೆ. ಒಂದು ದಿನ ಧೈರ್ಯವಾಗಿ ಮಾತಾಡಿದರೆ, ಮತ್ತೊಂದು ದಿನ ಒಂದು ಹೊಸ ಪ್ರಯತ್ನ ಮಾಡಿದರೆ—ಇವೆಲ್ಲವೂ ನನ್ನೊಳಗಿನ ದೆವ್ವವನ್ನು ದುರ್ಬಲಗೊಳಿಸುತ್ತಿದ್ದವು. ಅದು ಇನ್ನೂ ಅಲ್ಲಿ ಇದ್ದೇ ಇತ್ತು, ಆದರೆ ಅದರ ಶಕ್ತಿ ಕಡಿಮೆಯಾಗುತ್ತಿತ್ತು. ಏಕೆಂದರೆ ನಾನು ಅದಕ್ಕೆ ಇನ್ನು ಆಹಾರ ನೀಡುತ್ತಿರಲಿಲ್ಲ. ಅಸಹಾಯಕತೆ ಸಂಪೂರ್ಣವಾಗಿ ಮಾಯವಾಗಲಿಲ್ಲ. ಕೆಲವೊಮ್ಮೆ ಅದು ಮತ್ತೆ ತಲೆಯೆತ್ತುತ್ತದೆ. ಆದರೆ ಈಗ ನನಗೆ ಗೊತ್ತು—ಅದು ದೆವ್ವವಲ್ಲ, ಒಂದು ಎಚ್ಚರಿಕೆ. “ನೀನು ಮಾನವ, ನಿನ್ನಿಗೂ ಭಯಗಳು ಇವೆ” ಎಂದು ನೆನಪಿಸುವ ಸೂಚನೆ. ಆ ಭಯಗಳ ಜೊತೆ ಬದುಕುವುದನ್ನು ನಾನು ಕಲಿತಿದ್ದೇನೆ; ಅವುಗಳ ಕೈಗೆ ನನ್ನ ಜೀವನದ ನಿಯಂತ್ರಣ ನೀಡುವುದನ್ನು ಅಲ್ಲ. ಇಂದು ಹಿಂದಿರುಗಿ ನೋಡಿದಾಗ, ನಾನು ಕಂಡ ದೆವ್ವ ನನಗೆ ಒಂದು ಪಾಠ ಕಲಿಸಿದೆ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರು ಹೆಚ್ಚು ಅಪಾಯಕಾರಿ. ಆದರೆ ಅದೇ ಶತ್ರುವನ್ನು ಗುರುತಿಸಿದರೆ, ಅದನ್ನೇ ನಮ್ಮ ಶಕ್ತಿಯಾಗಿಸಿಕೊಳ್ಳಬಹುದು. ನನ್ನೊಳಗಿನ ಅನುಮಾನವೇ ನನಗೆ ಸ್ವಪರಿಶೀಲನೆ ಕಲಿಸಿತು. ಅಸಹಾಯಕತೆಯೇ ನನಗೆ ಸಹಾನುಭೂತಿ ಕಲಿಸಿತು. ಈ ಲೇಖನ ಓದುವ ಯಾರಾದರೂ ತಮ್ಮೊಳಗಿನ ದೆವ್ವವನ್ನು ಕಂಡಿದ್ದರೆ, ಒಂದನ್ನು ನೆನಪಿಡಿ—ನೀವು ಒಂಟಿಯಲ್ಲ. ಆ ದೆವ್ವ ನಿಮ್ಮನ್ನು ನಾಶಮಾಡಲು ಬಂದಿಲ್ಲ; ನಿಮ್ಮನ್ನು ಬಲಪಡಿಸಲು ಬಂದಿರಬಹುದು. ಅದನ್ನು ಓಡಿಸಲು ಯತ್ನಿಸಬೇಡಿ, ಎದುರಿಸಿ. ಕೇಳಿ, ಪ್ರಶ್ನಿಸಿ, ಅರ್ಥಮಾಡಿಕೊಳ್ಳಿ. ಆಗ ಅದು ದೆವ್ವವಲ್ಲ, ನಿಮ್ಮೊಳಗಿನ ಮೌನ ಗುರು ಆಗುತ್ತದೆ. ನಾನು ಕಂಡ ದೆವ್ವ ಇಂದಿಗೂ ನನ್ನ ಜೊತೆಯಲ್ಲೇ ಇದೆ. ಆದರೆ ಈಗ ಅದು ನನ್ನನ್ನು ಆಳುವುದಿಲ್ಲ. ನಾನು ಅದನ್ನು ನೋಡುತ್ತೇನೆ, ನಗುತ್ತೇನೆ, ಮತ್ತು ಮುಂದಕ್ಕೆ ಸಾಗುತ್ತೇನೆ. ಏಕೆಂದರೆ ಈಗ ನನಗೆ ಗೊತ್ತು—ನನ್ನ ಜೀವನದ ನಾಯಕ ನಾನು, ನನ್ನ ಭಯಗಳಲ್ಲ. ——- ಪೃಥ್ವಿರಾಜ್ ಟಿ ಬಿ

“ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ. Read Post »

ಇತರೆ, ನಿಮ್ಮೊಂದಿಗೆ

“ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ.

ಜೀವನ ಸಂಗಾತಿ “ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎಂಬುವುದು ಬಹಳ ಅರ್ಥಪೂರ್ಣವಾದಂತಹ ಮಾತು. ಇದು ಜನಪದರ ಅನುಭವದ ಮೂಸೆಯಿಂದ ಮೂಡಿ ಬಂದ ಮುತ್ತು. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎನ್ನುವ ಮಾತಿನಲ್ಲಿ ಅಕ್ಕರೆಗೆ ಅಥವಾ ಪ್ರೀತಿಗೆ ಬಹಳ ಪ್ರಮುಖವಾದ ಸ್ಥಾನವನ್ನು ಕೊಡಲಾಗಿದೆ.ಅಕ್ಕರೆ ಎನ್ನುವುದು ಜೀವದ ಸೆಲೆಯಾಗಿದೆ.  ಇಂದು ನಮ್ಮ ಸಮಾಜದಲ್ಲಿ ಅನ್ನದ ಹಸಿವಿನಿಂದ ಬಳಲುವವರಿಗಿಂತ ಪ್ರೀತಿ ಅಥವಾ ಅಕ್ಕರೆಯ ಹಸಿವಿನಿಂದ ಬಳಲುವರೇ ಹೆಚ್ಚಾಗಿದ್ದಾರೆ.ಇಂತಹ ಕಾಲಘಟ್ಟದಲ್ಲಿ ಪ್ರೀತಿಯು ಬಹಳ ದುಬಾರಿಯಾಗಿ ಕಂಡುಬರುವಂತಹ ಸಂದರ್ಭದಲ್ಲಿ, ಈ ಮಾತಿನ ಬಗ್ಗೆ ಚಿಂತನ ಮಂಥನ ಮಾಡಬೇಕಾದದ್ದು ಬಹಳ ಅಗತ್ಯವೆಂದು ನನಗನಿಸುತ್ತದೆ. ಇಂದು  ಯಾಂತ್ರಿಕ ಯುಗ. ಬದುಕು ಕೂಡ ಯಾಂತ್ರಿಕವಾಗಿದೆ.ಮನುಷ ಮನುಷರ ಮನಸ್ಸುಗಳ ನಡುವೆ ದ್ವೇಷದ ಗೋಡೆ ಕಟ್ಟಲ್ಪಟ್ಟಿದೆ.ಎಲ್ಲೆಲ್ಲೂ ಮುಖವಾಡದ ಬದುಕೇ ಕಂಡುಬರುತ್ತಿದೆ.ಇಂತಹ ಬದುಕಿನಲ್ಲಿ ಯಾವುದೇ ರೀತಿಯಲ್ಲಿ ಶಾಂತಿ, ನೆಮ್ಮದಿ ಸಿಗಲಾರದು ಎಷ್ಟೇ ಪ್ರೀತಿ ತೋರಿದರೂ ಆ ಪ್ರೀತಿಯ ಹಿಂದೆ ಅದ್ಯಾವ ಕುತಂತ್ರ ಅಡಗಿದೆಯೋ ಎಂಬ ಹೆದರಿಕೆ ಕಾಡುತ್ತದೆ. ಹೀಗಿರುವಾಗ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತ ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ಪ್ರೀತಿ ಇಲ್ಲದೆ ಅಥವಾ ಅಕ್ಕರೆ ಇಲ್ಲದೆ ಊಟ ಹಾಕುವವರು, ಊಟವನ್ನು ಹಾಕಬೇಕಲ್ಲಾ ಎನ್ನುವಂತಹ (ಅನಿವಾರ್ಯತೆ) ಭಾವನೆಯಿಂದ ಮೃಷ್ಟಾನ್ನ ಭೋಜನ ಬಡಿಸಿದರೂ, ಅದು ರುಚಿಸದು. ಮನಸ್ಸಿಗೆ ಹಿತವಾಗದು. ಅದೇ ಪ್ರೀತಿಯಿಂದ ಅಂಬಲಿಯನ್ನು ಬಡಿಸಿದರೂ ಅದರಲ್ಲಿ ಮೃಷ್ಟಾನ್ನ ಭೋಜನ ಮಾಡಿದಷ್ಟು ಸಂತಸವಿರುತ್ತದೆ, ಸವಿಯಿರುತ್ತದೆ.ಪ್ರೀತಿ ತೋರಿಸುವಾಗ ಬಡವ -ಶ್ರೀಮಂತ, ಉಳ್ಳವರು- ಇಲ್ಲದವರು, ಅವರು -ಇವರು ಎಂಬ ಯಾವ ಭೇದ ಭಾವವು ಇರಬಾರದು ಎಂಬ ತತ್ವವೂ ವ್ಯಕ್ತವಾಗುತ್ತದೆ. ಪ್ರೀತಿಯಿಂದ ಯಾರು ಏನೇ ಕೊಟ್ಟರೂ ಅದು ಸ್ವೀಕರಿಸಲು ಯೋಗ್ಯವಾದದ್ದು ಎಂಬ ಅರ್ಥವನ್ನು ನೀಡುತ್ತದೆ.ಇದಕ್ಕೆ ಪೂರಕವಾದ ಉದಾಹರಣೆಯನ್ನು ಮಹಾಭಾರತದಿಂದ ನಾವು ಉಲ್ಲೇಖಿಸಬಹುದು, ಕೃಷ್ಣ ಸುಧಾಮರ ಉದಾರಣೆಯನ್ನೇ ತೆಗೆದುಕೊಂಡರೆ ಸುಧಾಮ ಬಡವನಾದರೂ, ಕೃಷ್ಣನಿಗೆ ಪ್ರೀತಿಯಿಂದ ಹಿಡಿ ಅವಲಕ್ಕಿ ನೀಡಿದ್ದನ್ನು ಕೃಷ್ಣ ಅದೆಷ್ಟು ಸವಿಯಾಗಿ ತಿನ್ನುತ್ತಾನೆ!.ಸಂತಸ ಪಡುತ್ತಾನೆ!. ಹಾಗೆಯೇ ನಮ್ಮನ್ನು ಪ್ರೀತಿಸುವವರು ಅದೇನೇ ನೀಡಿದರೂ ಅದು ನಮಗೆ ಸವಿಯಾಗಿಯೇ ಇರುತ್ತದೆ. ಜೀವನ ನಿಂತಿರುವುದೇ ಪ್ರೀತಿಯ ಮೇಲೆ. ಹಾಗಾಗಿ ಪ್ರತಿಯೊಂದು ಜೀವಿಯು ಕೂಡ ಪ್ರೀತಿಗಾಗಿ ಹಾತೊರೆಯುತ್ತದೆ. ತಾವು ಬಯಸುವ ಪ್ರೀತಿ ತಮಗೆ ಸಿಕ್ಕಿತೆಂದರೆ ಮನಸ್ಸಿಗೆ ಆಗುವ ಆನಂದವನ್ನು ಮಾತಿನಲ್ಲಿ ಹೇಳಲಾಗದು.ಸಂಸಾರದ ಉದಾಹರಣೆಯನ್ನೇ ತೆಗೆದುಕೊಂಡರೆ, ಗಂಡ ಹೆಂಡತಿಯ ನಡುವೆ ಪ್ರೀತಿ ಇದ್ದರೆ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಅವರು ಒಬ್ಬರಿಗೊಬ್ಬರು ಸಹಿಸಿಕೊಂಡು, ಸಮಾಧಾನದಿಂದ ಸಂಸಾರವನ್ನು ಸರಿದೂಗಿಸಿಕೊಂಡು ಮುನ್ನಡೆಯುತ್ತಾರೆ. ಅದೇ ಗಂಡ ಹೆಂಡಿರ ನಡುವೆ ಪ್ರೀತಿ ಇಲ್ಲದೆ ಇದ್ದಲ್ಲಿ  ಆಗರ್ಭ ಶ್ರೀಮಂತರಾದರೂ ಅವರು ಪ್ರೀತಿಯಿಂದ ಬಾಳುವುದಕ್ಕೆ ಸಾಧ್ಯವಿಲ್ಲ. ಅಕ್ಕರೆ ಇದ್ದರೆ ಅಂಬಲಿಯೂ ಸವಿ. ಅದೇ ಮೃಷ್ಟಾನ್ನ, ಅದೇ ಪರಮಾನ್ನ.ಒಂದು ಪ್ರೀತಿಯ ಮಾತು ಎಷ್ಟೋ ದುಃಖ ತಪ್ತ ಮನಸ್ಸುಗಳನ್ನು ಸಾಂತ್ವಾನಗೊಳಿಸಬಲ್ಲದಂತೆ.ಅಂದರೆ ಪ್ರೀತಿಗೆ ಅಷ್ಟು ಶಕ್ತಿ ಇದೆ. ಶಕ್ತಿಯಿಂದ ಮಾಡಲಾಗದ್ದನ್ನು, ಯುಕ್ತಿಯಿಂದ ಸಾಧಿಸಲಾಗದ್ದನ್ನು, ಪ್ರೀತಿಯಿಂದ ಸಾಧಿಸಬಹುದು ಎಂಬಂತೆ. ಪ್ರೀತಿ ಇದ್ದರೆ ಎಲ್ಲವೂ ಸಾಧ್ಯ. ಸಿಹಿಕಹಿ ಎನ್ನುವಂತದ್ದು ನಮ್ಮ ಮನಸ್ಸಿನ ಭಾವನೆಗೆ ಬಿಟ್ಟದ್ದು. ನಮಗೆ ಇಷ್ಟವಾಗುವವರು ಏನಾದರೂ ಮಾಡಿದರೆ ನಮ್ಮ ಮನಸ್ಸು ಅದು ಒಳ್ಳೆಯದೆಂದೇ ಭಾವಿಸುತ್ತದೆ.ನಮಗಾಗದವರು ಒಳ್ಳೆಯದನ್ನೇ ಮಾಡಿದರೂ ನಾವು ಅದರಲ್ಲಿ ಕೆಟ್ಟದ್ದನ್ನು ಕಾಣುತ್ತೇವೆ. ಉದಾಹರಣೆಗೆ ನಮ್ಮ ಅಮ್ಮ ಎಷ್ಟು ಬೈದರೂ ನಾವು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ,ಅಮ್ಮನನ್ನು ಪ್ರೀತಿಯಿಂದ ಕಾಣುತ್ತೇವೆ. ಏಕೆಂದರೆ ಅಮ್ಮ ಎಂದರೆ ನಮಗೆ ಪ್ರೀತಿ. ಅವಳು ಬೈದರೆ ಪ್ರೀತಿಯಿಂದಲೇ ಬಯ್ಯುತ್ತಾಳೆ ಎಂಬ ನಮ್ಮ ಮನಸ್ಥಿತಿ. ಅದೇ ಅತ್ತೆ ಎಲ್ಲಿಯಾದರೂ ಬೈದಳೆಂದರೆ ನಾವು ಸಿಟ್ಟು ಮಾಡಿಕೊಂಡು, ಮುಂದೆ ಏನೇನೋ ಆವಾಂತರಕ್ಕೆ ಕಾರಣವಾಗುತ್ತದೆ.ವಿಷಯ ಇಷ್ಟೇ. ಅತ್ತೆ ಹೇಳಿದ್ದು ಕೂಡ ತಾಯಿ ಹೇಳಿದ್ದನ್ನೇ. ಆದರೆ ತಾಯಿ ಹೇಳಿದಾಗ ಬೇಸರವಾಗದ ನಮಗೆ ಅತ್ತೆ ಅದೇ ಮಾತನ್ನು ಹೇಳಿದಾಗ ಮನಸ್ಸಿಗೆ ನಾಟುತ್ತದೆ, ಅವಮಾನವಾಗುತ್ತದೆ. ಏಕೆ? ಕಾರಣ ಇಷ್ಟೇ .ಅಮ್ಮ ನಮ್ಮವರು,ಅತ್ತೆ ಎರಡನೆಯ ವ್ಯಕ್ತಿ ಎಂಬ ಭಾವ. ಇಲ್ಲಿ ಪ್ರೀತಿಯ ಕೊರತೆ ನಮ್ಮನ್ನು ಹಾಗೆ ಯೋಚಿಸುವಂತೆ ಮಾಡುತ್ತದೆ. ಈಗೀಗ “ಮುಖ ನೋಡಿ ಮಣೆ ಹಾಕು”ಎಂಬಂತೆ ಇತರರ ಶ್ರೀಮಂತಿಕೆ, ಅಧಿಕಾರ, ಹಣ, ಅಂತಸ್ತು ನೋಡಿಯೇ ಅದಕ್ಕೆ ತಕ್ಕಂತೆ ಅವರನ್ನು ಉಪಚರಿಸುತ್ತಾರೆ .ಬಡವರಾದರೆ ಅವರನ್ನು ಉಪಚರಿಸುವ ಗೋಜಿಗೆ ಹೋಗದೆ ಸುಮ್ಮನೆ ಇರುತ್ತಾರೆ. ಇಂತಹ ಜನರಿರುವಾಗ ಅಕ್ಕರೆಗೆ ಬೆಲೆಯಾದರೂ ಎಲ್ಲಿದೆ? ಹಾಗಾಗಿ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತೆ ನಮಗೆ ಪ್ರೀತಿ ಇದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನವು ಯಾಂತ್ರಿಕವಾಗಿಯೇ ನಡೆಯುತ್ತಿದೆ. ಮನುಷ್ಯನಿಗೆ ಒತ್ತಡದ ಜೀವನದಲ್ಲಿ ಪರಸ್ಪರ ಪ್ರೀತಿಯಿಂದ ಮಾತನಾಡುವುದ ಕ್ಕಾಗಲಿ ,ಎಲ್ಲರೂ ಒಟ್ಟು ಸೇರಿ ಪ್ರೀತಿಯಿಂದ ಉಣ್ಣುವುದಕ್ಕಾಗಲಿ, ಸಮಯವೇ ಇಲ್ಲ. ಒಂದೇ ಮನೆಯಲ್ಲಿ ಒಬ್ಬೊಬ್ಬರ ಊಟದ ಸಮಯ ಒಂದೊಂದು ಆಗಿರುವಾಗ, ಇನ್ನು ಪ್ರೀತಿಯಿಂದ ಇತರರಿಗೆ ಊಟ ಹಾಕಲು ಸಮಯವಾದರೂ ಎಲ್ಲಿದೆ? ಜೀವನವಿಡೀ ಒತ್ತಡದಿಂದಲೇ ಕಳೆಯುವ ಪರಿಸ್ಥಿತಿ ಬಂದಿದೆ. ಇದು ಬದಲಾಗಬೇಕು. ಪರಸ್ಪರ ಪ್ರೀತಿ ಸಹನೆಯಿಂದ ಆಗಾಗ ಒಟ್ಟು ಸೇರಿ,  ಕಾಲ ಕಳೆಯುವಂತಾಗಬೇಕು. ಕಷ್ಟವಿದ್ದರೂ, ಸಂಕಷ್ಟಗಳು ಬಂದರೂ ಪ್ರೀತಿಯಿಂದ ಅಂಬಲಿಯಾದರೂ ಸರಿ, ಸವಿದು ಬದುಕೋಣ. ———— ಡಾ.ಸುಮತಿ ಪಿ

“ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ. Read Post »

ಕಾವ್ಯಯಾನ

“ವಿಷ ಮನಸ್ಕರು”ಹಮೀದ್ ಹಸನ್ ಮಾಡೂರು

ಕಾವ್ಯ ಸಂಗಾತಿ “ವಿಷ ಮನಸ್ಕರು” ಹಮೀದ್ ಹಸನ್ ಮಾಡೂರು ಕುಟುಕುವವರುಇರುವಷ್ಟು ದಿನವೂಬದುಕಿಗದು ಪಾಠವಯ್ಯ! ಪದಾರ್ಥದಲ್ಲಿ…..ಒಗ್ಗರಣೆಯಿದ್ದರೇ ತಾನೇನಾಲಗೆಗೆ ಅದು ರುಚಿಸುದಯ್ಯ! ಜೊತೆಗಾರರೇ…..ಕೊಕ್ಕೆ ಇಟ್ಟು ಎಳೆದಾಗದುಃಖ ಸಹಜ ಅನುಭವಿಸಯ್ಯ! ದೂರವಿರುವುದೇ ಲೇಸುಸಂಶಯಾಸ್ಪದಕರೆಂದು ನಮ್ಮವರಲ್ಲಸೈತಾನನ ಸಹಚರರು,ತಿಳಿದು ಬಾಳಯ್ಯ!————————————————ಹಮೀದ್ ಹಸನ್ ಮಾಡೂರು.

“ವಿಷ ಮನಸ್ಕರು”ಹಮೀದ್ ಹಸನ್ ಮಾಡೂರು Read Post »

ಇತರೆ

“ವಚನ ಯುಗದ ಮಹಿಳೆಯರು”ವಿಜಯಲಕ್ಷ್ಮಿ ಕೆ ಹಂಗರಗಿ

ವಚನ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ವಚನ ಯುಗದ ಮಹಿಳೆಯರು” ವಿಶ್ವಕುಟುಂಬ ವಿಶ್ವದಲ್ಲಿ ಎಲ್ಲಾ ಜಾತಿ ಜನಾಂಗಗಳ ನಿಜ ಸಂಸ್ಕೃತಿಯ ತಾಯಿ ಬೇರು ಅಂತಃಕರಣದಿಂದ ಕೂಡಿದ ಜೀವನ, ಪ್ರೀತಿ ಈ ಲೋಕ ಮಾನವ ಕೇಂದ್ರವಲ್ಲ, ಜೀವಕೇಂದ್ರಿತವಾದದ್ದು. ಸ್ವಾರ್ಥ ಪ್ರೇಮದಿಂದ ಕೂಡಿದ ಪ್ರಪಂಚವನ್ನು ಸೃಷ್ಟಿಸುವುದೇ ಬಸವಣ್ಣನವರ ಕನಸಾಗಿತ್ತು.ಬಸವಣ್ಣನವರ ದೃಷ್ಟಿಯಲ್ಲಿ ಹೆಣ್ಣು ಮಕ್ಕಳು ಪ್ರತಿಭೆಯಲ್ಲಿ ಭೌಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು ,ಜೀವನದ ಸಕಲ ವ್ಯವಹಾರದಲ್ಲಿ  ಅವಳಷ್ಟೇ ವಿಶಾಲಮತಿ ಬೇರೆ ಯಾರು ಇಲ್ಲ ಎಂದು ತಿಳಿದಿದ್ದರು.ಬಸವಣ್ಣನವರು ಮಹಿಳೆಯರ ಅಂತಃಕರಣವನ್ನು ಓರೆಗೆ ಹಚ್ಚಿ ನೋಡಿದರು. ಹಾಗಾಗಿ ಗೌಪ್ಯ ವಚನಗಾರ್ತಿಯರು ವಚನ ಸಾಹಿತ್ಯ ರಚಿಸುವಲ್ಲಿ  ಸುಖಕರವಾಗಿ ವಚನಗಳನ್ನು ರಚಿಸಿದರು. ಅವರಲ್ಲಿ ಪ್ರಮುಖರಾದವರೆಂದರೆ ಅಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ ,ಕದಿರೆ ಕೆಮ್ಮುವೆ, ಕಾಳವ್ವೆ ,ಕಾಮವೆ, ಗಂಗಮ್ಮ ಬೋನ್ತಾದೇವಿ, ನೀಲಾಂಬಿಕೆ ,ಲಿಂಗಮ್ಮ ವೀರಮ್ಮ, ಲಕ್ಷ್ಮಮ್ಮ ,ರೇಖಮ್ಮ ,ಸತ್ಯಕ್ಕ ಮೊದಲಾದವರು ಇನ್ನೂ ಇವರು ಬಹುತೇಕ ವಚನಗಾರ್ತಿಯರ ಹೆಸರಿದ್ದರೂ ಅವರ ವಚನಗಳು ಸಿಕ್ಕಿಲ್ಲ ಉದಾಹರಣೆಗೆ : ಕಲ್ಯಾಣಮ್ ,ಕದಿರ ಕಾಳವ್ವೆ ಮುಂತಾದವರು ವಚನ ಸಾಹಿತ್ಯ ಕನ್ನಡ ದೇಸಿ ಪದ್ಯ ಜಾತಿ ವಚನಕಾರರು ಅಚ್ಚ ಕನ್ನಡ ಕೃಷಿಕರು ಆಗಿದ್ದಾರೆ.ವಚನ ಸಾಹಿತ್ಯದಲ್ಲಿ ಬಸವ ಯುಗದ ವಚನಗಾರ್ತಿಯರಂತೆ ಕೊಡುಗೆಯುತ್ತವರನ್ನು ಬಹುಶಃ ಯಾವ ಶತಮಾನವು ಕಂಡಿರಲಿಲ್ಲ.ಈ ಕಾಲಘಟ್ಟದಲ್ಲಿ ಹಲವಾರು ಶರಣರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿ ರುವುದನ್ನು ಯಾರು ಹೆಚ್ಚಾಗಿ ಪ್ರಚಾರಪಡಿಸದೆ ಇರುವುದು ಅಚ್ಚರಿಯನ್ನುಂಟುಮಾಡುತ್ತದೆ. ಇಂಥವರನ್ನು ವಚನಗಾರ್ತಿಯರು ಅಥವಾ ಗೌಪ್ಯ ವಚನಗಾರ್ತಿಯರು ಎಂದು ಕರೆಯಬಹುದಾಗಿದೆ.ವಚನ ಯುಗವು ಮಹಿಳೆಯರ ಅಂತರ್ಯದಲ್ಲಿ ನವ ಜಾಗೃತಿ ನವ ಸಾಕ್ಷರತೆಯ ಅರಿವು ಮೂಡಿಸಿ ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ 26 ಕ್ಕೂ ಹೆಚ್ಚುಜನ ಶರಣೆಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಅವರಲ್ಲಿ ಕೆಲವು ಶರಣೀಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತ ನಾಮವನ್ನಾಗಿ ಇಟ್ಟುಕೊಂಡು, ಮತ್ತೆ ಕೆಲವರು ತಮ್ಮ ಇಷ್ಟ ದೈವವನ್ನು ವಚನದ ಅಂಕಿತ ನಾಮವಾಗಿಟ್ಟುಕೊಂಡಿದ್ದಾರೆ.ವಚನಗಾರ್ತಿಯರ ಕೊಡುಗೆತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆಯ ಕುಟುಂಬ ಪದ್ಧತಿಯನ್ನು ತರಲು ಪ್ರಯತ್ನಿಸಿದರು.ಕಾಯಕ ನಿಷ್ಠೆ: ಕಾಯಕದ ಮಹತ್ವವನ್ನು ಸಾರಿದರು ಮತ್ತು ತಮ್ಮ ವೃತ್ತಿಗೆ ಸಂಬಂಧಿಸಿದ ಅಂಕಿತನಾಮವನ್ನು ಬಳಸಿದರು.ವೈಚಾರಿಕ ಚಿಂತನೆ: ಸಮಕಾಲೀನ ಸಮಾಜ ವ್ಯವಸ್ಥೆ ಮತ್ತು ಸ್ಥಿತಿಗತಿಗಳ ಬಗ್ಗೆ ಟೀಕೆ ವಿಡಂಬನೆ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.ವಚನಗಾರ್ತಿಯರ ಕೊಡುಗೆ:*ಸಾಮಾಜಿಕ ಸಮಾನತೆ: ತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆ ಮಹಿಳೆಯರನ್ನು ಶರಣು ಚಳುವಳಿಯಲ್ಲಿ ಪ್ರತಿಪಾದಿಕಿಯಾಗಿ ಗುರುತಿಸಲಾಗಿದೆ. ಅಮ್ಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಯಕ ನಿಷ್ಠೆಗೆ ಹೆಸರಾದವರು. ಪತಿ ಆಯ್ದಕ್ಕಿ ಮಾರಯ್ಯನವರ ಕಾಯಕದ ಕುರಿತು ತೀಕ್ಷ್ಣವಾಗಿ ಪ್ರಶ್ನಿಸುತ್ತಿದ್ದ ಅತ್ಯಂತ ಪ್ರಭುದ್ಧ ಮಹಿಳೆ.ಬೊಂಥಲಾದೇವಿ: ಮೋಳಿಗೆ ಮಹಾದೇವಿ, ಗಂಗಾದೇವಿ ಎಂದು ಕರೆಯುತ್ತಾರೆ.ನೀಲಾಂಬಿಕೆ: ನೀಲಲೋಚನೆ ಎಂದು ಕರೆಯುತ್ತಾರೆ.ಮಹಿಳಾ ವಚನಗಾರ್ತಿಯರು:ವಚನ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಕ್ಕಮಹಾದೇವಿ ಎಂತಹ ವ್ಯಕ್ತಿಗಳಿಂದ ಹಿಡಿದು ಅಮುಗೆ ರಾಯಮ್ಮ, ಲಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ ಬೋಮ್ತಾದೇವಿ ಮತ್ತು ಮಸಣಮ್ಮ ನಂತಹ ಅನೇಕರು ಸೇರಿದ್ದಾರೆ. ಈ ವಚನಗಾರ್ತಿಯರು ಸಾಮಾಜಿಕ ಸಮಾನತೆ, ಕಾಯಕನಿಷ್ಠೆ ಮತ್ತು ವೈಚಾರಿಕ ಚಿಂತನೆಗಳನ್ನು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದ್ದಾರೆ._________________ ವಿಜಯಲಕ್ಷ್ಮಿ ಕೆ ಹಂಗರಗಿ

“ವಚನ ಯುಗದ ಮಹಿಳೆಯರು”ವಿಜಯಲಕ್ಷ್ಮಿ ಕೆ ಹಂಗರಗಿ Read Post »

ಇತರೆ

“ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್

ಸಂಸ್ಕೃತಿ ಸಂಗಾತಿ “ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್ ಭಾರತ ದೇಶ ಕೃಷಿ ಪ್ರಧಾನವಾದದ್ದು. ನಾವು ದೇವರನ್ನು ಪೂಜಿಸುವಷ್ಟೇ ಸಹಜವಾಗಿ ಪಂಚಭೂತಗಳಾದ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶ ಇವುಗಳನ್ನು ಕೂಡ ಪೂಜಿಸುತ್ತೇವೆ. ಅದರಲ್ಲಿಯೂ ಭೂಮಿ ನಮ್ಮನ್ನು ಹಡೆದ ತಾಯಿಗಿಂತಲೂ ಹೆಚ್ಚು. ‘ ಮಾತಾ ಭೂಮಿಹಿ ಪುತ್ರೋಹಂ ಪೃಥ್ವಿವ್ಯಾಹ’ಎಂದು ನಮ್ಮ ಮಹಾನ್ ಕಾವ್ಯ ಭೂಮಿ ಸೂಕ್ತದಲ್ಲಿ ಹೇಳಿದೆ. ಈ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾವು ಹುಟ್ಟಿರುವ, ಬೆಳೆದಿರುವ, ನಡೆದಾಡುವ ಈ ಭೂಮಿ ನಮ್ಮ ಜನನಿ ಮತ್ತು ನಾವೆಲ್ಲರೂ ಆಕೆಯ ಮಕ್ಕಳು. ಆದ್ದರಿಂದಲೇ ನಮ್ಮ ಹಿರಿಯರು ಹೇಳಿದ್ದಾರೆ ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’… ಇಷ್ಟೇ ನಾವು ಜನಿಸಿದ ಈ ಭೂಮಿ ನಮಗೆ ಸ್ವರ್ಗಕ್ಕಿಂತಲೂ ಹೆಚ್ಚು. ಭೂಮಿಯ ಜೊತೆಗಿರುವ ನಮ್ಮ ಸಂಬಂಧ ತಾಯಿ ಮಕ್ಕಳಂತೆ ಎಂಬುದು ಹಲವು ವಿಧಗಳಲ್ಲಿ ವೇದ್ಯವಾಗುತ್ತದೆ. ಮುಂಜಾನೆ ತಾಯಂದಿರು ಎದ್ದೊಡನೆ ‘ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯಿ, ಎದ್ದೊಂದು ಗಳಿಗೆ ನೆನೆದೇನ’ ಎಂದು ನೆಲ ಮುಟ್ಟಿ ನಮಸ್ಕರಿಸುತ್ತಾರೆ. ಆಟವಾಡುವ ಪ್ರತಿ ಕ್ರೀಡಾಳು ಕೂಡ ನೆಲವನ್ನು ಮುಟ್ಟಿ ನಮಸ್ಕರಿಸಿ ಗೆಲುವಿಗಾಗಿ ಪ್ರಾರ್ಥಿಸಿ ತನ್ನ ಆಟವನ್ನು ಪ್ರಾರಂಭಿಸುತ್ತಾನೆ ಆತನ ಎದುರಾಳಿ ಕೂಡ ಅದೇ ಭೂಮಿ ತಾಯಿಯನ್ನು ಅಂದರೆ ನೆಲವನ್ನು ಮುಟ್ಟಿ ನಮಸ್ಕರಿಸುತ್ತಾನೆ. ಇದೇ ನಮ್ಮ ಭಾರತೀಯ ಪರಂಪರೆಯ ಸೊಗಡು ಪರಸ್ಪರ ಎದುರಾಳಿಗಳಿಗೂ ಕೂಡ ಭೂಮಿ ತಾಯಿ ಮಾತೃಸ್ವರೂಪಳು. ತನ್ನ ಹೊಲವನ್ನು ಉತ್ತುವ ರೈತ ಕೂಡ..ಅಮ್ಮ ಬಂಗಾರದಂತಹ ಬೆಳೆ ಕೊಡು ಎಂದು ಬೇಡಿ ಕೊಳ್ಳುತ್ತಾನೆ. ಇದು ನಮ್ಮ ಭಾರತೀಯ ಪರಂಪರೆಯ ಶ್ರೀಮಂತಿಕೆಯು ಹೌದು. ಭೂಮಿ ತಾಯೆಡೆಗಿನ ಶ್ರದ್ಧೆ ಅನನ್ಯ. ಅದು ಭಾವಕ್ಕೆ ನಿಲುಕದ್ದು.. ಭಾವನಾತೀತವಾದುದು.ನಮ್ಮ ಸಂಸ್ಕೃತ ಕಾವ್ಯಗಳಲ್ಲಿ ಮತ್ತು ಯೋಗದ ಪಠ್ಯಗಳಲ್ಲಿ ‘ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೆ ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶ೦ ಕ್ಷಮಸ್ವಮೇ ‘ ಎಂದು ಭೂಮಿತಾಯಿಯನ್ನು ಬೇಡಿಕೊಳ್ಳುತ್ತಾರೆ. ಇದರ ತಾತ್ಪರ್ಯವಿಷ್ಟೇ ಸಮುದ್ರವೇ ನಿನ್ನ ವಸ್ತ್ರವು, ಪರ್ವತಗಳು ನಿನ್ನ ಸ್ತನ ಮಂಡಲಗಳು, ವಿಷ್ಣು ಪತ್ನಿ ಅಂದರೆ ಮಾತೇ ಲಕ್ಷ್ಮೀದೇವಿಯಾದ ಭೂಮಿ ತಾಯಿಯನ್ನು ನಾನು ನನ್ನ ಕೆಲಸಕಾರ್ಯಗಳಿಗಾಗಿ ತುಳಿಯುತ್ತೇನೆ, ನಡೆದಾಡುತ್ತೇನೆ ಆದ್ದರಿಂದ ನನ್ನನ್ನು ಕ್ಷಮಿಸು ತಾಯಿ ಎಂದು. ಹೀಗೆ ಭೂಮಿ ಮತ್ತು ಮನುಷ್ಯನ ಸಂಬಂಧ ನಮ್ಮ ಭಾರತೀಯ ಸಂಪ್ರದಾಯದಲ್ಲಿ ತಾಯಿ ಮಕ್ಕಳ ಸಂಬಂಧದಂತೆ ಹಾಸು ಹೊಕ್ಕಾಗಿದೆ. ಅದರಲ್ಲಿಯೂ ರೈತನನ್ನು ಭೂಮಿ ತಾಯಿಯ ಚೊಚ್ಚಲ ಮಗ ಎಂದೇ ಕರೆಯುತ್ತಾರೆ.ಭೂಮಿ ತಾಯಿ ನಮಗೆ ಜೀವನಕ್ಕೆ ಅವಶ್ಯಕವಾದ ಆಹಾರವನ್ನು ನೀರನ್ನು ದಯಪಾಲಿಸುತ್ತಾಳೆ. ನಮ್ಮನ್ನು ತನ್ನ ಮಡಿಲಲ್ಲಿಟ್ಟು ಪೋಷಿಸುತ್ತಾಳೆ. ಮುಂದೆ ನಾವು ಮಡಿದ ಮೇಲೆಯೂ ಮತ್ತೆ ತನ್ನ ಉದರದಲ್ಲಿ ನಮಗೆ ಆಶ್ರಯ ನೀಡುತ್ತಾಳೆ.ಶ್ರಾವಣಮಾಸದಿಂದ ದೀಪಾವಳಿಯವರೆಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳ ಸಾಲು ಸಾಲು ಮೆರವಣಿಗೆ ಹೊರಡುತ್ತದೆ. ಅದರಲ್ಲಿ ಎಳ್ಳಅಮಾವಾಸ್ಯೆಯ ಒಂದು. ಎಳ್ಳು ಅಮಾವಾಸ್ಯೆಯ ಸಮಯದಲ್ಲಿ ಚಳಿಗಾಲದ ಚಳಿ ಕಮ್ಮಿಯಾಗಿ ಎಳ್ಳು ಕಾಳಿನಷ್ಟು ಹಿತವಾದ ಬಿಸಿಲು ಮೂಡುತ್ತದೆ. ಈ ಸಮಯದಲ್ಲಿಯೇ ಪ್ರತಿವರ್ಷಕ್ಕೆ ಮುಂಗಾರು ಮತ್ತು ಹಿಂಗಾರು ಎಂಬ ಎರಡು ಬೆಳೆ ತೆಗೆಯುವ ರೈತನ ಶ್ರಮಕ್ಕೆ ಪ್ರತಿಫಲವಾಗಿ ತುಂಬಿ ನಿಂತ ಪೈರು ತೆನೆಗಳು ಕಣ್ಸೆಳೆಯುತ್ತಿರುತ್ತವೆ. ಹೊಲದ ಪ್ರತಿ ಮೂಲೆಯೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇನ್ನೇನು ಕೊಯ್ಲು ಮತ್ತು ರಾಶಿ ಮಾಡುವ ಕ್ರಿಯೆ ಆರಂಭವಾಗುವ ಕೆಲವೇ ದಿನಗಳ ಮುಂಚೆ ಈ ದಿನದಂದು ರೈತನು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸೀಮಂತದ ಊಟವನ್ನು ಬಡಿಸುತ್ತಾನೆ. ಜೊತೆ ಜೊತೆಗೆ ತನ್ನ ಬಂಧು ಬಾಂಧವರೊಡಗೂಡಿ ಹಬ್ಬದ ಊಟ ಮಾಡಿ ಸಡಗರ ಪಡುತ್ತಾನೆ. ಇದನ್ನು ಉತ್ತರ ಕರ್ನಾಟಕದಲ್ಲಿ ‘ಚರಗ ಚೆಲ್ಲುವುದು’ ಎಂದು ಕರೆಯುತ್ತಾರೆ. ಎಳ್ಳು ಅಮಾವಾಸ್ಯೆಗೆ ಹಲವಾರು ದಿನಗಳ ಮುಂಚೆಯೇ ಈ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ. ರೈತರ ಮನೆಯೆಂದ ಮೇಲೆ ಅಂಕಿ ಸಂಖ್ಯೆಗಳು ಮುಖ್ಯವಲ್ಲ, ಜನರ ಹೊಟ್ಟೆ ತುಂಬುವುದು ಮುಖ್ಯ. ತೆಳ್ಳಗೆ ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆಯ ರೊಟ್ಟಿಗಳು, ಬಗೆ ಬಗೆಯ ಚಟ್ನಿಪುಡಿಗಳು, ಕೆಂಪು ಹಿಂಡಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ (ನವಣೆ ಅಕ್ಕಿಯನ್ನು ಹುರಿದು ಮಾಡುವ ಒಂದು ಸಿಹಿ ಪದಾರ್ಥ), ಕರ್ಚಿಕಾಯಿಗಳು ಮೊದಲೇ ತಯಾರಾದರೆ ಹಬ್ಬದ ದಿನ ಎಣ್ಣೆ ಬದನೆಕಾಯಿ ಪಲ್ಯ, ಮೊಳಕೆ ಬರಿಸಿದ ಕಾಳುಗಳ ಪಲ್ಯ, ಕುದಿಸಿದ ಮೆಣಸಿನ ಕಾಯಿಯ ಪಲ್ಯ, ಪುಂಡಿ ಪಲ್ಯ, ಹಿಟ್ಟಿನ ಪಲ್ಯ, ಹಲವಾರು ಬಗೆಯ ಹಸಿಯಾಗಿಯೇ ತಿನ್ನಬಹುದಾದ ಹಸಿ ಈರುಳ್ಳಿ, ಸೌತೆಕಾಯಿ ಗಜ್ಜರಿ ಮೆಂತ್ಯ ಸೊಪ್ಪು ಜೊತೆಗೆ ಭೂತಾಯಿಯ ಎಡೆಗಾಗಿ ಕುಚ್ಚಗಡಬು,ಸಜ್ಜೆ ಕಡುಬು,ಜೋಳದ ಕಡುಬು, ಚಿತ್ರಾನ್ನ, ಮೊಸರನ್ನಗಳ ಬುತ್ತಿ, ಕರಿದ ಹಪ್ಪಳ ಸಂಡಿಗೆ ಮೆಣಸಿನಕಾಯಿ ಬಾಳಕಗಳು ಹೀಗೆ ಹಲವಾರು ಬಗೆಯ ಪದಾರ್ಥಗಳು ತಯಾರಾಗಿ ಒಂದೊಂದೇ ಡಬ್ಬಗಳಲ್ಲಿ ಶೇಖರಿಸಲ್ಪಟ್ಟು.. ಆ ಎಲ್ಲ ಡಬ್ಬಗಳನ್ನು ಶುದ್ಧ ಹಸಿ ವಸ್ತ್ರದಿಂದ ಒರೆಸಿ ವಿಭೂತಿ ಪಟ್ಟಿಯನ್ನು ಬರೆದು ಮತ್ತೆ ಎಲ್ಲಾ ಡಬ್ಬಗಳನ್ನು ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಹೇರಲಾಗುತ್ತದೆ. ಹೆಂಗಳೆಯರು ಇಲಕಲ್ ಸೀರೆ, ಕುಪ್ಪಸ, ರೇಷ್ಮೆ ಸೀರೆಗಳನ್ನು ಧರಿಸಿ ಬೋರಮಾಳ ಸರ, ಗುಂಡಿನ ಸರ, ಟೀಕಿ ಸರ, ಕಾಸಿನ ಸರ, ಗುಂಡ್ಹಚ್ಚಿನ ಸರ, ಪಾಟಲಿ, ಬಿಲವಾರ, ಹಸಿರು, ಕೆಂಪು ಮತ್ತು ಚಿಕ್ಕಿಯಬಳೆಗಳ ಧರಿಸಿ ಸೆರಗುಹೊತ್ತು ಅಲಂಕರಿಸಿಕೊಂಡರೆ, ಇತ್ತೀಚಿನ ನೀರೆಯರು ನಾವೇನು ಕಡಿಮೆ ಎಂಬಂತೆ ಜರತಾರಿ ಸೀರೆಗಳಲ್ಲಿ, ಹಳೆಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ತಯಾರಾಗುತ್ತಾರೆ. ಮಕ್ಕಳಿಗಂತೂ ಹಬ್ಬವೋ ಹಬ್ಬ. ತಂದೆ, ಅಜ್ಜ೦ದಿರಿಗೆ ದನಗಳನ್ನು ಹಳ್ಳಕ್ಕೆ ಕರೆದೊಯ್ದು ಜಳಕ ಮಾಡಿಸಲು, ತಯಾರು ಮಾಡಲು ಅವರ ಸಹಾಯ ಹಸ್ತ ಇದ್ದೇ ಇರುತ್ತದೆ. ದನ ಕರುಗಳು ಕೂಡ ಹಳ್ಳಗಳಲ್ಲಿ ಮೀಯಿಸಲ್ಪಟ್ಟು ಕೋಡುಗಳಿಗೆ ಬಣ್ಣ ಬಳಿದು ಅವುಗಳ ಬೆನ್ನ ಮೇಲೆ ಜರತಾರಿಯ ಸೀರೆಯಿಂದ ತಯಾರಾದ ಅಂಗವಸ್ತ್ರಗಳನ್ನು ಹೊದೆದು, ಕೋಡಣಸು, ಕೊಂಬಿನ ಸರಗಳನ್ನು ಧರಿಸಿ, ಕೊಂಬುಗಳನ್ನು ಕೂಡ ಶೃಂಗರಿಸಿ ಎಲ್ಲರೂ ಭೂತಾಯಿಯ ಪೂಜೆ ಸಲ್ಲಿಸಲು ಹೊಲಕ್ಕೆ ಸಾಗುತ್ತಾರೆ. ಒಟ್ಟಿನಲ್ಲಿ ಕಣ್ಣಿಗೆ ಹಬ್ಬದ ವಾತಾವರಣ, ಸಂಭ್ರಮ ಸಡಗರದ ಕಳೆ. ಎತ್ತಿನ ಕೊರಳಲ್ಲಿರುವ ಗಂಟೆಯ ಝೀಂಕಾರ, ಚಕ್ಕಡಿ ಹೊಡೆಯುವವನ ಹೂಂಕಾರ, ಮರದ ಗಾಲಿಯ ಕ್ಲಿಂಕಾರ, ಗಾಲಿಗೆ ಕೋಲಿಟ್ಟು ಶಬ್ದ ಮಾಡುವ ರೀತಿ ಮನಮೋಹಕ.ಪ್ರತಿಯೊಬ್ಬ ರೈತನು ತನ್ನ ಹೊಲದಲ್ಲಿರುವ ಒಂದು ಅಚ್ಚುಕಟ್ಟಾದ ತಾವನ್ನು.. ಹೆಚ್ಚಾಗಿ ಬನ್ನಿ ಗಿಡ ಇರುವ ಪ್ರದೇಶವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಜಮಖಾನೆಯನ್ನು ಹಾಸಿ ಬನ್ನಿ ಗಿಡದ ಕೆಳಗೆ ಐದು ಜನ ಪಂಚ ಪಾಂಡವರನ್ನು ( ೫ ಕಲ್ಲುಗಳನ್ನು ಪಾಂಡವರ ರೂಪದಲ್ಲಿ ಮತ್ತು ಹಿಂದೆ ಕರ್ಣನ (ಕೆಲವರು ಕಳ್ಳ ಎಂದು ಅಪಭ್ರಂಶ ಮಾಡಿದ್ದಾರೆ) ಹೆಸರಿನಲ್ಲಿ ಇನ್ನೊಂದು ಕಲ್ಲನ್ನು ಪ್ರತಿಷ್ಠಾಪಿಸಿ ಭೂತಾಯಿಯನ್ನು ಬನ್ನಿ ಮರದಲ್ಲಿ ಆಹ್ವಾನಿಸಿ, ಪ್ರತಿಷ್ಠಾಪಿಸಿ, ಪೂಜಿಸಿ, ಮಂಗಳಾರತಿ ಮಾಡಿ ಕಾಯಿ ಒಡೆದು ನೈವೇದ್ಯವನ್ನು ಮಾಡುತ್ತಾರೆ  ಎಳ್ಳ ಅಮವಾಸ್ಯೆ ಬಂದಿತೆವ್ವಹೊಲಕ ಹೋಗುದಕ ಮತ್ತಚರಗ ಚೆಲ್ಲುದಕ ಮುತ್ತೈದೆರೆಲ್ಲಾರುಕೂಡುದಕ ಮತ್ತು ಭೂಮಿತಾಯಿಪೂಜೆ ಮಾಡುದಕಎಳ್ಳ ಅಮಾಸಿಗೇ ಎಣಿಗಡುಬುಕರಿದೇವ ಎಣಗಾಯೀಎಳ್ಳಚ್ಚಿದ ರೊಟ್ಟಿ ತುಂಬೇವ ಕೆರಸ್ಯಾಗಏರಿ ಹೊಲಕ ಎಲ್ಲರೂ ಚರಗ ಚೆಲ್ಲೇವ” ಎಂದು ಹೆಂಗಳೆಯರು ಪ್ರಾರ್ಥಿಸುತ್ತಾ ಭೂಮಿ ತಾಯಿಯನ್ನು ಕೊಂಡಾಡುತ್ತಾರೆ. (ಪಾಂಡವರನ್ನು ಪೂಜಿಸುವ ಹಿಂದೆಯೂ ಒಂದು ಕಥೆ ಇದೆ. ಅಜ್ಞಾತವಾಸದಲ್ಲಿದ್ದ ಪಾಂಡವರು ಹಸಿವಿನಿಂದ ತತ್ತರಿಸುತ್ತಾ ಹೊಲದ ಬಳಿ ಬಂದಾಗ ಅಲ್ಲಿ ದಂಪತಿಗಳು ಬನ್ನಿ ಮರದ ಕೆಳಗೆ ಭೂತಾಯಿಯ ಪೂಜೆ ಮಾಡಿ ಆಹಾರ ಸ್ವೀಕರಿಸಲು ಅಣಿಯಾಗಿದ್ದರು. ಸಮಯಕ್ಕೆ ಸರಿಯಾಗಿ ಬಂದ ಅಭ್ಯಾಗತರನ್ನು ಸ್ವಾಗತಿಸಿದ ರೈತ ದಂಪತಿಗಳು ಅವರಿಗೆ ಊಟಕ್ಕೆ ಬಡಿಸಲು ಮುಂದಾದಾಗ ತಟ್ಟೆ ಅಥವಾ ಎಲೆ ಇರಲಿಲ್ಲ. ಆಗ ಮಾರುವೇಶದಲ್ಲಿದ್ದ ಧರ್ಮರಾಜನು ಮೇಲಿದ್ದ ಬನ್ನಿ ಪತ್ರವನ್ನು ಹರಿದು ಆ ಎಲೆಯಲ್ಲಿಯೇ ಊಟ ಬಡಿಸಲು ದಂಪತಿಗಳನ್ನು ಕೇಳಿಕೊಳ್ಳುತ್ತಾನೆ. ಅಷ್ಟು ಪುಟ್ಟ ಬನ್ನಿ ಎಲೆಯಲ್ಲಿ ಆಹಾರ ಹಿಡಿಸುವುದೇ ಎಂದು ಸೋಜಿಗದಿಂದ ರೈತ ದಂಪತಿಗಳು ಬಡಿಸುತ್ತಾ ಹೋದರೆ ಎಲೆ ತುಂಬುವುದೇ ಇಲ್ಲ, ಆದರೆ ಪಂಚಪಾಂಡವರು ತೃಪ್ತಿಯಿಂದ ಊಟ ಮಾಡುತ್ತಾರೆ. ಅಷ್ಟೇ ಅಲ್ಲ ತಮಗೆ ಉಣ ಬಡಿಸಿದ ರೈತ ದಂಪತಿಗಳಿಗೆ ತಾವು ಯಾವತ್ತೂ ರೈತನ ಹೊಲ ಕಾಯುವ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವೆವು ಎಂದು ಮಾತು ಕೊಡುತ್ತಾರೆ. ಅದಕ್ಕೆ ರೈತ ದಂಪತಿ ಪ್ರತಿವರ್ಷವೂ ಭೂಮಿತಾಯಿಯನ್ನು ಪೂಜಿಸುವ ಈ ದಿನ ನಿಮ್ಮನ್ನು ನಾವು ಸತ್ಕರಿಸುತ್ತೇವೆ ಎಂದು ಪ್ರತಿಯಾಗಿ ಹೇಳುತ್ತಾರೆ. ಅಜ್ಞಾತವಾಸಕ್ಕೂ ಮುನ್ನವೇ ಕರ್ಣನು ತಮ್ಮ ಸಹೋದರನೆಂಬ ಅರಿವಿದ್ದ ಸಹೋದರರು ಮತ್ತೊಂದು ಬನ್ನಿಯ ಪತ್ರ(ಎಲೆ)ದಲ್ಲಿ ತಮ್ಮ ಸಹೋದರ ಕರ್ಣನಿಗಾಗಿ ಆಹಾರವನ್ನು ಪಡೆಯುತ್ತಾರೆ ಎಂಬುದು. ) ನಂತರ ನೈವೇದ್ಯ ಮಾಡಿದ ಒಂದು ಭಾಗವನ್ನು ಭೂಮಿಯಲ್ಲಿ ಗುಳಿ ತೋಡಿ ಅಲ್ಲಿ ಆ ನೈವೇದ್ಯವನ್ನು ಸಮರ್ಪಿಸುತ್ತಾರೆ. ಇನ್ನುಳಿದ ನೈವೇದ್ಯದ ಭಾಗವನ್ನು ಚರಗಾ ಚೆಲ್ಲಲಿಕ್ಕೆಂದು ಹೊರಡುತ್ತಾರೆ. ನೈವೇದ್ಯ ಹಿಡಿದ ವ್ಯಕ್ತಿ ಹುಲ್ಲುಲ್ಲಿಗೋ ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಎಡೆಯಿಂದ ಸ್ವಲ್ಪ ಸ್ವಲ್ಪ ಭಾಗವನ್ನು ಹೊಲದ ಸುತ್ತಲೂ ಚೆಲ್ಲುತ್ತಾ ಸಾಗಿದರೆ ಹಿಂದೆ ಸಾಗುವ ಮಕ್ಕಳು ಚಳ್ಳಂಬರಿಗೋ ಎಂದು ಕೂಗುತ್ತಾ ಸಾಗುತ್ತಾರೆ. ಹುಲ್ಲುಲ್ಲಿಗೋ ಅಂದರೆ ಹೊಲದಲ್ಲಿರುವ ಪ್ರತಿಯೊಂದು ಹುಲ್ಲಿನ ಕಣಕ್ಕೂ, ಚಳ್ಳಂಬರಿಗೋ ಎಂದರೆ ಪ್ರತಿಯೊಂದು ಬೇರಿಗೂ ಈ ಆಹಾರವು ಮುಟ್ಟಲಿ ಎಂಬುದು ರೈತನ ಆಶಯ. ಜೊತೆಗೆ ಹೊಲದಲ್ಲಿರುವ ಎಲ್ಲಾ ಕ್ರಿಮಿಕೀಟಗಳಿಗು ರೈತ ಚರಗ ಚೆಲ್ಲುವ ಮೂಲಕ ಆಹಾರ ಸಲ್ಲಿಸುತ್ತಾನೆ…. ತನ್ಮೂಲಕ ವಸುದೈವ ಕುಟುಂಬಕಂ ಎಂದು ಜಗತ್ತಿಗೆ ಸಾರುತ್ತಾನೆ. ಹೀಗೆ ಭೂತಾಯಿಗೆ ಚರಗ ಚೆಲ್ಲಿದ ನಂತರ ರೈತನ ಕುಟುಂಬ ತನ್ನ ಬಂಧು ಬಾಂಧವರೂಡಗೂಡಿ ಹಬ್ಬದ ಅಡುಗೆಯನ್ನು ಸವಿಯುತ್ತಾರೆ. ರೈತನ ಮನೆಯ ಅಡುಗೆ ಮೃಷ್ಟಾನ್ನಕ್ಕಿಂತಲೂ ಹೆಚ್ಚು ..ಸವಿದಷ್ಟು ಸವಿ ಹೆಚ್ಚಾಗುವ, ಮೊಗೆದಷ್ಟೂ ಬಸಿವ ನೀರಿನ ಊಟೆಯಂತೆ. ತನ್ನಲ್ಲಿರುವ ಎಲ್ಲವನ್ನು ಎಲ್ಲರಿಗೂ ಸ್ವ ಸಂತೋಷದಿಂದ ಹಂಚಿ ಅವರ ಸಂತಸದಲ್ಲಿಯೇ ತನ್ನ ಸಂತಸವನ್ನು ಕಾಣುವ ಜಗತ್ತಿನ ಏಕೈಕ ವ್ಯಕ್ತಿ ರೈತ. ಹೀಗೆ ರೈತ ಸಂತಸ ಪಡಲು ಆತನ ಕೊಡುವ ಗುಣವೇ ಕಾರಣವಾಗಿದೆ. ಈ ರೀತಿ ಎಳ್ಳ ಅಮಾವಾಸ್ಯೆಯನ್ನು ಉತ್ತರ ಕರ್ನಾಟಕದ ಬಯಲು ಸೀಮೆಯ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನೀವು ಕೂಡ ಹತ್ತಿರದ ಯಾವುದಾದರೂ ಊರಿನ ಹೊಲಕ್ಕೆ ಹೋದರೆ ಅಲ್ಲಿಯ ರೈತರು ನಿಮ್ಮನ್ನು ಕೂಡ ಕರೆದು ಉಣ ಬಡಿಸುವುದರಲ್ಲಿ ಸಂದೇಹವೇ ಇಲ್ಲ. ಈ ರೀತಿ ಭೂಮಿ ತಾಯಿಯನ್ನು ಪೂಜಿಸುವ ರೈತ ಯಾವಾಗಲೂ ನಗುನಗುತ್ತಾ ಇರಲಿ ಆತನ ಬಾಳು ಹಸನಾಗಲಿ, ರೈತ ಜಗದ ಬೆಳಕಾಗಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

You cannot copy content of this page

Scroll to Top