ಅಂಕಣ ಸಂಗಾತಿ
ಧಾರಾವಾಹಿ-104
ಒಬ್ಬನ ಅಮ್ಮನ ಕಥೆ
ರುಕ್ಮಿಣಿ ನಾಯರ್
ದಗೋಕುಲದ ಕಲ್ಪನೆಯಲ್ಲಿ ಅನಾರೋಗ್ಯ ಮರೆತ ಸುಮತಿ


ಮೂವರೂ ಮಕ್ಕಳು ಮನೆಯಲ್ಲಿ ಒಟ್ಟಾಗಿ ಸೇರಿ ಮಾತನಾಡುವುದು ಹಾಗೂ ಅವರ ನಗುವಿನ ಅಲೆಯು ಮನೆಯನ್ನು ತುಂಬಿತ್ತು. ಮನೆ ಸಂಪೂರ್ಣ ನಂದ ಗೋಕುಲವಾದಂತೆ ಸುಮತಿಗೆ ಅನಿಸಿತು. ಕಿರಿಯ ಮಗಳು ರಜೆಗೆ ಮನೆಗೆ ಬಂದಾಗ ಎರಡನೇ ಮತ್ತು ಮೂರನೇ ಮಗಳು ಹಿರಿಯ ಅಕ್ಕನ ಮನೆಗೆ ಹೋಗಿ ಅಕ್ಕನ ಮುದ್ದಾದ ಪುಟ್ಟ ಮಕ್ಕಳನ್ನೂ ಕರೆತಂದಿದ್ದರು. ಅಜ್ಜಿಯ ಮನೆಗೆ ಬರುವುದೆಂದರೆ ಮೊಮ್ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಇಬ್ಬರೂ ಇನ್ನೂ ಪುಟ್ಟ ಮಕ್ಕಳು. ಆದರೂ ಅಪ್ಪ ಅಮ್ಮನನ್ನು ಬಿಟ್ಟು ಅಜ್ಜಿ ಚಿಕ್ಕಮ್ಮಂದಿರ ಜೊತೆಗೆ ಹಾಯಾಗಿ ಕಾಲ ಕಳೆಯುತ್ತಿದ್ದರು. ಅಜ್ಜಿಯು ಮಾಡುವ ರುಚಿಕರ ತಿಂಡಿಗಳು. ಚಿಕ್ಕಮ್ಮಂದಿರು ತಿನಿಸುವ ಬಗೆ ಬಗೆಯ ಹಣ್ಣುಗಳು ಅವರಿಗೆ ಪ್ರಿಯವಾಗಿರುತ್ತಿದ್ದವು. ಮೂವರು ಚಿಕ್ಕಮ್ಮಂದಿರೂ ಸೇರಿ ಅವರನ್ನು ಆಟವಾಡಿಸುತ್ತಿದ್ದರು. ಅಜ್ಜಿ ಹಾಗೂ ಚಿಕ್ಕಮ್ಮಂದಿರ ಜೊತೆಗೆ ಅಜ್ಜಿಯ ಶಾಲೆಗೆ ಹೋಗಿ ಅಲ್ಲಿ ಸ್ವಚ್ಛಂದವಾಗಿ ಶಾಲೆಯ ಮಕ್ಕಳ ಜೊತೆ ಆ ಮುದ್ದು ಪುಟಾಣಿಗಳು ಆಡುತ್ತಿದ್ದರು. ಅಕ್ಕನ ಮಕ್ಕಳು ಮನೆಗೆ ಬಂದಾಗ ಈ ಹುಡುಗಿಯರು ತೋಟ ಸುತ್ತುವುದಕ್ಕೆ ಹೋಗುವುದು ಕಡಿಮೆ ಮಾಡುತ್ತಿದ್ದರು. ಸಂಜೆ ಅಜ್ಜಿಯು ಶಾಲೆಯಿಂದ ಬಂದ ನಂತರ ಪಕ್ಕದಲ್ಲಿಯೇ ಇದ್ದ ನಲ್ಲಿಯ ನೀರನ್ನು ಹಿಡಿಯಲು ಹೋಗುವಾಗ ಮೊಮ್ಮಿಗನೂ ಅಜ್ಜಿಯನ್ನು ಹಿಂಬಾಲಿಸುತ್ತಿದ್ದನು. ಅಜ್ಜಿ ಬಿಂದಿಗೆಯಲ್ಲಿ ನೀರನ್ನು ತುಂಬಿ ಸೊಂಟದಲ್ಲಿ ಇಟ್ಟು ಹೊತ್ತಿಕೊಂಡು ಬರಲು ಹೊರಟರೆ… “ವೇಂಡ ಅಮ್ಮಾಮ್ಮಾ…ನಾನ್ ಪಿಚ್ಚಾಂ”… (ಬೇಡ ಅಜ್ಜೀ…ನಾನು ಹಿಡಿದುಕೊಳ್ಳುವೆ) ಎಂದು ಹಠ ಮಾಡುತ್ತಾ ಅಜ್ಜಿ ಒಂದು ಕೈಯಲ್ಲಿ ಬಿಂದಿಗೆ ಹಿಡಿದರೆ ಮೊಮ್ಮಗ ಮತ್ತೊಂದು ಕೈಯಲ್ಲಿ ಹಿಡಿದುಕೊಂಡು ಅಜ್ಜಿಯ ಜೊತೆಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಓಡು ನಡಿಗೆಯಲ್ಲಿ ಅಜ್ಜಿಗೆ ನೀರು ಹೊತ್ತು ತರಲು ಸಹಾಯ ಮಾಡುತ್ತಿದ್ದ.
ಮನೆಯ ಬಾಗಿಲ ಬಳಿ ತಲುಪಿದಾಗ ಅಜ್ಜಿ ಬಿಂದಿಗೆಯನ್ನು ಕೆಳಗೆ ಇಳಿಸಿದಾಗ ಮೊಮ್ಮಗನೂ ಕೈ ಬಿಟ್ಟು….”ಅಮ್ಮಮ್ಮಾ… ಶುತ್ತಾಯಿ”…(ಅಜ್ಜಿ ಸುಸ್ತಾಯಿತು) ಎಂದು ಮುದ್ದು ಮುದ್ದಾಗಿ ತೊದಲು ನುಡಿವಾಗ ಪ್ರೀತಿಯಿಂದ ಮೊಮ್ಮಗನನ್ನು ಎತ್ತಿ ಮುದ್ದಾಡುವಳು ಸುಮತಿ. ತನ್ನ ಇಷ್ಟ ದೈವ ಕೃಷ್ಣನೇ ಬಾಲನಾಗಿ ಮೊಮ್ಮಗನ ರೂಪದಲ್ಲಿ ಬಂದಿರುವನು ಎನ್ನುತ್ತಾ ಖುಷಿ ಪಡುವಳು ಸುಮತಿ. ತಮಗೆ ಎಷ್ಟೇ ಬಡತನವಿದ್ದರೂ ಹೊಂದಿಕೊಂಡು ಹೋಗುವ ಮಕ್ಕಳ ಗುಣವನ್ನು ನೆನೆದು ಕೃಷ್ಣಾ ನನ್ನ ಮಕ್ಕಳಿಗೆ ಮುಂದೊಂದು ದಿನ ಬಡತನವನ್ನು ನೀಗಿಸಿ ಸಮೃದ್ಧಿಯಿಂದ ಬದುಕುವಂತೆ ಮಾಡು ಎಂದು ಬೇಡುವಳು. ಮಕ್ಕಳನ್ನು ಕರೆದುಕೊಂಡು ಹೋಗಲು ಮಗಳು ಅಳಿಯ ಬಂದಾಗ ಕೋಳಿಯ ಗೂಡಿ ನಿಂದ ಒಂದು ಕೋಳಿಯನ್ನು ಹಿಡಿದು ತೋಟದ ಕಾರ್ಮಿಕರ ಲೈನಿನ ಕಡೆಗೆ ಹೋಗಿ ಅದನ್ನು ಅಲ್ಲಿನ ಯಾರಾದರೊಬ್ಬರ ಕೈಲಿ ಕೊಲ್ಲಿಸಿ ಮನೆಗೆ ತಂದು ಅಡುಗೆ ಮಾಡುವಳು. ಆಗ ಮೂರನೇ ಮಗಳದು ಒಂದೇ ಗಲಾಟೆ…_ಯಾಕೆ ಅಮ್ಮಾ…. ಆ ಕೋಳಿಗಳನ್ನು ಕೊಲ್ಲಿಸಿ ಅಡುಗೆ ಮಾಡಿ, ಬಡಿಸುತ್ತೀಯಾ…ಪಾಪ ಅವುಗಳು… ನೀನೇ ಸಾಕುತ್ತೀಯಾ…. ನೀನೇ ಅವುಗಳನ್ನು ಕೊಲ್ಲಿಸುತ್ತೀಯಾ?” ಎಂದು ಹೇಳಿ ಅಳುತ್ತಾ….”ನಾನು ಊಟ ಮಾಡುವುದಿಲ್ಲ”… ಎಂದು ಹಠ ಮಾಡಿ ಮೂಲೆಯಲ್ಲಿ ಕುಳಿತು ಬಿಡುವಳು. ಆಗ ಸುಮತಿ ಮಗಳನ್ನು ಅಕ್ಕರೆಯಿಂದ ಅಪ್ಪಿಕೊಂಡು…. “ಹಾಗೆಲ್ಲಾ ಹೇಳಬಾರದು ಕಂದಾ…ಅಕ್ಕ ಬಾವ ಮನೆಗೆ ಬಂದಾಗ ಅವರಿಗೆ ರುಚಿಯಾಗಿ ಏನನ್ನೂ ಮಾಡಿಕೊಡುವುದು ಬೇಡವೇ?…. ಅಂಗಡಿಯಿಂದ ಕೋಳಿಯನ್ನು ತಂದು ಅಡುಗೆ ಮಾಡಿ ಬಡಿಸಲು ನನ್ನಲ್ಲಿ ಹಣವಿಲ್ಲ….

“ಹಾಗಾಗಿ ನಮ್ಮ ಮನೆಯಲ್ಲಿ ಸಾಕಿದ ಕೋಳಿಗಳನ್ನು ಅವರು ಬಂದಾಗ ಕೊಲ್ಲಿಸಿ, ಅಡುಗೆ ಮಾಡುವುದು ನನಗೆ ಅನಿವಾರ್ಯ ಮಗಳೇ_….ಎಂದು ಹೇಳಿ ಮಗಳನ್ನು ಸಮಾಧಾನ ಪಡಿಸುತ್ತಿದ್ದಳು. ಮನೆಯಲ್ಲಿ ತರಕಾರಿ ಬೆಳೆಯುವುದಲ್ಲದೇ ಸುಮತಿ ಒಂದು ಪುಟ್ಟ ಮಣ್ಣಿನ ಗೂಡನ್ನು ತಾನೇ ಕಟ್ಟಿ ಕೋಳಿ ಮರಿಗಳನ್ನು ತೋಟದ ಕಾರ್ಮಿಕರಿಂದ ಖರೀದಿಸಿ ಸಾಕುತ್ತಿದ್ದಳು. ಮಕ್ಕಳು ಆರೋಗ್ಯವಾಗಿರಲಿ ಎಂದು ಬೆಳಗ್ಗೆ ಅರ್ಧ ಬೇಯಿಸಿದ ಮೊಟ್ಟೆಯನ್ನು ಕೊಡುತ್ತಿದ್ದಳು. ಜೊತೆಗೆ ಎಸ್ಟೇಟಿನ ಡೈರಿಯಿಂದ ಹಾಲನ್ನು ಕೊಂಡು ತಾನು ಸ್ವಲ್ಪ ಕಾಫಿಗೆ ಇಟ್ಟುಕೊಂಡು, ಉಳಿದಿದ್ದನ್ನು ಮಕ್ಕಳಿಗೆ ಕುಡಿಯಲು ಕೊಡುತ್ತಿದ್ದಳು. ಮಕ್ಕಳಿಗೆ ಪೋಷಕಾಂಶದ ಕೊರತೆ ಆಗದಿರಲೆಂದು ಸೊಪ್ಪು ತರಕಾರಿಯನ್ನು ಹಿತ್ತಲಲ್ಲಿ ಬೆಳೆಯುತ್ತಿದ್ದಳು. ಮೊಟ್ಟೆಗಾಗಿ ಕೋಳಿಗಳನ್ನು ಸಾಕುತ್ತಿದ್ದಳು. ಮೂರನೇ ಮಗಳು ಪ್ರಾಣಿಪ್ರಿಯೆ. ಅವಳಿಗೆ ಮನೆಯಲ್ಲಿ ಅಮ್ಮ ಸಾಕಿದ ಕೋಳಿ ಮತ್ತು ಬೆಕ್ಕು ಹಾಗೂ ಅವುಗಳ ಮರಿಗಳೊಡನೆ ಆಡುವುದೆಂದರೆ ಪಂಚಪ್ರಾಣ. ಬೆಕ್ಕು ಹಾಗೂ ಅವುಗಳ ಮರಿಗಳಿಗೆ ಕಾಡಿಗೆ ಹಚ್ಚಿ, ಅಕ್ಕನ ಮಗಳ ಪುಟ್ಟ ಫ್ರಾಕ್ ತೊಡಿಸಿ ಆಡುವಳು. ಕೋಳಿ ಮರಿಗಳನ್ನು ಹಿಡಿದುಕೊಂಡು ಆಟವಾಡುವಳು. ಅಕ್ಕನ ಮಕ್ಕಳಿಗೆ ಅವುಗಳನ್ನು ತೋರಿಸುತ್ತಾ ನಗಿಸುವಳು. ಎಷ್ಟೋ ಬಾರಿ ಕೋಳಿ ಮರಿಗಳನ್ನು ಹಿಡಿಯಲು ಹೋಗಿ ಹೇಂಟೆ ಕೋಳಿ ಅವಳನ್ನು ಅಟ್ಟಾಡಿಸಿ ಓಡಿಸಿ ಕುಕ್ಕಿದ್ದೂ ಇದೆ. ಆದರೆ ಅವಳು ಇವೆಲ್ಲಕ್ಕೂ ಹೆದರುತ್ತಿರಲಿಲ್ಲ.
ಬೆಕ್ಕಿನ ಮರಿಗಳು ಪರಚಿ ಹಿಡಿದರೂ ಅವಳಿಗೇನೂ ಬೇಸರವಾಗುತ್ತಿರಲಿಲ್ಲ. ರಾತ್ರಿ ತಾನು ಮಲಗುವಾಗ ಬೆಕ್ಕಿನ ಅಷ್ಟೂ ಮರಿಗಳನ್ನು ಹಿಡಿದು ತಂದು ತನ್ನ ಹೊದಿಕೆಯಲ್ಲಿ ಮುಚ್ಚಿ, ಅವುಗಳ ಜೊತೆಗೆ ತಾನೂ ಮಲಗುವಳು. ಅಕ್ಕನ ಮಗನಿಗೂ ಬೆಕ್ಕಿನ ಮರಿಗಳೆಂದರೆ ಬಲು ಪ್ರಿಯ. ದಾರಿಯಲ್ಲಿ ಅನಾಥವಾಗಿ ಕಂಡ ಬೆಕ್ಕಿನ ಮರಿಗಳನ್ನು ಬಹಳ ಅಕ್ಕರೆಯಿಂದ ಸುಮತಿ ಎತ್ತಿಕೊಂಡು ಬಂದು ಅವುಗಳಿಗೆ ಅನ್ನದಲ್ಲಿ ಸ್ವಲ್ಪ ಹಾಲು ಅಥವಾ ಒಣ ಮೀನನ್ನು ಬೆರೆಸಿ ತಿನ್ನಲು ಕೊಡುವಳು. ಸುಮತಿ ಪ್ರಾಣಿಪ್ರಿಯೆ ಹಾಗೂ ಅವುಗಳ ಬಗ್ಗೆ ದಯೆ ಮತ್ತು ಕರುಣೆ ಉಳ್ಳವಳು. ಅವಳ ಅದೇ ಗುಣ ಮೂರನೇ ಮಗಳಿಗೆ ಬಳುವಳಿಯಾಗಿ ಬಂದಿತ್ತು. ಹಿರಿಯ ಮಗಳು ಅಳಿಯ ಮನೆಗೆ ಬಂದಾಗ ಮಾತ್ರ ಸುಮತಿ ಮತ್ತು ಮೂರನೇ ಮಗಳಿಗೆ ಸಣ್ಣ ವಾದವೇ ನಡೆದು ಬಿಡುತ್ತಿತ್ತು. ಸುಮತಿ ಹೇಗೋ ಮಗಳನ್ನು ಪುಸಲಾಯಿಸಿ ಹಿರಿಯ ಮಗಳು ಮತ್ತು ಅಳಿಯನ ಮುಂದೆ ಗಲಾಟೆ ಮಾಡದಂತೆ ಎಚ್ಚರ ವಹಿಸುವಳು. ಆದರೂ ಮೂರನೇ ಮಗಳು ಕೋಳಿಯನ್ನು ಕೊಲ್ಲಿಸಿ ಅಡುಗೆ ಮಾಡಿ ಅಕ್ಕ ಬಾವನಿಗೆ ಉಣಬಡಿಸಿದ್ದಕ್ಕಾಗಿ ಅಮ್ಮನೊಂದಿಗೆ ಮುನಿಸಿಕೊಳ್ಳುವಳು. ಮೂರನೇ ಮಗಳಿಗೆ ಸಿಹಿ ಎಂದರೆ ತುಂಬಾ ಇಷ್ಟ. ನಿನಗೆ ಸಿಹಿ ತಿಂಡಿ ಮಾಡಿಕೊಡುವೆನು ಎಂದು ಸುಮತಿ ಪುಸಲಾಯಿಸಿ ಮಗಳನ್ನು ಸಮಾಧಾನ ಪಡಿಸುವಳು. ಮನೆಯಲ್ಲಿ ಮಗಳು ಅಳಿಯ, ಉಳಿದ ಮೂವರು ಹೆಣ್ಣು ಮಕ್ಕಳು, ಇಬ್ಬರು ಮೊಮ್ಮಕ್ಕಳು ಇವರೆಲ್ಲಾ ಒಟ್ಟಿಗೇ ತನ್ನೊಂದಿಗೆ ಇರುವಾಗ ತನ್ನ ಮನೆ ನಂದಗೋಕುಲ ಎಂದು ಮನದಲ್ಲೇ ಸಂಭ್ರಮಿಸುವಳು. ತನ್ನ ಅನಾರೋಗ್ಯದ ಬಗ್ಗೆ ಮರೆಯುವಳು. ಇವರೆಲ್ಲರೂ ತನ್ನ ಸರ್ವಸ್ವ ಹಾಗೂ ಆಸ್ತಿ ಎಂದುಕೊಂಡು ಖುಷಿಯಿಂದ ತನ್ನೆಲ್ಲಾ ಕಷ್ಟಕಾರ್ಪಣ್ಯ ನೋವುಗಳನ್ನು ಮರೆಯುವಳು.




