ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಉಪವನಗಳಿದ್ದವು ಅಲ್ಲಿ. ತನ್ನ ಮಡಿಲಲ್ಲಿ ಕುಳಿತು ಮೆರೆಯುತ್ತಿರುವ ಜನರು ಯಾವತ್ತೂ
ಸೊಗಸಿನಿಂದಿರುವುದನ್ನು ಕಂಡು ಆ ಭದ್ರಾವತಿ ನಗರವೇ ಹಸಿರು ಸೀರೆಯನ್ನುಟ್ಟು ಮೆರೆದಂತೆ. ಆ ಉಪವನದಲ್ಲಿ
ಸುಳಿದಾಡುತ್ತಿದ್ದ ದುಂಬಿಗಳ ಸಮೂಹವದು ಗಗನಸದೃಶವಾಗಿತ್ತು. ಗಾಳಿಗೆ ಅಲ್ಲಾಡುತ್ತಿದ್ದ ಬಳ್ಳಿಗಳು ಮಿಂಚಿನAತೆ
ತೋರುತ್ತಿದ್ದವು. ಹೂವುಗಳಿಂದ ಹೊರಚೆಲ್ಲುತ್ತಿರುವ ಮಕರಂದದ ಹನಿಗಳೇ ಮಳೆಯ ಹನಿಗಳಾಗಿದ್ದವು.
ಇರುಳಾದ ತಕ್ಷಣವೇ ವಿರಹಕ್ಕೊಳಗಾಗುವ ಯೋಚನೆಗೆ ಸಿಲುಕಿದ ಆ ಉಪವನದಲ್ಲಿದ್ದ ಚಕ್ರವಾಕ ಪಕ್ಷಿಗಳು
ಆತುರಾತುರವಾಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದವು. ಹೂವುಗಳ ಪರಾಗಗಳು ನೆಲದ ಮೇಲೆ ಬಿದ್ದಿದ್ದವು. ಅವುಗಳ
ಮೇಲೆ ಹೆಣ್ಣು ಹಂಸಗಳ ನಡಿಗೆ. ಅಲ್ಲಲ್ಲಿ ಮೂಡಿತ್ತು ಅವುಗಳ ಹೆಜ್ಜೆಗುರುತು. ವಿರಹಿಗಳು ಈ ವನವನ್ನು
ಪ್ರವೇಶಿಸಬಾರದೆಂದು ಮನ್ಮಥ ಬರೆದಿರಿಸಿದ ಶಾಸನದಂತೆ ಆ ಹೆಜ್ಜೆಗುರುತುಗಳು ತೋರುತ್ತಿದ್ದವು. ವೀಳ್ಯದೆಲೆಯ
ಬಳ್ಳಿಗಳು ಅಡಿಕೆಯ ಮರಗಳನ್ನು ತಬ್ಬಿನಿಂತಿದ್ದವು. ನಮ್ಮಂತೆಯೇ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳದವರನ್ನು ಮನ್ಮಥ ಈ ವನದಲ್ಲಿ ಉಳಿಸಿಕೊಳ್ಳಲಾರ ಎಂಬAತೆ ಕಾಣಿಸುತ್ತಿತ್ತು ಅವುಗಳ ಅಪ್ಪುಗೆ. ಗುದ್ದಲಿಯ ಘಾತವನ್ನು ಸಹಿಸಿಕೊಂಡು ತಮ್ಮನ್ನು ಪ್ರೀತಿಯಿಂದ ಬೆಳೆಸಿದ್ದಾಳೆ ಈ ಧರಣಿಮಾತೆ. ಅವಳಿಗೆ ಇದನ್ನು ಸಮರ್ಪಿಸುತ್ತೇವೆ ಎಂಬಂತೆ ತಮ್ಮೆದೆಗಳಿಂದ ಟಿಸಿಲೊಡೆದ ಬಾಳೆಹಣ್ಣುಗಳಿದ್ದ ಗೊನೆಯನ್ನು ಭೂರಮೆಯೆಡೆಗೆ ಚಾಚಿನಿಂತಿದ್ದವು ಬಾಳೆಯ ಗಿಡಗಳು.
ಇಂದ್ರನ ವಜ್ರಾಯುಧದ ಘಾತಕ್ಕೆ ತತ್ತರಿಸಿದ ಪರ್ವತಸಮೂಹ ಸಾಗರವನ್ನು ಸೇರಿದಂತೆ, ಕಾರ್ಮುಗಿಲುಗಳು
ಗುಂಪುಗುಂಪಾಗಿ ಕಡಲನ್ನು ಸಂಧಿಸುವಂತೆ ತಿಳಿಯಾದ ಕೊಳದ ನೀರನ್ನು ಕುಡಿಯುವುದಕ್ಕೆ ಬಂದ ಗಜಸಮೂಹವನ್ನು ಕಂಡೊಡನೆಯೇ ಭೀಮಸೇನ ಭೀಮನೇತ್ರದವನಾದನು. ಮಳೆಗಾಲದ ಮೇಘಗಳು ಒತ್ತೊತ್ತಾಗಿ ನಿಬಿಡಾವಸ್ಥೆಯಲ್ಲಿಇರುವಂತೆ ಭದ್ರಾವತಿ ಪಟ್ಟಣದ ಹೆಬ್ಬಾಗಿಲಿನಿಂದ ಹೊರಬರುತ್ತಿರುವ ಕುದುರೆಗಳ ಸಮೂಹವನ್ನು ಕಂಡಾಗ ಮೇಘನಾದನ ಹೃದಯದಲ್ಲಿ ಮೇಘನಾದ. “ಸೂರ್ಯ ನಡುನೆತ್ತಿಯನ್ನು ತಲುಪುತ್ತಾ ಬಂದಿದ್ದರೂ ನಮ್ಮ ಯಾಗಕ್ಕೆ ತಕ್ಕುದಾದ ಅಶ್ವ ಈ ನಗರದಲ್ಲಿ ದೊರಕಿಲ್ಲ. ಅಂತಹ ಕುದುರೆಯೇ ಇಲ್ಲಿಲ್ಲವೋ! ಅಥವಾ ನಮ್ಮ ನಯನಗಳಿಗೆ ಅದು ಗೋಚರವಾಗುತ್ತಿಲ್ಲವೋ! ತಿಳಿಯದು” ಎಂಬ ಪವನಸುತನ ನುಡಿಗೆ ಕರ್ಣತನಯ ಕರ್ಣಗೊಟ್ಟನು



About The Author

Leave a Reply

You cannot copy content of this page

Scroll to Top