ಕಾವ್ಯಸಂಗಾತಿ
ಸವಿತಾ ದೇಶಮುಖ
“ರೆಪ್ಪೆ ಒಳಗಿನ ಕನಸು”

ಕಂಗಳ ರೆಪ್ಪೆಯ ಕತ್ತಲೆ ಚಿಪ್ಪಿನಲಿ
ಅವಿತು ಕುಳಿತ ಸವಿ ಕನಸಿನಲಿ
ನುಲಿದು ನಲಿವ ಬೆಳಕ ಮಿಂಚಿನಲಿ!!೧!!
ನಲಿಯುತ ಕಲ್ಪನಾ -ನಭದಲಿ
ಅದೆಷ್ಟೋ ಸಾರಿ ಕಾಲ ಗರ್ಭದಲಿ
ಮನಸಿನ ಮೂಲ ಮೂಲೆಯಲಿ!!೨!!
ಮೂಡಿ ಆಡಿ ಬೆಳೆದು ಆನಂದದಲಿ
ನನಸಾಗುವ ಆಗಸದ ಎತ್ತರ ಏರಿ
ಚಂದುಳ್ಳಿ ಚೆಲುವ ನಿರ್ಮಲ “ಒಲವ”!!೩!!
ಲೋಕದ ಸೃಷ್ಟಿಯೇ ಒಪ್ಪುವ
ಪ್ರೀತಿ ಮಧುರ ಮಂಟಪವ ಕಟ್ಟಿ
ಶೋಧಿಪ ಪ್ರೀತಿ ಪ್ರತಿಬಿಂಬ ಲೋಕವ!!೪!!
ವಿಹರಿಸುತ್ತ ವಿಹರಿಸುತ ಹರಿದಾಡುತ
ಹೃದಯದ ಆಕಾಶದಲಿ ಹಾರಾಡುತ
ನೂರಾರು ನಕ್ಷತ್ರಗಳ ಬೆಳಕಿನಲಿ ….!!೫!!
“ನಂಬುಗೆಯೆಂಬ ” ಆಗಸದ ಪ್ರಕಾಶದಲಿ
ಮುಗಿಯದ ಒಲವಿನ ಪಯಣದಲಿ
ದಿಟ ದಾರಿ ಹುಡುಕುತ್ತಾ ಅಲೆಯುತ್ತಿರೆ!!೬!!
ನವಿಲು ಕುಣಿದಂತೆ ಕುಣಿಯುತ್ತಿವೆ
ಕನಸುಗಳು ತೀರದ ತೇರವೇರಿ….
ರೆಪ್ಪೆ ಮುಚ್ಚಿದ ಕತ್ತಲೆ ಹಿಂದಿನ ಬೆಳಕು!!೭!!
ಹುಡುಕುತ,ಮೂಡಿದ ಏಕಾಂತ ಮೌನದಲಿ
ಅಂತ್ಯವಿಲ್ಲದ ಅನಂತ ಅಲೆಗಳಲಿ
ಅಡಗಿದ ಆಕಾಂಕ್ಷೆ ಅಲೆಗಳು ಅಪ್ಪಳಿಸುತಿವೆ!!೮!!
ಉಕ್ಕಿ ದಡವ ಸೇರಲು ಹಾತೊರಿಯುತ್ತಿವೆ
ಹಾಕಿದೆ ಪ್ರತಿ ಹೆಜ್ಜೆಯ -ಪ್ರತಿ ಹಾದಿಯಲಿ
ಮಿಂಚುತಿರುವ ಭರವಸೆ ಎಂಬ ಕನಸು!!೯!!
ಮೌನದಲಿ ಒಲವು ತುಂಬಿ ತಿರುಗಿ
ಹೊಮ್ಮುತ್ತಿದೆ ಮೈಮನ ನನಸುಗೊಳಲು
ಪವಿತ್ರ ಪ್ರೀತಿಯ ಹಾದಿಯಲಿ……!!೧೦!!
ಸವಿತಾ ದೇಶಮುಖ





ಅದ್ಭುತವಾಗಿ ಮೂಡಿ ಬಂದಿದೆ ಭಾವ ಮೇಡಂ